BBK 10: ಏಳೊಂದ್ಲ ಏಳು ಟಾಸ್ಕ್‌ನಲ್ಲಿ ವಿನಯ್ ವಿರುದ್ಧ ಗೆದ್ದು ಬೀಗಿದ ಸಂಗೀತಾ ತಂಡ; ಆದರೂ ನೆಮ್ಮದಿ ಇಲ್ಲ!
Nov 04, 2023 02:27 PM IST
BBK 10: ಏಳೊಂದ್ಲ ಏಳು ಟಾಸ್ಕ್‌ನಲ್ಲಿ ವಿನಯ್ ವಿರುದ್ಧ ಗೆದ್ದು ಬೀಗಿದ ಸಂಗೀತಾ ತಂಡ; ಆದರೂ ನೆಮ್ಮದಿ ಇಲ್ಲ!
- ಬಿಗ್‌ಬಾಸ್‌ನಲ್ಲಿನ ಫನ್ ಫ್ರೈಡೇ ಟಾಸ್ಕ್‌ನಲ್ಲಿ ಸಂಗೀತಾ ಶೃಂಗೇರಿ ನೇತೃತ್ವದ ತಂಡ ವಿನಯ್ ಗೌಡ ತಂಡದ ಎದುರು ಗೆದ್ದು ಬೀಗಿದೆ. ಆದರೆ, ಸಂಗೀತಾಗೆ ಮಾತ್ರ ಗೆಲುವಿನ ಸಮಾಧಾನ ಇಲ್ಲ.
BBK 10: ಟಾಸ್ಕ್ ಸೋಲಿನ ಜತೆಗೆ ಈ ವಾರದ ಕಳಪೆ ಪಟ್ಟ ಧರಿಸಿ ಜೈಲುವಾಸ ಅನುಭವಿಸುತ್ತಿರುವ ಸಂಗೀತಾ ಶೃಂಗೇರಿ ಕೊನೆಗೂ ಒಂದು ಗೆಲುವನ್ನು ದಕ್ಕಿಸಿಕೊಂಡಿದ್ದಾರೆ. ಈ ವಾರದ ಟಾಸ್ಕ್‌ನಲ್ಲಿ ಸೋತು ಒಳಗೊಳಗೇ ಕುದಿಯುತ್ತಿರುವ ಸಂಗೀತಾ ತಂಡ, ಶುಕ್ರವಾರ ಜಿಯೋ ಸಿನಿಮಾ ವತಿಯಿಂದ ನೀಡಲಾದ ಫನ್ ಫ್ರೈಡೇ (Fun Friday) ಟಾಸ್ಕ್‌ನಲ್ಲಿ ಗೆದ್ದು ಸಮಾಧಾನದ ನಿಟ್ಟುಸಿರು ಬಿಟ್ಟಿದೆ.
ಈ ವಾರದ ಕ್ಯಾಪ್ಟನ್ ಆಗಿ ವಿನಯ್ ಆಯ್ಕೆಯಾಗಿದ್ದಾರೆ. ಅದು ಸಂಗೀತಾ ಗ್ಯಾಂಗ್‌ನ ತಳಮಳಕ್ಕೂ ಕಾರಣವಾಗಿದೆ. ಟಾಸ್ಕ್‌ನ ನಂತರ ಮನೆಯವರೆಲ್ಲರ ಬಹುಮತದ ಅಭಿಪ್ರಾಯದ ಮೇರೆಗೆ ವಿನಯ್ ‘ಅತ್ಯುತ್ತಮ ಪ್ರದರ್ಶನ’ದ ಪದಕ ಕೊರಳಿಗೇರಿಸಿಕೊಂಡರೆ, ಸಂಗೀತ ಜೈಲಿನುಡುಗೆ ತೊಟ್ಟು ಬಂಧಿಯಾಗಿದ್ದಾರೆ.
ಈ ನಡುವೆ ಜೀಯೊ ಸಿನಿಮಾ ಮನೆಯ ಸ್ಪರ್ಧಿಗಳಿಗೆ ‘ಏಳೋಂದ್ಲ ಏಳು’ ಎಂಬ ಟಾಸ್ಕ್ ನೀಡಿತ್ತು. ಅದರ ನಿರ್ವಹಣೆಯ ಜವಾಬ್ದಾರಿನ್ನು ಭಾಗ್ಯಶ್ರೀ ಅವರಿಗೆ ನೀಡಿತ್ತು. ತುಕಾಲಿ ಸಂತೋಷ್ ಅವರು ಸಂಗೀತಾ ಅವರ ತಂಡದಿಂದ ಆಡಿದರು.
ಆಟದ ನಿಯಮಗಳು ಹೀಗಿದ್ದವು
‘ಏಳೊಂದ್ಲ ಏಳು’ ಇದು ಸಂಖ್ಯೆಗಳ ಆಟ. ಸಂಗೀತಾ ತಂಡದವರು ನೀಲಿ ಬಣ್ಣದ ಟೀ ಷರ್ಟ್ ಮತ್ತು ವಿನಯ್ ತಂಡದವರು ಕೆಂಪು ಬಣ್ಣದ ಟೀ ಷರ್ಟ್ ಧರಿಸಿದ್ದರು. ಅವರ ಟೀ ಷರ್ಟ್ ಮೇಲೆ ಒಂದೊಂದು ಅಂಕಿ ಬರೆಯಲಾಗಿತ್ತು. ಭಾಗ್ಯಶ್ರೀ ಒಮ್ಮೆ ಒಂದಿಷ್ಟು ಸಂಖ್ಯೆಗಳನ್ನು ಹೇಳುತ್ತಾರೆ. ತಂಡದ ಸದಸ್ಯರೆಲ್ಲ ತಮ್ಮ ಟೀ ಷರ್ಟ್ ಮೇಲಿನ ಅಂಕಿಗಳಿಗೆ ಅನುಗುಣವಾಗಿ ಭಾಗ್ಯಶ್ರೀ ಹೇಳಿದ ಸಂಖ್ಯೆಯಂತೆ ತಮ್ಮನ್ನು ತಾವು ಜೋಡಿಸಿಕೊಳ್ಳಬೇಕು.
ತಂಡದ ಸದಸ್ಯರ ನಡುವಿನ ಹೊಂದಾಣಿಕೆಯನ್ನು ಬಿಂಬಿಸುವ ಈ ಆಟಕ್ಕೆ ಎರಡೂ ತಂಡದವರು ಸಾಕಷ್ಟು ಉತ್ಸಾಹದಿಂದಲೇ ಸಿದ್ಧರಾದರು. ಒಂದು ಕಡೆಯಲ್ಲಿ ವಿನಯ್, ಸಿರಿ, ನೀತು, ಸ್ನೇಹಿತ್, ಇಶಾನಿ, ರಕ್ಷಕ್, ನಮ್ರತಾ ನಿಂತಿದ್ದರೆ ಮತ್ತೊಂದು ಕಡೆಯಲ್ಲಿ ಸಂಗೀತಾ, ತನಿಷಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಮೈಕಲ್, ಡ್ರೋಣ್ ಪ್ರತಾಪ್, ಕಾರ್ತಿಕ್ ನಿಂತಿದ್ದರು.
ಭಾಗ್ಯಶ್ರೀ ಹೇಳಿದ ನಂಬರ್‌ಗೆ ಅನುಗುಣವಾಗಿ ತಮ್ಮನ್ನು ತಾವು ಜೋಡಿಸಿಕೊಂಡು ನಿಲ್ಲುವಲ್ಲಿ ಮೊದಲು ಯಶಸ್ವಿಯಾಗಿದ್ದು ಸಂಗೀತಾ ತಂಡ. ಹಾಗಾಗಿ ಸಂಗೀತಾ ತಂಡದವರು ಈ ಆಟದಲ್ಲಿ ಗೆಲುವು ಸಾಧಿಸಿದರು. ಆದರೆ ಅವರ ಗೆಲುವು ಸಂಭ್ರಮವಾಗಿ ಬದಲಾಗುವ ಸ್ಥಿತಿಯಲ್ಲಿ ಅವರಿರಲಿಲ್ಲ. ಯಾಕೆಂದರೆ ಇಡೀ ಮನೆಯ ಕ್ಯಾಪ್ಟನ್ ಆಗಿ ವಿನಯ್ ಆಯ್ಕೆಯಾಗಿದ್ದರು. ಹಾಗಾಗಿ ಆಗಲೇ ಸೋತುಹೋಗಿದ್ದ ಸಂಗೀತಾ ತಂಡಕ್ಕೆ ತಾತ್ಕಾಲಿಕ ನೆಮ್ಮದಿಯನ್ನಷ್ಟೇ ಈ ಗೆಲುವು ನೀಡಿತು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.