ಕನ್ನಡ ಸುದ್ದಿ  /  Sports  /  Cricket News Gujarat Titans Won By 7 Wickets Against Kolkata Knight Riders In Ipl 2023 Prs

KKR vs GT: ಶುಭ್ಮನ್​, ವಿಜಯ್ ಬಿರುಸಿನ ಬ್ಯಾಟಿಂಗ್; 7 ವಿಕೆಟ್​ಗಳಿಂದ ಶರಣಾದ ಕೆಕೆಆರ್​; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಗುಜರಾತ್​​​

16ನೇ ಆವೃತ್ತಿಯ ಐಪಿಎಲ್​​ನ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​​​ ವಿರುದ್ಧ ಗುಜರಾತ್​ ಟೈಟಾನ್ಸ್​ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ವಿಜಯ್​ ಶಂಕರ್​, ಡೇವಿಡ್​ ಮಿಲ್ಲರ್​
ವಿಜಯ್​ ಶಂಕರ್​, ಡೇವಿಡ್​ ಮಿಲ್ಲರ್​ (IPL Twitter)

ಕೋಲ್ಕತ್ತಾ ನೈಟ್​ ರೈಡರ್ಸ್​ ಎದುರಿನ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಭರ್ಜರಿ ಚೇಸಿಂಗ್​ ಮಾಡಿದೆ. ಶುಭ್ಮನ್​ ಗಿಲ್​ (49), ವಿಜಯ್ ಶಂಕರ್​ (ಅಜೇಯ 54) ಆರ್ಭಟಕ್ಕೆ ಬೆಚ್ಚಿದ ಕೆಕೆಆರ್​, 7 ವಿಕೆಟ್​ಗಳಿಂದ ಶರಣಾಗಿದೆ. ಈ ಗೆಲುವಿನೊಂದಿಗೆ ಗುಜರಾತ್​, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಇತ್ತ ಕೆಕೆಆರ್​ ಟೂರ್ನಿಯಲ್ಲಿ 6ನೇ ಸೋಲಿನೊಂದಿಗೆ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಕೆಕೆಆರ್​ ನೀಡಿದ್ದ ಸವಾಲಿನ ಗುರಿ ಬೆನ್ನಟ್ಟಿದ ಗುಜರಾತ್​, ಭರ್ಜರಿ ಆರಂಭ ಪಡೆಯಿತು. ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಕಣಕ್ಕಿಳಿದ ಶುಭ್ಮನ್​ ಗಿಲ್​​ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಕೈ ಹಾಕಿದರು. ಮೊದಲ ವಿಕೆಟ್​ಗೆ 41 ರನ್​ ಹರಿದು ಬಂದ್ವು. ಆದರೆ ಮತ್ತೊಬ್ಬ ಬ್ಯಾಟ್ಸ್​ಮನ್​​ ವೃದ್ಧಿಮಾನ್​ ಸಾಹ 10 ರನ್​ ಗಳಿಸಿ ಪೆವಿಲಿಯನ್​ ದಾರಿ ಹಿಡಿದರು. ಬಳಿಕ ಹಾರ್ದಿಕ್​ ಪಾಂಡ್ಯ, ಶುಭ್ಮನ್​ ಗಿಲ್​ ​2ನೇ ಅರ್ಧಶತಕದ ಜೊತೆಯಾಟವಾಡಿದರು.

ಅರ್ಧಶತಕ ವಂಚಿತ ಶುಭ್ಮನ್​ ಗಿಲ್​

ಎಚ್ಚರಿಕೆಯ ಆಟವಾಡುತ್ತಿದ್ದ ಹಾರ್ದಿಕ್​​ 20 ಎಸೆತಗಳಲ್ಲಿ 26 ರನ್​ಗೆ ಆಟ ಮುಗಿಸಿದರು. ಹರ್ಷಿತ್​ ರಾಣಾ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯೂ ಬಲೆಗೆ ಬಿದ್ದರು. ಮತ್ತೊಂದೆಡೆ ಸ್ಪೋಟಕ ಇನ್ನಿಂಗ್ಸ್ ಕಟ್ಟುತ್ತಿದ್ದ ಗಿಲ್​, ಅರ್ಧಶತಕ ಅಂಚಿನಲ್ಲಿ ಎಡವಿದರು. 49 ರನ್​ ಗಳಿಸಿದ್ದಾಗ ಸಿಕ್ಸರ್​ ಸಿಡಿಸಿ ಅರ್ಧಶತಕ ಪೂರೈಸಲು ದೊಡ್ಡ ಹೊಡೆತಕ್ಕೆ ಕೈ ಹಾಕಿದ ಗಿಲ್​​ ವಿಕೆಟ್​ ಒಪ್ಪಿಸಿ ಹೊರ ನಡೆದರು. ಅದಾಗಲೇ ತಂಡವು ಸುಸ್ಥಿತಿಯಲ್ಲಿತ್ತು.

ವಿಜಯ್​ ಶಂಕರ್​ ಭರ್ಜರಿ ಅರ್ಧಶತಕ

ಹಾರ್ದಿಕ್​ ಮತ್ತು ಗಿಲ್​ ಔಟಾದ ಬಳಿಕ ಜೊತೆಯಾದ ವಿಜಯ್​ ಶಂಕರ್​, ಡೇವಿಡ್​ ಮಿಲ್ಲರ್​​​ ಬೌಲರ್​ಗಳ ಮೇಲೆ ದಾಳಿ ನಡೆಸಿದರು. ಗೆಲುವಿನ ಆಟದ ಮೂಲಕ ಕೆಕೆಆರ್ ತಂಡವನ್ನು ಹೆದರಿಸಿದರು. ಅದರಲ್ಲೂ ವಿಜಯ್​ ಶಂಕರ್, ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿದರು. ಇದೇ ಆಟದೊಂದಿಗೆ ವೇಗದ ಅರ್ಧಶತಕವನ್ನೂ ಪೂರೈಸಿದರು. ಕೇವಲ 24 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್​ಗಳ ನೆರವಿನಿಂದ 54 ರನ್ ಚಚ್ಚಿದರು.

ಮತ್ತೊಂದೆಡೆ ಡೇವಿಡ್​ ಮಿಲ್ಲರ್ ಕೂಡ ಸಿಡಿದೆದ್ದರು. ಮಿಲ್ಲರ್​​-ವಿಜಯ್​ ಶಂಕರ್​ ಸೇರಿ 39 ಎಸೆತಗಳಲ್ಲಿ ಅಜೇಯ 87 ರನ್​ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಮುಗಿಸಿದರು. ಅಂತಿಮವಾಗಿ 17.5 ಓವರ್​​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 180 ರನ್​ ಗಳಿಸಿತು.

ಸ್ಫೋಟಕ ಅರ್ಧಶತಕದ ಸಿಡಿಸಿದ ಗುರ್ಬಾಜ್

ಮೊದಲು ಬ್ಯಾಟಿಂಗ್​ ನಡೆಸಿದ ಕೋಲ್ಕತ್ತಾಗೆ, ನಿರೀಕ್ಷಿತ ಆರಂಭ ಸಿಗಲಿಲ್ಲ. ಎನ್​ ಜಗದೀಸನ್​ ಮತ್ತೆ ನಿರಾಸೆ ಮೂಡಿಸಿದರು. ಬ್ಯಾಟಿಂಗ್​ನಲ್ಲಿ ಬಡ್ತಿ ಪಡೆದು ಕಣಕ್ಕಿಳಿದ ಶಾರ್ದೂಲ್​​ ಠಾಕೂರ್​ 4 ಎಸೆತಗಳಲ್ಲಿ ಎದುರಿಸಿ ಶಮಿ ಬೌಲಿಂಗ್​​​ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದರು.​ ಬಳಿಕ ಕಣಕ್ಕಿಳಿದ ವೆಂಕಟೇಶ್​ ಅಯ್ಯರ್​ (11) ಕೂಡ ಬೇಗನೇ ಔಟಾದರು. ನಾಯಕ ನಿತೀಶ್​ ರಾಣಾ ಬೌಂಡರಿ ಸಿಡಿಸಿ ನಿರ್ಗಮಿಸಿದರು.

ಆರಂಭದಲ್ಲೇ ಡಬಲ್​ ಆಘಾತಕ್ಕೆ ಒಳಗಾದರೂ ನಿರ್ಭೀತಿಯಿಂದ ಬ್ಯಾಟ್​ ಬೀಸಿದ ಆರಂಭಿಕ ಆಟಗಾರ ರೆಹಮಾನುಲ್ಲಾ ಗುರ್ಬಾಜ್​, ಬೌಲರ್​​ಗಳ ಮೇಲೆ ಸವಾರಿ ಮಾಡಿದರು. ಸಂಘಟಿತ ಬೌಲಿಂಗ್​ ದಾಳಿಯನ್ನು ಮೆಟ್ಟಿ ನಿಂತು ರನ್​ ಗತಿ ಏರಿಸಿದರು. ಆದರೆ ಯಾರೂ ಗುರ್ಬಾಜ್​ಗೆ ಸಾಥ್​ ನೀಡಲಿಲ್ಲ. ಜವಾಬ್ದಾರಿ ಆಟದ ಜೊತೆಗೆ ಅಗತ್ಯ ಇದ್ದಾಗಲೆಲ್ಲಾ ಸ್ಫೋಟಿಸುತ್ತಿದ್ದ ಆಫ್ಘನ್​ ಆಟಗಾರ ಅರ್ಧಶತಕ ಸಿಡಿಸಿದರು.

ಗುರ್ಬಾಜ್​ 39 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್​​ಗಳ ನೆರವಿನಿಂದ ಬರೋಬ್ಬರಿ 81 ರನ್​ ಚಚ್ಚಿದರು. ರಿಂಕು ಸಿಂಗ್​​ 20 ಎಸೆತಗಳಲ್ಲಿ 19 ರನ್​ ಗಳಿಸಿ ಔಟಾದರು. ಕೊನೆಯಲ್ಲಿ ಮಿಂಚಿದ ವಿಂಡೀಸ್ ದೈತ್ಯ ರಸೆಲ್​, 19 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ 34 ರನ್​ ಚಚ್ಚಿದರು. ಅಂತಿಮವಾಗಿ 20 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 179 ರನ್​ ಗಳಿಸಿತು. ಗುಜರಾತ್​ ಪರ ಮೊಹಮ್ಮದ್​ ಶಮಿ 3 ವಿಕೆಟ್​, ಜೋಷುವಾ ಲಿಟರ್​, ನೂರ್​ ಅಹ್ಮದ್​ ತಲಾ 2 ವಿಕೆಟ್​ ಪಡೆದರು.