ಕನ್ನಡ ಸುದ್ದಿ  /  Sports  /  2023 Asia Cup Likely In Pakistan And One Other Overseas Venue For India Games

Asia Cup 2023: ಪಾಕಿಸ್ತಾನದಲ್ಲೇ ಏಷ್ಯಾಕಪ್ ಟೂರ್ನಿ​ ಆಯೋಜನೆ, ಆದರೆ..?

ಏಕದಿನ ಮಾದರಿಯಲ್ಲಿ ಈ ವರ್ಷ ಏಷ್ಯಾಕಪ್​ ಟೂರ್ನಿ ನಡೆಯಲಿದೆ. ಸೆಪ್ಟೆಂಬರ್​​​ನಲ್ಲಿ ಈ ಟೂರ್ನಿ ಜರುಗಲಿದ್ದು, ಪಾಕಿಸ್ತಾನಕ್ಕೆ ಭಾರತದ ತಂಡ ಪ್ರಯಾಣ ಬೆಳೆಸುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಟೀಮ್​ ಇಂಡಿಯಾದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜನೆ ನಡೆಸಲು ಎಸಿಸಿ ಮುಂದಾಗಿದೆ.

ರೋಹಿತ್​ ಶರ್ಮಾ ಮತ್ತು ಬಾಬರ್​ ಅಜಮ್​
ರೋಹಿತ್​ ಶರ್ಮಾ ಮತ್ತು ಬಾಬರ್​ ಅಜಮ್​ (ICC/Twitter)

ಏಕದಿನ ವಿಶ್ವಕಪ್​ ಟೂರ್ನಿಗೂ ಮುನ್ನ ನಡೆಯಲಿರುವ ಏಷ್ಯಾಕಪ್​ ಟೂರ್ನಿ (Asia Cup 2023) ಎಲ್ಲಿ ಆಯೋಜನೆಯಾಗಬೇಕು ಎಂಬ ವಿವಾದಕ್ಕೆ ಇತಿಶ್ರೀ ಹಾಡಲು ಏಷ್ಯನ್​ ಕ್ರಿಕೆಟ್​ ಕೌನ್ಸಿಲ್ (Asian Cricket Council)​​​​ ನಿರ್ಧರಿಸಿದೆ. ಇತ್ತೀಚೆಗೆ ನಡೆದ ಏಷ್ಯನ್​​ ಕ್ರಿಕೆಟ್ ಕೌನ್ಸಿಲ್ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿದೆ. ಈ ಬಾರಿ ಟೂರ್ನಿಯನ್ನು ಆತಿಥ್ಯ ವಹಿಸಿರುವ ಪಾಕಿಸ್ತಾನದಲ್ಲೇ (Pakistan) ಏಷ್ಯಾಕಪ್ ಆಯೋಜಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಏಕದಿನ ಮಾದರಿಯಲ್ಲಿ ಈ ವರ್ಷ ಏಷ್ಯಾಕಪ್​ ಟೂರ್ನಿ ನಡೆಯಲಿದೆ. ಮೊದಲಿನಿಂದಲೂ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಭಾರತ ಪಟ್ಟು ಹಿಡಿದಿತ್ತು. ಪಾಕ್​​ನಲ್ಲಿ ಟೂರ್ನಿ ಆಯೋಜನೆಯಾದರೆ, ನಾವು ಅಲ್ಲಿಗೆ ಪ್ರಯಾಣ ಬೆಳೆಸುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, (Jay Shah) ಸಭೆಯಲ್ಲಿ ಹೇಳಿದ್ದರು. ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ನ ಅಧ್ಯಕ್ಷರೂ ಆಗಿರುವ ಜಯ್​ ಶಾ ಈ ಬಗ್ಗೆ ನಿಲುವು ವ್ಯಕ್ತಪಡಿಸಿದ್ದರು. ಇದೀಗ ಈ ಸಮಸ್ಯೆಗೂ ಸಭೆಯಲ್ಲಿ ಪರಿಹಾರ ಸಿಕ್ಕಿದೆ.

ಇಡೀ ಟೂರ್ನಿ ಪಾಕಿಸ್ತಾನದಲ್ಲೇ ನಡೆಯಲಿದೆ. ಆದರೆ ಭಾರತದ ಪಂದ್ಯಗಳು ಮಾತ್ರ ಅಲ್ಲಿ ಜರುಗುವುದಿಲ್ಲ. ಭಾರತದ ಎಲ್ಲಾ ಪಂದ್ಯಗಳು ತಟಸ್ಥ ಸ್ಥಳದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಆದರೆ ತಟಸ್ಥ ಸ್ಥಳ ಎಂದರೆ ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಯುತ್ತದೆಯೇ ಎಂಬುದಕ್ಕೆ ಇನ್ನೂ ಸ್ಪಷ್ಟನೆ ನೀಡಿಲ್ಲ. ನಮ್ಮ ನೆಲದಲ್ಲೇ ಏಷ್ಯಾಕಪ್​ ಆಯೋಜಿಸಬೇಕು ಎಂದಿದ್ದ ಪಾಕ್​, ಈ ವಿಷಯದಲ್ಲಿ ಗೆದ್ದಿದೆ. ಆದರೆ, ಭಾರತವನ್ನು ತಮ್ಮ ನೆಲಕ್ಕೆ ಕರೆಸಿಕೊಳ್ಳುವ ವಿಚಾರದಲ್ಲಿ ಸೋಲು ಕಂಡಿದೆ.

3 ಬಾರಿ ಮುಖಾಮುಖಿ ಸಾಧ್ಯತೆ?

ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜನೆ ಮಾಡುವ ಕಾರಣ, ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವ ಅಗತ್ಯ ಇಲ್ಲ. ಈ ಟೂರ್ನಿಯಲ್ಲಿ ಆರು ದೇಶಗಳ ನಡುವೆ ಸ್ಫರ್ಧೆ ನಡೆಯಲಿದ್ದು, ಏಷ್ಯಾಕಪ್​ ಸೆಪ್ಟೆಂಬರ್ ಮೊದಲ ವಾರದಲ್ಲಿ ಜರುಗುವ ಸಾಧ್ಯತೆ ಇದೆ.​ 13 ದಿನಗಳ ಕಾಲ ನಡೆಯುವ 13 ಪಂದ್ಯಗಳಿಗೆ ಪಾಕಿಸ್ತಾನ ತಂಡ ಆತಿಥ್ಯ ವಹಿಸಲಿದೆ. ತಲಾ ಮೂರು ತಂಡಗಳ ಗುಂಪು ನಡುವೆ ಕಾದಾಟ ನಡೆಯಲಿದೆ.

ಭಾರತ - ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆಯಲಿದ್ದು, ಎರಡು ಬಾರಿ ಮುಖಾಮುಖಿಯಾಗಲಿವೆ. ಒಂದು ವೇಳೆ ಉಭಯ ತಂಡಗಳು ಫೈನಲ್​​​ಗೆ ಪ್ರವೇಶ ನೀಡಿದ್ದೇ ಆದರೆ ಪರಸ್ಪರ 3ನೇ ಸಲ ಎದುರಾಗುವ ಸಾಧ್ಯತೆ ಇದೆ. ಇಎಸ್​ಪಿಎನ್​​ ಕ್ರಿಕ್ ಇನ್ಫೋ ವರದಿ ಪ್ರಕಾರ, ಭಾರತದ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸುವ ಸಾಧ್ಯತೆ ಇದ್ದರೂ ಅಲ್ಲಿ ಉಷ್ಣಾಂಶ ಹೆಚ್ಚಾಗಿ ಕಂಡು ಬರುವ ಕಾರಣ, ತಾಪಮಾನ ಅನುಕೂಲವಾಗಿರುವ ಇಂಗ್ಲೆಂಡ್​ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಏಕದಿನ ವಿಶ್ವಕಪ್​ ಆಡಲ್ಲ ಎಂದಿದ್ದ ಪಾಕ್​

ಏಷ್ಯಾಕಪ್​ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ ಎಂಬುದು ಈ ಹಿಂದೆಯೇ ಗೊತ್ತಿತ್ತು. ಹಾಗಾಗಿ ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ನಾವು ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಈ ಹಿಂದೆಯೇ ಹೇಳಿದ್ದರು. ಭಾರತ ಸರ್ಕಾರ ಸಹ ಟೀಮ್​ ಇಂಡಿಯಾ ಆಟಗಾರರಿಗೆ ಪಾಕ್​ ಪ್ರಯಾಣಕ್ಕೆ ಅವಕಾಶ ನೀಡದಿರುವುದಾಗಿ ಹೇಳಿತ್ತು. ಪಾಕ್​ ಒಂದು ಭಯೋತ್ಪಾದಕ ರಾಷ್ಟ್ರ. ಅಲ್ಲಿಗೆ ಪ್ರಯಾಣ ಬೆಳೆಸಿದರೆ, ನಮ್ಮ ಆಟಗಾರರಿಗೆ ಸುರಕ್ಷತೆ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.

ಈ ಹೇಳಿಕೆಗೆ ಕೆರಳಿದ್ದ ಪಾಕಿಸ್ತಾನ ಸಹ, ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​​​ನಲ್ಲೂ ಪಾಲ್ಗೊಳ್ಳಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿತ್ತು. ಉಭಯ ಕ್ರಿಕೆಟ್​ ಮಂಡಳಿಗಳು ಜಟಾಪಟಿ ತಾರಕಕ್ಕೂ ಹೇರಿತ್ತು. ಇದರಿಂದ ಭಾರಿ ಟೀಕೆ ವ್ಯಕ್ತವಾಗಿತ್ತು. ಏಷ್ಯಾಕಪ್​ ಟೂರ್ನಿ ಪಾಕಿಸ್ತಾನದಲ್ಲಿ ಆಯೋಜನೆಯಾದರೆ, ಏಕದಿನ ವಿಶ್ವಕಪ್​ ಟೂರ್ನಿಗೆ ಇದೇ ವರ್ಷ ಭಾರತ ಆತಿಥ್ಯ ವಹಿಸಲಿದೆ.