logo
ಕನ್ನಡ ಸುದ್ದಿ  /  ಚುನಾವಣೆಗಳು  /  Kolar News: ಕೋಲಾರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೋಲಾಹಲ, ಮುನಿಯಪ್ಪ ವಿರುದ್ದ ರಾಜೀನಾಮೆಗೆ ಮುಂದಾದ ಶಾಸಕರು

Kolar News: ಕೋಲಾರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೋಲಾಹಲ, ಮುನಿಯಪ್ಪ ವಿರುದ್ದ ರಾಜೀನಾಮೆಗೆ ಮುಂದಾದ ಶಾಸಕರು

Umesha Bhatta P H HT Kannada

Mar 27, 2024 04:55 PM IST

ಕೋಲಾರ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ಜೋರಾಗಿದೆ.

    • ಕಬ್ಬಿಣದ ಕಡಲೆಯಾದ ಚಿನ್ನದ ಗಣಿ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್‌ ಹಂಚಿಕೆ. ಅಳಿಯನಿಗೆ ಟಿಕೆಟ್ ಪಡೆಯಲು ಸಚಿವ ಮುನಿಯಪ್ಪ ಕಸರತ್ತು, ರಾಜೀನಾಮೆಗೆ ಮುಂದಾದ  ಶಾಸಕರು. ಇದರಿಂದ ಬಣ ರಾಜಕೀಯ ನಿಲ್ಲುತ್ತಿಲ್ಲ
    • (ವರದಿ:ಎಚ್‌.ಮಾರುತಿ. ಬೆಂಗಳೂರು)
ಕೋಲಾರ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ಜೋರಾಗಿದೆ.
ಕೋಲಾರ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ಜೋರಾಗಿದೆ.

ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಚಿನ್ನದ ಗಟ್ಟಿಯಾಗುವುದರ ಬದಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಈ ಕ್ಷೇತ್ರವು ತಮ್ಮ ಕುಟುಂಬದ ಹಿಡಿತದಲ್ಲಿ ಇಟ್ಟುಕೊಳ್ಳಲು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಅವರು ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಗಿಟ್ಟಿಸಲು ಸರ್ವ ಪಯತ್ನ ನಡೆಸಿದ್ದಾರೆ. ಆದರೆ ಇವರಿಗೆ ಟಿಕೆಟ್ ನೀಡಿದರೆ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ಶಾಸಕ ಕೊತ್ತನೂರು ಮಂಜುನಾಥ್ ಹಾಗೂ ಕೆ.ವೈ. ನಂಜೇಗೌಡ ಇಬ್ಬರು ವಿಧಾನಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ನಜೀರ್ ಅಹಮ್ಮದ್ ಕೂಡಾ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಇದರಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಂಪಾದಕೀಯ: ಆರ್ಥಿಕ ಅಸಮಾನತೆಯ ಚರ್ಚೆಯಲ್ಲಿ ಜಾತಿಯ ಸಂಕೀರ್ಣ ಪಾತ್ರ, ಕಾಂಗ್ರೆಸ್‌ ಉರುಳಿಸಿದ ರಾಜಕೀಯ ದಾಳದ ಹಲವು ಒಳಸುಳಿಗಳು

ಲೋಕಸಭಾ ಚುನಾವಣೆ; ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ, ಯಡಿಯೂರಪ್ಪ ಕುಟುಂಬದ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ

ಲೋಕಸಭಾ ಚುನಾವಣೆ 2024; ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಯಾರು

ಲೋಕಸಭಾ ಚುನಾವಣೆ 2024; ರಾಯ್ ಬರೇಲಿಯಿಂದ ರಾಹುಲ್ ಗಾಂಧಿ, ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಕಣಕ್ಕೆ, ಕುತೂಹಲಕ್ಕೆ ತೆರೆ ಎಳೆದ ಕಾಂಗ್ರೆಸ್

ಸಭಾಪತಿ ಕಚೇರಿಯಲ್ಲಿ ಹೈ ಡ್ರಾಮ

ವಿಧಾನಸಭೆ ಸದಸ್ಯರು ಸಭಾಧ್ಯಕ್ಷ ಯು.ಟಿ. ಖಾದರ್‌ ಅವರ ಭೇಟಿಗೆ ಸಮಯಾವಕಾಶ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.ಬಲ್ಲ ಮೂಲಗಳ ಪ್ರಕಾರ ಸಭಾಧ್ಯಕ್ಷರು ಮಂಗಳೂರಿನಲ್ಲಿದ್ದು ಅಲ್ಲಿಗೆ ತೆರಳಲು ಸಂಜೆ 4 ಗಂಟೆಗೆ ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ.

ಅತ್ತ ವಿಧಾನಪರಿಷತ್ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮಯಾವಕಾಶ ಕೇಳಿದ್ದು, ಇಬ್ಬರು ಸದಸ್ಯರು ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಅವರೊಂದಿಗೆ ಆಗಮಿಸಿದ್ದರು. ಆದರೆ ಅಲ್ಲಿ ಇದ್ದಾಗಲೇ ಸಿಎಂ ಸಿದ್ದರಾಮಯ್ಯ ಅವರ ಕರೆ ಬಂದಿದ್ದರಿಂದ ದೂರವಾಣಿಯಲ್ಲೇ ಮಾತುಕತೆ ನಡೆದು ಸಭಾಪತಿ ಅವರ ಕಚೇರಿಯಿಂದ ಸದಸ್ಯರು ಹೊರಟರು. ಈ ವೇಳೆ ಬಸವರಾಜ ಹೊರಟ್ಟಿ ಅವರ ಕಚೇರಿಯಲ್ಲಿ ಹೈಡ್ರಾಮವೇ ನಡೆಯಿತು.

ಈ ವೇಳೆ ಮಾತನಾಡಿದ ಹೊರಟ್ಟಿ ಅವರು, ನಜೀರ್‌ ಅಹಮದ್‌ ಹಾಗೂ ಅನಿಲ್‌ ಕುಮಾರ್‌ ಅವರು ರಾಜೀನಾಮೆ ನೀಡುವುದಾಗಿ ಸಮಯ ಕೇಳಿದ್ದರು. ಅವರು ಕೈಯಲ್ಲಿಯೇ ಬರೆದ ಪತ್ರ ನೀಡಬೇಕು ಎನ್ನುವ ಸೂಚನೆ ನೀಡಿದ್ದೇನೆ. ಬೇರೆ ರಾಜಕೀಯದ ಮಾಹಿತಿ ಇಲ್ಲ ಎಂದು ತಿಳಿಸಿದರು.

ಸಚಿವರು ಹೇಳಿದ್ದೇನು

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಅವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ಅತೃಪ್ತ ಶಾಸಕರ ಜೊತೆ ಸಂಧಾನ ಸಭೆ ನಡೆಸಿದ್ದು, ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಿದರೆ ಯಾವುದೇ ಕಾರಣಕ್ಕೂಶಾಸಕರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಶಾಸಕರ ಆಪ್ತರೊಬ್ಬರು ಹೇಳಿದ್ದಾರೆ.

ಮುನಿಯಪ್ಪ ಅವರ ಸಂಬಂಧಿಕರಿಗೆ ಟಿಕೆಟ್‌ ನೀಡಬಾರದು ಎಂದು ಶಾಸಕರು ಪಟ್ಟು ಹಿಡಿದರು. ಆಗ ಸಚಿವ ಸುರೇಶ್ ಮೌನಕ್ಕೆ ಶರಣಾದರು ಎಂದು ತಿಳಿದು ಬಂದಿದೆ.

ಈ ಮಧ್ಯೆ ಕೋಲಾರ ಟಿಕೆಟ್ ವಿಚಾರದ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಸಚಿವ ಮುನಿಯಪ್ಪ ಕೆಲಹೊತ್ತು ಮಾತುಕತೆ ನಡೆಸಿದ್ದಾರೆ.

ಸಚಿವ ಕೆ. ಎಚ್. ಮುನಿಯಪ್ಪ ಅವರು ಪಕ್ಷದ ನಾಯಕಿ ಸೋನಿಯಾಗಾಂಧಿ ಅವರ ಮನವೊಲಿಸಿ ತಮ್ಮ ಅಳಿಯನಿಗೆ ಟಿಕೆಟ್ ಪಡೆಯಲು ಲಾಬಿ ನಡೆಸಿದ್ದಾರೆ.

ಬಣ ರಾಜಕೀಯ

ಮಾಜಿ ಸಚಿವ ರಮೇಶ್ ಕುಮಾರ್ ಮುನಿಯಪ್ಪ ಅವರ ಕಟ್ಟಾ ವಿರೋಧಿ. ಪ್ರತಿ ಚುನಾವಣೆಯಲ್ಲೂ ಪರಸ್ಪರ ಸೋಲಿಗೆ ಭಗೀರಥ ಪ್ರಯತ್ನ ನಡೆಸುತ್ತಾರೆ.

ನಾಲ್ಕೈದು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಚಿವ ಮುನಿಯಪ್ಪ, ರಮೇಶ್ ಕುಮಾರ್ ಮತ್ತು ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಸಂಧಾನ ಸಭೆ ನಡೆಸಿದ್ದರು. ಆ ಸಭೆಯೂ ವಿಫಲವಾಗಿತ್ತು.

ತಮ್ಮ ಅಳಿಯನಿಗೆ ಟಿಕೆಟ್ ಸಿಗುವ ಹುಮ್ಮಸ್ಸಿನಲ್ಲಿರುವ ಮುನಿಯಪ್ಪ ಇಂದು ಸಂಜೆ ಅಥವಾ ನಾಳೆ ಟಿಕೆಟ್ ಘೋಷಣೆ ಆಗಲಿದೆ. ರಮೇಶ್ ಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಮಾತನಾಡಿದ್ದೇನೆ. ರಮೇಶ್ ಕುಮಾರ್ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತೀವ್ರ ವಿರೋಧ ವ್ಯಕ್ತವಾದರೆ ಮಾಜಿ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅವರಿಗೆ ಟಿಕೆಟ್ ನೀಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಆದರೆ ಇವರಿಗೆ ಟಿಕೆಟ್ ನೀಡಿದರೆ ಸಚಿವ ಮುನಿಯಪ್ಪ ಬಣ ಕೆಲಸ ಮಾಡುವುದಿಲ್ಲ. ಕಳೆದ ಬಾರಿಯೂ ಬಣದ ರಾಜಕಾರಣಕ್ಕೆ ಕಾಂಗ್ರೆಸ್ ಈ ಕ್ಷೇತ್ರವನ್ನು ಕಳೆದುಕೊಂಡಿತ್ತು. ಈ ಬಾರಿ ಶತಾಯ ಗತಾಯ ಕೋಲಾರವನ್ನು ಕೈವಶ ಮಾಡಿಕೊಳ್ಳಲು ನಾಯಕರು ಹಠ ತೊಟ್ಟಿದ್ದರೆ ಸ್ಥಳೀಯ ನಾಯಕರು ಭಿನ್ನಾಭಿಪ್ರಾಯ ಮರೆತು ಬರುತ್ತಿಲ್ಲ. ಭಿನ್ನಾಭಿಪ್ರಾಯ ದಿನೇ ದಿನೇ ಹೆಚ್ಚುತ್ತಿದ್ದು ಯಾವ ಹಂತಕ್ಕಾದರೂ ಹೋಗಬಹುದು ಎನ್ನುವ ಸೂಚನೆಯಂತೂ ಇದೆ.

(ವರದಿ: ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ