ಬೆಡ್‌ರೂಂ ಸೀನ್ ಹೇಳಿಕೆ, ತ್ರಿಶಾ ವಿರುದ್ಧವೇ ಮಾನನಷ್ಟ ದೂರು ದಾಖಲಿಸಿದ ಮನ್ಸೂರ್ ಆಲಿ ಖಾನ್‌ಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಮುಖಭಂಗ
Dec 12, 2023 04:25 PM IST
ತ್ರಿಶಾ ವಿರುದ್ಧವೇ ಮಾನನಷ್ಟ ದೂರು ದಾಖಲಿಸಿದ ಮನ್ಸೂರ್ ಆಲಿ ಖಾನ್‌ಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಮುಖಭಂಗ
- ನಟಿ ತ್ರಿಶಾ ವಿರುದ್ಧ ಬೆಡ್‌ರೂಂ ಸೀನ್ ಹೇಳಿಕೆ ನೀಡಿದ್ದ ಮನ್ಸೂರ್ ಆಲಿ ಖಾನ್‌ಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ತೀವ್ರ ಮುಖಭಂಗವಾಗಿದೆ. ಈ ಪ್ರಕರಣದಲ್ಲಿ ಮಾನನಷ್ಟ ದೂರು ದಾಖಲಿಸಬೇಕಿರುವುದು ತ್ರಿಶಾ ಹೊರತು ನೀವಲ್ಲ ಎಂದು ನ್ಯಾಯಮೂರ್ತಿಗಳು ಖಾನ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತ್ರಿಶಾ ವಿರುದ್ಧ ಮಾನನಷ್ಟ ದೂರು ದಾಖಲಿಸಿರುವ ತಮಿಳು ನಟ ಮನ್ಸೂರ್ ಆಲಿ ಖಾನ್‌ರನ್ನು ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, "ಮಾನನಷ್ಟ ದೂರು ದಾಖಲಿಸಬೇಕಿರುವುದು ನೀವಲ್ಲ, ನಿಮ್ಮ ವಿರುದ್ಧ ನಟಿ ತ್ರಿಶಾ ದೂರು ದಾಖಲಿಸಬೇಕು" ಎಂದು ಅಭಿಪ್ರಾಯಪಟ್ಟಿದೆ.
"ತ್ರಿಶಾ ಅವರು ತಮ್ಮ ಬಗ್ಗೆ ನೀಡಿರುವ ಹೇಳಿಕೆಯ ಕುರಿತು ಕೋರ್ಟ್‌ಗೆ ದೂರು ದಾಖಲಿಸಬೇಕಿತ್ತು. ನಟರು ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು ತಿಳಿದಿರಬೇಕು. ಸಾಕಷ್ಟು ಜನರು ನಟರನ್ನು ತಮ್ಮ ರೋಲ್ ಮಾಡೆಲ್‌ಗಳೆಂದು ಪರಿಗನೀಸುತ್ತಾರೆ. ಇಂತಹ ಸಮಯದಲ್ಲಿ ತಮ್ಮ ಮಾತಿನ ಕುರಿತು ಎಚ್ಚರಿಕೆ ವಹಿಸಬೇಕು" ಎಂದು ನ್ಯಾಯಮೂರ್ತಿ ಎನ್. ಸತೀಶ್ ಕುಮಾರ್ ಹೇಳಿದ್ದಾರೆ ಎಂದು ಲೈವ್‌ಲಾ ವರದಿ ಮಾಡಿದೆ.
ಮನ್ಸೂರ್ ಆಲಿ ಖಾನ್ ಇತ್ತೀಚೆಗೆ "ತ್ರಿಶಾ ಜತೆಗೆ ಬೆಡ್‌ರೂಂ ದೃಶ್ಯಗಳು ಇರಲಿಲ್ಲ" ಎಂದು ಕಾಮೆಂಟ್ ಮಾಡಿದ್ದರು. ವಿಜಯ್ ನಟನೆಯ ಲಿಯೋ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಇಂತಹ ಲೈಂಗಿಕ ಕೌರ್ಯದ ಹೇಳಿಕೆ ನೀಡಿದ್ದರು. ಇವರ ಹೇಳಿಕೆ ವೈರಲ್ ಆಗಿತ್ತು. ಇವರ ಮಾತುಗಳನ್ನು ತ್ರಿಶಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಖಂಡಿಸಿದ್ದರು.
"ಮನ್ಸೂರ್ ಆಲಿ ಖಾನ್ ಅವರು ಹಲವು ಬಾರಿ ಇಂತಹ ವಿವಾದಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಮಾಧ್ಯಮದ ಜತೆ ಸಂವಹನ ನಡೆಸುವಾಗ ಎಚ್ಚರಿಕೆವಹಿಸಬೇಕು" ಎಂದು ನ್ಯಾಯಮೂರ್ತಿಗಳು "ಪೊಲೀಸರಿಂದ ಬಂಧನಕ್ಕೆ ಒಳಗಾಗುವುದನ್ನು ಪಾರಾಗಲು ನಟಿಯ ವಿರುದ್ಧವೇ ಮಾನನಷ್ಟ ಪ್ರಕರಣ ದಾಖಲಿಸಲಾಗಿದೆ" ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಖಾನ್ ಪರ ವಕೀಲರು "ಘನತೆವೆತ್ತ ನ್ಯಾಯಾಲಯವು ಖಾನ್ ಅವರ ಹೇಳಿಕೆ ಇರುವ ಸಂಪೂರ್ಣ ವಿಡಿಯೋ ನೋಡಬೇಕು. ಅವರ ಮಾತಿನಲ್ಲಿ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ" ಎಂದು ಹೇಳಿದರು.
ವಿಜಯ್ ನಟನೆಯ ಲಿಯೊ ಸಿನಿಮಾದ ಸಕ್ಸಸ್ ಕಾರ್ಯಕ್ರಮದಲ್ಲಿ ಮಾಧ್ಯಮದವರ ಜತೆ ಮಾತನಾಡುವಾಗ ಮನ್ಸೂರ್ ಆಲಿ ಖಾನ್ ಅವರು "ತ್ರಿಶಾ ಜತೆ ಬೆಡ್‌ರೂಂ ಸೀನ್ ಇಲ್ಲದೆ ಇರುವುದು ನಿರಾಶೆಯಾಯಿತು" ಎಂಬರ್ಥದಲ್ಲಿ ಮಾರನಾಡಿದ್ದರು. ಇವರ ಹೇಳಿಕೆ ಸಾಕಷ್ಟು ಟೀಕೆಗೆ ಒಳಗಾಗಿತ್ತು. ತ್ರಿಶಾ ಇದನ್ನು ಬಲವಾಗಿ ಖಂಡಿಸಿ, ಇನ್ನು ಮುಂದೆ ಈ ನಟ ಇರುವ ಸಿನಿಮಾದಲ್ಲಿ ಪರದೆ ಹಂಚಿಕೊಳ್ಳುವುದಿಲ್ಲ ಎಂದಿದ್ದರು.
ಮನ್ಸೂರ್ ಆಲಿ ಖಾನ್ ವಿರುದ್ಧ ಚೆನ್ನೈ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 354ಎ ಮತ್ತು 509ನಡಿ ದೂರು ದಾಖಲಿಸಿಕೊಂಡಿದ್ದರು. ಮನ್ಸೂರ್ ಆಲಿ ಖಾನ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ, ಪ್ರಕರಣದ ವಿವರಗಳನ್ನು ಕಳೆದುಕೊಂಡಿರುವ ಕಾರಣ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿತ್ತು. ತಾವು ನೀಡಿರುವ ಹೇಳಿಕೆ ಕುರಿತು ಮನ್ಸೂರ್ ಆಲಿ ಖಾನ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರು. ಇವರ ಕ್ಷಮೆಯಾಚನೆಯನ್ನು ತ್ರಿಶಾ ಒಪ್ಪಿ ಮನ್ನಿಸಿದ್ದರು.
ಇದಾದ ಬಳಿಕ ಖಾನ್ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ನಟಿ ತ್ರಿಶಾ, ಖುಷ್ಬೂ ಮತ್ತು ಚಿರಂಜೀವಿ ವಿರುದ್ಧ ಮಾನನಷ್ಟ ಹೇಳಿಕೆ ಪ್ರಕರಣ ದಾಖಲಿಸಿದ್ದರು. ಸತ್ಯ ಏನೆಂದು ಸರಿಯಾಗಿ ಖಚಿತಪಡಿಸಿಕೊಳ್ಳದೆ ಸಾರ್ವಜನಿಕವಾಗಿ ನನ್ನ ವಿರುದ್ಧ ಹೇಳಿಕೆ ನೀಡಲಾಗಿದೆ ಎಂದು ಖಾನ್ ದೂರು ದಾಖಲಿಸಿದ್ದರು.