logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Crime: ಆನ್‌ಲೈನ್‌ನಲ್ಲಿ ಹೂಡಿಕೆ 5 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ; ಮುಳುವಾದ ದುಪ್ಪಟ್ಟು ಲಾಭ ಗಳಿಸಿ ಸಂದೇಶ

Bangalore Crime: ಆನ್‌ಲೈನ್‌ನಲ್ಲಿ ಹೂಡಿಕೆ 5 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ; ಮುಳುವಾದ ದುಪ್ಪಟ್ಟು ಲಾಭ ಗಳಿಸಿ ಸಂದೇಶ

Umesha Bhatta P H HT Kannada

May 07, 2024 04:27 PM IST

google News

ಬೆಂಗಳೂರಲ್ಲಿ ಭಾರೀ ಆನ್‌ಲೈನ್‌ ವಂಚನೆ ಪ್ರಕರಣ ದಾಖಲಾಗಿದೆ.

    • ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರು ಹಣದಾಸೆಗೆ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಲು ಹೋಗಿ ಭಾರೀ ಹಣ ಕಳೆದುಕೊಂಡಿದ್ದಾರೆ. 
    • ವರದಿ: ಎಚ್‌.ಮಾರುತಿ, ಬೆಂಗಳೂರು
ಬೆಂಗಳೂರಲ್ಲಿ ಭಾರೀ ಆನ್‌ಲೈನ್‌ ವಂಚನೆ ಪ್ರಕರಣ ದಾಖಲಾಗಿದೆ.
ಬೆಂಗಳೂರಲ್ಲಿ ಭಾರೀ ಆನ್‌ಲೈನ್‌ ವಂಚನೆ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಆನ್ ಲೈನ್ ಮೂಲಕ ಹೂಡಿಕೆ ಮಾಡಿ ನೂರಾರು ಮಂದಿ ಕೋಟಿಕೋಟಿ ಹಣ ಕಳೆದುಕೊಂಡಿರುವ ಸುದ್ದಿಗಳು ದಿನನಿತ್ಯ ಪ್ರಕಟವಾಗುತ್ತಿದ್ದರೂ ಮೋಸದ ಬಲೆಗೆ ಬೀಳುವ ಕೋಟ್ಯಾಧಿಪತಿ ಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಹಣ ದುಪ್ಪಟ್ಟಾಗುತ್ತದೆ ಎಂಬ ಸಂದೇಶವನ್ನು ನೆಚ್ಚಿಕೊಂಡು ಬೆಂಗಳೂರಿನ ಉದ್ಯಮಿಯೊಬ್ಬರು 5.17 ಕೋಟಿ ಕಳೆದುಕೊಂಡಿರುವ ಪ್ರಕರಣ ಹೀಗಿದೆ. ಇದು ನಡೆದಿರುವುದು ಬೆಂಗಳೂರಿನಲ್ಲಿ. ಹಣದಾಸೆಗೆ ಇರುವ ಹಣವನ್ನೂ ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ. ಈ ಕುರಿತು ಬೆಂಗಳೂರಿನ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆಗಿದ್ದೇನು?

ಈ ಉದ್ಯಮಿಗೆ ಕಡಿಮೆ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಿ ಎಂಬ ಸಂದೇಶ ಅಪರಿಚಿತ ಸಂಖ್ಯೆಯಿಂದ ಲಿಂಕ್ ಬಂದಿರುತ್ತದೆ. ವಾಟ್ಸ್‌ಆ್ಯಪ್‌ ಮೂಲಕ ಬಂದ ಈ ಮೆಸೇಜ್ ನಲ್ಲಿ ಹೂಡಿಕೆ ಕುರಿತು ಮಾಹಿತಿ ನೀಡಿದ್ದರು. ಉದ್ಯಮಿಯು ಲಿಂಕ್ ಒತ್ತಿದ್ದರು. ಆದರೆ, ಯಾವುದೇ ಜಾಲತಾಣ ತೆರೆದುಕೊಂಡಿರಲಿಲ್ಲ. ಆದರೆ ಸ್ವಲ್ಪ ಸಮಯದ ಬಳಿಕ ವಾಟ್ಸ್‌ಆ್ಯಪ್ ಗ್ರೂಪ್‌ವೊಂದರಲ್ಲಿ ಅವರ ನಂಬರ್ ಸೇರ್ಪಡೆ ಮಾಡಲಾಗಿತ್ತು. ಈ ಗ್ರೂಪ್‌ನಲ್ಲಿ ಇದ್ದ ಇತರರು ಮೆಸೇಜ್ ಹಾಕುತ್ತಾ ಇಂದು ನನಗೆ ದುಪ್ಪಟ್ಟು ಲಾಭ ಬಂದಿತು, ಮೂರು ಪಟ್ಟು ಲಾಭ ಹೆಚ್ಚಾಗಿ ಬಂತು ಎಂದು ಪೋಸ್ಟ್ ಮಾಡುತ್ತಿದ್ದರು. ಗ್ರೂಪ್‌ನಲ್ಲಿ ಇರುವ ಸದಸ್ಯರು ಹಣ ಹೂಡಿಕೆ ಮಾಡಿ ಲಾಭ ಗಳಿಸುತ್ತಿದ್ದಾರೆ ಎಂದು ಉದ್ಯಮಿ ನಂಬಿದ್ದರು.

ಕರೆ ಮಾಡಿ ಮೋಸ

ಮತ್ತೆ ಸ್ವಲ್ಪ ಸಮಯದ ನಂತರ ಗ್ರೂಪ್‌ನಲ್ಲಿದ್ದ ಮೂವರು ಅಪರಿಚಿತರು ಕರೆ ಮಾಡಿ ಕಡಿಮೆ ಹಣ ಹೂಡಿಕೆ ಮಾಡಿದರೆ, ಹೆಚ್ಚು ಲಾಭ ಬರುತ್ತದೆ. ಆದ್ದರಿಂದ ನೀವು ಇಂದೇ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಿ ಎಂದು ಸಲಹೆ ನೀಡಿದರು ಎಂದು ಉದ್ಯಮಿಯು ಪೊಲೀಸರಿಗೆ ಹೇಳಿದ್ದಾರೆ.

ಇವರು ಕಳುಹಿಸಿದ ಆ್ಯಪ್ ಲಿಂಕ್ ಇನ್ ಸ್ಟಾಲ್ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಹೂಡಿಕೆ ಹಾಗೂ ಲಾಭದ ಮಾಹಿತಿಯನ್ನು ಆ್ಯಪ್‌ನಲ್ಲಿ ನೋಡಲು ಸಾಧ್ಯವಾಗುತ್ತಿತ್ತು. ಹೂಡಿಕೆ ಮಾಡಿದ್ದ ಹಣಕ್ಕೆ ಲಾಭ ಬಂದಿದೆ ಎಂದು ಅನೇಕ ಸದಸ್ಯರು ಗ್ರೂಪ್ ನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದರು. ಇವರ ಮಾತನ್ನು ನಂಬಿ ನಾನು ಹಣ ಹೂಡಿಕೆ ಮಾಡುತ್ತಾ ಹೋದೆ. ಲಾಭ ಬಂದಿದೆ ಎಂದು ಆ್ಯಪ್‌ನಲ್ಲಿ ತೋರಿಸಲಾಗುತ್ತಿತ್ತು. ಆದರೆ ಲಾಭದ ಹಣವನ್ನು ವಾಪಸು ಪಡೆಯಲು ಪ್ರಯತ್ನಿಸಿದಾಗ ಲಾಭದ ಹಣವನ್ನು ಪುನಃ ಹೂಡಿಕೆ ಮಾಡಿ ನಿಮಗೆ ಮತ್ತಷ್ಟು ಲಾಭ ಬರುತ್ತದೆ ಎಂದು ಆರೋಪಿಗಳು ಪುಸಲಾಯಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಂತ ಹಂತವಾಗಿ ಹಣ ಹಾಕಿದರು

ಇವರ ಮಾತುಗಳನ್ನು ನಂಬಿಕೊಂಡು ಹಂತ ಹಂತವಾಗಿ 5.17 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಹೂಡಿಕೆ ಹಣವನ್ನು ಹಿಂಪಡೆಯಲು ಆ್ಯಪ್‌ನಲ್ಲಿ ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ದೂರವಾಣಿ ಕರೆ ಮಾಡಿದರೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ತಾನು ಮೋಸ ಹೋಗಿರುವುದು ಆಗ ಗೊತ್ತಾಯಿತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೈಬರ್ ವಂಚಕರ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಕರೆ ಮಾಡಿದ್ದ ಮೊಬೈಲ್ ನಂಬರ್ ಮತ್ತು ಮೊಬೈಲ್ ಖಾತೆಗಳ ವಿವರ ನೀಡಿದ್ದಾರೆ. ಅವುಗಳನ್ನು ಆಧರಿಸಿ ಪ್ರಕರರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೇಲ್ನೋಟಕ್ಕೆ ಇದು ಹೊರ ರಾಜ್ಯದ ವಂಚಕರ ಜಾಲ ಎನ್ನುವುದು ತಿಳಿದು ಬಂದಿದೆ. ಜನರಿಗೆ ಲಾಭದ ಆಮಿಷವೊಡ್ಡಿ ವಂಚಿಸುವ ಜಾಲ ಇದಾಗಿದೆ. ದೂರುದಾರ ಉದ್ಯಮಿಯ ಬ್ಯಾಂಕ್ ಖಾತೆ ಮತ್ತು ಹಣ ವರ್ಗಾವಣೆಯ ವಿವರಗಳನ್ನು ಸಂಗ್ರಹಿಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತನಿಖೆಯ ನೇತೃತ್ವ ವಹಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ