Hassan News: ಭಾರೀ ಮಳೆಗೆ ತುಂಬಿದ್ದ ಕೆರೆಯಲ್ಲಿ ಈಜಲು ಹೋದ ನಾಲ್ವರು ಗೆಳೆಯರ ಸಾವು, ಹಾಸನ ಜಿಲ್ಲೆಯಲ್ಲಿ ದುರ್ಘಟನೆ
May 16, 2024 05:25 PM IST
ಕೆರೆಯಲ್ಲಿ ಈಜಲು ಹೋದ ಬಾಲಕರು
- ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಬಾಲಕರು ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯಲ್ಲಿ ವರದಿಯಾಗಿದೆ.
ಹಾಸನ: ಬೇಸಿಗೆ ರಜೆಯ ಸಮಯ, ಮಕ್ಕಳಿಗೆ ನೀರಿನಲ್ಲಿ ಆಟವಾಡುವ ಉಮೇದು. ಈ ಬಾರಿ ಬರದ ಕಾರಣಕ್ಕೆ ನಾಲೆಗಳಲ್ಲಿ ನೀರಿಲ್ಲ. ಕೆರೆಗಳಲ್ಲೂ ನೀರು ತಗ್ಗಿದೆ. ಆದರೆ ಇತ್ತೀಚಿಗೆ ಸುರಿದಿರುವ ಮಳೆಯಿಂದ ಕೆರೆಗಳೂ ತುಂಬಿವೆ. ಭರ್ಜರಿ ಮಳೆಯಿಂದ ತುಂಬಿದ್ದ ಕೆರೆಯಲ್ಲಿ ಈಜಲು ಹೋದ ನಾಲ್ವರು ಬಾಲಕರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆಯಿದು. ಇದು ನಡೆದಿರುವುದು ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕದಾಳು ಸಮೀಪದ ಮುತ್ತಿಗೆ ಎನ್ನುವ ಗ್ರಾಮದಲ್ಲಿ. ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ನಾಲ್ವರ ಶವಗಳನ್ನೂ ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ನಾಲ್ವರು ಮಕ್ಕಳ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಮೃತಪಟ್ಟವರನ್ನು ಮುತ್ತಿಗೆ ಗ್ರಾಮದವರಾದ ಜೀವನ್(13), ಹಾಗೂ ಪೃಥ್ವಿ (12), ವಿಶ್ವ(12) ಹಾಗೂ ಸಾತ್ವಿಕ್(11) ಎಂದು ಗುರುತಿಸಲಾಗಿದೆ. ಎಲ್ಲರೂ ಏಳು ಹಾಗೂ ಎಂಟನೇ ತರಗತಿಯಲ್ಲಿ ಓದುತ್ತಿದ್ದವರು. ಅಕ್ಕಪಕ್ಕದ ಮನೆಯವರು. ರಜೆ ಇರುವುದರಿಂದ ಆಟದಲ್ಲಿ ತೊಡಗುತ್ತಿದ್ದ ಬಾಲಕರು ಕೆರೆಯಲ್ಲಿ ನೀರು ಇದ್ದುದರಿಂದ ಈಜಲು ಹೋಗಿದ್ದರು. ಈ ವೇಳೆ ಒಬ್ಬಾತ ಕೆರೆಯಲ್ಲಿ ಮುಳುಗಿದ್ದು, ಅವನನ್ನು ರಕ್ಷಿಸಲು ಹೋಗಿ ಇತರೆ ಮೂವರು ಸಿಲುಕಿಕೊಂಡಿದ್ದಾರೆ. ಕೂಗಿಕೊಂಡರೂ ಯಾರು ಬಾರದೇ ನಾಲ್ವರು ಕೊನೆಯುಸಿರೆಳೆದಿದ್ದಾರೆ. ಮಧ್ಯಾಹ್ನವಾದರೂ ಮನೆಗೆ ಬಾರದೇ ಇದ್ದುದರಿಂದ ಅನುಮಾನಗೊಂಡು ಹುಡುಕಾಟ ನಡೆಸಿದಾಗ ನಾಲ್ವರು ಮೃತಪಟ್ಟಿರುವುದು ಪತ್ತೆಯಾಗಿದೆ.
ಕೂಡಲೇ ಆಲೂರು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅಗ್ನಿ ಶಾಮಕ ದಳದ ಸಿಬ್ಬಂದಿಯೂ ಧಾವಿಸಿದರು. ನೀರಿನಲ್ಲಿ ಮುಳುಗಿರುವ ಮಕ್ಕಳ ದೇಹಗಳನ್ನು ಹೊರ ತೆಗೆಯುವ ಪ್ರಯತ್ನ ಮುಂದುವರಿದಿತ್ತು.
ಸ್ಥಳಕ್ಕೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಆಗಮಿಸಿ ಮಕ್ಕಳ ದೇಹ ಹೊರ ತೆಗೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಟುಂಬದವರಿಗೂ ಸಾಂತ್ವನ ಹೇಳಿದರು.
ಬೆಳಿಗ್ಗೆ ತಿಂಡಿ ತಿಂದು ಇಲ್ಲಿಯೇ ಆಟವಾಡುವುದಾಗಿ ಹೇಳಿ ಹೋಗಿದ್ದರು. ಊಟಕ್ಕೆ ಬರಬಹುದು ಎಂದು ಕಾದುಕೊಂಡಿದ್ದೆ. ಬರಲೇ ಇಲ್ಲ. ಈಗ ಈ ರೀತಿ ಆಗಿದೆ ಎಂದು ಕೇಳಿ ಆಘಾತವೇ ಆಯಿತು. ಮಕ್ಕಳು ಈ ರೀತಿ ಮೃತಪಟ್ಟರೇ ಏನು ಮಾಡೋದು ಎಂದು ಕುಟುಂಬಸ್ಥರ ಆಕ್ರಂದನ ಕಣ್ಣೀರು ತರಿಸಿತು. ಮಕ್ಕಳನ್ನು ಕಳೆದುಕೊಂಡ ಕುಟುಂಬದವರನನ್ನು ಜತೆಯಲ್ಲಿದ್ದವರು ಸಮಾಧಾನ ಮಾಡುತ್ತಿದ್ದರು.ಘಟನೆ ಕುರಿತು ಆಲೂರು ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಗ್ರಾಮದ ಕೆರೆ ಹಳೆಯದ್ದು. ನೀರು ಬೇಗನೇ ತುಂಬಿಕೊಳ್ಳುತ್ತದೆ. ಹೂಳು ತುಂಬಿದ್ದು ಅದನ್ನು ತೆಗೆಸಬೇಕು ಎನ್ನುವ ಬೇಡಿಕೆ ಇಟ್ಟಿದ್ದೇವೆ. ಹೂಳು ತೆಗೆಸಿದರೆ ದುರಂತ ಆಗುವುದಿಲ್ಲ ಎನ್ನುವ ಅಭಿಪ್ರಾಯ ಗ್ರಾಮದಲ್ಲಿ ಕೇಳಿ ಬಂದಿತು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)
ವಿಭಾಗ