ಬಲಿಷ್ಠ ರಾಜಸ್ಥಾನವನ್ನು 20 ರನ್‌ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; ಪಂತ್ ಪಡೆಯ ಪ್ಲೇಆಫ್ ಕನಸು ಜೀವಂತ
DC vs RR: ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ 2024ರ ಪ್ಲೇಆಫ್ ರೇಸ್‌ನಲ್ಲಿ ಜೀವಂತವಾಗಿದೆ. ರಾಜಸ್ಥಾನ ರಾಯಲ್ಸ್ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಟೂರ್ನಿಯ ಬಲಿಷ್ಠ ತಂಡದ ಪ್ಲೇಆಫ್ ಕನಸಿಗೆ ತಡೆಯೊಡ್ಡಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ (Delhi Capitals vs Rajasthan Royals) ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಈ ಪಂದ್ಯ ಗೆದ್ದು ಐಪಿಎಲ್ 2024ರ ಪ್ಲೇಆಫ್‌ಗೆ ಮೊದಲ ತಂಡವಾಗಿ ಲಗ್ಗೆ ಹಾಕುವ ರಾಜಸ್ಥಾನದ ಕನಸಿಗೆ ತಡೆ ಒಡ್ಡಿದೆ. ಅತ್ತ ಗೆಲುವಿನೊಂದಿಗೆ ತಾನಿನ್ನೂ ಪ್ಲೇ ಆಫ್ ರೇಸ್‌ನಲ್ಲಿ ಜೀವಂತವಾಗಿ ಇರುವುದಾಗಿ ರಿಷಬ್ ಪಂತ್ ಬಳಗ ತೋರಿಸಿಕೊಂಡಿದೆ. ಇದರೊಂದಿಗೆ ಟೂರ್ನಿಯ ಅಂತಿಮ ಹಂತದ ಲೀಗ್ ಪಂದ್ಯಗಳು ಮತ್ತಷ್ಟು ರೋಚಕವಾಗಿ ಸಾಗುತ್ತಿದೆ. ಕೊನೆಯ ಪಂದ್ಯದಲಿ ಎಸ್‌ಆರ್‌ಎಚ್ ವಿರುದ್ಧ ಸೋತಿದ್ದ ಸಂಜು ಸ್ಯಾಮ್ಸನ್ ಪಡೆಯು, ಇಂದು ಸತತ ಎರಡನೇ ಸೋಲು ಕಂಡಿದೆ. ಸದ್ಯ ಮುಂದಿನ ಹಂತ ಪ್ರವೇಶಕ್ಕೆ ಮತ್ತೊಂದು ಪಂದ್ಯದವರೆಗೆ ಕಾಯಬೇಕಾಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿತು. ಇದಕ್ಕುತ್ತರವಾಗಿ ಬೃಹತ್ ಮೊತ್ತ ಚೇಸಿಂಗ್‌ಗಿಳಿದ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಲಷ್ಟೇ ಶಕ್ತವಾಯ್ತು.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಸ್ಫೋಟಕ ಆರಂಭ ಪಡೆಯಿತು. ಡೆಲ್ಲಿ ಪರ ಮತ್ತೊಮ್ಮೆ ಅಬ್ಬರಿಸಿದ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಮತ್ತೊಂದು ಸ್ಫೋಟಕ ಅರ್ಧಶತಕ ಬಾರಿಸಿದರು. ಕೇವಲ 19 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ಅವರು, ಮುಂದಿನ ಎಸೆತದಲ್ಲಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ರಕ್ಷಣಾತ್ಮಕ ಆಟವಾಡಿದ ಅಭಿಷೇಕ್ ಪೊರೆಲ್ 36 ಎಸೆತಗಳಲ್ಲಿ 65 ರನ್ ಪೇರಿಸಿದರು. ಈ ನಡುವೆ ಶಾಯ್ ಹೋಪ್ 1 ರನ್ ಗಳಿಸಿದ್ದಾಗ ದುರದೃಷ್ಟಕರ ರೀತಿಯಲ್ಲಿ ರನೌಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ಅಕ್ಷರ್ ಪಟೇಲ್ 15 ರನ್ ಗಳಿಸಿದ್ದಾಗ ಅಶ್ವಿನ್ ಮೋಡಿಗೆ ಬಲಿಯಾದರು.
ನಾಯಕ ರಿಷಬ್ ಪಂತ್ ಆಟ 15 ರನ್‌ಗಳಿಗೆ ಅಂತ್ಯವಾಯ್ತು. ಪಂತ್ ವಿಕೆಟ್ ಪಡೆದ ಯುಜ್ವೇಂದ್ರ ಚಾಹಲ್ ಟಿ20 ಕ್ರಿಕೆಟ್‌ನಲ್ಲಿ 350 ವಿಕೆಟ್ ಕಬಳಿಸಿದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆ ನಿರ್ಮಿಸಿದರು. ತಮ್ಮ 301ನೇ ಟಿ20 ಪಂದ್ಯದಲ್ಲಿ ಚಾಹಲ್ ಈ ದಾಖಲೆ ಬರೆದರು. ಐಪಿಎಲ್ ಪದಾರ್ಪಣೆ ಪಂದ್ಯದಲ್ಲಿ ಗುಲ್ಬದೀನ್ 19 ರನ್ ಕಲೆ ಹಾಕಿದರು. ಡೆತ್ ಓವರ್‌ಗಳಲ್ಲಿ ಅಬ್ಬರಿಸಿದ ಟ್ರಿಸ್ಟಾನ್ ಸ್ಟಬ್ಸ್ 41 ರನ್ ಗಳಿಸಿದರೆ, ರಾಸಿಕ್ ಸಲಾಮ್ ಆಕರ್ಷಕ ಹೊಡೆತಗಳೊಂದಿಗೆ 9 ರನ್ ಗಳಿಸಿ ಅಭಿಮಾನಿಗಳ ಮನಗೆದ್ದರು. ಅಂತಿಮವಾಗಿ 221 ರನ್ ಗಳಿಸಿದ ಡೆಲ್ಲಿ ರಾಜಸ್ಥಾನ ಗೆಲುವಿಗೆ 222 ರನ್ ಟಾರ್ಗೆಟ್ ನೀಡಿತು.
ರಾಜಸ್ಥಾನ ಪರ ಅಶ್ವಿನ್ 3 ಪ್ರಮುಖ ವಿಕೆಟ್ ಪಡೆದು ಮಿಂಚಿದರು.
ನಿರಾಶೆ ಮೂಡಿಸಿದ ಜೈಸ್ವಾಲ್
ಬೃಹತ್ ಮೊತ್ತ ಚೇಸಿಂಗ್‌ಗಿಳಿದ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸಿದ ಜೈಸ್ವಾಲ್ ನಂತರದ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಈ ವೇಳೆ ಬಟ್ಲರ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಅರ್ಧಶತಕದ ಜೊತೆಯಾಟವಾಡಿದರು. 19 ರನ್ ಗಳಿಸಿದ್ದ ಬಟ್ಲರ್ ಅಕ್ಷರ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ರಿಯಾನ್ ಪರಾಗ್ ಆಟ 27 ರನ್ ವೇಳೆ ಅಂತ್ಯವಾಯ್ತು.
ಸಂಜು ಸ್ಯಾಮ್ಸನ್ ಅಬ್ಬರ
ಈ ವೇಳೆ ಒಂದಾದ ಸಂಜು ಹಾಗೂ ಶುಭಂ ದುಬೆ ಅರ್ಧಶತಕದ ಜೊತೆಯಾಟವಾಡಿದರು. 46 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 86 ರನ್ ಗಳಿಸಿದ್ದ ಸಂಜು ಸ್ಯಾಮ್ಸನ್ ಬೌಂಡರಿ ಲೈನ್ ಬಳಿ ಕ್ಯಾಚ್ ನೀಡಿ ಔಟಾದರು. ಶಾಯ್ ಹೋಪ್ ಅಮೋಘ ಕ್ಯಾಚ್ ಹಿಡಿದು ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ಇದನ್ನೂ ಓದಿ | ಸೂರ್ಯಕುಮಾರ್ ಯಾದವ್ ಪ್ರಚಂಡ ಶತಕ; ಸನ್‌ರೈಸರ್ಸ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್
ನಾಯಕನ ವಿಕೆಟ್ ಪತನವಾದರೂ, ಶುಭಂ ಹಾಗೂ ರೋವ್ಮನ್ ಪೊವೆಲ್ ಆರ್ಭಟ ಮುಂದುವರೆಸಿದರು. ಈ ನಡುವೆ 25 ರನ್ ಗಳಿಸಿ ಶುಭಂ ಔಟಾದರು. ಪದಾರ್ಪಣೆ ಪಂದ್ಯದಲ್ಲಿ ಫರೆರಾ 1 ರನ್ ಗಳಿಸಲಷ್ಟೇ ಶಕ್ತರಾದರು. ಕೊನೆಯ ಓವರ್‌ನಲ್ಲಿ ರೋವ್ಮನ್ ಪೊವೆಲ್ ಔಟಾಗುವುದರೊಂದಿಗೆ ರಾಜಸ್ಥಾನದ ಗೆಲುವಿನ ಭರವಸೆ ಕಮರಿತು.
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಅಂಶುಲ್ ಕಾಂಬೋಜ್: ಮುಂಬೈ ಇಂಡಿಯನ್ಸ್ ಪರ ಪದಾರ್ಪಣೆ ಮಾಡಿದ ಈತ ಆರ್ಸಿಬಿ ಮಾಜಿ ನೆಟ್ ಬೌಲರ್
