logo
ಕನ್ನಡ ಸುದ್ದಿ  /  ಮನರಂಜನೆ  /  Mani Ratnam: ಹಿಂದಿ ಚಿತ್ರರಂಗವಷ್ಟೇ ಭಾರತೀಯ ಸಿನಿಮಾ ಅಲ್ಲ, ಬಾಲಿವುಡ್‌ ಎಂದು ಕರೆದುಕೊಳ್ಳುವುದು ನಿಂತರೆ ಉಳಿದವರು ಸರಿಯಾಗಬಹುದು; ಮಣಿರತ್ನಂ

Mani Ratnam: ಹಿಂದಿ ಚಿತ್ರರಂಗವಷ್ಟೇ ಭಾರತೀಯ ಸಿನಿಮಾ ಅಲ್ಲ, ಬಾಲಿವುಡ್‌ ಎಂದು ಕರೆದುಕೊಳ್ಳುವುದು ನಿಂತರೆ ಉಳಿದವರು ಸರಿಯಾಗಬಹುದು; ಮಣಿರತ್ನಂ

Rakshitha Sowmya HT Kannada

Apr 20, 2023 08:26 AM IST

google News

ಹಿರಿಯ ನಿರ್ದೇಶಕ ಮಣಿರತ್ನಂ

    • ''ಹಿಂದಿ ಸಿನಿಮಾರಂಗವು ತನ್ನನ್ನು ಬಾಲಿವುಡ್‌ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಬೇಕು. ಆಗ ಮಾತ್ರ ಭಾರತೀಯ ಸಿನಿಮಾ ಎಂದರೆ ಬಾಲಿವುಡ್‌ ಮಾತ್ರ ಎಂದು ಜನರು ಗುರುತಿಸುವುದನ್ನು ನಿಲ್ಲಿಸುತ್ತಾರೆ'' ಎಂದರು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ವೆಟ್ರಿಮಾರನ್‌ ಕೂಡಾ ಮಣಿರತ್ನಂ ಅವರ ಮಾತುಗಳಿಗೆ ದನಿಗೂಡಿಸಿದರು.
ಹಿರಿಯ ನಿರ್ದೇಶಕ ಮಣಿರತ್ನಂ
ಹಿರಿಯ ನಿರ್ದೇಶಕ ಮಣಿರತ್ನಂ

ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್‌ ಸೆಲ್ವನ್‌ ಭಾಗ 2' ಏಪ್ರಿಲ್‌ 28 ರಂದು ತೆರೆ ಕಾಣುತ್ತಿದೆ. ಈ ನಡುವೆ ಚೆನ್ನೈನಲ್ಲಿ ನಡೆದ CII ದಕ್ಷಿಣ ಮಾಧ್ಯಮ ಮತ್ತು ಮನರಂಜನಾ ಶೃಂಗಸಭೆಯಲ್ಲಿ ಭಾಗವಹಿಸಿದ್ದ ನಿರ್ದೇಶಕ ಮಣಿರತ್ನಂ, ವಿಶ್ವದ ಚಿತ್ರರಂಗದ ಮೇಲೆ ದಕ್ಷಿಣ ಭಾರತದ ಸಿನಿಮಾಗಳ ಪ್ರಭಾವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಮಣಿರತ್ನಂ, ''ಹಿಂದಿ ಚಿತ್ರರಂಗವು ತನ್ನನ್ನು ತಾನು ಬಾಲಿವುಡ್‌ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಿದರೆ ಇತರ ಭಾರತೀಯ ಸಿನಿಮಾಗಳು ಕೂಡಾ ತಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಣಿರತ್ನಂ ಕೂಡಾ ಈ ಶೃಂಗಸಭೆ ಸಮಿತಿಯ ಸದಸ್ಯರಾಗಿದ್ದು ಕೆಜಿಎಫ್‌, ಪುಷ್ಪ ಹಾಗೂ ಕಾಂತಾರ ಸಿನಿಮಾ ಬಿಡುಗಡೆ ನಂತರ ಈ ಚಿತ್ರಗಳು ವಿಶ್ವದ ಚಿತ್ರರಂಗದ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂದು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ವೆಟ್ರಿಮಾರನ್‌, ಬಸಿಲ್‌ ಜೋಸೆಫ್‌, ನಟ-ನಿರ್ದೇಶಕ ರಿಷಬ್‌ ಶೆಟ್ಟಿ ಕೂಡಾ ಹಾಜರಿದ್ದರು.

''ಹಿಂದಿ ಸಿನಿಮಾರಂಗವು ತನ್ನನ್ನು ತಾನು ಬಾಲಿವುಡ್‌ ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಬೇಕು. ಆಗ ಮಾತ್ರ ಭಾರತೀಯ ಸಿನಿಮಾ ಎಂದರೆ ಬಾಲಿವುಡ್‌ ಮಾತ್ರ ಎಂದು ಜನರು ಗುರುತಿಸುವುದನ್ನು ನಿಲ್ಲಿಸುತ್ತಾರೆ'' ಎಂದರು. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ವೆಟ್ರಿಮಾರನ್‌ ಕೂಡಾ ಮಣಿರತ್ನಂ ಅವರ ಮಾತುಗಳಿಗೆ ದನಿಗೂಡಿಸಿದರು. ''ನಾನು ಬಾಲಿವುಡ್‌, ಕಾಲಿವುಡ್‌ ಎಂದು ಯಾವುದೇ ಚಿತ್ರರಂಗವನ್ನು ಪ್ರತ್ಯೇಕ ಮಾಡಿ ನೋಡಲು ಇಷ್ಟಪಡುವುದಿಲ್ಲ. ಭಾರತೀಯ ಚಿತ್ರರಂಗ ಎಂದರೆ ಅದು ಎಲ್ಲಾ ಭಾಷೆಗಳ ಸಿನಿಮಾ'' ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮ ಜನರ ಹಾಗೂ ನಮ್ಮ ನೆಲದ ಕಥೆಗಳನ್ನು ಹೇಳುವ ಮೂಲಕ ದಕ್ಷಿಣ ಚಿತ್ರರಂಗ ಇಂದು ವಿಶ್ವಾದ್ಯಂತ ಸಾಕಷ್ಟು ಪ್ರಭಾವ ಬೀರುತ್ತಿದೆ'' ಎಂದರು.

'ಕಾಂತಾರ' ಚಿತ್ರದ ಬಗ್ಗೆ ಮಾತನಾಡಿದ ವೆಟ್ರಿಮಾರನ್‌, ''ರಿಷಬ್‌ ಶೆಟ್ಟಿ, ಕಾಂತಾರ ಚಿತ್ರವನ್ನು ಕಡಿಮೆ ಬಜೆಟ್‌ನ ಪ್ಯಾನ್‌ ಇಂಡಿಯಾ ಸಿನಿಮಾ ಎಂದರು. ಆದರೆ ಅವರು ತಮ್ಮ ನೆಲದ ಕಥೆಯನ್ನು ಹೇಳಿದ್ದರಿಂದಲೇ ಸಿನಿಮಾ ಇಷ್ಟು ದೊಡ್ಡ ಮಟ್ಟಿನ ಯಶಸ್ಸು ಗಳಿಸಲು ಸಾಧ್ಯವಾಯ್ತು'' ಎಂದರು. ಕಾರ್ಯಕ್ರಮದಲ್ಲಿ ಆಸ್ಕರ್‌ ವಿಜೇತರಾದ 'ಆರ್‌ಆರ್‌ಆರ್‌' ಸಿನಿಮಾದ ನಾಟು ನಾಟು.. ಹಾಡಿನ ಕೊರಿಯೋಗ್ರಾಫರ್‌ ಪ್ರೇಮ್‌ ರಕ್ಷಿತ್‌ ಹಾಗೂ 'ದಿ ಎಲಿಫೆಂಟ್‌ ವಿಸ್ಪರರ್ಸ್‌' ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರನ್ನು ಗೌರವಿಸಲಾಯ್ತು.

ಎರಡು ದಿನಗಳ ಕಾಲ ಚೆನ್ನೈನಲ್ಲಿ ನಡೆದ ಈ ಶೃಂಗಸಭೆಯಲ್ಲಿ ನಟ-ನಟಿಯರು, ನಿರ್ದೆಶಕರು, ನಿರ್ದೇಶಕರು, ವಿತರಕರು ಸೇರಿದಂತೆ ವಿಶ್ವದ ಸುಮಾರು 700 ಸೆಲೆಬ್ರಿಟಿಗಳು, OTT ಪ್ಲಾಟ್‌ಫಾರ್ಮ್‌ಗಳ ರಾಷ್ಟ್ರೀಯ ಮುಖ್ಯಸ್ಥರು ಹಾಗೂ 60ಕ್ಕೂ ಹೆಚ್ಚು ಪ್ರಸಿದ್ಧ ಭಾಷಣಕಾರರು ಭಾಗವಹಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ