Panchamasali Reservation: ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಸದನದ ಬಾವಿಗಿಳಿದ ಯತ್ನಾಳ್, ಹೆಬ್ಬಾಳ್ಕರ್!
Sep 20, 2022 02:44 PM IST
ಸಂಗ್ರಹ ಚಿತ್ರ
- ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ. ಮೀಸಲಾತಿಗೆ ಸಂಬಂಧಿಸಿದಂಯತೆ ತಾವು ಕೇಳಿದ ಪ್ರಶ್ನೆಗೆ ಸಿಎಂ ಬೊಮ್ಮಾಯಿ ನೀಡಿದ ಉತ್ತರಕ್ಕೆ ತೃಪ್ತರಾಗದ ಯತ್ನಾಳ್, ಪ್ರತಿಭಟನೆಗೆ ಮುಂದಾದರು.
ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ.
ಪಂಚಮಸಾಲಿ ಮೀಸಲಾತಿ ಸೇರಿದಂತೆ ಇನ್ನಿತರ ಮೀಸಲಾತಿ ಹೋರಾಟಗಳ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ ಉತ್ತರಕ್ಕೆ ತೃಪ್ತಿಯಾಗದೆ ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾದರು. ಯತ್ನಾಳ್ ಬೇಡಿಕೆಗೆ ಧ್ವನಿಗೂಡಿಸಿದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ, ಸದನದ ಬಾವಿಗಿಳಿದರು. ಆದರೆ ಅಂತಿಮವಾಗಿ ಸ್ಪೀಕರ್ ಕಾಗೇರಿ ಅವರ ಮನವಿಯ ಮೇರೆಗೆ ಇಬ್ಬರೂ ತಮ್ಮ ಆಸನದತ್ತ ಮರಳಿದರು.
ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪ ಮಾಡಿದ ಯತ್ನಾಳ್, ರಾಜ್ಯದಲ್ಲಿ ಮೀಸಲಾತಿ ವಿಚಾರವಾಗಿ ಗಂಭೀರ ಚರ್ಚೆ ಆಗುತ್ತಿದೆ. ಅನೇಕ ಸಮುದಾಯದಗಳು ಬೇಡಿಕೆ ಇಟ್ಟಿವೆ. ಪರಿಶಿಷ್ಟ ಜಾತಿ ಪಂಗಡ ಮೀಸಲಾತಿ ಹೆಚ್ಚಳ ಹಾಗೂ ವಾಲ್ಮೀಕಿ ಸಮುದಾಯವೂ ಮೀಸಲಾತಿ ಬೇಡಿಕೆ ಮುಂದಿಟ್ಟು ಹೋರಾಟ ನಡೆಸುತ್ತಿವೆ. ಇದರ ಜೊತೆ ಎಸ್‌ಟಿ ಜನಾಂಗದಲ್ಲಿ ಹಾಲುಮತ ಕುರುಬ, ಗೊಲ್ಲ ಸಮಾಜ ಸೇರ್ಪಡೆ ಹಾಗೂ ಎಸ್‌ಸಿ ಮಡಿವಾಳ ಹಾಗೂ ಹಡಪ ಸಮಾಜ ಸೇರ್ಪಡೆ ವಿಚಾರವಾಗಿಯೂ ಬೇಡಿಕೆ ಇದೆ. ಸರ್ಕಾರ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದು ಗುಡುಗಿದರು.
ಸರ್ಕಾರ ಇದುವರೆಗೂ ಕೇವಲ ಭರವಸೆಗಳನ್ನು ನೀಡುವುದರಲ್ಲೇ ಕಾಲಹರಣ ಮಾಡುತ್ತಿದೆ. ಆದರೆ ಈವರೆಗೆ ಹಿಂದುಳಿದ ಆಯೋಗದಿಂದ ಈ ಕುರಿತಾದ ವರದಿ ತರಿಸಿಕೊಂಡಿಲ್ಲ. ಮೀಸಲಾತಿಗೆ ಆಗ್ರಹಿಸುತ್ತಿರುವ ಪಂಚಮಸಾಲಿ ಸಮುದಾಯದ ತಾಳ್ಮೆಯ ಕಟ್ಟೆ ಒಡೆದರೆ, ರಾಜ್ಯ ಸರ್ಕಾರ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಯತ್ನಾಳ್ ಎಚ್ಚರಿಕೆ ನೀಡಿದರು.
ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸ್ವಕ್ಷೇತ್ರದಲ್ಲಿ ದೊಡ್ದ ಹೋರಾಟ ನಡೆಯುತ್ತಿದೆ. ಆದರೂ ಮುಖ್ಯಮಂತ್ರಿಗಳು ಈ ಕುರಿತು ಮೌನದಿಂದ ಇರುವುದು ಖಂಡನೀಯ. ಮೀಸಲಾತಿ ಬಗ್ಗೆ ಸರ್ಕಾರದ ನಿಲುವು ಏನು? ಮೀಸಲಾತಿ ಕೊಡುವ ಪ್ರಾಮಾಣಿಕ ಉದ್ದೇಶವಾದರೂ ಸರ್ಕಾರಕ್ಕೆ ಇದೆಯಾ ಎಂದು ಯತ್ನಾಳ್ ಏರುಧ್ವನಿಯಲ್ಲಿ ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ ಬೊಮ್ಮಾಯಿ, ಯಾವುದೇ ವರ್ಗಕ್ಕೆ ಮೀಸಲಾತಿ ಹೆಚ್ಚಿಸಲು ನಿರ್ದಿಷ್ಟ ಕಾನೂನುಗಳನ್ನು ಪಾಲನೆ ಮಾಡಬೇಕಾಗುತ್ತದೆ. ಸುಪ್ರೀಂಕೋರ್ಟ್ ಕೂಡ ಮಧ್ಯಪ್ರವೇಶ ಮಾಡಿ ತೀರ್ಪು ನೀಡಿದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮುಂದಡಿ ಇಡುತ್ತಿದೆ. ಮೀಸಲಾತಿಗೆ ಆಗ್ರಹಿಸುತ್ತಿರುವ ಸಮುದಾಯಗಳು ತಾಳ್ಮೆ ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.
ಪಂಚಮಸಾಲಿ ಸಮುದಾಯ 3ಬಿ ಯಿಂದ 2ಎಗೆ ಬರಬೇಕು ಎಂದು ಬೇಡಿಕೆ ಇಟ್ಟಿದೆ. ಅಲ್ಲದೇ ಅನ್ಯ ಸಮುದಾಯಗಳೂ ಬೇರೆ ಬೇರೆ ಬೇಡಿಕೆಗಳನ್ನು ಮಂಡಿಸಿವೆ. ಈ ಕುರಿತು ಸಾಧಕಬಾಧಕಗಳನ್ನು ಪರಿಗಣಿಸಲು ಈಗಾಗಲೇ ಎರಡು ಸಮಿತಿ ರಚನೆಯಾಗಿದೆ. ಯಾವುದೇ ಬೇರೆ ವರ್ಗಕ್ಕೆ ಅನ್ಯಾಯವಾಗದಂತೆ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಮೀಸಲಾತಿ ಬಗ್ಗೆ ಹಿಂದುಳಿದ ಆಯೋಗದ ವರದಿ ಬಂದ ಬಳಿಕ, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಡಿ ಇಡಲಿದೆ. ಈ ಕುರಿತು ಯಾರಿಗೂ ಅನುಮಾನ ಬೇಡ. ಎಲ್ಳಾ ವರ್ಗಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಆದರೆ ಸಿಎಂ ಉತ್ತರದಿಂಧ ತೃಪ್ತರಾಗದ ಶಾಸಕ ಯತ್ನಾಳ್, ಸದನದ ಬಾವಿಗಿಳಿದು ಧರಣಿಗೆ ಮುಂದಾದರು. ಇದಕ್ಕೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಾಥ್ ನೀಡಿದರು. ಅಂತಿಮವಾಗಿ ಸ್ಪೀಕರ್ ಕಾಗೇರಿ ಅವರ ಸತತ ಮನವಿಯನ್ನು ಪುರಸ್ಕರಿಸಿ ಇಬ್ಬರೂ ತಮ್ಮ ತಮ್ಮ ಆಸನಗಳಿಗೆ ಮರಳಿದರು.