ಕನ್ನಡ ಸುದ್ದಿ  /  Sports  /  Cricket News Ab De Villiers Names Favourite Player Of Ipl 2023 Shubman Gill Virat Kohli Yashvasvi Jaiswal Rcb Jra

AB de Villiers: ಐಪಿಎಲ್‌ನಲ್ಲಿ ತಮ್ಮ ಫೇವರೆಟ್ ಆಟಗಾರನ ಹೆಸರಿಸಿದ ಎಬಿಡಿ; ಕೊಹ್ಲಿ, ಗಿಲ್ ಅಲ್ಲ

IPL 2023: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಐಪಿಎಲ್ 2023ರ ಆವೃತ್ತಿಯಲ್ಲಿ ತಮ್ಮ ಫೇವರೆಟ್ ಆಟಗಾರನನ್ನು ಆಯ್ಕೆ ಮಾಡಿದ್ದಾರೆ. ಅದು ಶುಬ್ಮನ್ ಗಿಲ್ ಅಥವಾ ವಿರಾಟ್ ಕೊಹ್ಲಿ ಅಲ್ಲ.

ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್ (PTI)

ಐಪಿಎಲ್‌ನ ಪ್ರಸಕ್ತ ಆವೃತ್ತಿಗೆ ಬಹುತೇಕ ಇಂದು ತೆರೆ ಬೀಳಲಿದೆ. ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮತ್ತು ಗುಜರಾತ್ ಟೈಟಾನ್ಸ್ (Gujarat Titans) ತಂಡಗಳು ಫೈನಲ್‌ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದು, ಟ್ರೋಫಿಗಾಗಿ ಕಾದಾಡಲಿವೆ. ಅತ್ತ, ರಾಜಸ್ಥಾನ್ ರಾಯಲ್ಸ್ ತಂಡವು ಟೂರ್ನಿಯ ಪ್ಲೇಆಫ್‌ ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾಗಿತ್ತು. ಆದರೂ, ತಂಡದ ಪರ ಆಡಿದ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ (Yashvasvi Jaiswal ಅಭಿಮಾನಿಗಳ ಮನಗೆದ್ದರು. ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ, ಹಿರಿಯ ಕ್ರಿಕೆಟ್ ಆಟಗಾರರ ಮನಗೆದ್ದರು.

ಈ ಯುವ ಆರಂಭಿಕ ಆಟಗಾರನು ರಾಜಸ್ಥಾನ ತಂಡದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿ ಅಭಿಯಾನವನ್ನು ಮುಗಿಸಿದರು. ಪ್ರಸ್ತುತ ಅವರು ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 14 ಪಂದ್ಯಗಳನ್ನು ಆಡಿದ ಜೈಸ್ವಾಲ್, 48.08ರ ಸರಾಸರಿ ಮತ್ತು 163.61ರ ಸ್ಟ್ರೈಕ್ ರೇಟ್‌ನಲ್ಲಿ 625 ರನ್ ಗಳಿಸಿದ್ದಾರೆ. ಮಹತ್ವದ ಋತುವಿನಲ್ಲಿ ಅವರು ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಸಿಡಿಸಿ ಮಿಂಚಿದ್ದಾರೆ.

ಭಾರತ ತಂಡಕ್ಕೆ ಪದಾರ್ಪಣೆ ಮಾಡದ ಈ ಅನ್‌ಕ್ಯಾಪ್ಡ್ ಆಟಗಾರನ ಶಾಟ್ ಆಯ್ಕೆ ಮತ್ತು ಆಟದ ವಿಧಾನಕ್ಕೆ ಕ್ರಿಕೆಟ್‌ ದಿಗ್ಗಜರು ಮೆಚ್ಚಿದ್ದಾರೆ. ಈ ಬಗ್ಗೆ ಜಿಯೋ ಸಿನಿಮಾದಲ್ಲಿ ಮಾತನಾಡಿದ ಆರ್‌ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ಜೈಸ್ವಾಲ್ ಅವರನ್ನು ಹಾಡಿ ಹೊಗಳಿದ್ದಾರೆ. ಅಲ್ಲದೆ ಐಪಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿ ಅವರು ತನ್ನ ನೆಚ್ಚಿನ ಆಟಗಾರ ಎಂದು ಹೇಳಿದ್ದಾರೆ.

“ನನ್ನ ನೆಚ್ಚಿನ ಆಟಗಾರ ಖಚಿತವಾಗಿಯೂ ಯಶಸ್ವಿ ಜೈಸ್ವಾಲ್. ಅದು ಕೂಡಾ ದೀರ್ಘ ಅಂತರದಲ್ಲಿ ಇವರನ್ನು ನಾನು ಆಯ್ಕೆ ಮಾಡುತ್ತೇನೆ. ಈ ಯುವ ಆಟಗಾರ ತಮ್ಮ ಆಟದಲ್ಲಿ ಎಲ್ಲಾ ಹೊಡೆತಗಳನ್ನು ಆಡಿದ್ದಾರೆ. ಅವರು ಮೈದಾನದಲ್ಲಿ ಬ್ಯಾಟ್‌ ಬೀಸುವಾಗ ಶಾಂತ ಮತ್ತು ಸಂಯೋಜಿತ ಮನೋಧರ್ಮದಿಂದ ಆಡುತ್ತಾರೆ. ಹೀಗಾಗಿ ಅವರ ಆಟವನ್ನು ನಾನು ಇಷ್ಟಪಡುತ್ತೇನೆ. ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಸಾಧಿಸುವ ಅವರ ಆಟವನ್ನು ನೋಡುವಾಗ ಅವರು ಸಂಪೂರ್ಣ ನಿಯಂತ್ರಣದಲ್ಲಿರುವಂತೆ ತೋರುತ್ತದೆ,” ಎಂದು ಆರ್‌ಸಿಬಿಯ ಮಾಜಿ ಆಪತ್ಬಾಂಧವ ಹೇಳಿದ್ದಾರೆ.

“ಯಶಸ್ವಿಗಿಂತ ಶುಬ್ಮನ್ ವಯಸ್ಸಿನಲ್ಲಿ ದೊಡ್ಡವರು. ಹೀಗಾಗಿ ಜೈಸ್ವಾಲ್‌ಗೆ ಇನ್ನೂ ತುಂಬಾ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಅವರು ಶ್ರೇಷ್ಠ ಆಟಗಾರನಾಗಲು ಎಲ್ಲಾ ರೀತಿಯ ಅರ್ಹತೆ ಹೊಂದಿದ್ದಾರೆ” ಎಂದು ಎಬಿಡಿ ಹೇಳಿದ್ದಾರೆ.

ಲೀಗ್ ಹಂತವನ್ನು ಐದನೇ ಸ್ಥಾನದಲ್ಲಿ ಮುಗಿಸಿದ ರಾಜಸ್ಥಾನ, ಪ್ಲೇಆಫ್‌ನಿಂದ ಹೊರಗುಳಿಯಿತು. ಆಡಿದ 14 ಪಂದ್ಯಗಳಲ್ಲಿ ತಂಡವು ಏಳು ಗೆಲುವು ಮತ್ತು ಏಳು ಸೋಲು ಸೇರಿದಂತೆ 14 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಯ್ತು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಆರೇಂಜ್‌ ಕ್ಯಾಪ್‌ ಗೆದ್ದು, ಈ ಆವೃತ್ತಿಯಲ್ಲಿ ಫಾರ್ಮ್ ಕಳೆದುಕೊಂಡ ಸ್ಟಾರ್ ಓಪನರ್ ಜೋಸ್ ಬಟ್ಲರ್ ಅವರನ್ನು ಅಭಿಮಾನಿಗಳು ಮರೆತಿದ್ದಾರೆ. ಋತುವಿನಲ್ಲಿ ಉತ್ತಮ ಆರಂಭ ಕಂಡ ಬಟ್ಲರ್, ಬಳಿಕ ವಿಫಲರಾದರು. ಈ ಋತುವಿನ ಮೊದಲ ನಾಲ್ಕು ಪಂದ್ಯಗಳಲ್ಲಿ ಆಂಗ್ಲ ಕ್ರಿಕೆಟಿಗ ಕ್ರಮವಾಗಿ 54, 19, 79 ಮತ್ತು 52 ರನ್‌ ಗಳಿಸಿದರು. ಆದರೆ, ಆ ಬಳಿಕ ಅವರ ಫಾರ್ಮ್ ಕುಸಿಯಿತು. ಮುಂದಿನ 10 ಪಂದ್ಯಗಳಲ್ಲಿ ಅವರು ಐದು ಬಾರಿ ಡಕೌಟ್‌ ಆದರು. ಹೀಗಾಗಿ ಜೈಸ್ವಾಲ್ ಆಟವು ತಂಡಕ್ಕೆ ನಿರ್ಣಾಯಕವಾಯ್ತು.