logo
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭೆ ಚುನಾವಣೆ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೊಕೇಸ್‌, ಇದುವರೆಗೆ ಏನೇನಾಯಿತು

ಲೋಕಸಭೆ ಚುನಾವಣೆ; ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೊಕೇಸ್‌, ಇದುವರೆಗೆ ಏನೇನಾಯಿತು

Umesh Kumar S HT Kannada

Mar 21, 2024 01:13 PM IST

google News

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (ಕಡತ ಚಿತ್ರ)

  • ಲೋಕಸಭೆ ಚುನಾವಣೆ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌ ದಾಖಲಾಗಿದೆ. ಫೆಬ್ರವರಿ 2ರಂದು ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಕೃತ್ಯ ನಡೆದಿರುವುದು ಎಂದು ಮಾರ್ಚ್ 15ರಂದು ಪೊಲೀಸ್ ದೂರು ದಾಖಲಾಗಿದ್ದು, ಎಫ್‌ಐಆರ್ ಆಗಿದೆ. ಅಲ್ಲಿಂದೀಚೆಗೆ ಇದುವರೆಗೆ ಏನೇನಾಯಿತು. ಇಲ್ಲಿದೆ ವಿವರ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (ಕಡತ ಚಿತ್ರ)
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (ಕಡತ ಚಿತ್ರ)

ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೊ ಕೇಸ್ (POCSO case) ದಾಖಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ಧಾರೆ. ವಾರದ ಹಿಂದೆ ದಾಖಲಾದ ಈ ಕೇಸ್‌ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡುತ್ತ, ಸತ್ಯಾಸತ್ಯ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು.

ಉಪಕಾರ ಮಾಡೋಣ ಅಂತ ಸ್ಪಂದಿಸಿದರೆ ನನ್ನ ವಿರುದ್ಧವೇ ಕೇಸ್. ಎಂಥಾ ಕಾಲ ಬಂತು ನೋಡಿ. ಕಾನೂನು ಪ್ರಕಾರ ಏನು ನಡೆಯಬೇಕೋ ಅದು ನಡೆಯಲಿ ಎಂದು ಬಿಎಸ್‌ ಯಡಿಯೂರಪ್ಪ ಆ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಸದ್ಯ ಈ ಕೇಸ್‌ನ ಪರಿಸ್ಥಿತಿ ಏನು? ಪೊಲೀಸರು ಎಫ್‌ಐಆರ್ ದಾಖಲಿಸಿದ ಬಳಿಕ ಇದುವರೆಗೆ ಏನೇನು ನಡೆಯಿತು ಎಂಬಿತ್ಯಾದಿ ವಿವರ ಹೀಗಿದೆ.

ಯಡಿಯೂರಪ್ಪ ವಿರುದ್ಧ ಪೋಕ್ಸೊ ಕೇಸ್; ಸಂತ್ರಸ್ತೆಯ ಹೇಳಿಕೆ ಭಾಗಶಃ ದಾಖಲು

ಬಿಎಸ್ ಯಡಿಯೂರಪ್ಪ ಅವರು 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆಕೆಯ ತಾಯಿ ಪೊಲೀಸ್ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಸಿಐಡಿ ಪೊಲೀಸರು ಸಂತ್ರಸ್ತೆ ಬಾಲಕಿಯ ಹೇಳಿಕೆ ದಾಖಲಿಸಲು ಕ್ರಮ ತೆಗೆದುಕೊಂಡಿದ್ದರು.

ಇದರಂತೆ, ಸಂತ್ರಸ್ತೆ ಬಾಲಕಿ ಮತ್ತು ಆಕೆಯ ತಾಯಿ ಮಂಗಳವಾರ (ಮಾರ್ಚ್ 19) ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ಭಾಗಶಃ ಹೇಳಿಕೆಯನ್ನು ದಾಖಲಿಸಿದ್ದರು. ಮ್ಯಾಜಸ್ಟ್ರೇಟ್ ನಿರ್ದೇಶನ ಪ್ರಕಾರ, ಸಂತ್ರಸ್ತೆ ಬಾಲಕಿ ಬುಧವಾರ (ಮಾರ್ಚ್ 20) ಮ್ಯಾಜಿಸ್ಟ್ರೇಟ್‌ ಎದುರು ಹಾಜರಾಗಿ ಹೇಳಿಕೆ ದಾಖಲಿಸಬೇಕಾಗಿತ್ತು. ಆದರೆ ಆಕೆ ಹಾಜರಾಗಿಲ್ಲ. ಅದರ ಬದಲಾಗಿ ಅಪರಾಧ ದಂಡ ಸಂಹಿತೆಯ ಸೆಕ್ಷನ್ 164(5)ರ ಪ್ರಕಾರ ಪೂರ್ಣ ಹೇಳಿಕೆ ದಾಖಲಿಸುವುದಕ್ಕೆ ಸಮಯಾವಕಾಶ ಬೇಕು ಎಂದು ಮನವಿ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬಿಎಸ್‌ವೈ ವಿರುದ್ಧ ಪೋಕ್ಸೊ ಕೇಸ್; ಏನಿದು ಪ್ರಕರಣ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬೆಂಗಳೂರು ನಿವಾಸದಲ್ಲಿ ಫೆಬ್ರವರಿ 2 ರಂದು 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪ ಹೊರಿಸಲಾಗಿದೆ. ಒಂಬತ್ತು ವರ್ಷಗಳ ಹಿಂದಿನ ಕುಟುಂಬದ ಸದಸ್ಯರಿಂದ ದೌರ್ಜನ್ಯಕ್ಕೊಳಗಾದ ಪ್ರಕರಣದಲ್ಲಿ ಎಸ್‌ಐಟಿ ರಚನೆ ಕುರಿತ ವಿವರ ಕೇಳಲು ಹೋಗಿದ್ದಾಗ ಸಂತ್ರಸ್ತೆಯನ್ನು ಒಂದು ಕೊಠಡಿಗೆ ಕರೆದೊಯ್ದು ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದರು. ಮಗಳನ್ನು ಅಲ್ಲಿಗೆ ಯಾಕೆ ಕರೆದೊಯ್ದಿದ್ದಾರೆ ಎಂದು ಕೇಳಿದಾಗ, ಆರೋಗ್ಯ ತಪಾಸಣೆ ಎಂದು ಹೇಳಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಸಂತ್ರಸ್ತೆ ಬಾಲಕಿ ಮತ್ತು ಆಕೆಯ ತಾಯಿ ಮಾರ್ಚ್ 14ರಂದು ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ದೂರಿನ ಪ್ರಕಾರ, ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆಯ ಸೆಕ್ಷನ್ 8 (ಲೈಂಗಿಕ ಹಲ್ಲೆ), ಐಪಿಸಿ ಸೆಕ್ಷನ್‌ 354(ಎ) (ಇಷ್ಟವಿಲ್ಲದ ಮತ್ತು ಸ್ಪಷ್ಟ ಲೈಂಗಿಕ ನಡವಳಿಕೆ) ಪ್ರಕಾರ ಆರೋಪ ಹೊರಿಸಲಾಗಿದೆ. ಈ ಕೇಸ್ ಅನ್ನು ಸರ್ಕಾರ ಮಾರ್ಚ್ 15ರಂದು ಸಿಐಡಿಗೆ ವರ್ಗಾಯಿಸಿದೆ.

ಯಡಿಯೂರಪ್ಪ ಏನು ಹೇಳಿದ್ರು?

“ಸುಮಾರು ಒಂದೂವರೆ ತಿಂಗಳ ಹಿಂದೆ, ಅವರು ಸಹಾಯ ಕೋರಿ ನನ್ನ ಮನೆಗೆ ಬಂದರು. ಆಕೆಯ ಮಾತನ್ನು ಆಲಿಸಿದ ನಂತರ ನಾನು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಆಕೆಯ ಸಮಸ್ಯೆ ಬಗೆಹರಿಸಲು ಕೋರಿದೆ. ನಂತರ, ಅವರು ನನ್ನ ವಿರುದ್ಧ ಮಾತನಾಡಿದರು ಮತ್ತು ನಂತರ ನಾನು ಅವಳಿಗೆ ಕೆಲವು ಆರೋಗ್ಯ ಸಮಸ್ಯೆ ಇದೆ ಎಂದು ಅನುಮಾನಿಸಿದೆ ಕೂಡ ಎಂದು ಬಿಎಸ್ ಯಡಿಯೂರಪ್ಪ ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ಹೇಳಿದ್ದರು.

ನಂತರ ಅವರನ್ನು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕಳುಹಿಸಿದ್ದೇನೆ. ಅವರು ಕಷ್ಟದಲ್ಲಿದ್ದೇವೆ ಎಂದು ಹೇಳಿದಾಗ ಆ ತಾಯಿಗೆ ಸ್ವಲ್ಪ ಹಣವನ್ನು ಕೊಟ್ಟಿದ್ದೆ. ಈಗ ಎಫ್‌ಐಆರ್ ದಾಖಲಾಗಿದ್ದು, ಪರಿಶೀಲಿಸುತ್ತೇನೆ" ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದರು.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ