logo
ಕನ್ನಡ ಸುದ್ದಿ  /  ಕರ್ನಾಟಕ  /  Yuva Nidhi: 5ನೇ ಗ್ಯಾರೆಂಟಿ ಯುವನಿಧಿ ನೋಂದಣಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ; ಜನವರಿ 12ಕ್ಕೆ ಯೋಜನೆ ಜಾರಿ

Yuva Nidhi: 5ನೇ ಗ್ಯಾರೆಂಟಿ ಯುವನಿಧಿ ನೋಂದಣಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ; ಜನವರಿ 12ಕ್ಕೆ ಯೋಜನೆ ಜಾರಿ

Umesh Kumar S HT Kannada

Dec 26, 2023 02:35 PM IST

5ನೇ ಗ್ಯಾರೆಂಟಿ ಯೋಜನೆ ಯುವನಿಧಿ ನೋಂದಣಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

  • ಕಾಂಗ್ರೆಸ್ ಪಕ್ಷ ಕರ್ನಾಟಕ ಚುನಾವಣೆಗೆ ಮೊದಲು ನೀಡಿದ್ದ 5 ಚುನಾವಣಾ ಗ್ಯಾರೆಂಟಿಗಳ ಪೈಕಿ 5ನೇ ಗ್ಯಾರೆಂಟಿ ಯುವನಿಧಿ ಯೋಜನೆಯನ್ನು ಜನವರಿ 12ಕ್ಕೆ ಜಾರಿಗೊಳಿಸುವುದಾಗಿ ಘೋ‍ಷಿಸಿದೆ. ಯುವನಿಧಿ ಯೋಜನೆಯ ಫಲಾನುಭವಿಗಳ ನೋಂದಣಿಗೆ ಇಂದು (ಡಿ.26) ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

5ನೇ ಗ್ಯಾರೆಂಟಿ ಯೋಜನೆ ಯುವನಿಧಿ ನೋಂದಣಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
5ನೇ ಗ್ಯಾರೆಂಟಿ ಯೋಜನೆ ಯುವನಿಧಿ ನೋಂದಣಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ. (CMO)

ಬೆಂಗಳೂರು: ಕಾಂಗ್ರೆಸ್ ಪಕ್ಷದ ಚುನಾವಣಾ ಭರವಸೆಗಳ ಪೈಕಿ 5ನೇ ಗ್ಯಾರೆಂಟಿಯಾದ ಯುವನಿಧಿ ಯೋಜನೆ ಜಾರಿಗೊಳಿಸಲು, ಅದರ ನೋಂದಣಿ ಪ್ರಕ್ರಿಯೆಗೆ ಮಂಗಳವಾರ (ಡಿ.26) ಚಾಲನೆ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು: ಹೆಚ್ಚು ಹಣ ವಸೂಲಿ ಮಾಡಲು ಮುಂದಾದ ಓಲಾ ಕ್ಯಾಬ್‌ ಚಾಲಕ, ಹೊಸ ವಂಚನಾ ಕ್ರಮ ಪತ್ತೆ ಹಚ್ಚಿದ ಮಹಿಳೆ

ಬೆಂಗಳೂರು ಜಲ ಮಂಡಳಿ ಫೋನ್ ಇನ್ ಕಾರ್ಯಕ್ರಮ ಇಂದು ಬೆಳಗ್ಗೆ 9.30ಕ್ಕೆ, ಕುಂದುಕೊರತೆ, ಅಹವಾಲು ಸಲ್ಲಿಸಲು ಫೋನ್ ನಂಬರ್ ಇಲ್ಲಿದೆ..

ಕರ್ನಾಟಕ ಹವಾಮಾನ ಮೇ 17; ದಕ್ಷಿಣ ಕನ್ನಡ, ಮೈಸೂರು, ಮಂಡ್ಯ ಸೇರಿ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉಳಿದೆಡೆ ಮಳೆ ಮುನ್ಸೂಚನೆ

Belagavi News: ಚಾಲುಕ್ಯ ರೈಲಿನಲ್ಲಿ ಟಿಕೆಟ್‌ ತಪಾಸಣೆ ವೇಳೆ ಇರಿದ ಪ್ರಯಾಣಿಕ. ಸಿಬ್ಬಂದಿ ಸಾವು, ಆರೋಪಿ ಪರಾರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕರ್ನಾಟಕ ಸರ್ಕಾರದ ಐತಿಹಾಸಿಕ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಉದ್ಘಾಟಿಸಿದರು.

ಸ್ವಾಮಿ ವಿವೇಕಾನಂದ ಜಯಂತಿ ದಿನ (ಜ.12) ಯುವನಿಧಿ ಫಲಾನುಭವಿಗಳ ಖಾತೆಗೆ ಮೊದಲ ಕಂತಿನ ಹಣ ಜಮೆ ಮಾಡಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಘೋಷ ವಾಕ್ಯವನ್ನು ಈ ಯೋಜನೆಗೆ ನೀಡಲಾಗಿದೆ.

ಈ ಯೋಜನೆಯ ಫಲಾನುಭವಿಗಳಾಗಲು ನೋಂದಣಿ ಮಾಡಿಕೊಂಡ ಅರ್ಹರಿಗೆ ಅಂದರೆ, 2022-23ನೇ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರರಿಗೆ 3,000 ರೂಪಾಯಿ ಮತ್ತು ಡಿಪ್ಲೋಮಾ ಹೊಂದಿರುವವರಿಗೆ ಅವರು ಕೆಲಸಕ್ಕೆ ಸೇರುವ ತನಕ ಅಂದರೆ ಗರಿಷ್ಠ 2 ವರ್ಷ ಕಾಲ 1,500 ರೂಪಾಯಿ ವಿತ್ತೀಯ ನೆರವನ್ನು ಸರ್ಕಾರ ನೀಡಲಿದೆ.

ಪದವಿ/ಡಿಪ್ಲೊಮಾ ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಪೂರ್ಣಗೊಂಡ ನಂತರವೂ ಕೆಲಸ ಸಿಗದವರಿಗೆ ಈ ಹಣಕಾಸಿನ ನೆರವು ಸಿಗಲಿದೆ. ಅಭ್ಯರ್ಥಿಗಳು ಕನಿಷ್ಠ ಆರು ವರ್ಷದಿಂದ ಕರ್ನಾಟಕದಲ್ಲಿ ವಾಸವಿರುವ ಬಗ್ಗೆ ದಾಖಲೆ ಒದಗಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷ 250 ಕೋಟಿ ರೂಪಾಯಿಯನ್ನು ಈ ಯೋಜನೆಗೆ ಮಂಜೂರು ಮಾಡಲಾಗಿದೆ. ಮುಂದಿನ ವರ್ಷ 1,250 ಕೋಟಿ ರೂಪಾಯಿ ವೆಚ್ಚವನ್ನು ನಿರೀಕ್ಷಿಸಲಾಗಿದೆ ಮತ್ತು ಅದರ ನಂತರದ ವರ್ಷ ರಾಜ್ಯವು ಅಂದಾಜು 2,500 ಕೋಟಿ ರೂಪಾಯಿ ವೆಚ್ಚವನ್ನು ಉಂಟುಮಾಡಬಹುದು ಎಂದು ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ಶರಣಪ್ರಕಾಶ ಪಾಟೀಲ ಹೇಳಿದ್ದಾರೆ.

ಪ್ರಧಾನಿ ಮೋದಿಯವರೇ ಐದೂ ಗ್ಯಾರಂಟಿ ಜಾರಿ ಆಗಿದೆ, ನಿಮ್ಮ ಮಾತು ಸುಳ್ಳಾಗಿದೆ - ಸಿಎಂ ಸಿದ್ದರಾಮಯ್ಯ

ಪ್ರಧಾನಿ ಮೋದಿಯವರೇ ಕರ್ನಾಟಕ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ನಿಮ್ಮ ಮಾತು ಸುಳ್ಳಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಪ್ರಧಾನಿ ಮೋದಿ ಅವರ ಮತ್ತೊಂದು ಭಾಷಣ ಸುಳ್ಳಾಗಿದೆ ಎನ್ನುತ್ತ ಅವರ ಮಾತುಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ಕಾಲೆಳೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ ಮೋದಿಯವರೇ ನೀವು ಉದ್ಯೋಗ ಸೃಷ್ಟಿಸಿದ್ರಾ ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಅಂದ್ರೆ ಇಷ್ಟೊತ್ತಿಗೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಎಲ್ಲಿ ಸೃಷ್ಟಿಯಾಯ್ತು ಮೋದಿಯವರೇ ? ನೀವು ಮಾತಿಗೆ ತಪ್ಪಿದ ಮೋದಿ ಎಂದು ಲೇವಡಿ ಮಾಡಿದರು.

ಯುವನಿಧಿ ಜತೆಗೆ ಉಚಿತ ತರಬೇತಿ, ಅರ್ಜಿ ಶುಲ್ಕವೂ ಇರಲ್ಲ. ರಾಜ್ಯದ ಜನರಿಗೆ ಈ ಯೋಜನೆ ತಲುಪಿದೆ. ಭಾರತದ ಇತಿಹಾಸದಲ್ಲಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಇವತ್ತಿನವರೆಗೂ ಬಂದಿಲ್ಲ. ಮೋದಿಯವರೇನು ಆರ್ಥಿಕ ತಜ್ಞರಾ ? ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೆ ರಾಜ್ಯ ದಿವಾಳಿ ಆಗ್ತದೆ ಎಂದು ಭಾಷಣ ಮಾಡಿದ್ರು ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಈಗ ಐದೂ ಯೋಜನೆ ಜಾರಿಯಾಗಿ ರಾಜ್ಯ ಆರ್ಥಿಕವಾಗಿ ಸದೃಡವಾಗಿದೆ. ವಿವೇಕಾನಂದ ಜಯಂತಿಯಂದು ಲಕ್ಷಾಂತರ ಯುವಕ ಯುವತಿಯರ ಸಮ್ಮುಖದಲ್ಲಿ ಯುವನಿಧಿಯನ್ನು ನೇರವಾಗಿ ಅರ್ಹರ ಖಾತೆಗೆ ಜಮೆ ಮಾಡುವ ಕಾರ್ಯಕ್ರಮ ನಡೆಸ್ತೀವಿ. ಮಾತು ತಪ್ಪಿದ ಮೋದಿಯವರೇ ನಿಮ್ಮ ಮಾತು ಏನಾಯ್ತು? ರಾಜ್ಯದ ಯುವ ಸಮೂಹ ನಿಮ್ಮನ್ನು ಪ್ರಶ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣಪ್ರಕಾಶ್ ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾಗೇಂದ್ರ, ವಿಧಾನ‌ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್ ಉಪಸ್ಥಿತರಿದ್ದರು. ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ