ಕನ್ನಡ ಸುದ್ದಿ  /  ಕ್ರೀಡೆ  /  Cwg: ಇಂದು ಭಾರತ-ಇಂಗ್ಲೆಂಡ್‌ ನಡುವೆ ಸೆಮಿಫೈನಲ್‌; ಗೆದ್ದರೆ ಪದಕ ಖಚಿತ

CWG: ಇಂದು ಭಾರತ-ಇಂಗ್ಲೆಂಡ್‌ ನಡುವೆ ಸೆಮಿಫೈನಲ್‌; ಗೆದ್ದರೆ ಪದಕ ಖಚಿತ

ಇಂದಿನ ಮೊದಲ ಸೆಮಿಫೈನಲ್‌ ಕದನವು ಮಧ್ಯಾಹ್ನ 3.30ಕ್ಕೆ ಪ್ರಾರಂಭವಾಗಲಿದೆ. ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯ‌ ನೇರ ಪ್ರಸಾರವಾಗಲಿದೆ. ಇದಲ್ಲದೆ ಸೋನಿ ಲೈವ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲೂ ಚಂದಾದಾರರಾಗಿ ಪಂದ್ಯ ವೀಕ್ಷಿಸಬಹುದು.

ಭಾರತ ತಂಡ
ಭಾರತ ತಂಡ

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇಂದು ಮಹತ್ವದ ಪಂದ್ಯ ನಡೆಯಲಿದೆ. ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ಪದಾರ್ಪಣೆ ಮಾಡಿದ ಚೊಚ್ಚಲ ವರ್ಷದಲ್ಲೇ, ಪದಕ ಗೆಲ್ಲಲು ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹಾತೊರೆಯುತ್ತಿದೆ. ಈಗಾಗಲೇ ಸೆಮಿ ಫೈನಲ್‌ ತಲುಪಿರುವ ಭಾರತದ ವನಿತೆಯರು, ಇಂದು ಅತಿಥೇಯ ಇಂಗ್ಲೆಂಡ್ ಮಹಿಳೆಯರನ್ನು ಎದುರಿಸುತ್ತಿದ್ದಾರೆ. ಇಂದಿನ ಪಂದ್ಯ ಗೆದ್ದು, ಫೈನಲ್‌ ಪ್ರವೇಶಿಸುವ ಇರಾದೆ ಭಾರತದ್ದು.

ಸೆಮಿಫೈನಲ್‌ಗೆ ಹೋಗುವ ದಾರಿಯಲ್ಲಿ, ಭಾರತೀಯ ಮಹಿಳೆಯರು ಎರಡು ಗೆಲುವು ಹಾಗೂ ಒಂದು ಸೋಲು ಅನುಭವಿಸಿದ್ದಾರೆ. ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಭಾರತ, ನಂತರ ಪಾಕಿಸ್ತಾನವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದ್ದರು. ಕೊನೆಯ ಪಂದ್ಯದಲ್ಲಿ ಬಾರ್ಬಡಸ್ ತಂಡದ ವಿರುದ್ಧ 100 ರನ್‌ಗಳ ಬೃಹತ್‌ ಅಂತರದ ವಿಜಯದೊಂದಿಗೆ ಸೆಮೀಸ್‌ಗೆ ಎಂಟ್ರಿ ಪಡೆದರು.

ಭಾರತೀಯ ವನಿತೆಯರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಸಾಂಘಿಕ ಪ್ರದರ್ಶನ ತೋರಿದ್ದಾರೆ. ಸ್ಮೃತಿ ಮಂಧನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ ಮತ್ತು ಜೆಮಿಮಾ ರೋಡ್ರಿಗಸ್ ಅವರಂತಹ ಅದ್ಭುತ ಬ್ಯಾಟಿಂಗ್‌ ಭಾರತಕ್ಕೆ ಬಲ ತುಂಬಲಿದೆ. ಬೌಲರ್‌ಗಳಲ್ಲಿ ವೇಗಿ ರೇಣುಕಾ ಸಿಂಗ್ ಮತ್ತು ಸ್ನೇಹ ರಾಣಾ ಭಾರತದ ಪ್ರಮುಖ ಅಸ್ತ್ರ. ಇವರಲ್ಲಿ ರೇಣುಕಾ ಅವರ ಪ್ರದರ್ಶನ ಕಳೆದ ಮೂರು ಪಂದ್ಯಗಳಲ್ಲೂ ಅಮೋಘವಾಗಿತ್ತು. ಆರಂಭದಲ್ಲೇ ಎದುರಾಳಿಗಳ ವಿಕೆಟ್‌ ಕಿತ್ತು ಕಟ್ಟಿ ಹಾಕುವ ಸಾಮರ್ಥ್ಯ ಇವರಿಗಿದೆ.

ಇಂದು ನಡೆಯಲಿರುವ ಸೆಮಿಫೈನಲ್ ಕದನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಪ್ರಬಲ ಪೈಪೋಟಿ ಎದುರಾಗುವ ಎಲ್ಲಾ ಸಾಧ್ಯತೆಗಳಿದೆ. ಎರಡೂ ವಿಶ್ವ ದರ್ಜೆಯ ತಂಡಗಳಾಗಿದ್ದು, ಐಸಿಸಿ ಮಹಿಳಾ ಟಿ20 ಶ್ರೇಯಾಂಕದಲ್ಲಿ ಇಂಗ್ಲೆಂಡ್ ಎರಡು ಮತ್ತು ಭಾರತ ನಾಲ್ಕನೇ ಸ್ಥಾನದಲ್ಲಿದೆ. ಸೆಮಿಫೈನಲ್‌ನಲ್ಲಿ ಗೆದ್ದರೆ, ಭಾರತವು ಐತಿಹಾಸಿಕ ಚೊಚ್ಚಲ ಚಿನ್ನಕ್ಕೆ ಒಂದು ಹೆಜ್ಜೆ ಹತ್ತಿರವಾಗಲಿದೆ.

ಇಂದಿನ ಮೊದಲ ಸೆಮಿಫೈನಲ್‌ ಕದನವು ಮಧ್ಯಾಹ್ನ 3.30ಕ್ಕೆ ಪ್ರಾರಂಭವಾಗಲಿದೆ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ ನಗರದಲ್ಲಿ ಪಂದ್ಯ ನಡೆಯಲಿದೆ. ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯ‌ ನೇರ ಪ್ರಸಾರವಾಗಲಿದೆ. ಇದಲ್ಲದೆ ಸೋನಿ ಲೈವ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲೂ ಚಂದಾದಾರರಾಗಿ ಪಂದ್ಯ ವೀಕ್ಷಿಸಬಹುದು.

ಭಾರತ ಮಹಿಳಾ ತಂಡ

ಸ್ಮೃತಿ ಮಂಧನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಸ್ನೇಹ ರಾಣಾ, ಮೇಘನಾ ಸಿಂಗ್, ರೇಣುಕಾ ಸಿಂಗ್, ಯಾಸ್ತಿಕಾ ಭಾಟಿಯಾ, ಸಬ್ಬಿನೇನಿ ಮೇಘನಾ, ಹರೇಲೆನಿ ಮೇಘನಾ ಡಿಯೋಲ್, ರಾಜೇಶ್ವರಿ ಗಾಯಕ್ವಾಡ್

ಇಂಗ್ಲೆಂಡ್ ಮಹಿಳಾ ತಂಡ

ಡೇನಿಯಲ್ ವ್ಯಾಟ್, ಸೋಫಿಯಾ ಡಂಕ್ಲೆ, ಆಲಿಸ್ ಕ್ಯಾಪ್ಸೆ, ನಟಾಲಿ ಸ್ಕೈವರ್(ನಾಯಕಿ), ಆಮಿ ಜೋನ್ಸ್(ವಿಕೆಟ್‌ ಕೀಪರ್), ಮಾಯಾ ಬೌಚಿಯರ್, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಫ್ರೇಯಾ ಕೆಂಪ್, ಇಸ್ಸಿ ವಾಂಗ್, ಸಾರಾ ಗ್ಲೆನ್, ಬ್ರಯೋನಿ ಸ್ಮಿತ್, ಫ್ರೇಯಾ ಡೇವಿಸ್, ಕೇಟ್ ಅಡ್ಡ

ವಿಭಾಗ