ಕನ್ನಡ ಸುದ್ದಿ  /  ಕ್ರೀಡೆ  /  Mohsin Khan: ಒಂದೇ ಒಂದು ತಿಂಗಳು ತಡವಾಗಿದ್ದರೂ ನನ್ನ ಕೈ ಕತ್ತರಿಸಬೇಕಿತ್ತು; ಆತಂಕದ ಸುದ್ದಿಯನ್ನು ತಿಳಿಸಿದ ವೇಗಿ ಮೊಹ್ಸಿನ್​ ಖಾನ್

Mohsin Khan: ಒಂದೇ ಒಂದು ತಿಂಗಳು ತಡವಾಗಿದ್ದರೂ ನನ್ನ ಕೈ ಕತ್ತರಿಸಬೇಕಿತ್ತು; ಆತಂಕದ ಸುದ್ದಿಯನ್ನು ತಿಳಿಸಿದ ವೇಗಿ ಮೊಹ್ಸಿನ್​ ಖಾನ್

'ಗಾಯಗೊಂಡ ಬಳಿಕ ನಾನು ಕಠಿಣ ಸಮಯವನ್ನು ಎದುರಿಸಿದೆ. ಎಡ ಭುಜ ಮೇಲೆತ್ತಲೂ ಸಾಧ್ಯವಾಗಿರಲಿಲ್ಲ. ಒಂದು ತಿಂಗಳು ತಡವಾಗಿದ್ದರೂ ನನ್ನ ಕೈಯನ್ನು ಕತ್ತರಿಸಬೇಕೆಂದು ವೈದ್ಯರು ಹೇಳಿದ್ದರು' ಎಂದು ಮೊಹ್ಸಿನ್​ ಖಾನ್ (Mohsin Khan)​ ಆತಂಕದ ಸುದ್ದಿಯನ್ನು ಹೊರ ಹಾಕಿದ್ದಾರೆ.

ಮೊಹ್ಸಿನ್​ ಖಾನ್​
ಮೊಹ್ಸಿನ್​ ಖಾನ್​

ಮುಂಬೈ ಇಂಡಿಯನ್ಸ್​ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (Mumbai Indians vs Lucknow Super Giants)​ ಗೆಲುವಿಗೆ ಕಾರಣವಾದ ವೇಗಿ ಮೊಹ್ಸಿನ್​ ಖಾನ್ (Mohsin Khan)​, ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. 'ಒಂದೇ ಒಂದು ತಿಂಗಳು ತಡವಾಗಿದ್ದರೂ, ತನ್ನ ಕೈಯನ್ನು ಕತ್ತರಿಸಬೇಕಿತ್ತೆಂದು ಯಂಗ್​ ಫಾಸ್ಟ್​ ಬೌಲರ್ ಹೇಳಿದ್ದಾರೆ. ಇದೇ ಕಾರಣಕ್ಕೆ ಮತ್ತೆ ಮೈದಾನದಲ್ಲಿ ಬೌಲಿಂಗ್​​​ ಮಾಡುತ್ತೇನೆ ಎಂಬ ವಿಶ್ವಾಸವನ್ನು ಕಳೆದುಕೊಂಡಿದ್ದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಲಕ್ನೋದ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ (Bharat Ratna Shri Atal Bihari Vajpayee Ekana Cricket Stadium, Lucknow) ಮಂಗಳವಾರ ನಡೆದ ಪಂದ್ಯದಲ್ಲಿ ಲಕ್ನೋ​ 5 ವಿಕೆಟ್​​ಗಳ ಗೆಲುವು ಸಾಧಿಸಿತ್ತು. ಆದರೆ ಈ ಗೆಲುವಿನಲ್ಲಿ ಮೊಹ್ಸಿನ್ ಖಾನ್‌ ಪ್ರಮುಖ ಪಾತ್ರವಹಿಸಿದ್ದರು ಎಂಬುದು ವಿಶೇಷ. ಈ ಪಂದ್ಯ ಮುಗಿದ ನಂತರ ಮಾತನಾಡಿದ ಮೊಹ್ಸಿನ್​ ಖಾನ್​, ಈ ಪಂದ್ಯವನ್ನು ಆಡಲು ಕಾರಣ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ.

'ಈ ಪಂದ್ಯವನ್ನು ನಮ್ಮ ತಂದೆಗೋಸ್ಕರ ಆಡಿದ್ದೇನೆ. ನನ್ನ ತಂದೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರವಷ್ಟೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಬಂದಿದ್ದಾರೆ. ತಂದೆಗೋಸ್ಕರ ಈ ಪಂದ್ಯದಲ್ಲಿ ಆಡಿದ್ದೇನೆ. ಈ ಪಂದ್ಯವನ್ನು ಖಂಡಿತವಾಗಿಯೂ ಅವರು ನೋಡಿರುತ್ತಾರೆಂದು ಭಾವಿಸುತ್ತೇನೆ. ಕಳೆದ 10 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಈಗ ನನ್ನ ಪ್ರದರ್ಶನದ ಬಗ್ಗೆ ಖುಷಿಪಟ್ಟಿರುತ್ತಾರೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಬಳಿಕ ತನಗೆ ನಡೆದಿದ್ದ ಆಘಾತಕಾರಿ ಘಟನೆಯ ಕುರಿತು ವಿವರಿಸಿದ್ದಾರೆ. ಎಡ ಭುಜದ ಗಾಯದ ಕಾರಣ ಇಡೀ ದೇಶೀಯ ಟೂರ್ನಿಗಳನ್ನು ಮತ್ತು ಐಪಿಎಲ್​ನ ಹೆಚ್ಚಿನ ಭಾಗವನ್ನು ತಪ್ಪಿಸಿಕೊಂಡಿದ್ದ ಲಕ್ನೋ ತಂಡದ ವೇಗಿ ಮೊಹ್ನಿಸ್​​ ಖಾನ್, ತಾನು ಎದುರಿಸಿದ ಕಠಿಣ ಸಮಯದ ಕುರಿತು ಮಾತನಾಡಿದ್ದಾರೆ. 'ಗಾಯಗೊಂಡ ಬಳಿಕ ನಾನು ಕಠಿಣ ಸಮಯವನ್ನು ಎದುರಿಸಿದೆ. ಎಡ ಭುಜ ಮೇಲೆತ್ತಲೂ ಸಾಧ್ಯವಾಗಿರಲಿಲ್ಲ' ಎಂದಿದ್ದಾರೆ.

'ಗಾಯ ತೀವ್ರಗೊಂಡ ಪರಿಣಾಮ ಕೈ ಮೇಲೆತ್ತಲು ಆಗುತ್ತಿರಲಿಲ್ಲ. ಪರಿಣಾಮ ನಾನು ಮತ್ತೆ ಬೌಲಿಂಗ್​ ಮಾಡುತ್ತೇನೆ ಎಂಬ ನಿರೀಕ್ಷೆ ಕಳೆದುಕೊಂಡಿದ್ದೆ. ಕೈಯನ್ನು ನೇರವಾಗಿ ಮಾಡಲು ಸಹ ಆಗುತ್ತಿರಲಿಲ್ಲ. ಆದರೆ, ಫಿಸಿಯೋಗಳು ಇದರ ಮೇಲೆ ಸಾಕಷ್ಟು ಕೆಲಸ ಮಾಡಿದ್ದರು. ವೈದ್ಯಕೀಯ ಸಂಬಂಧಿತ ಸಮಸ್ಯೆಯಾದ ಕಾರಣ ಭಯವಾಗಿತ್ತು. ಒಂದೇ ಒಂದು ತಿಂಗಳು ತಡವಾಗಿದ್ದರೂ ನನ್ನ ಕೈಯನ್ನು ಕತ್ತರಿಸಬೇಕೆಂದು ವೈದ್ಯರು ಹೇಳಿದ್ದರು' ಎಂದು ಮೊಹ್ಸಿನ್​ ಖಾನ್​ ಅವರು ನೋವಿನ ದಿನಗಳ ಕುರಿತು ಮಾತನಾಡಿದ್ದಾರೆ.

ಐಪಿಎಲ್​ನ 63ನೇ ಪಂದ್ಯದ ಕೊನೆಯ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್‌ ಗೆಲುವಿಗೆ 11 ರನ್ ಬೇಕಿತ್ತು. ಈ ವೇಳೆ ಕ್ರೀಸ್‌ನಲ್ಲಿ ಟಿಮ್ ಡೇವಿಡ್ ಹಾಗೂ ಕ್ಯಾಮೆರಾನ್ ಗ್ರೀನ್ ಘಟಾನುಘಟಿ ಆಟಗಾರರಿದ್ದರು. ಆ ಮೂಲಕ ಮುಂಬೈ ಜಯಿಸುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಮೊಹ್ಸಿನ್​ ಖಾನ್​ ಎಲ್ಲಾ ನಿರೀಕ್ಷೆಯನ್ನು ಹುಸಿಗೊಳಿಸಿದರು. ತಮ್ಮ ಖಡಕ್​ ಯಾರ್ಕರ್‌ಗಳ ಮೂಲಕ ಮೊಹ್ಸಿನ್‌ ಖಾನ್‌ ಲಕ್ನೋ ತಂಡಕ್ಕೆ 5 ರನ್ ರೋಚಕ ಗೆಲುವು ತಂದುಕೊಟ್ಟರು.

ಪ್ರಾಕ್ಟೀಸ್​ ಮಾಡುವಾಗ ಏನೆಲ್ಲಾ ಮಾಡುತ್ತಿದ್ದೆನೋ ಅದನ್ನೇ ಇಲ್ಲಿ ಪ್ರಯೋಗಿಸಿದ್ದೇನೆ. ಅದೇ ನನ್ನ ಸಾಮರ್ಥ್ಯ. ಕೊನೆಯ ಓವರ್‌ನಲ್ಲಿ ಯಾವ ರೀತಿ ಬೌಲಿಂಗ್​ ಮಾಡಬೇಕೆಂದು ಕೃಣಾಲ್ ಭಾಯ್‌ ಹೇಳಿದರು. ನಾನು ಸ್ಕೋರ್​ ಬೋರ್ಡ್​ ನೋಡುತ್ತಿರಲಿಲ್ಲ. ಕೂಲ್​ ಆಗಿ ಯೋಚಿಸುತ್ತಿದ್ದೆ. ಮುಂಬೈಗೆ 11 ರನ್​ ಬೇಕೆಂದು ನಾನು ತಲೆ ಕೆಡಿಸಿಕೊಂಡಿಲ್ಲ. ಆದರೆ ಅದ್ಭುತ 6 ಎಸೆತಗಳನ್ನು ಹಾಕಬೇಕೆಂದುಕೊಂಡಿದ್ದೆ ಅಷ್ಟೆ ಎಂದು ಕೊನೆಯ ಓವರ್​​​ ರಹಸ್ಯವನ್ನು ತಿಳಿಸಿದ್ದಾರೆ.