ಕನ್ನಡ ಸುದ್ದಿ  /  ಕ್ರೀಡೆ  /  Cwg 2022: ತೊಡೆತಟ್ಟಿ ಗೆದ್ದ ಭಾರತದ ಕುಸ್ತಿಪಟುಗಳು; ಒಂದೇ ದಿನ ಮೂರು ಚಿನ್ನ ಸೇರಿ ಐದು ಪದಕ

CWG 2022: ತೊಡೆತಟ್ಟಿ ಗೆದ್ದ ಭಾರತದ ಕುಸ್ತಿಪಟುಗಳು; ಒಂದೇ ದಿನ ಮೂರು ಚಿನ್ನ ಸೇರಿ ಐದು ಪದಕ

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಶುಕ್ರವಾರ ಭಾರತಕ್ಕೆ ಚಿನ್ನದ ದಿನ. ಭಾರತದ ಕುಸ್ತಿಪಟುಗಳು ಒಟ್ಟು ಆರು ಪದಕಗಳನ್ನು ಗೆದ್ದು, ದಾಖಲೆ ಬರೆದಿದ್ದಾರೆ.

ಭಾರತದ ಕುಸ್ತಿಪಟುಗಳು
ಭಾರತದ ಕುಸ್ತಿಪಟುಗಳು

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ 8ನೇ ದಿನವೂ ಭಾರತದ ಕ್ರೀಡಾಪಟುಗಳು ಪದಕದ ಸಾಧನೆ ಮುಂದುವರೆಸಿದ್ದಾರೆ. ಕುಸ್ತಿಯಲ್ಲಿ ಮೇಲಿಂದ ಮೇಲೆ ಮೂರು ಚಿನ್ನ ಲಭಿಸಿದ್ದು, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕವನ್ನು ನಮ್ಮ ಕ್ರೀಡಾಪಟುಗಳು ಗೆದ್ದಿದ್ದಾರೆ.

65 ಕೆಜಿ ವಿಭಾಗದ ಪುರುಷರ ಕುಸ್ತಿ ಪಂದ್ಯದಲ್ಲಿ ಬಜರಂಗ್ ಪುನಿಯಾ ಚಿನ್ನ ಗೆದ್ದಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇದು ಇವರಿಗೆ ಸತತ ಎರಡನೇ ಚಿನ್ನ. ಇನ್ನೊಂದೆಡೆ ಮಹಿಳೆಯರ 62 ಕೆಜಿ ವಿಭಾಗದಲ್ಲಿ ಗೆದ್ದ ಸಾಕ್ಷಿ ಮಲಿಕ್, ದೇಶಕ್ಕೆ ಕುಸ್ತಿಯಲ್ಲಿ ಎರಡನೇ ಚಿನ್ನವನ್ನು ಭದ್ರಪಡಿಸಿದರು. ನಂತರ ಪುರುಷರ 86 ಕೆಜಿ ವಿಭಾಗದಲ್ಲಿ, ಪಾಕಿಸ್ತಾನದ ಹಾಲಿ ಚಿನ್ನದ ಪದಕ ವಿಜೇತ ಮುಹಮ್ಮದ್ ಇನಾಮ್ ಅವರನ್ನು ಸೋಲಿಸುವ ಮೂಲಕ ದೀಪಕ್ ಪೂನಿಯಾ ಭಾರತಕ್ಕೆ ಒಂದೇ ದಿನದಲ್ಲಿ ಮೂರನೇ ಚಿನ್ನ ಗೆದ್ದು ಕೊಟ್ಟರು.

ಈ ನಡುವೆ ಮಹಿಳೆಯರ 57 ಕೆಜಿ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದ ಅಂಶು ಮಲಿಕ್, ಬೆಳ್ಳಿಗೆ ತೃಪ್ತಿಪಟ್ಟರು. ಮತ್ತೊಂದೆಡೆ 68 ಕೆಜಿ ವಿಭಾಗದಲ್ಲಿ ದಿವ್ಯಾ ಕಕ್ರಾನ್ ಮತ್ತು 125 ಕೆಜಿ ವಿಭಾಗದಲ್ಲಿ ಮೋಹಿತ್ ಗ್ರೆವಾಲ್ ಕಂಚು ಗೆದ್ದಿದ್ದಾರೆ. ಈ ಮೂಲಕ ಕುಸ್ತಿಯಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆಯನ್ನು ಆರಕ್ಕೆ ಏರಿದೆ. ಈ ಕ್ರೀಡಾಕೂಟದ ಆರಂಭದಲ್ಲಿ ಭಾರತದ ವೇಟ್‌ಲಿಫ್ಟರ್‌ಗಳು ಇದೇ ರೀತಿ ಮೇಲಿಂದ ಮೇಲೆ ಪದಕಗಳಿಗೆ ಮುತ್ತಿಟ್ಟಿದ್ದರು.

ಮಹಿಳಾ ಹಾಕಿ ತಂಡಕ್ಕೆ ನಿರಾಸೆ

ಮಹಿಳಾ ಹಾಕಿಯಲ್ಲಿ ಸೆಮಿಫೈನಲ್‌ನಲ್ಲಿ ಪ್ರವೇಶಿಸಿದ್ದ ಭಾರತದ ಫೈನಲ್‌ ಆಸೆಗ ಬಲಿಷ್ಠ ಆಸ್ಟ್ರೇಲಿಯಾ ತಣ್ಣೀರೆರಚಿದೆ. ಕಾಂಗರೂಗಳ ವಿರುದ್ಧ ಸೋತ ಭಾರತದ ವನಿತೆಯರು, ಇನ್ನು ಕಂಚಿನ ಪದಕಕ್ಕೆ ಹೋರಾಟ ನಡೆಸಲಿದ್ದಾರೆ. ಆಟದ ಅಂತ್ಯದ ವೇಳೆಗೆ 1-1 ರಲ್ಲಿ ಸಮಬಲಗೊಂಡಿದ್ದ ಪಂದ್ಯವನ್ನು ಟೈ ಬ್ರೇಕರ್‌ ಮೂಲಕ ಗೆಲುವನ್ನು ನಿರ್ಧರಿಸಲಾಯ್ತು. ಶೂಟೌಟ್‌ನಲ್ಲಿ 0-3 ಅಂತರದಿಂದ ಹಿನ್ನಡೆ ಅನುಭವಿಸಿದ ಭಾರತ ಸೋಲನ್ನು ಒಪ್ಪಿಕೊಂಡಿತು.

ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಭಾವಿನಾ ಪಟೇಲ್‌ಗೂ ಪದಕ ಖಚಿತವಾಗಿದ್ದು, ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿದ್ದಾರೆ. ಟೇಬಲ್ ಟೆನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಅಚಂತಾ ಶರತ್ ಕಮಲ್ ಮತ್ತು ಶ್ರೀಜಾ ಅಕುಲಾ ಸೆಮಿಫೈನಲ್‌ಗೆ ತಲುಪಿದ್ದಾರೆ. ಇನ್ನೊಂದೆಡೆ ಶ್ರೀಜಾ ಅಕುಲಾ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಆದರೆ ಮನಿಕಾ ಬಾತ್ರಾ ಮತ್ತು ಜಿ ಸತ್ಯನ್ ಜೋಡಿ ಸೋತು ಹೊರಬಿದ್ದಿದ್ದಾರೆ.

ಪುರುಷರ್‌ ಲಾನ್‌ಬೌಲ್ಸ್‌ ತಂಡ ಫೈನಲ್‌ಗೆ

ಮೊನ್ನೆ ತಾನೆ ಲಾನ್‌ ಬೌಲ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಮಹಿಳಾ ತಂಡದ ಬೆನ್ನಲ್ಲೇ ಪುರುಷರ ತಂಡ ಕೂಡಾ ಗುಡ್‌ ನ್ಯೂಸ್‌ ಕೊಟ್ಟಿದೆ. ಪುರುಷರ್‌ ಲಾನ್ ಬೌಲ್ಸ್‌ನ ಸೆಮಿಫೈನಲ್‌ನಲ್ಲಿ ಭಾರತ ಗೆದ್ದಿದೆ. ಪುರುಷರ ನಾಲ್ಕು ಜನರ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 13-12 ಅಂತರದಿಂದ ಗೆದ್ದು ಪದಕ ಸುತ್ತಿಗೆ ಪ್ರವೇಶಿಸಿದೆ. ಹೀಗಾಗಿ ಕನಿಷ್ಠ ಬೆಳ್ಳಿ ಭಾರತಕ್ಕೆ ಖಚಿತವಾಗಿದೆ. ಈ ಮೂಲಕ ಲಾನ್‌ ಬೌಲ್ಸ್‌ ಕ್ರೀಡೆಯಲ್ಲಿ ಮತ್ತೊಂದು ಐತಿಹಾಸಿಕ ಸಾಧನೆಗೆ ಭಾರತ ಸಜ್ಜಾಗಿದೆ. ಅಲ್ಲದೆ ಈ ಕ್ರೀಡೆಗೆ ದೇಶದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಕಾಲ ಹತ್ತಿರವಾಗಿದೆ.

ಅಥ್ಲೆಟಿಕ್ಸ್‌ನಲ್ಲಿ ಭಾರತೀಯ ಪುರುಷರ ಮಿಶ್ರ 4x400 ಮೀಟರ್‌ ರಿಲೇ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಬ್ಯಾಡ್ಮಿಂಟನ್‌ನಲ್ಲಿ ಕಿಡಂಬಿ ಶ್ರೀಕಾಂತ್ ಮತ್ತು ಪಿವಿ ಸಿಂಧು ಸುಲಭ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ. ಸದ್ಯ 9 ಚಿನ್ನ ಸಹಿತ ಭಾರತ ಒಟ್ಟು 26 ಪದಕಗಳನ್ನು ಗೆದ್ದಿದೆ. ಪದಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ನೆಗೆದಿದೆ. ಆಸ್ರೇಲಿಯಾ ಮೊದಲ ಸ್ಥಾನದಲ್ಲಿದೆ.

ವಿಭಾಗ