ಕನ್ನಡ ಸುದ್ದಿ  /  Sports  /  India Wins 1st T20i Against South Africa

India vs South Africa T20I: ಸೂರ್ಯ-ರಾಹುಲ್‌ ಅರ್ಧಶತಕ; ಭಾರತಕ್ಕೆ ಗೆಲುವಿನ ಆರಂಭ

ದಕ್ಷಿಣ ಆಫ್ರಿಕಾ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಭಾರತ ಕೇವಲ 2 ವಿಕೆಟ್‌ ಕಳೆದುಕೊಂಡು ಇನ್ನೂ 20 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.

ರಾಹುಲ್-ಸೂರ್ಯಕುಮಾರ್‌ ಅಮೋಘ ಆಟ
ರಾಹುಲ್-ಸೂರ್ಯಕುಮಾರ್‌ ಅಮೋಘ ಆಟ (BCCI)

ತಿರುವನಂತಪುರಂ: ಹರಿಣಗಳ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಗಳಿಸಿದೆ. ಬೌಲಿಂಗ್‌ನಲ್ಲಿ ಮೋಡಿ ಮಾಡಿದ ಭಾರತೀಯ ಆಟಗಾರರು, ಹರಿಣಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದರು. ಸಾಧಾರಣ ಗುರಿ ಬೆನ್ನತ್ತಿದ ಭಾರತ ಕೇವಲ 2 ವಿಕೆಟ್‌ ಕಳೆದುಕೊಂಡು ಇನ್ನೂ 20 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.

ಆರಂಭದಲ್ಲಿ ಭಾರಿ ಆಘಾತ ಎದುರಿಸಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಹರಿಣಗಳು, ಅಂತಿಮವಾಗಿ 8 ವಿಕೆಟ್‌ ಕಳೆದುಕೊಂಡು 106 ರನ್‌ ಕಲೆ ಹಾಕಿದರು. 107ರನ್‌ಗಳ ಗುರಿ ಬೆನ್ನತ್ತಿದ ಭಾರತವು, ಆರಂಭದಲ್ಲಿ ಎರಡೆರಡು ಆಘಾತ ಎದುರಿಸಿತು. ನಾಯಕ ರೋಹಿತ್‌ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರೆ, ವನ್‌ ಡೌಕ್‌ ಕ್ರಮಾಂಕದಲ್ಲಿ ಬಂದ ವಿರಾಟ್‌ ಮೂರು ರನ್‌ ಗಳಿಸಿ ಔಟಾದರು. ಆ ಬಳಿಕ ಕೆ ಎಲ್‌ ರಾಹುಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಜತೆಗೂಡಿ ಇನ್ನಿಂಗ್ಸ್‌ ಕಟ್ಟಿದರು.

17 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಇವರಿಬ್ಬರೂ ಆಸರೆಯಾದರೂ. ತಲಾ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಸೂರ್ಯಕುಮಾರ್‌ ಯಾದವ್‌ 33 ಎಸೆತಗಳಿಂದ 50 ರನ್‌ ಸಿಡಿಸಿದರೆ, ನಿಧಾನಗತಿಯಲ್ಲಿ ಬ್ಯಾಟ್‌ ಬೀಸಿ ಕ್ರೀಸ್‌ಕಚ್ಚಿ ಆಡಿದ ರಾಹುಲ್‌ 56 ಎಸೆತಗಳಲ್ಲಿ 51 ರನ್‌ ಗಳಿಸಿದರು. ಇವರಿಬ್ಬರ ಆಟದಿಂದಾಗಿ ಭಾರತ ಕೇವಲ 16.4 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 110 ರನ್‌ ಗಳಿಸಿತು. ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿದ ರೋಹಿತ್‌ ಶರ್ಮಾ, ದಕ್ಷಿಣ ಆಫ್ರಿಕಾ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭದಿಂದಲೇ ಹರಿಣಗಳ ಪಾಳಯದ ವಿಕೆಟ್‌ಗಳು ಒಂದರ ಮೇಲೊಂದರಂತೆ ಉರುಳುತ್ತಾ ಸಾಗಿತು. ಎರಡು ಓವರ್‌ಗಳಲ್ಲಿ ತಂಡದ ಮೊತ್ತ 9 ಆಗುವಾಗಲೇ ಪ್ರಮುಖ 5 ವಿಕೆಟ್‌ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು.

ಆರಂಭಿಕ ಆಟಗಾರ ಹಾಗೂ ನಾಯಕ ಬವುಮಾ ಶೂನ್ಯಕ್ಕೆ ನಿರ್ಗಮಿಸಿದರೆ, ಕ್ವಿಂಟನ್‌ ಡಿಕಾಕ್‌ ಖಾತೆ ತೆರೆದು ನಿರ್ಗಮಿಸಿದರು. ಆ ಬಳಿಕ ರಿಲೀ ರೋಸೊವ್, ಡೇವಿಡ್‌ ಮಿಲ್ಲರ್‌ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಒಬ್ಬರ ಬೆನ್ನಲ್ಲೇ ಮತ್ತೊಬ್ಬರಂತೆ ಗೋಡನ್‌ ಡಕ್‌ಗೆ ಬಲಿಯಾದರು. ಈ ವೇಳೆ ಏಡನ್‌ ಮರ್ಕ್ರಾಮ್‌ ತುಸು ಪ್ರತಿರೋಧ ಒಡ್ಡಿ 25 ರನ್‌ ಕಲೆ ಹಾಕಿದರು. ಸಂಕಷ್ಟದಲ್ಲಿದ್ದ ತಂಡಕ್ಕೆ ತುಸು ಚೇತರಿಕೆ ತಂದರು.

ಪರ್ನೆಲ್‌ ಕೂಡಾ ತಂಡಕ್ಕೆ ಅಮೂಲ್ಯ 24 ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು. ಡೆತ್‌ ಓವರ್‌ಗಳಲ್ಲಿ ಅಬ್ಬರಿಸಿದ ಕೇಶವ್ ಮಹಾರಾಜ್‌ ತಂಡದ ಪರ‌ 41 ರನ್‌ ಗಳಿಸಿದರು. ಭಾರತದ ಪರ ದೀಪಕ್‌ ಚಹಾರ್‌ 2 ವಿಕೆಟ್‌ ಕಬಳಿಸಿದರೆ, ಹರಿಣಗಳನ್ನು ಬಿಡದೆ ಕಾಡಿದ ಅರ್ಷದೀಪ್‌ ಸಿಂಗ್‌ 3 ವಿಕೆಟ್‌ ಪಡೆದರು.