logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರು ನೀರಿನ ಟ್ಯಾಂಕರ್ ಗಳ ಮೇಲೆ ಹದ್ದಿನ ಕಣ್ಣಿಟ್ಟ ಚುನಾವಣಾ ಆಯೋಗ, ಉಚಿತ ಸರಬರಾಜು ಮಾಡಿದರೆ ಕ್ರಮದ ಎಚ್ಚರಿಕೆ

Bangalore News: ಬೆಂಗಳೂರು ನೀರಿನ ಟ್ಯಾಂಕರ್ ಗಳ ಮೇಲೆ ಹದ್ದಿನ ಕಣ್ಣಿಟ್ಟ ಚುನಾವಣಾ ಆಯೋಗ, ಉಚಿತ ಸರಬರಾಜು ಮಾಡಿದರೆ ಕ್ರಮದ ಎಚ್ಚರಿಕೆ

Umesha Bhatta P H HT Kannada

Mar 19, 2024 02:36 PM IST

google News

ಬೆಂಗಳೂರು ಟ್ಯಾಂಕರ್‌ ನೀರು ಸರಬರಾಜಿನ ಮೇಲೆ ಚುನಾವಣೆ ಆಯೋಗ ಕಣ್ಣಿಟ್ಟಿದೆ.

    • ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಮಿತಿ ಮೀರಿದೆ. ಇದರ ನಡುವೆ ಲೋಕಸಭೆ ಚುನಾವಣೆ ಗದ್ದಲ. ಜನರಿಗೆ ಉಚಿತವಾಗಿ ನೀರು ನೀಡಿ ಆಮಿಷ ಒಡ್ಡುವವರ ಮೇಲೆ ಚುನಾವಣೆ ಆಯೋಗ ಗಮನವಿಟ್ಟಿದೆ.
    • (ವರದಿ: ಎಚ್‌. ಮಾರುತಿ. ಬೆಂಗಳೂರು)
ಬೆಂಗಳೂರು ಟ್ಯಾಂಕರ್‌ ನೀರು ಸರಬರಾಜಿನ ಮೇಲೆ ಚುನಾವಣೆ ಆಯೋಗ ಕಣ್ಣಿಟ್ಟಿದೆ.
ಬೆಂಗಳೂರು ಟ್ಯಾಂಕರ್‌ ನೀರು ಸರಬರಾಜಿನ ಮೇಲೆ ಚುನಾವಣೆ ಆಯೋಗ ಕಣ್ಣಿಟ್ಟಿದೆ.

ಬೆಂಗಳೂರು: ಚುನಾವಣೆ ಘೋಷಣೆಯಾದ ನಂತರ ನೀರು ಸರಬರಾಜು ಮಾಡುವ ಟ್ಯಾಂಕರ್ ಗಳ ಮೇಲೆ ನಿಗಾ ವಹಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಮತದಾರರ ಮೇಲೆ ಪ್ರಭಾವ ಬೀರಲು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿ ನೀರು ಸರಬರಾಜು ಮಾಡುತ್ತಿದ್ದರೆ ಕ್ರಮ ಜರುಗಿಸಲು ಮುಂದಾಗಿದೆ. ಸರಕಾರ ನೀರಿನ ಟ್ಯಾಂಕರ್ ಗಳನ್ನು ನಿಯಂತ್ರಣಕ್ಕೊಳಪಡಿಸಿದ್ದರೂ ಚುನಾವಣಾ ಆಯೋಗವು ಹದ್ದಿನ ಕಣ್ಣಿಡಲಿದೆ. ಒಂದು ವೇಳೆ ದುರುಪಯೋಗವಾಗುವುದು ಕಂಡು ಬಂದಲ್ಲಿ 1950 ನಂಬರ್ ಗೆ ಕರೆ ಮಾಡಲು ಅಥವಾ ದೂರು ಸಲ್ಲಿಸಲು ಆಯೋಗ ಕೋರಿದೆ.

ಇನ್ನು ಟ್ಯಾಂಕರ್ ಗಳನ್ನು ನಿಯಂತ್ರಣಕ್ಕೊಳಪಡಿಸಿ ಪ್ರತಿ ಟ್ಯಾಂಕರ್ ನೀರಿಗೆ ದರವನ್ನು ನಿಗದಿಪಡಿಸಿ ಸರಕಾರ ಆದೇಶ ಹೊರಡಿಸಿದೆ.

ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಲ ಮಂಡಳಿ, ಬಿಬಿಎಂಪಿ ಸರಣಿ ಸಭೆಗಳನ್ನು ನಡೆಸಿ ಟ್ಯಾಂಕರ್ ಮಾಫಿಯಾ ನಿಯಂತ್ರಿಸಲು ಕ್ರಮ ಕೈಗೊಂಡಿವೆಯಾದರೂ ವಾಸ್ತವದಲ್ಲಿ ಗ್ರಾಹಕರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಸರಕಾರ ನಿಗದಿಪಡಿಸಿದ ದರಕ್ಕೆ ನೀರು ಸರಬರಾಜು ಮಾಡುತ್ತಿಲ್ಲ.

ಒಂದಿಲ್ಲೊಂದು ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ. ದಾಸರಹಳ್ಳಿಯ ಮನೆಯೊಂದಕ್ಕೆ ನೀರು ಬೇಕು ಎಂದರೆ ಟ್ಯಾಂಕರ್ ನವರು ನಾವು ಆ ಪ್ರದೇಶದವರಲ್ಲ ಎಂದು ಸಬೂಬು ಹೇಳುತ್ತಾರೆ. ಅವರು ನಿಗಧಿಪಡಿಸಿದ ದರ ನೀಡಿದರೆ ತಕ್ಷಣವೇ ನೀರು ಪೂರೈಕೆಯಾಗುತ್ತದೆ.

ಟ್ಯಾಂಕರ್ ನವರು ಹೇಳಿದ ದರಕ್ಕೆ ಒಪ್ಪಿಕೊಂಡರೆ ನೀರು ಸಿಗುತ್ತದೆ. ಗ್ರಾಹಕರಿಗೆ ದೂರು ನೀಡುವುದು, ಬಿಬಿಎಂಪಿ, ಜಲಮಂಡಳಿ ಕಚೇರಿಗೆ ಅಲೆಯುವುದಕ್ಕಿಂತ ನೀರು ಸಿಕ್ಕರೆ ಸಾಕು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅವರು ಕೇಳಿದಷ್ಡು ಕೊಟ್ಟು ನೀರು ಪಡೆದುಕೊಳ್ಳುತ್ತಿದ್ದಾರೆ. ಸರಕಾರದ ಕ್ರಮಗಳೆಲ್ಲವೂ ಪೇಪರ್ ಗಳ ಮೇಲಿವೆಯಷ್ಟೇ ಹೊರತು ಗ್ರಾಹಕರಿಗೆ ಕಿಂಚಿತ್ತೂ ಪ್ರಯೋಜನವಾಗುತ್ತಿಲ್ಲ.

ಟ್ಯಾಂಕರ್ ಗಳನ್ನು ನೋಂದಣಿ ಮಾಡಿಸಿದ್ದಾರೆ. ಸ್ಟಿಕರ್ ಗಳನ್ನೂ ಹಾಕಿದ್ದಾರೆ. ಆದರೆ ಮಾಫಿಯಾ ಎಂದಿನಂತೆ ಮುಂದುವರೆದಿದೆ. ಜಲಮಂಡಲಿಯ ಕಾಲ್ ಸೆಂಟರ್ ಗೆ ಕರೆ ಮಾಡಿದರೆ ಅಲ್ಲಿನ ನೌಕರರು ಇಂಜಿನಿಯರ್ ಗೆ ಕರೆ ಮಾಡಲು ಹೇಳುತ್ತಾರೆ. ಇಂಜಿನಿಯರ್ ಕರೆಯನ್ನೇ ಸ್ವೀಕರಿಸುವುದಿಲ್ಲ. ಅಲ್ಲಿಯವರೆಗೂ ನೀರಿಲ್ಲದೆ ಇರಲು ಸಾಧ್ಯವೇ ಎಂದು ನಾಗರೀಕರು ಪ್ರಶ್ನಿಸುತಾರೆ.

ಟ್ಯಾಂಕರ್ ಮಾಫಿಯಾ ಪುಡಿ ರಾಜಕಾರಣಿಗಳ ಹಿಡಿತದಲ್ಲಿದೆ. ಟ್ಯಾಂಕರ್ ಗಳ ಮಾಲೀಕರನ್ನು ರಕ್ಷಿಸಲು ಇವರು ಕೆಲಸ ಮಾಡುತ್ತಾರೆ. ಸ್ಥಳೀಯ ಪೊಲೀಸರು, ಜಲಮಂಡಲಿ ಮತ್ತು ಬಿಬಿಎಂಪಿ ಜೊತೆ ಬಾಂಧವ್ಯ ಸಾಧಿಸಿದ್ದು ಟ್ಯಾಂಕರ್ ಗಳ ಮಾಲೀಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಬ್ದಾರಿ ಇವರದ್ದು. ಇದಕ್ಕಾಗಿ ಅವರು ವಂತಿಗೆ ಪಡೆಯುತ್ತಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ.

ಟ್ಯಾಂಕರ್ ಮಾಲೀಕರು ನೀರು ಪೂರೈಕೆ ಮಾಡದಿದ್ದರೆ ಟ್ಯಾಂಕರ್ ಗಳನ್ನು ಜಪ್ತಿ ಮಾಡುತ್ತೇವೆ, ಕ್ರಮ ಕೈಗೊಳ್ಳುತ್ತೇವೆ ಎಂದು ಕಚೇರಿಗಳಲ್ಲಿ ಕುಳಿತು ಅಧಿಕಾರಿಗಳು ಹೇಳಿಕೆ ನೀಡುತ್ತಾರೆ. ನೀರು ಪೂರೈಕೆ ಮಾಡಲು ಒಪ್ಪದಿದ್ದರೆ ಬಿಬಿಎಂಪಿಯ 1533 ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಿದರೆ ವಲಯ ಆಯುಕ್ತರು ಕ್ರಮ ಕೈಗೊಳ್ಳುತ್ತಾರೆ ಎಂದು ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಸುರೋಳ್ಕರ್ ಹೇಳುತ್ತಾರೆ.

ಇವರು ಕ್ರಮ ಕೈಗೊಂಡು ನೀರು ಸರಬರಾಜು ಆಗುವವರೆಗೂ ಏನು ಮಾಡಬೇಕು ಎಂಬ ಪ್ರಶ್ನೆಗೆ ಇವರ ಬಳಿ ಉತ್ತರ ಇರುವುದಿಲ್ಲ.

ಬೆಂಗಳೂರಿನಲ್ಲಿ 3500 ಖಾಸಗಿ ನೀರಿನ ಟ್ಯಾಂಕರ್ ಗಳಿವೆ. ಇವುಗಳಲ್ಲಿ 1792 ಅನ್ನು ನೋಂದಣಿ ಮಾಡಲಾಗಿದೆ. ನೋಂದಣಿಗೆ ಗಡುವು ಮುಗಿದಿದ್ದರೂ ಶೇ.ಅರ್ಧದಷ್ಟು ಮಾತ್ರ ನೋಂದಣಿ ಮಾಡಿಕೊಂಡಿವೆ. ಉಳಿದ ಟ್ಯಾಂಕರ್ ಗಳನ್ನು ಜಪ್ತಿ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಲಾಗಿತ್ತಾದರೂ ಇದುವರೆಗೂ ಒಂದೇ ಒಂದು ಟ್ಯಾಂಕರ್ ಜಪ್ತಿ ಮಾಡಿರುವ ಉದಾಹರಣೆಯಿಲ್ಲ.

ಇದು ಟ್ಯಾಂಕರ್ ಮಾಫಿಯಾ ಇನ್ನೂ ಸಕ್ರಿಯವಾಗಿರುವುದನ್ನು ತೋರಿಸುತ್ತದೆ. ಟ್ಯಾಂಕರ್ ಮತ್ತು ಬೋರ್ ವೆಲ್ ಗಳನ್ನು ಸರಕಾರ ವಶಕ್ಕೆ ಪಡೆದು ಬಿಬಿಎಂಪಿ ಮತ್ತು ಜಲಮಂಡಳಿಯಿಂದಲೇ ನೀರು ಪೂರೈಕೆಯಾದರೆ ಮಾತ್ರ ಸಾರ್ವಜನಿಕರಿಗೆ ಪ್ರಯೋಜನವಾಗುತ್ತದೆ ಎಂಬ ಅಭಿಪ್ರಾಯವಿದೆ.

(ವರದಿ: ಎಚ್.ಮಾರುತಿ, ಬೆಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ