logo
ಕನ್ನಡ ಸುದ್ದಿ  /  ಕರ್ನಾಟಕ  /  Summer Effect: ಬಿಸಿಲಿಗೆ ತತ್ತರಿಸಿದ ಕುಕ್ಕುಟೋದ್ಯಮ, ಕೋಳಿ ಉಳಿಸಿಕೊಳ್ಳಲು ಕೂಲರ್‌ ಮೊರೆ, ಚಿಕನ್‌ ಬೆಲೆಯಲ್ಲಿ ಏರಿಕೆ

Summer Effect: ಬಿಸಿಲಿಗೆ ತತ್ತರಿಸಿದ ಕುಕ್ಕುಟೋದ್ಯಮ, ಕೋಳಿ ಉಳಿಸಿಕೊಳ್ಳಲು ಕೂಲರ್‌ ಮೊರೆ, ಚಿಕನ್‌ ಬೆಲೆಯಲ್ಲಿ ಏರಿಕೆ

Umesha Bhatta P H HT Kannada

May 05, 2024 03:58 PM IST

google News

ಕರ್ನಾಟಕದಲ್ಲಿ ಕುಕ್ಕುಟೋದ್ಯಮಕ್ಕೂ ಬೇಸಿಗೆ ಬಿಸಿ ತಟ್ಟಿದೆ.

    • ಕರ್ನಾಟಕದಲ್ಲಿ ಬಿಸಿಲಿನ ಏರಿಕೆ ಪರಿಣಾಮ ಆಹಾರದ ಮೇಲೂ ಆಗಿದೆ. ಅದರಲ್ಲೂ ಮಾಂಸದ ದರದಲ್ಲಿ ಹೆಚ್ಚಳ ಕಂಡು ಬಂದಿದೆ. ಪೌಲ್ಟ್ರಿ ಫಾರಂಗಳು ನಲುಗಿವೆ. 
ಕರ್ನಾಟಕದಲ್ಲಿ ಕುಕ್ಕುಟೋದ್ಯಮಕ್ಕೂ ಬೇಸಿಗೆ ಬಿಸಿ ತಟ್ಟಿದೆ.
ಕರ್ನಾಟಕದಲ್ಲಿ ಕುಕ್ಕುಟೋದ್ಯಮಕ್ಕೂ ಬೇಸಿಗೆ ಬಿಸಿ ತಟ್ಟಿದೆ.

ಬೆಂಗಳೂರು: ಜನರ ನಿತ್ಯದ ಮಾಂಸಾಹಾರವಾಗಿರುವ ಚಿಕನ್‌ ದರ ಈ ಬೇಸಿಗೆಯಲ್ಲಿ ಕರ್ನಾಟಕದಲ್ಲೂ ಕೊಂಚ ಏರಿಕೆ ಕಂಡು ಬಂದಿದೆ. ಕೆಲವು ಕಡೆಗಳಲ್ಲಿ ದರದಲ್ಲಿ ಕೊಂಚ ಹೆಚ್ಚಾಗಿದ್ದರೆ ಇನ್ನೂ ಕೆಲವು ಕಡೆಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿದೆ. ವಿಶೇಷವಾಗಿ ಬಾಯ್ಲರ್‌ ಕೋಳಿ ಹಾಗೂ ಮೊಟ್ಟೆ ಕೋಳಿಗಳ ದರ ಹಾಗೂ ಕೋಳಿ ಮಾಂಸದ ದರದಲ್ಲಿ ಏರಿಕೆ ಕಂಡು ಬಂದಿದೆ. ಬಿಸಿಲಿನಿಂದ ಕೋಳಿಗಳನ್ನು ಉಳಿಸಿಕೊಳ್ಳಲು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿರುವ ಕಾರಣ ಮಾಲೀಕರಿಗೆ ದರ ಹೆಚ್ಚಾಗಿದೆ. ಇದರ ಪರಿಣಾಮ ಮಾಂಸದ ಮೇಲೆ ಆಗಿದೆ. ಅದೇ ರೀತಿ ಸಾಗಣೆ ದರದಲ್ಲೂ ಸ್ವಲ್ಪ ವ್ಯತ್ಯಾಸವಾಗಿರುವುದು ದರ ಏರಿಕೆಯಾಗಲು ಕಾರಣ.

ಕರ್ನಾಟಕ ಬೆಂಗಳೂರು, ಮೈಸೂರು, ತುಮಕೂರು, ಹಾಸನ, ದಾವಣಗೆರೆ, ಬೆಳಗಾವಿ. ಬಳ್ಳಾರಿ ಸೇರಿದಂತೆ ಹಲವು ಕಡೆಗಳಲ್ಲಿ ಕುಕ್ಕಟೋದ್ಯಮ ಗಟ್ಟಿಯಾಗಿದೆ. ಅದರಲ್ಲೂ ಬೆಂಗಳೂರಿನ ಸುತ್ತಮುತ್ತ ದೊಡ್ಡ ಉದ್ಯಮವಾಗಿಯೇ ಬೆಳೆದಿದೆ. ಮೈಸೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲೂ ಪೌಲ್ಟ್ರಿ ಫಾರಂಗಳ ಸಂಖ್ಯೆ ಈಗಲೂ ಅಧಿಕವಾಗಿದೆ. ಉತ್ತರ ಕರ್ನಾಟಕ ಭಾಗ, ಮಧ್ಯ ಕರ್ನಾಟಕ ಭಾಗದ ಹಲವಾರು ಕಡೆಗಳಲ್ಲಿ ಕುಕ್ಕಟೋದ್ಯಮದ ವಹಿವಾಟು ಗಟ್ಟಿಯಾಗಿಯೇ ಇದೆ. ಟನ್‌ ಗಟ್ಟಲೇ ಕೋಳಿಯ ಉತ್ಪಾದನೆ ಮಾಡುವ ಘಟಕಗಳೂ ಸಾಕಷ್ಟಿವೆ.

ಬಿಸಿಲಿನ ಪ್ರಮಾಣ ಏರಿಕೆ

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಿಸಿಲಪ್ರಮಾಣ ಅಧಿಕವಾಗಿದೆ. ಹಿಂದೆಲ್ಲಾ ಕರ್ನಾಟಕದಲ್ಲಿ 34 ರಿಂದ 35 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಏರಿಕೆ ಅಂದರೆ ಅದೇ ಹೆಚ್ಚು ಅನ್ನುವಂತಿತ್ತು. ಈ ಬಾರಿ ಪ್ರತಿ ಊರಿನಲ್ಲೂ 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇದೆ. ಇದು 45 ಡಿಗ್ರಿವರೆಗೂ ತಲುಪಿದೆ. ಹಿಂದೆಲ್ಲಾ ಏರಿಕೆ ಪ್ರಮಾಣ 1 ರಿಂದ 2 ಡಿಗ್ರಿ ಸೆಲ್ಸಿಯಸ್‌ ಮಾತ್ರ ಇರುತ್ತಿತ್ತು, ಈಗ ಅದು 8ರಿಂದ 10 ಡಿಗ್ರಿ ಸೆಲ್ಸಿಯಸ್‌ ವರೆಗೂ ತಲುಪಿದೆ. ಇದು ಖಂಡಿತವಾಗಿಯೂ ಕುಕ್ಕುಟೋದ್ಯಮದ ಮೇಲೆ ಭಾರೀ ಪರಿಣಾಮ ಬೀರಿದೆ.

ಬಿಸಿಲಿನ ಝಳಕ್ಕೆ ನಿತ್ಯ 40ಕ್ಕೂ ಅಧಿಕ ಕೋಳಿಗಳು ಸಾಯುತ್ತಿವೆ. ಕೆಲವು ಕಡೆ ಈ ಪ್ರಮಾಣ ಇನ್ನೂ ಹೆಚ್ಚು ಇದೆ. ಕೋಳಿಗಳನ್ನು ಉಳಿಸಿಕೊಳ್ಳುವುದು ಸವಾಲೇ ಸರಿ. ಇದಕ್ಕಾಗಿ ಸ್ಪಿಂಕ್ಲರ್‌ಗಳು, ತೆಂಗಿನ ಗರಿಯನ್ನು ಮೇಲ್ಛಾವಣಿಗೆ ಹಾಕಿ ನಿರಂತರ ನೀರು ಎರಚುವುದು ನಡೆದಿದೆ. ಫ್ಯಾನ್‌ಗಳನ್ನು ಹಾಕಿ ತಾಪಮಾನ ತಗ್ಗಿಸುವ ಪ್ರಯತ್ನಗಳು ನಡೆದಿವೆ. ಕೆಲವರು ಮಿನಿ ಕೂಲರ್‌ ಯಂತ್ರಗಳನ್ನೂ ಅಳವಡಿಸಿಕೊಂಡು ಕೋಳಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದು ಕಂಡು ಬಂದಿದೆ. ಇದರಿಂದ ಖರ್ಚಿನ ಪ್ರಮಾಣ ಹೆಚ್ಚಾಗಿದೆ.

ಮಾಲೀಕರು ಹೇಳೋದೇನು

ನಮಗೆ ಪ್ರತಿ ವರ್ಷ ಕೋಳಿಗಳ ನಿರ್ವಹಣೆಗೆ ಖರ್ಚು ಹೆಚ್ಚುತ್ತಲೇ ಇದೆ. ಈ ಬಾರಿ ಬಿಸಿಲ ನಿರ್ವಹಣೆ ಕಾರಣಕ್ಕೆ ಇದು ಇನ್ನೂ ಅಧಿಕವಾಗಿದೆ. ಕೋಳಿಗಳ ಸಾವಿನ ಸಂಖ್ಯೆಯೂ ಇರುವುದರಿಂದ ದರದಲ್ಲಿ ಏರಿಕೆ ಆಗಿದೆ ಎನ್ನುವುದು ಮೈಸೂರು ಹೊರವಲಯದ ಫೌಲ್ಟ್ರಿ ಫಾರಂ ಒಂದರ ಮಾಲೀಕರ ನುಡಿ.

ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನ. ಅಲ್ಲಿ ಬಿಸಿಲಿನ ಝಳಕ್ಕೆ ಕೋಳಿಗಳನ್ನು ಉಳಿಸಿಕೊಳ್ಳಲು ಆಗದ ಕೆಲವರು ಫೌಲ್ಟ್ರಿ ಫಾರಂಗಳನ್ನೇ ಬಂದ್‌ ಮಾಡಿದ್ದಾರೆ. ಖರ್ಚು ಹೊಂದಿಸಿಕೊಳ್ಳಲು ಆಗುವುದಿಲ್ಲ. ಭಾರೀ ದರವನ್ನು ಏರಿಸಲು ಆಗುವುದಿಲ್ಲ. ನಷ್ಟ ತಪ್ಪಿಸಲು ತಾತ್ಕಾಲಿಕವಾಗಿ ಮುಚ್ಚುವುದೊಂದೇ ದಾರಿ ಎನ್ನುತ್ತಾರೆ ಫಾರಂ ಮಾಲೀಕರು.

ದರ ಏರಿಕೆ

ಬಿಸಿಲ ಕಾರಣದಿಂದಲೂ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಕೋಳಿ ಮಾಂಸದ ದರದಲ್ಲಿ ಏರಿಕೆ ಕಂಡು ಬಂದಿದೆ. ಪ್ರತಿ ಕೆಜಿ ಕೋಳಿ ಮಾಂಸದ ದರ 180 ರೂ.ಗಳಿಂದ 280 ರವರಗೂ ಇದೆ. ಸರಾಸರಿ 210 ರೂ.ಗೆ ಕೆಜಿ. ಕೋಳಿ ಮಾಂಸ ಭಾನುವಾರ ಮಾರಾಟವಾಗಿದೆ. ಮೇ ಅಂತ್ಯದವರೆಗೂ ಕೋಳಿ ಮಾಂಸ ಏರುಗತಿಯಲ್ಲಿ ಇರಬಹುದು ಎನ್ನುವ ಅಭಿಪ್ರಾಯಗಳೂ ಇವೆ.

ಕೆಲವೇ ದಿನಗಳ ಅಂತರದಲ್ಲಿ ಕೋಳಿ ಮಾಂಸದ ದರ ಕೆಜಿಗೆ 20 ರೂ. ನಿಂದ 50 ರೂ.ವರೆಗೂ ಹೆಚ್ಚಳ ಕಂಡು ಬಂದಿದೆ. ಭಾನುವಾರ ಬಳಸುವವರ ಪ್ರಮಾಣ ಹೆಚ್ಚಿರುವುರಿಂದ ದರದಲ್ಲಿ ಕೊಂಚ ಏರಿಕೆಯಂತೂ ಆಗಿದೆ ಎಂದು ಗ್ರಾಹಕರು ಹೇಳುತ್ತಾರೆ.

ಮಟನ್‌ ದರ ಯಥಾಸ್ಥಿತಿ

ಇನ್ನು ಮಟನ್‌ ದರದಲ್ಲಿ ಅಂತಹ ವ್ಯತ್ಯಾಸವೇನೂ ಇಲ್ಲ. ಕೆಜಿಗೆ 700 ರೂ.ವರೆಗೂ ಮಟನ್‌ ಮಾರಾಟವಾಗುತ್ತಿದೆ. ಗುಡ್ಡೆ ಮಾಂಸದ ದರ 650 ರೂ.ವರೆಗೂ ಇದೆ. ಆರು ತಿಂಗಳಿನಿಂದ ಮಟನ್‌ ದರದಲ್ಲಿ ವ್ಯತ್ಯಾಸವೇನು ಕಂಡು ಬಂದಿಲ್ಲ. ಬಿಸಿಲಿನ ಕಾರಣಕ್ಕೆ ದರದಲ್ಲಿ ಹೆಚ್ಚಳವೇನೂ ಆಗಿಲ್ಲ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ