ಕನ್ನಡ ಸುದ್ದಿ  /  ಕ್ರೀಡೆ  /  Ipl 2023 New Rules: ಈ ಬಾರಿ ಐಪಿಎಲ್‌ಗೆ ಹೊಸ ನಿಯಮ; ಟಾಸ್ ಬಳಿಕ ಆಡುವ ಬಳಗ ಘೋಷಣೆ, ಕೀಪರ್‌-ಫೀಲ್ಡರ್ ಸ್ಥಾನಪಲ್ಲಟಕ್ಕೆ ದಂಡ!

IPL 2023 new rules: ಈ ಬಾರಿ ಐಪಿಎಲ್‌ಗೆ ಹೊಸ ನಿಯಮ; ಟಾಸ್ ಬಳಿಕ ಆಡುವ ಬಳಗ ಘೋಷಣೆ, ಕೀಪರ್‌-ಫೀಲ್ಡರ್ ಸ್ಥಾನಪಲ್ಲಟಕ್ಕೆ ದಂಡ!

ಐಪಿಎಲ್‌ನ 2023ರ ಋತುವು ಮಾರ್ಚ್ 31ರಂದು ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ನಾಲ್ಕು ಬಾರಿಯ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ನರೇಂದ್ರ ಮೋದಿ ಕ್ರೀಡಾಂಗಣ
ನರೇಂದ್ರ ಮೋದಿ ಕ್ರೀಡಾಂಗಣ (BCCI)

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮುಂಬರುವ ಋತುವಿಗೆ ಕೆಲ ಹೊಸ ನಿಯಮಗಳು ಅನ್ವಯವಾಗಲಿದೆ ಎಂದು ವರದಿಯಾಗಿದೆ. ಈ ನಿಯಮಗಳ ಪ್ರಕಾರ, ಟಾಸ್ ಪ್ರಕ್ರಿಯೆಯ ನಂತರ ತಂಡಗಳನ್ನು ಘೋಷಿಸಲು ಅನುಮತಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಪ್ರಕಾರ, ಉಭಯ ತಂಡಗಳ ನಾಯಕರು ಎರಡು ವಿಭಿನ್ನ ಆಡುವ ಬಳಗದ ಶೀಟ್‌ಗಳೊಂದಿಗೆ ಮೈದಾನಕ್ಕೆ ಬರುತ್ತಾರೆ. ಟಾಸ್‌ಗೂ ಮೊದಲು ಆಡುವ ಬಳಗದ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಬದಲಾಗಿ ಮತ್ತೊಂದು ಅನುಕೂಲಕರ ನಿಯಮವನ್ನು ಇಲ್ಲಿ ಅನುಸರಿಸಬಹುದು. ಇದರ ಪ್ರಕಾರ, ತಮ್ಮ ತಂಡ ಮೊದಲು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುತ್ತದೆಯೇ ಎಂದು ತಿಳಿದ ನಂತರ ಅಂತಿಮ ಆಡುವ ಬಳಗವನ್ನು ನಾಯಕರು ಪರಸ್ಪರ ಹಸ್ತಾಂತರಿಸಬಹುದು.

ಈ ನಿಯಮದಿಂದಾಗಿ, ಉಭಯ ತಂಡಗಳು ಮೊದಲು ಬ್ಯಾಟಿಂಗ್‌ ಮಾಡುತ್ತದೆಯೋ ಅಥವಾ ಬೌಲಿಂಗ್‌ ಮಾಡುತ್ತದೆಯೋ ಎಂಬುದರ ಆಧಾರದ ಮೇಲೆ ತಮ್ಮ ಅತ್ಯುತ್ತಮ ತಂಡಗಳನ್ನು ಆಯ್ಕೆ ಮಾಡಬಹುದು. ವಿಶೇಷವಾಗಿ ತಮ್ಮ ಆಟಕ್ಕನುಗುಣವಾಗಿ ಆಟಗಾರನನ್ನು ಆಡುವ ಬಳಗದಲ್ಲಿ ಇರಿಸಿಕೊಳ್ಳಲು ನಾಯಕನಿಗೆ ಅವಕಾಶ ಸಿಗುತ್ತದೆ. ಯುಎಇ ಮತ್ತು ಭಾರತದಲ್ಲಿ ಕೊನೆಯದಾಗಿ ಐಪಿಎಲ್ ನಡೆದಾಗ ಫಲಿತಾಂಶಗಳ ಮೇಲೆ ಇಬ್ಬನಿಯು ಹೆಚ್ಚು ಪ್ರಭಾವ ಬೀರಿದ ಕಾರಣ, ಅದನ್ನು ಕಡಿಮೆ ಮಾಡಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

SA20 ನಂತರ ಎರಡನೇ ಟಿ20 ಪಂದ್ಯಾವಳಿಯಲ್ಲಿ ತಂಡಗಳು ಟಾಸ್ ನಂತರ ತಮ್ಮ ಅಂತಿಮ ಆಡುವ ಬಳಗವನ್ನು ಘೋಷಿಸಲು ಅವಕಾಶ ಮಾಡಿಕೊಡುವ ಎರಡನೇ ಲೀಗ್‌ ಆಗಿ ಐಪಿಎಲ್‌ ಹೊರಹೊಮ್ಮಲಿದೆ. SA20ಯಲ್ಲಿ ಸ್ಕ್ವಾಡ್ ಶೀಟ್‌ನಲ್ಲಿ 13 ಆಟಗಾರರನ್ನು ತಂಡಗಳು ಮೊದಲು ಪಟ್ಟಿ ಮಾಡುತ್ತವೆ. ಇತ್ತೀಚೆಗೆ ಈ ಟೂರ್ನಿಯ ಮೊದಲ ಋತು ನಡೆದಿದ್ದು, ಟಾಸ್ ನಂತರ ತಮ್ಮ ಅಂತಿಮ ಆಡುವ ಬಳಗವನ್ನು ಘೋಷಿಸಲು ಅನುಮತಿ ನೀಡಲಾಗಿತ್ತು.

ಮತ್ತೊಂದೆಡೆ, ತಂಡವೊಂದು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕಾಗಿದ್ದ ಓವರ್‌ಗಳನ್ನು ಪೂರ್ಣಗೊಳಿಸಲು ವಿಫಲವಾದರೆ, ಪ್ರತಿ ಓವರ್‌ಗೆ ದಂಡ ಎದುರಿಸಬೇಕಾಗುತ್ತದೆ. ಅದರ ಪ್ರಕಾರ, ಎಷ್ಟು ಓವರ್‌ಗಳ ಕೊರತೆಯಿದೆಯೋ, ಅಷ್ಟು ಸಂಖ್ಯೆಯ ಓವರ್‌ಗಳನ್ನು ಬೌಲಿಂಗ್‌ ಮಾಡುವ ವೇಳೆ 30 ಯಾರ್ಡ್ ವೃತ್ತದ ಹೊರಗೆ ಕೇವಲ ನಾಲ್ಕು ಫೀಲ್ಡರ್‌ಗಳನ್ನು ಇರಿಸಲು ಮಾತ್ರ ಅನುಮತಿಸಲಾಗುತ್ತದೆ. ಇದೇ ವೇಳೆ ಫೀಲ್ಡರ್ ಮತ್ತು ವಿಕೆಟ್‌ ಕೀಪರ್‌ಗಳ ಅಸಮರ್ಪಕ ಚಲನವಲನಗಳಿಗೂ ದಂಡ ವಿಧಿಸಲಾಗುತ್ತದೆ. ಈ ಎರಡೂ ಸಂದರ್ಭಗಳಲ್ಲಿ ಐದು ರನ್‌ಗಳ ದಂಡ ವಿಧಿಸಲಾಗುತ್ತದೆ. ಅದೇ ರೀತಿ ಸ್ಥಾನಪಲ್ಲಟಕ್ಕೆ ಕಾರಣವಾದ ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸಲಾಗುತ್ತದೆ.

ಐಪಿಎಲ್‌ನ 2023ರ ಋತುವು ಮಾರ್ಚ್ 31ರಂದು ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ನಾಲ್ಕು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸುತ್ತಿದೆ. ಪಂದ್ಯಾವಳಿಯು 2019ರ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಆಯಾ ತಂಡಗಳ ತವರಿನಲ್ಲಿ ನಡೆಯಲಿದೆ.

2020ರ ಋತುವನ್ನು ಯುಎಇನಲ್ಲಿ ಬಯೋ-ಬಬಲ್‌ನಲ್ಲಿ ನಡೆಸಲಾಗಿತ್ತು. 2021ರ ಋತುವಿನ ಮೊದಲಾರ್ಧವನ್ನು ಭಾರತದ ಕೆಲ ನಗರಗಳಲ್ಲಿ ನಡೆಸಲಾಯಿತು. ಆದರೆ ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದಾಗಿ ಕೆಲಕಾಲ ಲೀಗ್‌ ಅನ್ನು ಮುಂದೂಡಲಾಯ್ತು. ನಂತರ ಅದನ್ನು ಯುಎಇಯಲ್ಲಿ ವರ್ಷದ ನಂತರ ಮುಂದುವರೆಸಲಾಯಿತು. 2022ರ ಋತುವನ್ನು ಮುಂಬೈ ಮತ್ತು ಪುಣೆಯಲ್ಲಿ ಆಡಿಸಲಾಯ್ತು‌. ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಅನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಸಲಾಯಿತು. ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ ನಡೆಸಲಾಯಿತು.