Naxal News: ಸುಬ್ರಹ್ಮಣ್ಯ ಸಮೀಪ ಮತ್ತೆ ಮನೆಯೊಂದಕ್ಕೆ ಪ್ರವೇಶಿಸಿದ ಶಂಕಿತ ನಕ್ಸಲರು, ಮೊಬೈಲ್ ಚಾರ್ಜ್ ಮಾಡಿಕೊಂಡು ಹೊರಟರು !
Mar 24, 2024 04:25 PM IST
ನಕ್ಸಲರ ಚಟುವಟಿಕೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯ ಕೂಂಬಿಂಗ್ ಚುರುಕಾಗಿದೆ.
- ದಕ್ಷಿಣ ಕನ್ನಡ ಕೊಡಗು ಜಿಲ್ಲೆಯ ಗಡಿಯಲ್ಲಿ ನಕ್ಸಲ್ ಚಟುವಟಿಕೆ ಸದ್ದಿಲ್ಲದೇ ನಡೆದಿದೆ. ಸುಬ್ರಹ್ಮಣ್ಯ ಬಳಿ ಮನೆಯೊಂದಕ್ಕೆ ಬಂದ ನಕ್ಸಲರು ಮೊಬೈಲ್ ಚಾರ್ಜ್ ಮಾಡಿಕೊಂಡು ಹೋಗಿರುವ ಮಾಹಿತಿಯಿದೆ.
- ವರದಿ:ಹರೀಶ್ ಮಾಂಬಾಡಿ. ಮಂಗಳೂರು
ಮಂಗಳೂರು: ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾಗಿರುವ ಕೂಜಿಮಲೆಯ ಎಸ್ಟೇಟ್ ಒಂದರ ಪಕ್ಕದಲ್ಲಿರುವ ಅಂಗಡಿಗೆ ಶಂಕಿತ ನಕ್ಸಲರು ಭೇಟಿ ನೀಡಿದ್ದ ವಿಚಾರ ಸುದ್ದಿಯಾಗಿ ವಾರವಾಗುವಷ್ಟರಲ್ಲೇ ಶನಿವಾರ ಮತ್ತೆ ನಕ್ಸಲರ ಸಂಚಾರ ಈ ಭಾಗದಲ್ಲಿ ಇರುವುದು ವರದಿಯಾಗಿದೆ. ಕಳೆದ ವಾರದಿಂದಲೇ ಬೀಡುಬಿಟ್ಟಿರುವ ಎಎನ್ ಎಫ್ (ನಕ್ಸಲ್ ನಿಗ್ರಹ ಪಡೆ)ಗೂ ಸವಾಲಾಗಿರುವ ನಕ್ಸಲ್ ಓಡಾಟ ಹೀಗೆಯೇ ಮುಂದುವರಿದರೆ ಮುಂಬರುವ ಚುನಾವಣೆ ಸಂದರ್ಭ ತೊಂದರೆಯಾಗಬಹುದು ಎಂಬ ಶಂಕೆಯಲ್ಲಿ ಈಗಾಗಲೇ ಆಡಳಿತವೂ ಚುರುಕುಗೊಂಡಿದೆ.
ಶನಿವಾರ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ. ಶನಿವಾರ ಸಂಜೆ 6 ಗಂಟೆ ವೇಳೆ ಮಳೆ ಈ ಭಾಗದಲ್ಲಿ ಸಣ್ಣದಾಗಿ ಸುರಿಯುತ್ತಿತ್ತು. ಈ ಸಂದರ್ಭ ಶಂಕಿತರ ತಂಡ ಐನೆಕಿದು ಗ್ರಾಮದ ಅರಣ್ಯದಂಚಿನ ತೋಟದ ಮೂಲಕ ಆಗಮಿಸಿತ್ತು. ತೋಟದಲ್ಲಿದ್ದ ಕೆಲಸದವರ ಶೆಡ್‌ಗೆ ಭೇಟಿ ನೀಡಿದ ವೇಳೆ ಕೆಲಸದಾಳು ಶೆಡ್‌ನ ಬಾಗಿಲು ಹಾಕಿದ್ದು, ಬಳಿಕ ಶಂಕಿತರ ತಂಡ ಅಲ್ಲೇ ಪಕ್ಕದಲ್ಲಿರುವ ತೋಟದ ಮಾಲೀಕರ ಮನೆಗೆ ತೆರಳಿ ಒಳಹೊಕ್ಕಿತ್ತು. ಮನೆಯವರ ಜತೆ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.
ಸುಬ್ರಹ್ಮಣ್ಯದ ಕುಮಾರ ಪರ್ವತ ತಪ್ಪಲಿನ ವ್ಯಾಪ್ತಿಯಲ್ಲಿ ವಾರದಲ್ಲಿ ಎರಡನೇ ಬಾರಿ ನಕ್ಸಲರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರೂ ಶಂಕಿತ ನಕ್ಸಲರು ಕಾಣಿಸಿಕೊಳ್ಳುತ್ತಿರುವುದು ಆಶ್ಚರ್ಯ ತಂದಿದೆ. ಐನೆಕಿದು ಪರಿಸರಕ್ಕೆ ಭೇಟಿ ನೀಡಿದ ತಂಡದಲ್ಲಿ ನಾಲ್ವರು ಇದ್ದರು. ಇಲ್ಲೂ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಇದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮಳೆ ಬರುತ್ತಿದೆ, ಹೀಗೆ ಬಂದಿದ್ದೇವೆ ಎಂದು ಹೇಳಿದ ತಂಡದವರು ಕೆಲ ಸಮಯ ಮೊಬೈಲ್ ಚಾರ್ಜ್ ಮಾಡಿಕೊಂಡು ತೆರಳಿದರು.
ಕಳೆದ ವಾರ ನಕ್ಸಲರು ಕಾಣಿಸಿಕೊಂಡ ಕೂಜಿಮಲೆ ಮತ್ತು ಇಂದು ಕಾಣಿಸಿದ ಐನೆಕಿದು ನಡುವೆ ಸುಮಾರು 25 ಕಿ.ಮೀ. ಅಂತರವಿದೆ. ವಿಶೇಷ ಎಂದರೆ ನಕ್ಸಲ್ ನಿಗ್ರಹ ದಳ ನಿರಂತರ ಶೋಧ ಕಾರ್ಯ ನಡೆಸುತ್ತಿದ್ದರೂ ಇದೇ ಪರಿಸರದಲ್ಲಿ ಸುತ್ತಾಡುತ್ತಿದ್ದ ನಕ್ಸಲರು ಎಎನ್‌ಎಫ್ ತಂಡಕ್ಕೆ ಕಾಣಿಸಿಲ್ಲ. ನಕ್ಸಲರು ಭೇಟಿ ನೀಡಿದ ಪ್ರದೇಶ ಕುಮಾರಪರ್ವತ ಸಾಲಿನ ಪಾಟಿ ಕುಮೇರಿ ದಟ್ಟ ಕಾಡಿಗೆ ಹತ್ತಿರವಿದೆ. ಇಲ್ಲಿಂದ ಸೋಮವಾರಪೇಟೆ ಮತ್ತು ಇನ್ನೊಂದು ದಾರಿಯಾಗಿ ಗಾಳಿಬೀಡು, ಸಂಪಾಜೆ ಮೂಲಕ ಕೇರಳಕ್ಕೆ ಅರಣ್ಯದೊಳಗೆ ಸಂಪರ್ಕ ಸಾಧಿಸಲು ಸಾಧ್ಯವಿದೆ ಎನ್ನಲಾಗಿದೆ.
ವರದಿ: ಹರೀಶ್ ಮಾಂಬಾಡಿ, ಮಂಗಳೂರು