ಕನ್ನಡ ಸುದ್ದಿ  /  ಕ್ರೀಡೆ  /  Cwg: ಪಿ ವಿ ಸಿಂಧುರನ್ನು ನೋಡುವುದು ನನ್ನ ಕನಸಾಗಿತ್ತು, ಅವರ ಆಟ ನೋಡಿ ರೋಮಾಂಚನವಾಯ್ತು -ಭಾರತದ ಕ್ರಿಕೆಟರ್‌

CWG: ಪಿ ವಿ ಸಿಂಧುರನ್ನು ನೋಡುವುದು ನನ್ನ ಕನಸಾಗಿತ್ತು, ಅವರ ಆಟ ನೋಡಿ ರೋಮಾಂಚನವಾಯ್ತು -ಭಾರತದ ಕ್ರಿಕೆಟರ್‌

“ನಾವು ಪಿವಿ ಸಿಂಧು ಅವರ ಆಟವನ್ನು ವೀಕ್ಷಿಸಲು ಹೋಗಿದ್ದೆವು. ಅದು ಕಠಿಣ ಸ್ಪರ್ಧೆಯಾಗಿತ್ತು. ಅವರ ಆಟವನ್ನು ನೋಡುವಾಗ ನನಗೆ ರೋಮಾಂಚನವಾಗುತ್ತಿತ್ತು” ಎಂದು ರೇಣುಕಾ ಸಿಂಗ್‌ ಹೇಳಿಕೊಂಡಿದ್ದಾರೆ.

ರೇಣುಕಾ ಸಿಂಗ್‌-ಪಿ ವಿ ಸಿಂಧು
ರೇಣುಕಾ ಸಿಂಗ್‌-ಪಿ ವಿ ಸಿಂಧು

ಬರ್ಮಿಂಗ್‌ಹ್ಯಾಮ್‌ : ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್‌ ಸೇರ್ಪಡೆಗೊಂಡಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಮಹತ್ವದ ಕ್ರೀಡಾಜಾತ್ರೆಯಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯವನ್ನು ಸೋತರೂ, ಆ ಬಳಿಕ ನಡೆದ ಎರಡು ಪಂದ್ಯಗಳನ್ನು ಗೆದ್ದು, ಸೆಮಿಫೈನಲ್‌ಗೆ ಪ್ರವೇಶಿಸಿದೆ.

ಭಾರತ ಮಹಿಳಾ ಕ್ರಿಕೆಟಿಗರು ತಮ್ಮ ಆಟದ ಶೆಡ್ಯೂಲ್‌ ಇಲ್ಲದ ವೇಳೆ, ಭಾರತದ ಇತರ ಆಟಗಾರರನ್ನು ಬೆಂಬಲಿಸುವ ಸಲುವಾಗಿ ವಿವಿಧ ಕ್ರೀಡೆಗಳನ್ನು ವೀಕ್ಷಿಸುತ್ತಿದ್ದಾರೆ. ಕೆಲ ಆಟಗಾರ್ತಿಯರು ಭಾರತದ ಬ್ಯಾಡ್ಮಿಂಟನ್ ಮತ್ತು ಮಹಿಳಾ ಹಾಕಿ ಈವೆಂಟ್‌ಗಳಿಗೆ ಹಾಜರಾಗಿ ಆಟಗಾರರನ್ನು ಬೆಂಬಲಿಸಿದ್ದಾರೆ. ಈ ಬಗ್ಗೆ ಭಾರತ ತಂಡದ ಸೀಮರ್‌ ರೇಣುಕಾ ಸಿಂಗ್‌ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಬಿಸಿಸಿಐ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ರೇಣುಕಾ ಅಬರು ಪಿ ವಿ ಸಿಂಧು ಅವರ ಆಟ ನೋಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಸಿಂಧು ಅವರ ಆಟವನ್ನು ನೋಡುವಾಗ ನನಗೆ ರೋಮಾಂಚನವಾಯ್ತು ಎಂದು ರೇಣುಕಾ ಹೇಳಿಕೊಂಡಿದ್ದಾರೆ. ಈ ಮೂಲಕ ಸಿಂಧೂ ಅವರಿಗೆ ತಾನು ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.

“ನಾವು ಪಿವಿ ಸಿಂಧು ಅವರ ಆಟವನ್ನು ವೀಕ್ಷಿಸಲು ಹೋಗಿದ್ದೆವು. ಅದು ಕಠಿಣ ಸ್ಪರ್ಧೆಯಾಗಿತ್ತು. ಅವರ ಆಟವನ್ನು ನೋಡುವಾಗ ನನಗೆ ರೋಮಾಂಚನವಾಗುತ್ತಿತ್ತು” ಎಂದು ರೇಣುಕಾ ಸಿಂಗ್‌ ಹೇಳಿಕೊಂಡಿದ್ದಾರೆ.

“ಅಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಅವರ ಬೆಂಬಲ ಕೂಡಾ ಅದ್ಭುತವಾಗಿತ್ತು. ನಾವಂತೂ ಆ ಪಂದ್ಯವನ್ನು ಬಹಳಷ್ಟು ಆನಂದಿಸಿದ್ದೇವೆ. ಪಿವಿ ಸಿಂಧು ಅವರ ಆಟವನ್ನು ಹತ್ತಿರದಿಂದ ನೋಡಬೇಕೆಂಬುದು ನನ್ನ ಕನಸಾಗಿತ್ತು. ಅದು ಈಗ ನೆರವೇರಿದೆ. ಕಾಮನ್‌ವೆಲ್ತ್‌ನಲ್ಲಿ ಮೊದಲ ಬಾರಿ ಭಾಗವಹಿಸುತ್ತಿದ್ದು, ನಿಜಕ್ಕೂ ಹೆಮ್ಮೆಯೆನಿಸುತ್ತಿದೆ” ಎಂದು ರೇಣುಕಾ ಹೇಳಿಕೊಂಡಿದ್ದಾರೆ.

ವಿಡಿಯೋದಲ್ಲಿ ಭಾರತ ಮಹಿಳಾ ತಂಡದ ಆಲ್‌ರೌಂಡರ್ ದೀಪ್ತಿ ಶರ್ಮಾ ಕೂಡಾ ಮಾತನಾಡಿದ್ದು, “ನಾವು ಹಾಕಿಯನ್ನೂ ನೋಡಿದ್ದೇವೆ. ನಮ್ಮ ದೇಶದ ಹುಡುಗಿಯರು ಆಡಿದ ರೀತಿಯನ್ನು ನೋಡಿದರೆ, ಅದರ ಹಿಂದಿನ ಅವರ ಕಠಿಣ ಪರಿಶ್ರಮ ಎದ್ದು ಕಾಣುತ್ತಿತ್ತು” ಎಂದು ಹೊಗಳಿದ್ದಾರೆ.

ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಮಾತನಾಡುತ್ತಾ, ಭಾರತೀಯ ತಂಡದ ಸ್ಥಿರತೆಯನ್ನು ಶ್ಲಾಘಿಸಿದ್ದಾರೆ. “ಅವರ ಆಟವನ್ನು ನೋಡುವಾಗ, ದೇಶಕ್ಕಾಗಿ ನಾವು ಕೂಡಾ ಚಿನ್ನದ ಪದಕವನ್ನು ಗೆಲ್ಲಬೇಕೆಂಬ ಪ್ರೇರಣೆ ಸಿಗುತ್ತಿದೆ” ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಬಾರ್ಬಡಸ್ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ರೇಣುಕಾ ಅವರು ಅಮೋಘ ಆಟ ಪ್ರದರ್ಶಿಸಿದ್ದಾರೆ. ಅಗ್ರ ಕ್ರಮಾಂಕದ ನಾಲ್ಕು ವಿಕೆಟ್ ಕಬಳಿಸಿ, ಭಾರತದ ಗೆಲುವಿನ ರೂವಾರಿಯಾದರು. ಆಡಿದ ಮೂರು ಪಂದ್ಯಗಳಿಂದ ಒಟ್ಟು ಒಂಬತ್ತು ವಿಕೆಟ್ ಪಡೆದಿದ್ದಾರೆ. ಭಾರತ ಮಹಿಳೆಯರ ತಂಡವು, ನಾಳೆ ರಾತ್ರಿ 10.30 ಕ್ಕೆ ನಡೆಯುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. ಇಲ್ಲಿ ಗೆದ್ದರೆ ಫೈನಲ್‌ ಪ್ರವೇಶಿಸುವ ಭಾರತಕ್ಕೆ ಆಸ್ರೇಲಿಯಾ ಅಥವಾ ನ್ಯೂಜಿಲ್ಯಾಂಡ್‌ ಎದುರಾಗಲಿದೆ. ಈ ಎರಡು ತಂಡಗಳ ಮಧ್ಯೆ ನಾಳೆ ಮೊದಲ ಸೆಮಿಫೈನಲ್‌ ನಡೆಯಲಿದೆ. ಭಾನುವಾರ ಫೈನಲ್‌ ಪಂದ್ಯ ನಡೆಯಲಿದ್ದು, ಚೊಚ್ಚಲ ಕಾಮನ್‌ವೆಲ್ತ್‌ ಪದಕಕ್ಕೆ ಭಾರತ ಎದುರು ನೋಡುತ್ತಿದೆ.

ವಿಭಾಗ