ಕನ್ನಡ ಸುದ್ದಿ  /  ಕ್ರೀಡೆ  /  ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್; ಆರಂಭಿಕ ಸುತ್ತಿನಲ್ಲೇ ಸೋತು ನಿರ್ಗಮಿಸಿದ ಲಕ್ಷ್ಯ ಸೇನ್

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್; ಆರಂಭಿಕ ಸುತ್ತಿನಲ್ಲೇ ಸೋತು ನಿರ್ಗಮಿಸಿದ ಲಕ್ಷ್ಯ ಸೇನ್

Lakshya Sen: ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಬ್ಯಾಡ್ಮಿಂಟನ್‌ ಆಟಗಾರ ಲಕ್ಷ್ಯ ಸೇನ್, ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ ಸಿಂಗಲ್ಸ್ ವಿಭಾಗದಲ್ಲಿ ಚೀನಾದ ಶಿ ಯು ಕಿ ವಿರುದ್ಧ ಸೋತು ಹೊರಬಿದ್ದಿದ್ದಾರೆ.

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಸೋತು ನಿರ್ಗಮಿಸಿದ ಲಕ್ಷ್ಯ ಸೇನ್ (File Photo)
ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಸೋತು ನಿರ್ಗಮಿಸಿದ ಲಕ್ಷ್ಯ ಸೇನ್ (File Photo) (AP)

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ (Lakshya Sen) ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನ (Badminton Asia Championships) ಪುರುಷರ ಸಿಂಗಲ್ಸ್ ಆರಂಭಿಕ ಸುತ್ತಿನಲ್ಲಿಯೇ ಸೋತಿದ್ದಾರೆ. ಅಗ್ರ ಶ್ರೇಯಾಂಕದ ಆಟಗಾರ ಚೀನಾದ ಶಿ ಯು ಕಿ ವಿರುದ್ಧ ನೇರ ಗೇಮ್‌ಗಳ ಸೋಲನುಭವಿಸಿದ್ದಾರೆ.‌ ಇದರೊಂದಿಗೆ ಮೊದಲ ಸುತ್ತಿನಲ್ಲೇ ಪರಾಭವಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಲಕ್ಷ್ಯ ಸೇನ್, ಸುದೀರ್ಘ 53 ನಿಮಿಷಗಳ ಕಾಲ ನಡೆದ ಕಠಿಣ ಪಂದ್ಯದಲ್ಲಿ ರೋಚಕ ಪೈಪೋಟಿ ನೀಡಿದರು. ಆದರೆ, ಉನ್ನತ ಶ್ರೇಯಾಂಕಿತ ಆಟಗಾರನ ವಿರುದ್ಧ 19-21, 15-21 ಅಂತರದಿಂದ ಸೋತರು. ಸೋಲಿನ ನಡುವೆಯೂ ಪ್ರಬಲ ಪೈಪೋಟಿ ನೀಡಿದ ಭಾರತೀಯನ ಪ್ರದರ್ಶನವು ಮನಗೆದ್ದಿತು.

ಸೋಲಿನ ನಡುವೆಯೂ ಸೇನ್ ಕೋರ್ಟ್‌ನಲ್ಲಿ ಅದ್ಭುತ ಕವರೇಜ್ ಪ್ರದರ್ಶಿಸಿದರು. ಚೀನೀ ಆಟಗಾರನ ವಿರುದ್ಧ ದೀರ್ಘ ಕಾಲದ ಆಟದಲ್ಲಿ ತೊಡಗಿಸಿಕೊಂಡರು. ಬಲಿಷ್ಠ ಹೊಡೆತ ಹಾಗೂ ಪರಿಪೂರ್ಣ ಡ್ರಾಪ್ ಶಾಟ್‌ಳಿಂದ ಅಂಕಗಳನ್ನು ಗಳಿಸಿದರು. ಆರಂಭದಲ್ಲಿ ಮುನ್ನಡೆ ಕಂಡುಕೊಂಡಿದ್ದ ಸೇನ್‌, ಮೊದಲ ಸುತ್ತಿನಲ್ಲಿ ಕೇವಲ 2 ಅಂಕ ಅಂತರದಿಂದ ಹಿನ್ನಡೆ ಅನುಭವಿಸಿದರು.

ಭಾರತೀಯರಿಗೆ ಆರಂಭದಲ್ಲೇ ಸೋಲು

ಭಾರತೀಯರಿಗೆ ಆಟಗಾರರಿಗೆ ಪಂದ್ಯಾವಳಿಯಲ್ಲಿ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಅತ್ತ ಪ್ರತಿಭಾನ್ವಿತ ಆಟಗಾರ ಪ್ರಿಯಾಂಶು ರಾಜವತ್ ಕೂಡ ಪುರುಷರ ಸಿಂಗಲ್ಸ್ ಆರಂಭಿಕ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ. 8ನೇ ಶ್ರೇಯಾಂಕಿತ ಮಲೇಷ್ಯಾದ ಆಟಗಾರ ಲೀ ಜಿ ಜಿಯಾ ವಿರುದ್ಧ 9-21, 13-21 ಅಂತರದಲ್ಲಿ ಸೋತರು. ಕೇವಲ 39 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮಲೇಷ್ಯಾ ಆಟಗಾರ ಮೇಲುಗೈ ಸಾಧಿಸಿದರು.

ಇದನ್ನೂ ಓದಿ | IPL 2024 Latest Updates: ರಾಜಸ್ಥಾನ ರಾಯಲ್ಸ್ vs ಗುಜರಾತ್ ಟೈಟಾನ್ಸ್ ಪಂದ್ಯದ ಲೇಟೆಸ್ಟ್ ಅಪ್ಡೇಟ್; ಸತತ 5ನೇ ಗೆಲುವಿನತ್ತ ಸ್ಯಾಮ್ಸನ್ ಪಡೆ

ಮಹಿಳಾ ಡಬಲ್ಸ್‌ನ ಆರಂಭಿಕ ಸುತ್ತಿನಲ್ಲಿ ಪಾಂಡಾ ಸಹೋದರಿಯರಾದ ರುತುಪರ್ಣ ಮತ್ತು ಶ್ವೇತಪರ್ಣ ಅವರು ಚೀನಾದ ಏಳನೇ ಶ್ರೇಯಾಂಕದ ಜಾಂಗ್ ಶು ಕ್ಸಿಯಾನ್ ಮತ್ತು ಜೆಂಗ್ ಯು ಡಬ್ಲ್ಯೂ ವಿರುದ್ಧ 8-21, 13-21 ಅಂತರದಲ್ಲಿ ಸೋತರು.