Trisha Krishnan: ಆಕ್ಷೇಪಾರ್ಹ ಮಾನಹಾನಿ ಹೇಳಿಕೆ ನೀಡಿದ ಎವಿ ರಾಜು; ಕಠಿಣ ಪ್ರತಿಕ್ರಿಯೆ ನೀಡಿದ ನಟಿ ತ್ರಿಶಾ ಕೃಷ್ಣನ್
Feb 21, 2024 10:30 AM IST
Trisha Krishnan: ಮನ್ಸೂರ್ ಅಲಿಖಾನ್ ಬಳಿಕ ಆಕ್ಷೇಪಾರ್ಹ ಹೇಳಿಕೆ ನೀಡಿದ ಎವಿ ರಾಜು
- Trisha Krishnan: ತಮಿಳುನಾಡಿನ ರಾಜಕಾರಣಿ ಎವಿ ರಾಜು ತನ್ನ ವಿರುದ್ಧ ನೀಡಿರುವ ಕೆಟ್ಟ ಹೇಳಿಕೆಗೆ ನಟಿ ತ್ರಿಶಾ ಕೃಷ್ಣನ್ ಕಠಿಣ ಪ್ರತಿಕ್ರಿಯೆ ನೀಡಿದ್ದಾರೆ. ಪದೇ ಪದೇ ಇಂತಹ ಜನರನ್ನು ನೋಡಲು ಅಸಹ್ಯವಾಗುತ್ತಿದೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತ್ರಿಶಾ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಸಾರ್ವಜನಿಕವಾಗಿ ತನ್ನ ಬಗ್ಗೆ ಕೆಟ್ಟದ್ದಾಗಿ ಮಾತನಾಡುವ "ಕೀಳುಮಟ್ಟದ ಜನರ" ಕುರಿತು ನಟಿ ತ್ರಿಶಾ ಕೃಷ್ಣನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನ್ಸೂರ್ ಆಲಿ ಖಾನ್ ನಂತರ ಇದೀಗ ಎಐಎಡಿಎಂಕೆ ಮಾಜಿ ಸದಸ್ಯ ಎವಿ ರಾಜು ನಟಿಯ ವಿರುದ್ಧ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಎವಿ ರಾಜು ಮಾಡಿರುವ ಆಕ್ಷೇಪಾರ್ಹ ಕಾಮೆಂಟ್‌ಗೆ ನಟಿ ತ್ರಿಶಾ ಕೃಷ್ಣನ್ ಮಾತ್ರವಲ್ಲದೆ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ತ್ರಿಶಾ ಕೃಷ್ಣನ್ ಅವರನ್ನು 25 ಲಕ್ಷ ರೂಪಾಯಿಗೆ ಎ. ವೆಂಕಟಚಲಂ ಕೇಳಿದ್ದರು. ಅವರನ್ನು ರೆಸಾರ್ಟ್‌ಗೆ ಕಳುಹಿಸಲಾಯಿತು. ಇಂತಹ ವ್ಯವಸ್ಥೆ ಮಾಡಲು ಸಾಕಷ್ಟು ನಟಿಯರಿದ್ದಾರೆ" ಎಂದು ಎಐಎಡಿಎಂಕೆ ಸದಸ್ಯ ಎವಿ ರಾಜು ಹೇಳಿಕೆ ನೀಡಿದ್ದರು. ಇದೀಗ ಇಂತಹ ಕೀಳುಮಟ್ಟದ ಹೇಳಿಕೆ ನೀಡಿರುವ ಎವಿ ರಾಜು ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ನಟಿ ತ್ರಿಶಾ ಹೇಳಿದ್ದಾರೆ.
ತ್ರಿಶಾ ಕೃಷ್ಣನ್ ತಿರುಗೇಟು
ತನ್ನ ಬಗ್ಗೆ ರಾಜಕಾರಣಿ ಮಾಡಿರುವ ಆರೋಪಕ್ಕೆ ತ್ರಿಶಾ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಇತರರ ಗಮನ ಸೆಳೆಯಲು ಯಾವುದೇ ಮಟ್ಟಕ್ಕೆ ಇಳಿಯುವ ಕೀಳು ಮತ್ತು ನಿಕೃಷ್ಟ ಜನರನ್ನು ಮತ್ತೆಮತ್ತೆ ನೋಡಲು ಅಸಹ್ಯವಾಗುತ್ತಿದೆ. ಇವರ ವಿರುದ್ಧ ಖಂಡಿತವಾಗಿಯೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಮುಂದೆ ಕಾನೂನು ಕ್ರಮದ ಮೂಲಕ ಪ್ರತಿಕ್ರಿಯೆ ನೀಡಲಾಗುವುದು" ಎಂದು ತ್ರಿಶಾ ಟ್ವೀಟ್ ಮಾಡಿದ್ದಾರೆ. ತ್ರಿಶಾರಿಗೆ ಅವರ ಅಭಿಮಾನಿಗಳು ಬೆಂಬಲ ನೀಡಿದ್ದಾರೆ. "ಇದು ಸೂಕ್ತವಾದ ಉತ್ತರ" "ಕಾನೂನು ಕ್ರಮಕೈಗೊಳ್ಳಿ" ಎಂದೆಲ್ಲ ಫ್ಯಾನ್ಸ್ ಪ್ರತಿಕ್ರಿಯೆ ನೀಡಿದ್ದಾರೆ.
ಎವಿ ರಾಜು ಇತ್ತೀಚೆಗೆ ಮಾತನಾಡುವಾಗ ತ್ರಿಶಾ ಬಗ್ಗೆ ಕೆಟ್ಟದ್ದಾಗಿ ಹೇಳಿಕೆ ನೀಡಿದ್ದರು. ತ್ರಿಶಾ ಕೃಷ್ಣನ್ ಅವರನ್ನು 25 ಲಕ್ಷ ರೂಪಾಯಿಗೆ ಎ. ವೆಂಕಟಚಲಂ ಕೇಳಿದ್ದರು ಎಂದು ಎಐಎಡಿಎಂಕೆ ಸದಸ್ಯ ಹೇಳಿಕೆ ನೀಡಿದ್ದರು. ತ್ರಿಶಾರನ್ನು ಎಂಎಲ್‌ಎಗಾಗಿ ರೆಸಾರ್ಟ್‌ಗೆ ಕರೆತರಲಾಯಿತು ಎಂದು ಅವರು ಹೇಳಿದ್ದರು.
ಯಾವುದೇ ಸಾಕ್ಷಿ ಇಲ್ಲದೆ ತ್ರಿಶಾ ವಿರುದ್ಧ ವದಂತಿ ಹರಡುತ್ತಿರುವುದನ್ನು ನಟ ಮತ್ತು ನಿರ್ದೇಶಕ ಚೆರನ್ ಖಂಡಿಸಿದ್ದಾರೆ. "ನಾನು ಇದನ್ನು ದೃಢವಾಗಿ ಖಂಡಿಸುವೆ. ಕಾನೂನು ಮತ್ತು ಪೊಲೀಸ್ ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಸಾಕ್ಷ್ಯವಿಲ್ಲದೆ ಸಿನಿಮಾ ಕ್ಷೇತ್ರದ ಜನರ ಕುರಿತು ಕೆಟ್ಟದ್ದಾಗಿ ಮಾತನಾಡುವರ ಕುರಿತು ಕ್ರಮ ಕೈಗೊಳ್ಳಬೇಕು. ಈ ರೀತಿ ಹೇಳಿಕೆ ನೀಡಿದವರ ವಿರುದ್ಧ ವಿಶಾಲ್ ಮತ್ತು ಕಾರ್ತಿ ಸೇರಿದಂತೆ ಸಿನಿಮಾ ಕಲಾವಿದರ ಅಸೋಸಿಷನ್ ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದೇನೆ" ಎಂದು ಚೆರನ್ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮನ್ಸೂರ್ ಆಲಿ ಖಾನ್ ಕೂಡ ಇದೇ ರೀತಿಯ ಕೆಟ್ಟ ಕಾಮೆಂಟ್ ಮಾಡಿದ್ದಾರೆ. ಲಿಯೋ ಸಿನಿಮಾದ ಪ್ರಮೋಷನ್ ವೇಳೆ ಮಾಧ್ಯಮದ ಮುಂದೆ ನಟಿಯ ಬಗ್ಗೆ ಕೆಟ್ಟದ್ದಾಗಿ ಹೇಳಿಕೆ ನೀಡಿದ್ದರು.
“ಲಿಯೋ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿದಾಗ ತ್ರಿಶಾ ಜೊತೆ ಅತ್ಯಾಚಾರದ ದೃಶ್ಯ ಬರಬಹುದೆಂಬ ನಿರೀಕ್ಷೆಯಲ್ಲಿದ್ದೆ. ತ್ರಿಶಾಳನ್ನು ನನ್ನ ತೋಳುಗಳಲ್ಲಿ ಎತ್ತಿಕೊಂಡು ಬರುವ ದೃಶ್ಯವೊಂದು ಬರಬಹುದೆಂದು ಊಹಿಸಿದ್ದೆ. ಆಕೆಯ ಜತೆಗೆ ಬೆಡ್‌ರೂಮ್ ದೃಶ್ಯಗಳಲ್ಲಿ ನಟಿಸುವೆ ಎಂದುಕೊಂಡಿದ್ದೆ. ಆದರೆ ನಿರ್ದೇಶಕ ಲೋಕೇಶ್ ಕನಕರಾಜ್, ಕನಿಷ್ಠ ಪಕ್ಷ ತ್ರಿಶಾ ಅವರನ್ನೂ ತೋರಿಸಲಿಲ್ಲ. ನಾನು ಈಗಾಗಲೇ ಸಾಕಷ್ಟು ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಆದರೆ, ತ್ರಿಶಾ ಜತೆಗೆ ಇದು ನನಗೆ ಹೊಸದು ಎಂದು ನಾನು ಭಾವಿಸಿದ್ದೆ" ಎಂದು ಮನ್ಸೂರ್ ಅಲಿಖಾನ್ ಹೇಳಿಕೆ ನೀಡಿದ್ದರು.