Kajal Aggarwal about Postpartum: ಮತ್ತೆ ಶೂಟಿಂಗ್ ಹಾಜರಾದ ಕಾಜಲ್ ಅಗರ್‌ವಾಲ್...ದೇಹ ಮೊದಲಿನಂತೆ ಸ್ಪಂದಿಸುತ್ತಿಲ್ಲ ಎಂದ ನಟಿ..!
Sep 23, 2022 08:31 AM IST
ಹೆರಿಗೆ ನಂತರ ದೇಹ ಮೊದಲಿನಂತೆ ಇಲ್ಲ ಎಂದ ಕಾಜಲ್ ಅಗರ್‌ವಾಲ್
- ಮೊದಲಿನಂತೆ ಶಕ್ತಿ ಗಳಿಸಲು ಬಹಳ ಶ್ರಮ ಪಡಬೇಕು. ಕುದುರಿ ಸವಾರಿ ಮಾಡುತ್ತಿರುವುದು ದೊಡ್ಡ ಸಾಹಸ ಎನ್ನಿಸುತ್ತಿದೆ. ನಮ್ಮ ದೇಹ ಬದಲಾಗಬಹುದು, ಅದಕ್ಕಾಗಿ ನಮ್ಮೊಳಗಿನ ಸ್ಫೂರ್ತಿ, ಉತ್ಸಾಹವನ್ನು ಮರೆಯುವ ಅವಶ್ಯಕತೆ ಇಲ್ಲ ಎಂದು ಕಾಜಲ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ನಾಲ್ಕು ತಿಂಗಳ ಹಿಂದಷ್ಟೇ ಮಗುವಿನ ಜನ್ಮ ನೀಡಿದ್ದ ನಟಿ ಕಾಜಲ್ ಅಗರ್‌ವಾಲ್ ಮತ್ತೆ ಚಿತ್ರೀಕರಣಕ್ಕೆ ವಾಪಸಾಗಿದ್ದಾರೆ. ಗರ್ಭಿಣಿ ಆದಾಗಿನಿಂದ ನಟನೆಯಿಂದ ದೂರ ಉಳಿದಿದ್ದ ಮಗಧೀರ ಸುಂದರಿ, ಈಗ ಮತ್ತೆ ತಾವು ಒಪ್ಪಿಕೊಂಡಿರುವ ಸಿನಿಮಾಗಳಿಗಾಗಿ ಕೆಲಸ ಆರಂಭಿಸಿದ್ದಾರೆ. ಬಹಳ ದಿನಗಳ ನಂತರ ಮತ್ತೆ ಚಿತ್ರೀಕರಣಕ್ಕೆ ವಾಪಸಾಗಿರುವ ವಿಚಾರವನ್ನು ಕಾಜಲ್, ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಕಾಜಲ್ ಅಗರ್‌ವಾಲ್, ಎಲ್ಲವನ್ನೂ ಮೊದಲಿನಿಂದ ಶುರು ಮಾಡಬೇಕು ಎನ್ನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ಕುದುರೆ ಸವಾರಿ ಅಭ್ಯಾಸ ಮಾಡುತ್ತಿರುವ ವಿಡಿಯೋವೊಂದರನ್ನು ಹಂಚಿಕೊಂಡಿರುವ ಕಾಜಲ್, ''ಬಹಳ ಎಕ್ಸೈಟ್ ಆಗಿದ್ದೇನೆ, ಹೆರಿಗೆಯಾದ ನಾಲ್ಕು ತಿಂಗಳ ನಂತರ ಮತ್ತೆ ಕೆಲಸಕ್ಕೆ ಹಾಜರಾಗಿದ್ದೇನೆ. ಎಲ್ಲವನ್ನೂ ಮೊದಲಿನಿಂದ ಆರಂಭಿಸಬೇಕು ಎನ್ನುವಂತಾಗಿದೆ. ನನ್ನ ದೇಹ ಈಗ ಮೊದಲಿನಂತೆ ಇಲ್ಲ. ಮೊದಲು ಮಾಡುತ್ತಿದ್ದ ಕೆಲಸವನ್ನು ಈಗ ಮಾಡಲಾಗುತ್ತಿಲ್ಲ.''
ಮೊದಲಿನಂತೆ ಶಕ್ತಿ ಗಳಿಸಲು ಬಹಳ ಶ್ರಮ ಪಡಬೇಕು. ಕುದುರಿ ಸವಾರಿ ಮಾಡುತ್ತಿರುವುದು ದೊಡ್ಡ ಸಾಹಸ ಎನ್ನಿಸುತ್ತಿದೆ. ನಮ್ಮ ದೇಹ ಬದಲಾಗಬಹುದು, ಅದಕ್ಕಾಗಿ ನಮ್ಮೊಳಗಿನ ಸ್ಫೂರ್ತಿ, ಉತ್ಸಾಹವನ್ನು ಮರೆಯುವ ಅವಶ್ಯಕತೆ ಇಲ್ಲ. ನಾವು ನಮಗಾಗಿ ಬದುಕಬೇಕು. ಇಂಡಿಯನ್ 2 ಚಿತ್ರೀಕರಣಕ್ಕೆ ಮತ್ತೆ ಹಾಜರಾಗಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಚಿತ್ರರಂಗ ಕೂಡಾ ನನ್ನ ಮನೆ ಇದ್ದಂತೆ. ಸಾಕಷ್ಟು ಕಲಿಯಲು ಅವಕಾಶ ನೀಡಿದ ಚಿತ್ರರಂಗಕ್ಕೆ ನಾನು ಎಂದಿಗೂ ಕೃತಜ್ಞಳಾಗಿರುತ್ತೇನೆ'' ಎಂದು ಕಾಜಲ್ ಅಗರ್‌ವಾಲ್ ಬರೆದುಕೊಂಡಿದ್ದಾರೆ.
ಬಾಡಿ ಶೇಮಿಂಗ್‌ಗೆ ಗುರಿಯಾಗಿದ್ದ ಕಾಜಲ್ ಅಗರ್‌ವಾಲ್
2020 ರಲ್ಲಿ ತಮ್ಮ ಧೀರ್ಘಕಾಲದ ಸ್ನೇಹಿತ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದ ಕಾಜಲ್, ಮೊದಲು ಒಪ್ಪಿಕೊಂಡಿದ್ದ ಎಲ್ಲಾ ಪ್ರಾಜೆಕ್ಟ್ಗಳನ್ನು ಮುಗಿಸಿ ಕುಟುಂಬದ ಕಡೆಗೆ ಗಮನ ನೀಡಿದರು. ಗರ್ಭಿಣಿಯಾದ ನಂತರ ತಾವು ಒಪ್ಪಿಕೊಂಡಿದ್ದ 3-4 ಸಿನಿಮಾಗಳಿಂದ ಕಾಜಲ್ ಹೊರಬಂದಿದ್ದರು. ಪ್ರೆಗ್ನೆನ್ಸಿ ಸಮಯದಲ್ಲಿ ಕಾಜಲ್ ದಪ್ಪ ಆಗಿದ್ದರು. ಬೇಬಿ ಬಂಪ್ ಫೋಟೋಗಳನ್ನು ಕಾಜಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಕೆಲವರು ಅವರ ಫೋಟೋಗಳನ್ನು ಇಷ್ಟಪಟ್ಟರೆ, ಮತ್ತೆ ಕೆಲವರು ಆಕೆ ಗರ್ಭಿಣಿ ಎಂಬುದನ್ನೂ ನೋಡದೆ ಬಾಡಿ ಶೇಮಿಂಗ್ ಮಾಡಿದ್ದರು. ''ಗರ್ಭಾವಸ್ಥೆಯಲ್ಲಿ ಮಗು ಬೆಳವಣಿಗೆಯಾದಂತೆಲ್ಲಾ ನಮ್ಮ ದೇಹದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತವೆ. ಮಾನಸಿಕವಾಗಿಯೂ ಕೆಲವೊಂದು ಬದಲಾವಣೆಗಳಾಗುತ್ತವೆ. ಮಗು ಜನಿಸದ ಬಳಿಕ ನಾನು ಮೊದಲಿನಂತೆ ಆಗಲೂಬಹುದು, ಆಗದೇ ಕೂಡಾ ಇರಬಹುದು. ದೇಹದಲ್ಲಾಗುವ ಈ ಬದಲಾವಣೆ ನೈಸರ್ಗಿಕ ಪ್ರಕ್ರಿಯೆ'' ಎಂದು ಕಾಜಲ್ ಅಗರ್‌ವಾಲ್ ಪ್ರತಿಕ್ರಿಯಿಸಿದ್ದರು.
ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಎಸ್. ಶಂಕರ್ ನಿರ್ದೇಶಿಸುತ್ತಿರುವ 'ಇಂಡಿಯನ್ 2' ಚಿತ್ರದಲ್ಲಿ ಕಮಲ್ ಹಾಸನ್, ನಯನ ತಾರಾ, ಕಾಜಲ್ ಅಗರ್‌ವಾಲ್, ಬಾಬ್ಬಿ ಸಿಂಹ, ವಿದ್ಯುತ್ ಜಮಾಲ್, ರಕುಲ್ ಪ್ರೀತ್ ಸಿಂಗ್, ಐಶ್ವರ್ಯ ರಾಜೇಶ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ.