ಕನ್ನಡ ಸುದ್ದಿ  /  ಕ್ರೀಡೆ  /  ಶಮಿ + ಸಿರಾಜ್ = W, W, W, W, W, W... ತಂಡಕ್ಕೆ ಕಾಡ್ತಿಲ್ಲ ಜಸ್​ಪ್ರಿತ್ ಬೂಮ್ರಾ ಅಲಭ್ಯತೆ!

ಶಮಿ + ಸಿರಾಜ್ = W, W, W, W, W, W... ತಂಡಕ್ಕೆ ಕಾಡ್ತಿಲ್ಲ ಜಸ್​ಪ್ರಿತ್ ಬೂಮ್ರಾ ಅಲಭ್ಯತೆ!

ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಅಲ್ಪಮೊತ್ತಕ್ಕೆ ಕುಸಿತ ಕಂಡಿದೆ. ಬೃಹತ್​​ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿದ್ದ ಆಸಿಸ್​​, 189 ರನ್​ಗಳಿಗೆ ಸರ್ವಪತನ ಕಂಡಿದೆ. ಇದಕ್ಕೆ ಕಾರಣ ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್​ರ ಬೆಂಕಿ ಬೌಲಿಂಗ್​.!

ಶಮಿ, ಸಿರಾಜ್​, ಬೂಮ್ರಾ
ಶಮಿ, ಸಿರಾಜ್​, ಬೂಮ್ರಾ

ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಅಲ್ಪಮೊತ್ತಕ್ಕೆ ಕುಸಿತ ಕಂಡಿದೆ. ಬೃಹತ್​​ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿದ್ದ ಆಸಿಸ್​​, 189 ರನ್​ಗಳಿಗೆ ಸರ್ವಪತನ ಕಂಡಿದೆ. ಬಲಿಷ್ಠ ಬ್ಯಾಟಿಂಗ್​ ಲೈನಪ್​ ಹೊಂದಿದ್ದ ಸ್ಮಿತ್​ ಪಡೆ, ಆರಂಭದಲ್ಲಿ ಅಬ್ಬರಿಸಿದರೂ ಬಳಿಕ ಬಿಗ್​​ ಸ್ಕೋರ್​​ನತ್ತ ಹೆಜ್ಜೆ ಹಾಕಲಿಲ್ಲ ಎಂಬುದು ವಿಶೇಷ. ಮುಂಬೈನ ವಾಂಖೆಡೆಯಲ್ಲಿ ಕಾಂಗರೂಗಳ ಸದ್ದಡಗಿಸಿದ್ದು ಬೇರೆ ಯಾರೂ ಅಲ್ಲ, ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್.!

ವಿಕೆಟ್​ ಬೇಟೆ ಆರಂಭಿಸಿದ್ದೇ ಸಿರಾಜ್​.!

ಮೊಹಮ್ಮದ್​​ ಸಿರಾಜ್​.. ಟೀಮ್​ ಇಂಡಿಯಾದ ವೇಗದೂತ.. ಪವರ್​​​ ಪ್ಲೇನಲ್ಲೇ ಧಮಾಕ ಬೌಲಿಂಗ್​ ನಡೆಸುವ ಸಿರಾಜ್​​, ವಿಕೆಟ್​ ಬೇಟೆ ಆಡುವುದನ್ನೇ ಕರಗತ ಮಾಡಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಎದುರಾಳಿಯ ಮೇಲೆರಗುವ ವೇಗಿ, ಆಸಿಸ್​​​ ಮೇಲೂ ಅದೇ ದಾಳಿ ಮುಂದುವರೆಸಿದರು. ಆರಂಭದಲ್ಲೇ ಭಾರತಕ್ಕೆ ಮುನ್ನಡೆ ತಂದುಕೊಡುವ ಹೈದರಾಬಾದ್ ಬೌಲರ್​​, ತನ್ನ ಮೊದಲ ಓವರ್​​​​​ನಲ್ಲೇ ಸ್ಪೋಟಕ ಓಪನರ್​​​​​​​ ಟ್ರಾವಿಸ್​ ಹೆಡ್​ಗೆ ಗೇಟ್​ ಪಾಸ್​ ನೀಡಿದರು.

ಬಳಿಕ ಕೊನೆಯ ಹಂತದಲ್ಲಿ ಸೀನ್​ ಅಬಾಟ್​ ಮತ್ತು ಆ್ಯಡಮ್​ ಜಂಪಾ ಅವರನ್ನು ಡಕೌಟ್​​ಗೆ ವಾಪಸ್​​ ಕಳುಹಿಸಿದರು. ಖಡಕ್​ ಬೌಲಿಂಗ್​ ನಡೆಸಿದ ವೇಗಿಯ ಸ್ಪೀಡ್​​​ಗೆ ತತ್ತರಿಸಿತು. 5.4 ಓವರ್​​ಗಳಲ್ಲಿ 1 ಮೇಡನ್​ ಓವರ್​ ಸಹಿತ 29 ರನ್​ ನೀಡಿ 3 ವಿಕೆಟ್​ ಉರುಳಿಸಿದ್ದಾರೆ. ತನ್ನ ಬೌಲಿಂಗ್​ನ ಕೊನೆಯ 10 ಎಸೆತಗಳಲ್ಲಿ ಒಂದೂ ರನ್​ ನೀಡದೇ 2 ವಿಕೆಟ್​ ಉರುಳಿಸಿದ್ದಾರೆ. ಸಿರಾಜ್​​ ಕೊನೆಯ ಹತ್ತು ಎಸೆತಗಳು ಹೀಗಿದೆ ನೋಡಿ.. 0, 0, 0, W, 0, 0, 0, 0, 0, W.

2022ರಿಂದ 41 ವಿಕೆಟ್​ಗಳ ಬೇಟೆ!

ಏಕದಿನ ಕ್ರಿಕೆಟ್​ನಲ್ಲಿ ಕಳೆದೊಂದು ವರ್ಷದಿಂದ ವಿಕೆಟ್​ಗಳ ಸುರಿ ಮಳೆಗೈಯುತ್ತಿದ್ದಾರೆ. ಪಂದ್ಯ ಪಂದ್ಯದಲ್ಲೂ ವಿಕೆಟ್​ ತನ್ನ ಬೌಲಿಂಗ್​ ಖದರ್​ ಹೆಚ್ಚಿಸಿಕೊಳ್ಳುತ್ತಿರುವ ನಂಬರ್​ 1 ಬೌಲರ್​​​​​ 2022ರಿಂದ ಈವರೆಗೂ ಏಕದಿನದಲ್ಲಿ 41 ವಿಕೆಟ್​​ ಉರುಳಿಸಿದ್ದಾರೆ. ಇಷ್ಟು ವಿಕೆಟ್​ ಪಡೆದಿರುವುದು ಕೇವಲ 20 ಪಂದ್ಯಗಳಿಂದ.!

ಶಮಿ ಖದರ್​​ ಬೌಲಿಂಗ್​​​​ಗೆ ಆಸಿಸ್​ ನಿರುತ್ತರ.!

ಸಿರಾಜ್​ ಆರಂಭಿಕ ಮೇಲುಗೈ ನೀಡಿದರೆ, ಮೊಹಮ್ಮದ್​ ಶಮಿ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳನ್ನು ಧೂಳೀಪಟ ಮಾಡಿದರು. ಬೊಂಬಾಟ್​ ಬೌಲಿಂಗ್​ ಮೂಲಕ ಗಮನ ಸೆಳೆಯುತ್ತಿರುವ ಶಮಿ, ಸ್ವಿಂಗ್​ ಬೌಲಿಂಗ್​ನಿಂದಲೇ ಆಸಿಸ್​ ತಂಡಕ್ಕೆ ಕಾಡಿದರು. ಬೆಂಕಿ ಚೆಂಡುಗಳನ್ನು ಉಗುಳಿದ ವೇಗಿ, ಕಾಂಗರೂಗಳನ್ನು ಬೆಂಬಿಡದೆ ಕಾಡಿದರು.

14 ಎಸೆತ, 0 ರನ್​, 3 ವಿಕೆಟ್​

6 ಬೌಲಿಂಗ್ ಮಾಡಿದ ಶಮಿ 2 ಓವರ್​​ ಮೇಡನ್​ ಸಹಿತ 17 ರನ್​ ಬಿಟ್ಟುಕೊಟ್ಟ ಶಮಿ, ಪಡೆದಿದ್ದು 3 ವಿಕೆಟ್​. ಅದರಲ್ಲೂ ತನ್ನ ಬೌಲಿಂಗ್​​​​​​​ನ ಕೊನೆಯ 14 ಎಸೆತಗಳಲ್ಲಿ ಅದ್ಭುತ ಸ್ಪೆಲ್​ ಮಾಡಿದ ಈ ಸ್ವಿಂಗ್​ ಬೌಲರ್​​​​ ರನ್​ ಬಿಟ್ಟುಕೊಡದೆ 3 ವಿಕೆಟ್​ ಪಡೆದು ಮಿಂಚಿದರು. ಈ ಜೋಡಿ ಮುಂದಿನ ಪಂದ್ಯಗಳಲ್ಲೂ ಇದೇ ಫಾರ್ಮ್​ ಮುಂದುವರೆಸಿದರೆ, ಏಕದಿನ ವಿಶ್ವಕಪ್​​​​ನಲ್ಲಿ ಟೀಮ್​ ಇಂಡಿಯಾ ಮೇಲುಗೈ ಸಾಧಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ.

ಬೂಮ್ರಾ ಅಲಭ್ಯತೆ ಕಾಡುತ್ತಿಲ್ಲ!

ಜಸ್​ಪ್ರಿತ್​ ಬೂಮ್ರಾ ಇಂಜುರಿಯಾದ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಸಾಕಷ್ಟು ಹಿನ್ನಡೆಯಾಗಿದೆ. ಬೌಲಿಂಗ್​​​ನಲ್ಲಿ ಬಲ ಕುಸಿಯಿತು ಎಂದೆಲ್ಲಾ ಚರ್ಚೆ ನಡೆಯಿತು. ಇನ್ಮುಂದೆ ಭಾರತದ ಬೌಲಿಂಗ್​​​​​ ವಿಭಾಗದಲ್ಲಿ ಧಮ್​ ಇರೋದಿಲ್ಲ ಎಂಬ ಮಾತುಗಳನ್ನೂ ಆಡಿದರು. ಆದರೆ ಸಿರಾಜ್​ ಮತ್ತು ಶಮಿ ಪವರ್​ಪ್ಯಾಕ್​ ಬೌಲಿಂಗ್​ ನೋಡುತ್ತಿದ್ದರೆ, ಬೂಮ್ರಾ ಅಲಭ್ಯತೆ ಅಲಭ್ಯತೆ ತಂಡಕ್ಕೆ ಕಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.