Anna Bhagya: ಬಡವರಿಗಾಗಿ ರೂಪಿಸಿರುವ ಉಚಿತ ಅಕ್ಕಿ ಕಾರ್ಯಕ್ರಮಕ್ಕೆ ಸ್ಪಂದಿಸದ ಬಿಜೆಪಿ ನಾಯಕರು; ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್
Jun 28, 2023 10:40 PM IST
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (ಬಲಕ್ಕೆ), ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ (ಎಡಕ್ಕೆ) (ಕಡತ ಚಿತ್ರ)
Anna Bhagya: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯದ ಅಕ್ಕಿ ಕೊಡುವ ಕಾರ್ಯಕ್ರಮ ಬಡವರಿಗಾಗಿ ರೂಪಿಸಿರುವಂಥದ್ದು. ಅದಕ್ಕೆ ರಾಜ್ಯದ ಬಿಜೆಪಿ ನಾಯಕರು ಕೈ ಜೋಡಿಸುತ್ತಿಲ್ಲ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Govt) ಜಾರಿಗೊಳಿಸಿರುವ ಅನ್ನಭಾಗ್ಯ (Anna Bhagya) ದ ಅಕ್ಕಿ ಕೊಡುವ ಕಾರ್ಯಕ್ರಮ ಬಡವರಿಗಾಗಿ ರೂಪಿಸಿರುವಂಥದ್ದು. ಅದಕ್ಕೆ ರಾಜ್ಯದ ಬಿಜೆಪಿ ನಾಯಕರು ಕೈ ಜೋಡಿಸುತ್ತಿಲ್ಲ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸರಣಿ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂ.28ರಂದು ಸರಣಿ ಟ್ವೀಟ್ ಮಾಡಿದ್ದು, 5 ಕೆ.ಜಿ ಅಕ್ಕಿ ಕೊಡಿ, ಉಳಿದ 5 ಕೆ.ಜಿ ಅಕ್ಕಿ ಕೊಡಲು ಆಗದಿದ್ರೆ ಹಣ ಕೊಡಿ ಎಂದು ನಮಗೆ ಬಿಟ್ಟಿ ಉಪದೇಶ ನೀಡುವ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಮುಂತಾದ ಬಿಜೆಪಿ ನಾಯಕರು ಒಂದು ಬಾರಿಯೂ ಇದು ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮ, ಕರ್ನಾಟಕಕ್ಕೆ ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿಲ್ಲ ಎಂದು ಆರೋಪಿಸಿದ್ದಾರೆ.
ಇದು ರಾಜ್ಯ ಬಿಜೆಪಿ ನಾಯಕರ ನೈಜ ಮುಖ. ಅವರಿಗೆ ಬಡವರಿಗೆ ಅಕ್ಕಿ ನೀಡುವುದಕ್ಕಿಂತ ಅನ್ನಭಾಗ್ಯ ಕಾರ್ಯಕ್ರಮ ಜಾರಿಯಾಗಬಾರದು ಎಂಬುದರಲ್ಲೇ ಹೆಚ್ಚು ಖುಷಿ ಸಿಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ನಾನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದೆ, ಮುನಿಯಪ್ಪ ಅವರು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿ ಅಕ್ಕಿ ನೀಡುವಂತೆ ಮನವಿ ಮಾಡಿದ್ದೆವು. ಎನ್.ಸಿ.ಸಿ.ಎಫ್, ನಫೆಟ್ ಹಾಗೂ ಕೇಂದ್ರೀಯ ಭಂಡಾರಗಳನ್ನು ಸಂಪರ್ಕಿಸಿದ್ದೆವು. ಅವರು ಕೂಡ ಹೆಚ್ಚು ಬೆಲೆ ನಮೂದಿಸಿದರು. ಆದ್ದರಿಂದ ನಾವು ಮುಕ್ತ ಮಾರುಕಟ್ಟೆ ಮೂಲಕ ಟೆಂಡರ್ ಕರೆಯಲು ನಿರ್ಧರಿಸಿದ್ದೇವೆ.
ನಾವು ಜುಲೈ ಒಂದರಿಂದ ಬಡವರಿಗೆ 10 ಕೆ.ಜಿ ಆಹಾರಧಾನ್ಯ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದೆವು. ನಮಗೆ ಹೆಚ್ಚುವರಿಯಾಗಿ 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿರುವುದರಿಂದ ಇಷ್ಟು ಪ್ರಮಾಣದ ಅಕ್ಕಿಯನ್ನು ಬೇರೆ ರಾಜ್ಯಗಳು ನೀಡಲು ಸಿದ್ಧವಿಲ್ಲವರುವುದರಿಂದ ನಾವು ಮುಕ್ತ ಮಾರುಕಟ್ಟೆ ಮೂಲಕ ಟೆಂಡರ್ ಕರೆದು ಅಕ್ಕಿ ಪೂರೈಕೆಯಾಗುವ ವರೆಗೆ 5 ಕೆ.ಜಿ ಅಕ್ಕಿಯ ಬದಲಿಗೆ ಪ್ರತಿ ಕೆ.ಜಿ ಗೆ ರೂ.34 ನಂತೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆ.
ನಾವು ನೀಡಿದ್ದ ವಾಗ್ದಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸರ್ಕಾರದ ನಡೆ ಪಾರದರ್ಶಕವಾಗಿರಲಿ ಎಂದು ಮುಕ್ತ ಮಾರುಕಟ್ಟೆ ಮೂಲಕ ಟೆಂಡರ್ ಕರೆದು ಅಕ್ಕಿ ಖರೀದಿಸಿ ಮುಂದಿನ ದಿನಗಳಲ್ಲಿ ತಲಾ 10 ಕೆ.ಜಿ ಅಕ್ಕಿಯನ್ನು ವಿತರಿಸುತ್ತೇವೆ. ಈ ಪ್ರಕ್ರಿಯೆಗೆ ಕೆಲ ಸಮಯ ಬೇಕಿರುವುದರಿಂದ ಜುಲೈ ಒಂದರಿಂದ ಹೆಚ್ಚುವರಿಯಾಗಿ ನೀಡಲು ಉದ್ದೇಶಿಸಿರುವ 5 ಕೆ.ಜಿ ಅಕ್ಕಿಯ ಬದಲಿಗೆ ತಲಾ ರೂ.170 ನಂತೆ ಹಣ ನೀಡುತ್ತೇವೆ ಎಂದು ಅವರು ಟ್ವೀಟ್‌ನಲ್ಲಿ ವಿವರಿಸಿದ್ದಾರೆ.
ಅನ್ನಭಾಗ್ಯ ಸಂಬಂಧಿತ ಸುದ್ದಿಗಳು
Anna Bhagya: ಅಕ್ಕಿಯ ಬದಲು ಹಣ ನೀಡಲು ಕರ್ನಾಟಕ ಸರ್ಕಾರ ನಿರ್ಧಾರ; ಸಚಿವ ಸಂಪುಟ ಸಭೆ ತೀರ್ಮಾನ
Anna Bhagya Politics: ಬಿಜೆಪಿಯಿಂದ ಕರ್ನಾಟಕಕ್ಕೆ ದ್ರೋಹ; ಡಿಕೆ ಶಿವಕುಮಾರ್ ಆಕ್ರೋಶ