KE Kantesh: ಮಾನಹಾನಿ ವರದಿಗೆ ತಡೆಯಾಜ್ಞೆ ತಂದ ಕೆ ಇ ಕಾಂತೇಶ್, ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಪುತ್ರನಿಗೆ ಅಶ್ಲೀಲ ವಿಡಿಯೋ ಫೋಟೋ ಆತಂಕ
May 01, 2024 09:19 AM IST
ತನ್ನ ವಿರುದ್ಧ ಮಾನಹಾನಿ ವರದಿ ಪ್ರಕಟಿಸದಂತೆ ಬೆಂಗಳೂರ ನ್ಯಾಯಾಲಯದಿಂದ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಪುತ್ರ ಕೆ ಇ ಕಾಂತೇಶ್ (ಚಿತ್ರದಲ್ಲಿರುವವರು) ತಡೆಯಾಜ್ಞೆ ತಂದಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತನ್ನ ವಿರುದ್ಧದ ಮಾನಹಾನಿ ವರದಿಗೆ ತಡೆಯಾಜ್ಞೆ ತಂದ ಕೆ ಇ ಕಾಂತೇಶ್ ನಡೆ ಕುತೂಹಲ ಕೆರಳಿಸಿದೆ. ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಪುತ್ರನಿಗೆ ಅಶ್ಲೀಲ ವಿಡಿಯೋ ಫೋಟೋ ಆತಂಕ ಎದುರಾಗಿದೆಯೇ ಎಂಬ ಪ್ರಶ್ನೆಯೂ ವ್ಯಕ್ತವಾಗಿದೆ. ಏನಿದು ಪ್ರಕರಣ.
ಬೆಂಗಳೂರು: ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರ ಪುತ್ರ ಕೆ ಇ ಕಾಂತೇಶ್ ಅವರು ತಮ್ಮ ವಿರುದ್ಧ ಮಾನಹಾನಿ ವರದಿ ಪ್ರಸಾರ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಿಂದ ಮಾಧ್ಯಮಗಳ ವಿರುದ್ಧ ಏಕಪಕ್ಷೀಯವಾದ ಮಧ್ಯಂತರ ತಡೆಯಾಜ್ಞೆಯನ್ನು ಪಡೆದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಈ ಸಲ ಕೆ ಇ ಕಾಂತೇಶ್ ಅವರ ತಂದೆ ಕೆ ಎಸ್ ಈಶ್ವರಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿವೈ ವಿಜಯೇಂದ್ರ ( ಕರ್ನಾಟಕ ಬಿಜೆಪಿ ಅಧ್ಯಕ್ಷ) ವಿರುದ್ಧ ಬಂಡಾಯ ಎದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ ಇ ಕಾಂತೇಶ್ ಅವರ ಈ ನಡೆ ಗಮನ ಸೆಳೆದಿದೆ.
ಕೆ ಇ ಕಾಂತೇಶ್ ಅವರು ಸಲ್ಲಿಸಿದ್ದ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ಈ ಪ್ರತಿಬಂಧಕಾಜ್ಞೆ ನೀಡಿದರು. ಕೆ ಇ ಕಾಂತೇಶ್ ಅವರು 50 ಪ್ರತಿವಾದಿಗಳನ್ನು ಉಲ್ಲೇಖಿಸಿದ್ದು, ಅಷ್ಟೂ ಪ್ರತಿವಾದಿಗಳು, ಅವರ ಪ್ರತಿನಿಧಿಗಳು, ಸೇವಕರು, ಏಜೆಂಟರು, ಆಡಳಿತಗಾರರು ಅಥವಾ ಅವರಿಂದ ನಿಯೋಜಿಸಲ್ಪಟ್ಟವರು ಯಾರೇ ಆದರೂ ದೂರಿನಲ್ಲಿ ಉಲ್ಲೇಖಿಸಿದ ರೀತಿ ಮಾನಹಾನಿ ಮಾಡುವಂತಹ ಮಾಹಿತಿ ಪ್ರಸಾರ ಮಾಡಬಾರದು. ಅಂದರೆ, ಅಶ್ಲೀಲ ವಿಡಿಯೊ ಪ್ರಸಾರ, ಫೋಟೋ, ವರದಿ ಮುದ್ರಣ, ಅವುಗಳ ಹಂಚಿಕೆ ಮಾಡಬಾರದು. ಇದಕ್ಕೆ ಪ್ರತಿಬಂಧಕಾಜ್ಞೆ ನೀಡಲಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ. ಇದರಂತೆ, ಪ್ರತಿವಾದಿಗಳಿಗೆ ನೋಟಿಸ್, ಸಮನ್ಸ್ ಜಾರಿ ಮಾಡಿದ ನ್ಯಾಯಾಲಯವು ಈ ದಾವೆಯ ವಿಚಾರಣೆಯನ್ನು ಆಗಸ್ಟ್ 3ಕ್ಕೆ ಮುಂದೂಡಿದೆ.
ಕಾಂತೇಶ್ ದಾವೆಯಲ್ಲಿ ಏನಿದೆ?
ಮಾಜಿ ಉಪಮುಖ್ಯಮಂತ್ರಿ ಕೆ ಈಶ್ವರಪ್ಪ ಅವರ ಪುತ್ರ ಕೆ ಇ ಕಾಂತೇಶ್ ಅವರ ಪರವಾಗಿ ವಕೀಲ ಎಂ ವಿನೋದ್ ಕುಮಾರ್ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಪ್ರತಿವಾದಿಗಳ ಸ್ಥಾನದಲ್ಲಿರುವ ಇಂಟರ್ನೆಟ್, ಟಿವಿ ಮಾಧ್ಯಮ, ಪತ್ರಿಕೆಗಳಲ್ಲಿ ದೂರುದಾರರ (ಕೆ ಇ ಕಾಂತೇಶ್) ವಿರುದ್ಧ ಆಕ್ಷೇಪಾರ್ಹವಾದ ಸುದ್ದಿ ಪ್ರಸಾರವಾಗುತ್ತಿದೆ. ಈ ಮೂಲಕ ದೂರುದಾರರ ವರ್ಚಸ್ಸು ಹಾಳು ಮಾಡಲು ಪ್ರಯತ್ನಿಸುತ್ತಿವೆ. ಲೋಕಸಭಾ ಚುನಾವಣೆ ರಾಜಕೀಯವಾಗಿ ಮಹತ್ವ ಪಡೆದುಕೊಂಡ ಸಂದರ್ಭವಾದ ಕಾರಣ, ದೂರುದಾರರಿಗೆ ಮಾನಹಾನಿಯಿಂದ ರಕ್ಷಣೆ ಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ಲೋಕಸಭಾ ಚುನಾವಣೆ; ಕಾಂತೇಶ್‌ಗೆ ಟಿಕೆಟ್ ಕೇಳಿದ್ದ ಈಶ್ವರಪ್ಪ
ಲೋಕಸಭೆ ಚುನಾವಣೆಗೂ ಬಹಳ ಮೊದಲೇ ರಾಜಕೀಯ ನಿವೃತ್ತಿ ಘೋಷಿಸಿದ್ದ ಕೆ ಎಸ್ ಈಶ್ವರಪ್ಪ ಈ ಬಾರಿ ತಮ್ಮ ಮಗ ಕಾಂತೇಶ್‌ಗೆ ಟಿಕೆಟ್ ಬಯಸಿದ್ದರು. ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಭರವಸೆ ನೀಡಿದ್ದರು ಎಂದು ಈಶ್ವರಪ್ಪ ಹೇಳಿಕೊಂಡಿದ್ದರು. ಟಿಕೆಟ್ ಸಿಗುವುದಿಲ್ಲ, ಪಕ್ಷದಲ್ಲೂ ಪದಾಧಿಕಾರಿ ಹೊಣೆಗಾರಿಕೆ ಸಿಗುವುದಿಲ್ಲ ಎಂಬುದು ಖಾತರಿಯಾದ ಬಳಿಕ ಈಶ್ವರಪ್ಪ ಅವರು ಬಹಿರಂಗವಾಗಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಸಮರ ಸಾರಿದ್ದರು. ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಾರ್ಯಕರ್ತರ ಧ್ವನಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದರು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.