DK Shivakumar: ಡಿಕೆ ಶಿವಕುಮಾರ್ ಹಟ ತಗ್ಗಿದ್ದು ಹೇಗೆ?; ಸಿದ್ದರಾಮಯ್ಯ ಬೆನ್ನಿಗೆ ನಿಂತ ರಾಹುಲ್ ಗಾಂಧಿ ಮಾಡಿದ ಮ್ಯಾಜಿಕ್ ಇದು
May 19, 2023 08:54 AM IST
ರಾಹುಲ್ ಗಾಂಧಿ ಮತ್ತು ಡಿಕೆ ಶಿವಕುಮಾರ್ (ಕಡತ ಚಿತ್ರ)
DK Shivakumar: ಸೋಮವಾರದಿಂದ ಗುರುವಾರ ತನಕ ದೆಹಲಿಯಲ್ಲಿ ನಡೆದ ವಿದ್ಯಮಾನಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದ್ದು ಕೆ.ಸಿ.ವೇಣುಗೋಪಾಲ್ ಮನೆಯಲ್ಲಿ ಬೆಳಗ್ಗೆ ಉಪಾಹಾರಕ್ಕೆ ಸೇರಿದಾಗ! ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಇತರರು ಅಲ್ಲಿದ್ದರು. ರಾಹುಲ್ ಗಾಂಧಿ ಅವರ ಒಂದು ಫೋನ್ ಕರೆ ಚಿತ್ರಣ ಬದಲಾಯಿಸಿತು ಅಂತ ಡಿಕೆ ಶಿವಕುಮಾರ್ ಹೇಳಿದ್ದು ಈಗ ಗಮನಸೆಳೆದಿದೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಿನ ಪೈಪೋಟಿಗೆ ಒಂದು ತಾರ್ಕಿಕ ಅಂತ್ಯ ಸಿಕ್ಕಿದೆ. ಸಿದ್ದರಾಮಯ್ಯ ಅವರು ನೂತನ ಮುಖ್ಯಮಂತ್ರಿಯಾಗಿ ಈಗ ಅಧಿಕೃತವಾಗಿಯೇ ಆಯ್ಕೆಯಾಗಿದ್ದಾರೆ. ಏಕೈಕ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಆಯ್ಕೆ ಘೋಷಣೆ ಕೂಡ ಅಧಿಕೃತವಾಗಿಯೇ ಆಗಿದೆ.
ಈಗ ಎಲ್ಲರ ಗಮನ ಸಿದ್ದರಾಮಯ್ಯ ಮತ್ತು ಸಂಪುಟದ ಪ್ರಮಾಣವಚನ ಕಾರ್ಯಕ್ರಮದ ಕಡೆಗಿದೆ. ಆದರೆ ಒಂದು ಕುತೂಹಲ. ಮೂರ್ನಾಲ್ಕು ದಿನಗಳಿಂದ ಬಿಗಿಪಟ್ಟು ಹಿಡಿದು ʻಬಂಡೆʼಯಂತಿದ್ದ ಡಿಕೆ ಶಿವಕುಮಾರ್ ಗುರುವಾರ ಇದ್ದಕ್ಕಿದ್ದಂತೆ ಕರಗಿದ್ದು ಹೇಗೆ? ಕನಕಪುರದ ಬಂಡೆ ಎಂದೇ ಜನಪ್ರಿಯರಾಗಿರುವ ಡಿಕೆ ಶಿವಕುಮಾರ್ ತನ್ನ ಬಿಗಿ ನಿಲುವು ಸಡಿಲಿಸುವಂತಹ ಬೆಳವಣಿಗೆ ದೆಹಲಿಯಲ್ಲಿ ಏನಾಯಿತು? ಎಂಬಿತ್ಯಾದಿ ಪ್ರಶ್ನೆಗಳು ಸಹಜ.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪಕ್ಷದ ವರಿಷ್ಠರು ಮತ್ತು ಇತರೆ ನಾಯಕರ ಜತೆಗೆ ಹಲವು ಸುತ್ತಿನ ಮಾತುಕತೆ ನಡೆಸಿ ಆಗಿತ್ತು. ಮಾಧ್ಯಮಗಳ ವರದಿ ಪ್ರಕಾರ, ಡಿಕೆ ಶಿವಕುಮಾರ್ ಅವರು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಆಪ್ತರು. ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಗೆ ಆಪ್ತರು ಎಂಬ ವಿಚಾರ ಈಗಾಗಲೇ ಪ್ರಚುರವಾಗಿರುವಂಥದ್ದು.
ಎಲ್ಲ ಸಮಾಲೋಚನೆ ಬಳಿಕ ರಾಹುಲ್ ಗಾಂಧಿ ಅವರಿಂದ ಕರೆ ಬಂತು. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು. ಹೀಗಾಗಿ ಮರುಮಾತಿಲ್ಲದೆ ಒಪ್ಪಿಕೊಳ್ಳಬೇಕಾಯಿತು ಎಂದು ಡಿಕೆ ಶಿವಕುಮಾರ್ ಗುರುವಾರ ಹೇಳಿದರು.
ಎಲ್ಲವೂ ಚೆನ್ನಾಗಿದೆ, ಎಲ್ಲವೂ ಚೆನ್ನಾಗಿಯೇ ಇರುತ್ತದೆ, ಎಲ್ಲವೂ ಸರಿ ಹೋಗುತ್ತದೆ, ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಒಂದೇ ಸಾಲಿನ ನಿರ್ಧಾರ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ವಿದ್ಯಮಾನ ವಿವರಿಸುತ್ತ ಹೇಳಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಕರೆ ಮಾಡಿ ಇದು ಆದೇಶ. ನಾವೆಲ್ಲರೂ ಸ್ವೀಕರಿಸೋಣ. ಬಿಕ್ಕಟ್ಟು ಪರಿಹಾರಕ್ಕೆ ಸೂತ್ರ ಏನೇ ಇದ್ದರೂ ಅದು ಪಕ್ಷದ ಒಳಿತಿನ ಹಿತದೃಷ್ಟಿಯಿಂದ ಇರಲಿದೆ ಎಂದು ಹೇಳಿದರು. ಅದನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಡಿಕೆ ಶಿವಕುಮಾರ್ ವಿವರಿಸಿದರು.
ದೆಹಲಿಯಲ್ಲಿ ನಡೆದ ವಿದ್ಯಮಾನಗಳಿವು…
ಸಿದ್ದರಾಮಯ್ಯ ಅವರು ಸೋಮವಾರ ಹಾಗೂ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ದೆಹಲಿಗೆ ತೆರಳಿ ಸಿಎಂ ಆಗಲು ಲಾಬಿ ನಡೆಸಿದರು. ಇಬ್ಬರೂ ಮಂಗಳವಾರ ಪ್ರತ್ಯೇಕವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು, ರಾಹುಲ್ ಗಾಂಧಿ ಅವರು ಖರ್ಗೆ, ಕೆಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿದರು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಬುಧವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಡಿ.ಕೆ.ಶಿವಕುಮಾರ್ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದು ಸೋನಿಯಾ ಗಾಂಧಿ ಅವರೇ. ಹೀಗಾಗಿ ಸೋನಿಯಾ ಗಾಂಧಿ ಅವರ ಅಭಿಪ್ರಾಯವನ್ನು ಡಿಕೆ ಶಿವಕುಮಾರ್ ಬಯಸಿದ್ದರು. ವಿಹಾರಕ್ಕೆಂದು ಶಿಮ್ಲಾದಲ್ಲಿರುವ ಸೋನಿಯಾ ಗಾಂಧಿ ಅವರೊಂದಿಗೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಾತುಕತೆ ನಡೆಸಿದರು. ಆ ಸಂದರ್ಭದಲ್ಲಿ ರಾಹುಲ್ ಮತ್ತು ಖರ್ಗೆ ಅವರ ಜತೆಗೆ ಮಾತನಾಡುವಂತೆ ಸೋನಿಯಾ ಗಾಂಧಿ ಕೇಳಿಕೊಂಡರು.
ಬುಧವಾರ ರಾತ್ರಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಶಿವಕುಮಾರ್ ಮಾತ್ರ ಪಕ್ಷವನ್ನು ಮುನ್ನಡೆಸುತ್ತಾರೆ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಆದರೆ, ಗುರುವಾರ ಬೆಳಗ್ಗೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಕೆಸಿ ವೇಣುಗೋಪಾಲ್ ನಿವಾಸದಲ್ಲಿ ಉಪಾಹಾರ ಸೇವಿಸಿದರು. ಅಲ್ಲಿ ಡಿಕೆ ಶಿವಕುಮಾರ್ ಮುಂದೆ ಮುಖ್ಯಮಂತ್ರಿ ಆಗುವ ವಯಸ್ಸು ಇನ್ನೂ ಇದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. 75ರ ಹರೆಯದ ಸಿದ್ದರಾಮಯ್ಯನವರು ಚುನಾವಣೆಗೂ ಮುನ್ನ ಇದೇ ತಮ್ಮ ಕೊನೆಯದು ಎಂದು ಘೋಷಿಸಿದ್ದನ್ನು ನೆನಪಿಸಿದರು ಎನ್ನಲಾಗಿದೆ. ಅಲ್ಲಿಂದ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರೊಂದಿಗೆ ಖರ್ಗೆ ಅವರ ನಿವಾಸಕ್ಕೆ ಒಂದೇ ಕಾರಿನಲ್ಲಿ ತೆರಳಿದರು.
ಇಷ್ಟಾದ ಬಳಿಕ ರಾಹುಲ್ ಗಾಂಧಿ ಅವರು ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ, ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗೋಣ ಎಂದು ಹೇಳಿದ್ದಾರೆ. ಹಾಗೆ ಡಿಕೆ ಶಿವಕುಮಾರ್ ಹಟ ತಗ್ಗಿತು ಎಂದು ಮೂಲಗಳು ತಿಳಿಸಿವೆ.
ಅಧಿಕಾರದ ಜಗಳ ಕಳೆದ ಕೆಲವು ದಿನಗಳಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಅನ್ನು ಸೃಷ್ಟಿಸಿದ್ದು, ಬಿಜೆಪಿ ಪಕ್ಷದಲ್ಲಿನ ಆಂತರಿಕ ಕಲಹವನ್ನು ಪ್ರಶ್ನಿಸಿದಾಗ, ಕರ್ನಾಟಕದಲ್ಲಿ ಬಿಜೆಪಿ ತನ್ನ ವಿರೋಧ ಪಕ್ಷದ ನಾಯಕನನ್ನು ಕಂಡುಕೊಂಡಿದೆಯೇ ಎಂದು ಕಾಂಗ್ರೆಸ್ ಮರುಪ್ರಶ್ನಿಸಿದೆ.