logo
ಕನ್ನಡ ಸುದ್ದಿ  /  ಕರ್ನಾಟಕ  /  Farming Time : ಹಳ್ಳಿಗಳಲ್ಲಿ ವಡ್ಡೆಂಬ ಸುಗ್ಗಿ ಹಬ್ಬದ ಖುಷಿ, ಈಗ ರಸ್ತೆಗಳೇ ಒಕ್ಕಣೆ ತಾಣ

Farming Time : ಹಳ್ಳಿಗಳಲ್ಲಿ ವಡ್ಡೆಂಬ ಸುಗ್ಗಿ ಹಬ್ಬದ ಖುಷಿ, ಈಗ ರಸ್ತೆಗಳೇ ಒಕ್ಕಣೆ ತಾಣ

Umesha Bhatta P H HT Kannada

Mar 04, 2024 05:41 PM IST

ಸುಗ್ಗಿಯ ಸಮಯ. ರಸ್ತೆಗಳೆಲ್ಲಾ ಒಕ್ಕಣೆಯಿಂದ ಅಯೋಮಯ.

    • ಕೃಷಿಯ ಖುಷಿಯೇ ಬೇರೆ. ಗ್ರಾಮೀಣ ಬದುಕಿನ ಭಾಗವೇ ಆಗಿರುವ ಕೃಷಿಯ ಕಥೆಗಳು ಹಲವು. ಅದರಲ್ಲಿ ಸುಗ್ಗಿಯ ಸಡಗರವೂ ಒಂದು. ಆದರೆ ಸುಗ್ಗಿ ಈಗ ಭಿನ್ನ ರೂಪಿ ತಳೆದಿದೆ. ರಸ್ತೆಗಳೇ ಒಕ್ಕಣೆಯ ಮಾರ್ಗವಾಗಿ ಸುಗ್ಗಿಯೂ ರೂಪಕದಂತೆ ಕಾಣುತ್ತಿದೆ. ಈ ಕುರಿತು ಸಂಜಯ ಹೊಯ್ಸಳ ಅವರ ಲೇಖನ ಇಲ್ಲಿದೆ. 
ಸುಗ್ಗಿಯ ಸಮಯ. ರಸ್ತೆಗಳೆಲ್ಲಾ ಒಕ್ಕಣೆಯಿಂದ ಅಯೋಮಯ.
ಸುಗ್ಗಿಯ ಸಮಯ. ರಸ್ತೆಗಳೆಲ್ಲಾ ಒಕ್ಕಣೆಯಿಂದ ಅಯೋಮಯ.

ನಮ್ಮೂರ ಕಡೆ ಹೊಗೆಸೊಪ್ಪು ಪ್ರಮುಖ ಬೆಳೆಯಾಗುವುದಕ್ಕೂ ಮುನ್ನ ಮಳೆಯಾಶ್ರಿತ ಹೊಲಗಳಲ್ಲಿ ಬೆಳೆಯುತ್ತಿದ್ದ ಪ್ರಮುಖ ಬೆಳೆ ರಾಗಿ. ಆಗ ಈಗಿನಂತೆ ಪ್ರತಿಯೊಬ್ಬರ ಹೊಲಗಳಲ್ಲಿಯೂ ಬೋರ್ ವೆಲ್ ಗಳಿರಲಿಲ್ಲ. ನೀರಾವರಿ ಎಂದರೆ ನದಿ/ಕೆರೆ ನೀರಿನ ವ್ಯವಸ್ಥೆ (ನೇರವಾಗಿ ನೀರು ಬರುವ ದಡಗದ್ದೆ ಮತ್ತು ಪಂಪ್ ಸೆಟ್ ಬಳಸಿ ನೀರು ವ್ಯವಸ್ಥೆ ಮಾಡಿದ ಗದ್ದೆಗಳು) ಇರುವ ಗದ್ದೆಗಳು ಮಾತ್ರ. ಹೊಲ ಮತ್ತು ಗದ್ದೆಗಳ ನಡುವೆ, ಅಲ್ಲಿ ಬೆಳೆಯುವ ಬೆಳೆಗಳ ನಡುವೆ ವ್ಯತ್ಯಾಸ ಇತ್ತು. ಅತಿಯಾದ ಬೋರ್ವೆಲ್ ಗಳ‌ ಪರಿಣಾಮ ಈಗ ಎಲ್ಲವೂ ಗದ್ದೆಗಳೆ!

ಟ್ರೆಂಡಿಂಗ್​ ಸುದ್ದಿ

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಮೊದಲೆ ಹೇಳಿದಂತೆ ಹೊಲಗಳಲ್ಲಿ ರಾಗಿ ಪ್ರಧಾನ ಬೆಳೆ. ಗದ್ದೆಗಳಲ್ಲಿ ಭತ್ತ ಮತ್ತು ಕಬ್ಬು ಮುಖ್ಯ ಬೆಳೆಗಳು. ಹೊಲಗಳಲ್ಲಿ ರಾಗಿ ಬೆಳೆಯುತ್ತಿದ್ದಾಗ ರಾಗಿ ಪೈರಿನ ನಾಟಿ, ಮಾಡುವುದು, ರಾಗಿ ನಾಟಿ ಮಾಡಿದ ಹೊಲಗಳನ್ನು ಕುಂಟೆ ನೇಗಿಲಲ್ಲಿ ಅರಗುವುದು, ರಾಗಿ ಮೇತೆ (ತೆನೆ) ಬಲಿತು ಒಣಗಿದಾಗ, ಕುಡುಗೋಲುಗಳನ್ನು ಕುಲುಮೆಯಲ್ಲಿ ತಟ್ಟಿಸಿ, ಅವಕ್ಕೆ ಅರದಲ್ಲಿ ಗರಗಸದಂತೆ ಹಲ್ಲು ಹಿಡಿಸುವುದು, ರಾಗಿ ಕುಯ್ಲಿನ ಮೊದಲಿಗೆ ಮೊಸರನ್ನಕ್ಕೆ ಬೆಲ್ಲ/ಸಕ್ಕರೆ ಹಾಕಿ ಪ್ರಸಾದ ಮಾಡಿ ಅದನ್ನು ರಾಗಿ ಹೊಲದ ಒಂದು ಕಡೆ ಎಡೆ ಇಟ್ಟು, ಪೂಜಿಸಿ ಕುಯ್ಲು ಕಾರ್ಯ ಆರಂಭಿಸಲಾಗುತ್ತಿತ್ತು.

ರಾಗಿ ಕುಯ್ಯುವಾಗ ಎಳೆ ತೆನೆಯಿರುವ 'ಕೊಂಟ'ನ್ನು ಪ್ರತ್ಯೇಕಿಸಿ ಅದನ್ನು ಮನೆಗೆ ತಂದು ತೆನೆ ಕುಯ್ದು, ರಾಗಿಯ ಹಸಿರು ಹುಲ್ಲನ್ನು ಮನೆಯಲ್ಲಿ ಹಾಲು ಕೊಡುತ್ತಿದ್ದ ಎಮ್ಮೆ ಅಥವಾ ಹಸುವಿಗೆ ಪ್ರಥಮ ಆದ್ಯತೆಯಲ್ಲಿ ಹಾಕುತ್ತಿದ್ದದ್ದು, ರಾಗಿ ಕುಯ್ಲು ಆದ ನಂತರ ಒಂದೆರಡು ದಿನ ತೆನೆ ಹುಲ್ಲನ್ನು ಒಣಗಲು ಬಿಟ್ಟು, ನಂತರ ಚಿಕ್ಕ ಚಿಕ್ಕ ಕಂತೆಗಳಾಗಿ ಅರಿ ಕಟ್ಟುವುದು, ನಂತರ 'ಬಳ್ಳ್ ಗುಡ್ಡೆ' ಎಂಬ ಚಿಕ್ಕ ತಾತ್ಕಾಲಿಕ ಗುಡ್ಡೆಗಳು, ನಂತರ ಎಲ್ಲಾ ಬಳ್ಳ್ ಗುಡ್ಡಗಳನ್ನು ಸೇರಿಸಿ ದೀರ್ಘಕಾಲದ ವರೆಗೆ ಇರುವಂತೆ ದೊಡ್ಡ ಗುಡ್ಡ ಹಾಕಿಸುವುದು. ರಾಗಿ ಬೆಳೆಯ ನಾಟಿಯಿಂದ ಒಕ್ಕಣೆವರೆಗಿನ ಸಾಮಾನ್ಯ ಪ್ರಕ್ರಿಯೆಗಳು. ಸಾಮಾನ್ಯವಾಗಿ ಮುಂಚೆ ರಾಗಿಯನ್ನು ಹೊಲದಲ್ಲಿ ಮೊದಲ ಬೆಳೆಯಾಗಿ ಬೆಳೆದು, ಹುರುಳಿಯನ್ನು ಎರಡನೆ ಬೆಳೆಯಾಗಿ ಬೆಳೆಯುತ್ತಿದ್ದರು.

ಹಾಗಾಗಿ ಎರಡನೆ ಬೆಳೆ ಬರುವ ತನಕ ಹಲವು ತಿಂಗಳು ದೊಡ್ಡ ಗುಡ್ಡಯಲ್ಲಿ ರಾಗಿ ಚೆನ್ನಾಗಿ ಮಾಗುತ್ತಿತ್ತು.ಈಗ ಮೊದಲ ಬೆಳೆಯಲ್ಲಿ ಹೊಗೆಸೊಪ್ಪು, ಕಲ್ಲಂಗಡಿ ಯಂತಹ ವಾಣಿಜ್ಯ ಬೆಳೆಗಳನ್ನು ಬೆಳೆದು ರಾಗಿಯನ್ನು ಎರಡನೆ ಬೆಳೆಯಾಗಿ ಬೆಳೆಯುತ್ತಾರೆ.

ರಾಗಿಯ ವಡ್ಡು ಸಾಮಾನ್ಯವಾಗಿ ಜನವರಿ ಮೊದಲನೆ ವಾರದ ಸಮಯದಲ್ಲಿ ಪ್ರಾರಂಭವಾಗಿ ಫೆಬ್ರವರಿ ತನಕ ನಡೆಯುತ್ತದೆ. ರಾಗಿ ಗುಡ್ಡೆ ಇರುವ ಪಕ್ಕದಲ್ಲೆ ಕಣ ಮಾಡಿ ಒಕ್ಕಣೆ ಕಾರ್ಯ ಪ್ರಾರಂಭಿಸಲಾಗುತ್ತಿತ್ತು. ಮೊದಲೆಲ್ಲಾ ಕೆಳಗಿನ ವಿಡಿಯೋದಲ್ಲಿ ಕಾಣುವಂತೆ ಕೋಲಿನಲ್ಲೆ ರಾಗಿ ಬಡಿಯಲಾಗುತ್ತಿತ್ತು. ಇಲ್ಲಿ 'ವಡ್ಡಿನ ಕೋಲು' ಹೆಸರಿನ ಉದ್ದನೆಯ ಬಿದಿರಿನ ಗಳ (ಕಿರು ಬಿದಿರು) ಗಳಲ್ಲಿ ಎರಡೂ ಕೈ ಬಳಸಿ ನಿಂತುಕೊಂಡೆ ಬಡಿದರೆ, 'ಕಡಿಗೋಲು' (ಕಡಿದಾದ್ದದ್ದು) ಹೆಸರಿನ ಕಡಿಮೆ ಉದ್ದದ ಕೋಲುಗಳಲ್ಲಿ ಒಂದೆ ಕಯ್ಯಲ್ಲಿ ಕುಳಿತೇ ಬಡಿಯಲಾಗುತ್ತಿತ್ತು. ಬಡಿಯುವ ವ್ಯವಸ್ಥೆ ಬಿಟ್ಟರೆ ಗುಂಡು ಕಲ್ಲನ್ನು ಜೋಡೆತ್ತು/ ಹಸುಗಳಲ್ಲಿ ಒಡ್ಡಿನ ಮೇಲೆ ಹಲವಾರು ಸುತ್ತು ಸುತ್ತಿಸುವ ವ್ಯವಸ್ಥೆ. ಆನಂತರ ಟ್ರಾಕ್ಟರ್ ಗಳು (ಇಂಜಿನ್ ಮಾತ್ರ)ಗಳನ್ನು ಬಳಸಿ ಒಡ್ಡು ಬಡಿಯಲಾಗುತ್ತಿತ್ತು.

ವಡ್ಡು ಬಡಿಯುವಷ್ಟು ದಿನ ರಾಗಿಗುಡ್ಡಯ ಕೆಳಗೆ ಕಲ್ಲು ಹಾಕಿ ನಿರ್ಮಿಸಿದ್ದ ಅಟ್ಟಣೆಯಲ್ಲಿ, ಮುಂಜಾನೆಯೇ ಮನೆಯ ನಾಟಿ ಕೋಳಿಗಳನ್ನು ಚೀಲಗಳಲ್ಲಿ ತೆಗೆದುಕೊಂಡು ಹೋಗಿ ಬಿಟ್ಟು, ಸಂಜೆಯಾದ ನಂತರ ಅವನ್ನು ವಾಪಸ್ಸು ಮನೆಗೆ ತರುತ್ತಿದ್ದನ್ನು ಚಿಕ್ಕ ಮಕ್ಕಳಾಗಿದ್ದ ನಮಗೆ ಅತಿ ಖುಷಿ ನೀಡುತ್ತಿದ್ದ ಚಟುವಟಿಕೆಯಾಗಿತ್ತು. ರಾಗಿ ಬಡಿದಾಗ ಬರುವ "ಉಬ್ಲು" ಹಲವು ದಿನಗಳ ಕಾಲ ದನ- ಎಮ್ಮೆ ಗಳಿಗೆ ಒಳ್ಳೆಯ ಮೇವಾಗುತ್ತಿತ್ತು. ಈ‌ ಉಬ್ಲನ್ನು ನಾವು ಹೊಲಗಳಲ್ಲಿ ನೆಟ್ಟಿದ್ದ ಆಲದ ಕೊನೆಗಳು, ಮಾವು- ಹಲಸಿನ ಸಸಿಗಳ ಬುಡಕ್ಕೆ ಹಾಕಿ ಬೇಸಿಗೆಯ ಹಾಕುತ್ತಿದ್ದ ನೀರಿನ ತೇವ ಬುಡದಲ್ಲಿ ಹೆಚ್ಚು ಸಮಯ ಇರಲೆಂದು ವ್ಯವಸ್ಥೆ ಮಾಡುತ್ತಿದ್ದವು‌. ಈ ವ್ಯವಸ್ಥೆಗೆ ಕೃಷಿ ವಿಜ್ಞಾನದಲ್ಲಿ ಮಲ್ಚಿಂಗ್ ಎನ್ನುತ್ತಾರೆಂದು ನಂತರದ ದಿನಗಳಲ್ಲಿ ತಿಳಿಯಿತು.

ಈಗ ವ್ಯವಸ್ಥೆ ಪೂರ್ಣ ಬದಲಾಗಿದೆ. ಮೊದಲೆ ಹೇಳಿದಂತೆ ಹೊಲ-ಗದ್ದೆಗಳ‌ ನಡುವೆ ವ್ಯತ್ಯಾಸ ಇಲ್ಲವಾಗಿದೆ. ರಾಗಿ ಬಹುತೇಕ ಕಡೆ ಎರಡನೇ ಬೆಳೆಗೆ ಹಿಂಬಡ್ತಿ ಪಡೆದಿದೆ. ರಾಗಿ ಒಕ್ಕಣೆ ಕಣದಿಂದ ನಡು ರಸ್ತೆಗೆ, ಯಂತ್ರಕ್ಕೆ ವರ್ಗಾವಣೆಯಾಗಿದೆ.

-ಸಂಜಯ್‌ ಹೊಯ್ಸಳ, ಮೈಸೂರು

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ