ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Arif Mohammad Khan: ದೇಶ ಇಬ್ಭಾಗ ಮಾಡಲು ಬಯಸಿರುವವರ ಅಸಮಾಧಾನಕ್ಕೆ ಸಾಕ್ಷಿ: ಬಿಬಿಸಿ ಸಾಕ್ಷ್ಯಚಿತ್ರ ಖಂಡಿಸಿದ ಕೇರಳ ರಾಜ್ಯಪಾಲ

Arif Mohammad Khan: ದೇಶ ಇಬ್ಭಾಗ ಮಾಡಲು ಬಯಸಿರುವವರ ಅಸಮಾಧಾನಕ್ಕೆ ಸಾಕ್ಷಿ: ಬಿಬಿಸಿ ಸಾಕ್ಷ್ಯಚಿತ್ರ ಖಂಡಿಸಿದ ಕೇರಳ ರಾಜ್ಯಪಾಲ

ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿರುವ ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್, ಭಾರತವನ್ನು ನೂರು ತುಂಡುಗಳಾಗಿ ನೋಡಲು ಬಯಸುವವರು ಅಸಮಾಧಾನಗೊಂಡಿದ್ದಾರೆ. ಆದ್ದರಿಂದಲೇ ಅವರು ಇಂತಹ ನಕಾರಾತ್ಮಕ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..

ಆರೀಫ್‌ ಮೊಹಮ್ಮದ್‌ ಖಾನ್‌ (ಸಂಗ್ರಹ ಚಿತ್ರ)
ಆರೀಫ್‌ ಮೊಹಮ್ಮದ್‌ ಖಾನ್‌ (ಸಂಗ್ರಹ ಚಿತ್ರ) (PTI)

ತಿರುವನಂತಪುರಂ: ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಟೀಕಿಸಿರುವ ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್, ಭಾರತವನ್ನು ನೂರು ತುಂಡುಗಳಾಗಿ ನೋಡಲು ಬಯಸುವವರು ಅಸಮಾಧಾನಗೊಂಡಿದ್ದಾರೆ. ಆದ್ದರಿಂದಲೇ ಅವರು ಇಂತಹ ನಕಾರಾತ್ಮಕ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಭಾರತಕ್ಕೆ ಅಂಧಕಾರದ ಭವಿಷ್ಯ ಹೇಳಿದವರು, ಭಾರತ ನೂರಾರು ತುಂಡುಗಳಾಗಿ ಒಡೆಯುತ್ತದೆ ಎಂದು ಹೇಳಿದವರು, ಭಾರತ ಒಂದಾಗಿರುವುದನ್ನು ಕಂಡು ಬೇಸರಗೊಂಡಿದ್ದಾರೆ. ಹೀಗಾಗಿಯೇ ಅವರು ಈ ರೀತಿಯ ನಕಾರಾತ್ಮಕ ಪ್ರಚಾರ ನಡೆಸುವ ಎಲ್ಲಾ ಪಿತೂರಿಗಳನ್ನು ನಡೆಸುತ್ತಿದ್ದಾರೆ ಎಂದು ಆರೀಫ್‌ ಮೊಹಮ್ಮದ್‌ ಖಾನ್‌ ಕಿಡಿಕಾರಿದ್ದಾರೆ.

ಉತ್ತರ ಅಮೆರಿಕಾದಲ್ಲಿ ನೆಲೆಸಿರುವ ಮಲಯಾಳಿ ಹಿಂದೂಗಳು ಆಯೋಜಿಸಿದ್ದ 'ಹಿಂದೂ ಸಮಾವೇಶ'ವನ್ನು ಉದ್ಘಾಟಿಸಿ ಮಾತನಾಡಿದ ಆರೀಫ್‌ ಮೊಹಮ್ಮದ್‌ ಖಾನ್‌, ಭಾರತ ಇಂದು ತಲುಪಿರುವ ಉನ್ನತ ಸ್ಥಾನದ ಬಗ್ಗೆ ಬಿಬಿಸಿ ಏಕೆ ಸಾಕ್ಷ್ಯಚಿತ್ರ ಮಾಡುವುದಿಲ್ಲ ಎಂದು ಪ್ರಶ್ನಿಸಿದರು.

ಭಾರತ ಹೊಂದಿದ್ದ ಅಸಾಧಾರಣ ಸಂಪತ್ತಿನ ಆಸೆಗೆ ಬಿದ್ದು ಹೊರಗಿನ ಜನರು ಭಾರತಕ್ಕೆ ಬಂದರು. ಹೀಗೆ ಭಾರತವನ್ನು ಆಕ್ರಮಿಸಿಕೊಂಡ ಜನ ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆದು ಭಾರತವನ್ನು ಬಡ ರಾಷ್ಟ್ರವನ್ನಾಗಿ ಪರಿವರ್ತಿಸಿದರು. ಆದರೆ ಈಗ ಭಾರತ ಮತ್ತೆ ತನ್ನ ಗತವೈಭವಕ್ಕೆ ಮರಳುತ್ತಿದ್ದು, ಈ ಕುರಿತು ಬಿಬಿಸಿ ಸಾಕ್ಷ್ಯಚಿತ್ರ ಮಾಡಲಿ ಎಂದು ಕೇರಳ ರಾಜ್ಯಪಾಲರು ಸವಾಲು ಹಾಕಿದರು.

"ಇಂದು ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಮೂಲದ ಜನರ ನೇತೃತ್ವದಲ್ಲಿ ನಡೆಯುತ್ತಿವೆ. ಜಗತ್ತು ಭಾರತದ ಸಾಮರ್ಥ್ಯವನ್ನು ಅರಿತುಕೊಳ್ಳುತ್ತಿದೆ. ನಾವು ಶಕ್ತಿಯುತರಾಗಿದ್ದರೆ ಯಾರೂ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ. ನಾವು ಇತರರ ಮೇಲೆ ಪ್ರಾಬಲ್ಯ ಸಾಧಿಸಲು ಈ ಅಧಿಕಾರವನ್ನು ಎಂದಿಗೂ ಬಳಸಲಿಲ್ಲ. ಬದಲಿಗೆ ನಾವು ಪುರುಷ ಮತ್ತು ಮಹಿಳೆಯ ಸಂಭಾವ್ಯ ದೈವತ್ವವನ್ನು ನಾವು ಜಗತ್ತಿಗೆ ಸಾರಿದ್ದೇವೆ.." ಎಂದು ಆರೀಫ್‌ ಮೊಹಮ್ಮದ್‌ ಖಾನ್‌ ಮಾರ್ಮಿಕವಾಗಿ ಹೇಳಿದರು.

ಇನ್ನು ಬಿಬಿಸಿ ಸಾಕ್ಷ್ಯಚಿತ್ರವನ್ನು ಬೆಂಬಲಿಸುತ್ತಿರುವ ಕೆಲವು ಭಾರತೀಯರು, ದೇಶದ ನ್ಯಾಯಾಂಗಕ್ಕಿಂತ ಸಾಕ್ಷ್ಯಚಿತ್ರ ತಯಾರಕರ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿರುವುದು ನಮ್ಮ ದೌರ್ಭಾಗ್ಯ ಎಂದು ಕೇರಳ ರಾಜ್ಯಪಾಲರು ಅಸಮಧಾನ ಹೊರಹಾಕಿದರು.

ಭಾರತ ಸ್ವಾತಂತ್ರ್ಯಗೊಂಡಾಗ ಈ ದೇಶ ಬಹಳ ದಿನಗಳ ಕಾಲ ಬುದುಕುವುದಿಲ್ಲ ಎಂದು ಕೆಲವರು ಅಂದಾಜಿಸಿದ್ದರು. ಭಾರತೀಯರು ಪರಸ್ಪರ ಜಗಳವಾಡಿ ಇಬ್ಭಾಗವಾಗಲಿದ್ದಾರೆ ಎಂದು ಅವರು ಊಹಿಸಿದ್ದರು. ಆದರೆ ಭಾರತವು ತನ್ನ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಂಡಿರುವುದು ಮಾತ್ರವಲ್ಲ, ಏಕತೆಯ ಪಥದಲ್ಲಿ ಅತ್ಯಂತ ದೃಢವಾಗಿ ಸಾಗುತ್ತಿದೆ. ಇದು ಕೆಲವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಆರೀಫ್‌ ಮೊಹಮ್ಮದ್‌ ಖಾನ್‌ ಗುಡುಗಿದರು.

ಯಾರು ನಮ್ಮನ್ನು ಶತಮಾನಗಳ ಕಾಲ ಅತ್ಯಂತ ಕ್ರೂರವಾಗಿ ಆಳಿದರೋ, ಅವರನ್ನು ಈಗ ಭಾರತೀಯ ಮೂಲದ ವ್ಯಕ್ತಿ ಪ್ರಧಾನಿಯಾಗಿ ಆಳುತ್ತಿದ್ದಾರೆ. ಆದರೆ ರಿಷಿ ಸುನಕ್‌ ಬಂದೂಕಿನ ನಳಿಕೆ ಮೂಲಕ ಬ್ರಿಟನ್‌ ಪ್ರಧಾನಿಯಾದವರಲ್ಲ. ಬ್ರಿಟನ್‌ ಜನರ ಮತಗಳನ್ನು ಪಡೆದು ಅವರು ಅಲ್ಲಿನ ಪ್ರಧಾನಿಯಾಗಿದ್ದಾರೆ ಎಂದು ಕೇರಳ ರಾಜ್ಯಪಾಲರು ಹೆಮ್ಮೆ ವ್ಯಕ್ತಪಡಿಸಿದರು.

ಭಾರತವು ಹಿಂಸೆಯ ಮೇಲೆ ಎಂದಿಗೂ ನಂಬಿಕೆಯನ್ನಿಟ್ಟಿಲ್ಲ. ಅಹಿಂಸೆ ನಮ್ಮ ಶಕ್ತಿಯಾಗಿದ್ದು, ಇದರ ಆಧಾರದ ಮೇಲೆಯೇ ನಾವು ವಿಶ್ವಗುರುವಾಗಿ ಹೊರಹೊಮ್ಮುತ್ತಿದ್ದೇವೆ. ಆದರೆ ಇದನ್ನು ಸಹಿಸದ ಕೆಲವು ಶಕ್ತಿಗಳು ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ದೇಶದೊಳಗಿನ ಕೆಲವರು ಈ ಅಪಪ್ರಚಾರಕ್ಕೆ ಬಲಿಯಾಗಿರುವುದು ದು:ಖದ ಸಂಗತಿ ಎಂದು ಆರೀಫ್‌ ಮೊಹಮ್ಮದ್‌ ಖಾನ್‌ ಹರಿಹಾಯ್ದರು.

ಭಾರತ ಈ ಪಿತೂರಿಗಳನ್ನು ಸೋಲಿಸಿ ಅಂತಿಮವಾಗಿ ಜಯ ಸಾಧಿಸಲಿದೆ. ಏಕತೆ ಮತ್ತು ಸಮಗ್ರತೆಯನ್ನು ಸಾಧಿಸುವ ಪಥದಲ್ಲಿ ನಾವೆಲ್ಲಾ ಒಟ್ಟಾಗಿ ಮುನ್ನಡೆಯಲಿದ್ದೇವೆ ಎಂದು ಆರೀಫ್‌ ಮೊಹಮ್ಮದ್‌ ಖಾನ್‌ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

IPL_Entry_Point

ವಿಭಾಗ