ಕನ್ನಡ ಸುದ್ದಿ  /  ಕ್ರೀಡೆ  /  Wrestlers Protest: ಪದಕ, ಪ್ರಶಸ್ತಿಗಳಿಂದ ಏನು ಗೌರವ ಸಿಗುತ್ತಿಲ್ಲ; ಎಲ್ಲವನ್ನು ಸರ್ಕಾರಕ್ಕೆ ವಾಪಸ್​ ನೀಡ್ತೇವೆ; ಕುಸ್ತಿಪಟುಗಳು ಬೇಸರ

Wrestlers Protest: ಪದಕ, ಪ್ರಶಸ್ತಿಗಳಿಂದ ಏನು ಗೌರವ ಸಿಗುತ್ತಿಲ್ಲ; ಎಲ್ಲವನ್ನು ಸರ್ಕಾರಕ್ಕೆ ವಾಪಸ್​ ನೀಡ್ತೇವೆ; ಕುಸ್ತಿಪಟುಗಳು ಬೇಸರ

Wrestlers Protest: ದೇಶದ ಅತ್ಯುನ್ನತ ಪ್ರಶಸ್ತಿ ಪಡೆದರೂ, ನಮಗೆ ಕಿಂಚಿತ್ತೂ ಗೌರವ ನೀಡುತ್ತಿಲ್ಲ. ಹಾಗಾದರೆ ಅಂತಹ ಪ್ರಶಸ್ತಿಗಳನ್ನು ಇಟ್ಟುಕೊಂಡು ಏನು ಪ್ರಯೋಜನ. ಎಲ್ಲಾ ಪದಕ, ಪ್ರಶಸ್ತಿಗಳನ್ನು ಸರ್ಕಾರಕ್ಕೆ ವಾಪಸ್​ ಕೊಡುತ್ತೇವೆ ಎಂದು ಕ್ರೀಡಾಪಟುಗಳು ಹೇಳಿದ್ದಾರೆ.

ಪ್ರತಿಭಟನಾನಿರತ ಕುಸ್ತಿಪಟುಗಳು
ಪ್ರತಿಭಟನಾನಿರತ ಕುಸ್ತಿಪಟುಗಳು

ಭಾರತದ ಕುಸ್ತಿ ಫೆಡರೇಷನ್​ ಮುಖ್ಯಸ್ಥ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ವಿರುದ್ಧ ಪ್ರತಿಭಟನೆ (Protest against Wrestling Federation of India chief Brij Bhushan Sharan Singh) ನಡೆಸುತ್ತಿರುವ ಕುಸ್ತಿಪಟುಗಳು, ನಮಗೆ ಸಂದಿರುವ ಪದ್ಮಶ್ರೀ, ಪದಕಗಳು ಮತ್ತು ಪ್ರಶಸ್ತಿಗಳನ್ನು ಸರ್ಕಾರಕ್ಕೆ ವಾಪಸ್​ ನೀಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಇಂತಹ ಅವಮಾನಕ್ಕೆ ಒಳಗಾಗುತ್ತಿರುವ ನಮಗೆ ಆ ಗೌರವಗಳಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದೇಶಕ್ಕಾಗಿ ಪದಕ ಗೆದ್ದಿರುವ ನಮಗೆ ಸಿಗುತ್ತಿರುವ ನ್ಯಾಯ ಇದು ಎಂದಿದ್ದಾರೆ.

ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಕುಸ್ತಿಪಟುಗಳು ಮಲಗಲು ಮಡಚುವ ಹಾಸಿಗೆಗಳನ್ನು ತರುತ್ತಿದ್ದಾಗ ಪೊಲೀಸರು ಕುಡಿದು ಅನುಚಿತವಾಗಿ ವರ್ತಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಹಾಸಿಗೆ ತರಲು ಅನುಮತಿಸದ ಪುರುಷ ಪೊಲೀಸ್ ಅಧಿಕಾರಿಗಳು ತಮ್ಮನ್ನು ನಿಂದಿಸಿ ತಳ್ಳಿದ್ದಾರೆ ಎಂದು ವಿನೇಶ್ ಫೋಗಟ್ (Vinesh Phogat) ಮತ್ತು ಸಾಕ್ಷಿ ಮಲಿಕ್ (Sakshi Malik) ಹೇಳಿಕೊಂಡಿದ್ದಾರೆ. ಇದರಿಂದಾಗಿ ಅವರು ಕಣ್ಣೀರು ಹಾಕಿದ್ದಾರೆ. ಸಂಗೀತಾ ಫೋಗಟ್ (Sangita Phogat) ಅವರ ಸಹೋದರ ದುಶ್ಯಂತ್ ಸೇರಿದಂತೆ ಇಬ್ಬರು ಕುಸ್ತಿಪಟುಗಳು ಗಾಯಗೊಂಡಿದ್ದಾರೆ.

ಇದನ್ನೂ ಓದಿ: Vinesh Phogat: ಪೊಲೀಸರು ಕುಡಿದು ಹಲ್ಲೆ ಮಾಡಿ ನಿಂದಿಸಿದ್ದಾರೆ; ಇದಕ್ಕೇನಾ ನಾವು ದೇಶಕ್ಕೆ ಪದಕ ಗೆದ್ದಿದ್ದು: ವಿನೇಶ್​ ಫೋಗಟ್​ ಕಣ್ಣೀರು

ಕುಸ್ತಿಪಟುಗಳ ಜೊತೆಗೆ ಈ ರೀತಿ ನಡೆದುಕೊಂಡರೆ ನಾವು ಪದಕಗಳನ್ನು ಇಟ್ಟುಕೊಂಡು ಏನು ಮಾಡಬೇಕು. ಬದಲಿಗೆ ನಾವು ಕೂಡ ಸಾಮಾನ್ಯ ಜೀವನವನ್ನು ನಡೆಸುತ್ತೇವೆ. ಎಲ್ಲಾ ಪದಕಗಳು ಮತ್ತು ಪ್ರಶಸ್ತಿಗಳನ್ನು ಭಾರತ ಸರ್ಕಾರಕ್ಕೆ ಹಿಂದಿರುಗಿಸುತ್ತೇವೆ ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಹೇಳಿದ್ದಾರೆ.

ವಿನೇಶ್ ಫೋಗಟ್​, ಸಾಕ್ಷಿ ಮಲಿಕ್​​ ಮತ್ತು ಬಜರಂಗ್ ಪುನಿಯಾ (Bajrang Punia) ಎಲ್ಲರೂ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಪ್ರಶಸ್ತಿ ಗೆದ್ದಿದ್ದಾರೆ. ಸಾಕ್ಷಿ (2017) ಮತ್ತು ಬಜರಂಗ್ (2019) ಅವರು ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀಗೆ ಭಾಜನರಾಗಿದ್ದಾರೆ.

ನಮ್ಮನ್ನು ತಳ್ಳಿದಾಗ, ನಿಂದಿಸಿದಾಗ, ಅನುಚಿತವಾಗಿ ವರ್ತಿಸಿದಾಗ ಪೊಲೀಸರಿಗೆ ನಾವು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಎಂದು ಕನಿಷ್ಠ ಗೌರವ ಕೂಡ ಇರಲಿಲ್ಲವೇ? ನಾನು ಮಾತ್ರವಲ್ಲ, ಸಾಕ್ಷಿ ಮಲಿಕ್ ಕೂಡ ಇದ್ದಾರೆ ಎಂದು ಬಜರಂಗ್​, ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತರನ್ನು ಉಲ್ಲೇಖಿಸಿ ಹೇಳಿದ್ದಾರೆ. ಪೊಲೀಸರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳು ಬೀದಿಯಲ್ಲಿ ಕುಳಿತು ದಯೆಗಾಗಿ (ನ್ಯಾಯಕ್ಕಾಗಿ) ಭಿಕ್ಷೆ ಬೇಡುತ್ತಿದ್ದಾರೆ. ಆದರೆ ಯಾರೂ ನ್ಯಾಯ ಕೊಡಿಸುವ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಅತ್ಯಂತ ಬೇಸರದ ಸಂಗತಿ ಎಂದಿದ್ದಾರೆ.

ಏಪ್ರಿಲ್ 23 ರಂದು ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಿರುವ ಕುಸ್ತಿಪಟುಗಳು, ಅಪ್ರಾಪ್ತ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ವಿಷಯವು ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಹೋದ ನಂತರ ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ದೆಹಲಿ ಪೊಲೀಸರು 2 ಎಫ್‌ಐಆರ್‌ ದಾಖಲಿಸಿದ್ದರು. ಆದರೆ ಬ್ರಿಜ್​​ ಭೂಷಣ್​​ ಅವರು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.