Kannada News  /  Sports  /  Gautam Gambhir Suggests To Get Guys Like Samson And Tripathi Int Team India
ಗೌತಮ್ ಗಂಭೀರ್; ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
ಗೌತಮ್ ಗಂಭೀರ್; ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (getty images)

Gautam Gambhir: 'ಸ್ಯಾಮ್ಸನ್, ತ್ರಿಪಾಠಿ, ಪೃಥ್ವಿಯಂತಹ ಹುಡುಗರನ್ನು ಆಡಿಸಿ'; ಹಿರಿಯ ಆಟಗಾರರಿಗೆ ಕೊಕ್ ಕುರಿತು ಗೌತಿ ಹೇಳಿದ್ದಿಷ್ಟು

30 December 2022, 21:04 ISTHT Kannada Desk
30 December 2022, 21:04 IST

ಲಂಕಾ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಘೋಷಿಸಲಾಗಿದ್ದು, ಸೂರ್ಯಕುಮಾರ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಂಗಳವಾರ ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರ ಹೆಸರು ತಂಡದಿಂದ ನಾಪತ್ತೆಯಾಗಿದೆ. ರಾಹುಲ್ ಅವರ ಕಳಪೆ ಫಾರ್ಮ್ ಮತ್ತು ರೋಹಿತ್ ಶರ್ಮಾ ಅವರ ಗಾಯದಿಂದಾಗಿ ತಂಡದಿಂದ ಹೊರಗಿಡಲಾಗಿದೆ. ಇದರೊಂದಿಗೆ ವಿರಾಟ್‌ ಕೊಹ್ಲಿಯನ್ನು ಕೂಡಾ ತಂಡದಿಂದ ಹೊರಗಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

ಟ್ರೆಂಡಿಂಗ್​ ಸುದ್ದಿ

2022ರಲ್ಲಿ, ಕೊಹ್ಲಿ ಭಾರತದ ಪರ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾಗಿದ್ದಾರೆ. ಈ ವರ್ಷ ವಿರಾಟ್‌ ಟಿ20ಯಲ್ಲಿ 55.78ರ ಸರಾಸರಿಯಲ್ಲಿ 20 ಪಂದ್ಯಗಳಲ್ಲಿ 781 ರನ್ ಗಳಿಸಿದ್ದಾರೆ. ಬಲಗೈ ಬ್ಯಾಟರ್ 2022ರ ಟಿ20 ವಿಶ್ವಕಪ್‌ನಲ್ಲೂ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಅಲ್ಲಿ ಅವರು ಆರು ಪಂದ್ಯಗಳಲ್ಲಿ 98.66ರ ಸರಾಸರಿಯಲ್ಲಿ 296 ರನ್ ಗಳಿಸಿದ್ದರು. ಇದರಲ್ಲಿ ನಾಲ್ಕು ಅರ್ಧ ಶತಕಗಳು ಕೂಡಾ ಸೇರಿವೆ.

2024ರ ಟಿ20 ವಿಶ್ವಕಪ್‌ಗೂ ಮುಂಚಿತವಾಗಿ, ಟೀಂ ಇಂಡಿಯಾದಲ್ಲಿ ಹಿರಿಯ ಆಟಗಾರರ ಬದಲಾಗಿ ಯುವ ಆಟಗಾರರಿಗೆ ಮಣೆ ಹಾಕಲು ಟೀಂ ಮ್ಯಾನೇಜ್‌ಮೆಂಟ್ ಪ್ರಯತ್ನ ಮಾಡುತ್ತಿರಬಹುದು ಎಂಬ ಬಗ್ಗೆ ಊಹಾಪೋಹಗಳು ಎದ್ದಿವೆ. ವಿಶ್ವಕಪ್‌ಗೆ ಇನ್ನೂ ಬಹಳಷ್ಟು ಸಮಯವಿದ್ದು, ಭಾರತದ ಮಾಜಿ ಆರಂಭಿಕ ಗೌತಮ್ ಗಂಭೀರ್ ಕೂಡಾ ಅನುಭವಿ ಆಟಗಾರರನ್ನು ಆಯ್ಕೆ ಮಾಡದಿರುವ ಬಗ್ಗೆ ಇದೇ ರೀತಿಯ ಅಭಿಪ್ರಾಯ ಹೊರಹಾಕಿದ್ದಾರೆ. ಅವರು ಗುರುವಾರ ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಸ್ಟಾರ್ ಸ್ಪೋರ್ಟ್ಸ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.

"ಆಯ್ಕೆದಾರರು ಮತ್ತು ಈ ಆಟಗಾರರ ನಡುವೆ ಉತ್ತಮ ಸಂವಹನ ಇರಬೇಕು. ಅಲ್ಲಿ ಸ್ಪಷ್ಟತೆ ಇರಬೇಕು. ಆಯ್ಕೆದಾರರು ಈ ಹುಡುಗರನ್ನು ಮೀರಿ ಮುಂದೆ ನೋಡಲು ನಿರ್ಧರಿಸಿದ್ದರೆ, ಹಾಗೆಯೇ ಆಗಲಿ. ಬಹಳಷ್ಟು ದೇಶಗಳು ಈಗಾಗಲೇ ಅದನ್ನು ಮಾಡಿದೆ ಎಂದು ನಾನು ಭಾವಿಸುತ್ತೇನೆ" ಎಂದು ಗಂಭೀರ್ ಹೇಳಿದರು.

"ಆಯ್ಕೆದಾರರು ಮತ್ತು ಮ್ಯಾನೇಜ್‌ಮೆಂಟ್ ಕೆಲವು ವ್ಯಕ್ತಿಗಳನ್ನು ಮೀರಿ ನೋಡಿದಾಗ ಅಲ್ಲಿ ಕೆಲವೊಂದು ಬದಲಾವಣೆ ಸಾಧ್ಯ. ಇದು ವ್ಯಕ್ತಿಗಳ ಬಗ್ಗೆ ಅಲ್ಲ. ಆದರೆ ಮುಂದಿನ ಟಿ20 ವಿಶ್ವಕಪ್‌ಗೂ ಮುಂಚಿತವಾಗಿ ನಿಮ್ಮ ಯೋಜನೆಗಳ ಬಗ್ಗೆ ನಿರ್ಧರಿಸಲು ಇದು ಸಹಾಯ ಮಾಡುತ್ತದೆ. ಏಕೆಂದರೆ, ವಿಶ್ವಕಪ್‌ ಗೆಲ್ಲಲು ತಂಡ ಬಯಸುತ್ತದೆ. ಸೂರ್ಯಕುಮಾರ್ ಅವರಂತಹ ಯುವ ಆಟಗಾರರು, ಆ ಕನಸನ್ನು ನನಸಾಗಿಸಲು ಮುಂದುವರಿಯಬಹುದು,” ಎಂದು ಅವರು ಹೇಳಿದ್ದಾರೆ.

ಯಾವೆಲ್ಲ ಆಟಗಾರರು ತಂಡದಲ್ಲಿರಬೇಕು ಎಂಬ ಬಗ್ಗೆ ಮಾತನಾಡಿದ ಗೌತಿ, "ವೈಯಕ್ತಿಕವಾಗಿ ನೀವು ನನ್ನನ್ನು ಕೇಳಿದರೆ, ಇದು ತುಂಬಾ ಕಠಿಣವಾಗಿದೆ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಅವರಂತಹ ಆಟಗಾರರ ಮಿಶ್ರಿತ ತಂಡ ಇರಬೇಕು. ನಮ್ಮಲ್ಲಿ ಹಾರ್ದಿಕ್ ಪಾಂಡ್ಯ ಇದ್ದಾರೆ. ಇವರೊಂದಿಗೆ ನಾನು ಪೃಥ್ವಿ ಶಾ, ರಾಹುಲ್ ತ್ರಿಪಾಠಿ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಹುಡುಗರನ್ನು ತಂಡಕ್ಕೆ ಕರೆತರಲು ಬಯಸುತ್ತೇನೆ. ಅವರು ನಿರ್ಭೀತ ಕ್ರಿಕೆಟ್ ಆಡಬಲ್ಲರು" ಎಂದು ಗಂಭೀರ್ ಹೇಳಿದ್ದಾರೆ.

"ಬಹುಶಃ ಹೊಸ ಪೀಳಿಗೆಯ ಈ ಕ್ರಿಕೆಟಿಗರು ಚುಟುಕು ಮಾದರಿಯಲ್ಲಿ ಸಾಧಿಸಲು ಸಾಧ್ಯವಾಗಬಹುದು. ಭಾರತ ಹೇಗೆ ಆಡಬೇಕೆಂದು ಎಲ್ಲಾ ಭಾರತೀಯರು ಕೂಡಾ ಅದನ್ನೇ ಬಯಸುತ್ತಾರೆ. ಹೀಗಾಗಿ ಈ ಹುಡುಗರು ತಮಗೆ ಸಿಗುವ ಅವಕಾಶಗಳಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರೆಸಿದರೆ, ಉಳಿದವರಿಗೆ ಕಷ್ಟವಾಗುತ್ತದೆ. ಅದು ವಿಶ್ರಾಂತಿ ಪಡೆದಿರುವವರೂ ಆಗಿರಬಹುದು ಅಥವಾ ಭಾಗಶಃ ತಂಡದಿಂದ ಕೈಬಿಡಲಾದ ಆಟಗಾರರೂ ಆಗಿರಬಹುದು" ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಲಂಕಾ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಘೋಷಿಸಲಾಗಿದ್ದು, ಸೂರ್ಯಕುಮಾರ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯವು ಜನವರಿ 03ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.