logo
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52ನೇ ವರ್ಷದ ಸಾಮೂಹಿಕ ವಿವಾಹ; ದಾಂಪತ್ಯ ಜೀವನಕ್ಕೆ ಕಾಲಿಟ್ಟ 123 ಜೋಡಿಗಳು

Mangalore News: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52ನೇ ವರ್ಷದ ಸಾಮೂಹಿಕ ವಿವಾಹ; ದಾಂಪತ್ಯ ಜೀವನಕ್ಕೆ ಕಾಲಿಟ್ಟ 123 ಜೋಡಿಗಳು

Raghavendra M Y HT Kannada

May 02, 2024 10:41 AM IST

ಧರ್ಮಸ್ಥಳದಲ್ಲಿ ಆಯೋಜಿಸಿದ್ದ 52ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 123 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    • ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಗಿದ್ದು, 123 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. (ವರದಿ: ಹರೀಶ್ ಮಾಂಬಾಡಿ)
ಧರ್ಮಸ್ಥಳದಲ್ಲಿ ಆಯೋಜಿಸಿದ್ದ 52ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 123 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಧರ್ಮಸ್ಥಳದಲ್ಲಿ ಆಯೋಜಿಸಿದ್ದ 52ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 123 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಂಗಳೂರು (ದಕ್ಷಿಣ ಕನ್ನಡ): ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ (Dharmasthala Mass Marriage Program) ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಬುಧವಾರ ಸಂಜೆ 6.45ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 39 ಜೋಡಿ ಅಂತರ್ಜಾತಿಯ ವಿವಾಹ ಸೇರಿದಂತೆ ಒಟ್ಟು 123 ಜೋಡಿ ಧರ್ಮಸ್ಥಳದಲ್ಲಿ ನಡೆದ 52ನೇ ಸಾಮೂಹಿಕ ವಿವಾಹ (52nd Mass Marriage 2024) ಸಮಾರಂಭದಲ್ಲಿ ಹಸೆಮಣೆಗೇರಿದ್ದಾರೆ. ವಿವಾಹ ವಿಧಿಗಳನ್ನು ನೆರವೇರಿಸಿ ಸತಿಪತಿಗಳಾದರು. ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದವರನ್ನು ನೆರೆದಿದ್ದವರು ಆಶೀರ್ವದಿಸಿದ್ದಾರೆ. ವಿವಾಹ ಸಮಾರಂಭದಲ್ಲಿ ಚಲನಚಿತ್ರ ನಟ ದೊಡ್ಡಣ್ಣ ಮತ್ತು ಪತ್ನಿ ಶಾಂತಾ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆ ಮಂಗಳಸೂತ್ರ ವಿತರಿಸಿದರು.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಜಲ ಮಂಡಳಿ ಫೋನ್ ಇನ್ ಕಾರ್ಯಕ್ರಮ ಇಂದು ಬೆಳಗ್ಗೆ 9.30ಕ್ಕೆ, ಕುಂದುಕೊರತೆ, ಅಹವಾಲು ಸಲ್ಲಿಸಲು ಫೋನ್ ನಂಬರ್ ಇಲ್ಲಿದೆ..

ಕರ್ನಾಟಕ ಹವಾಮಾನ ಮೇ 17; ದಕ್ಷಿಣ ಕನ್ನಡ, ಮೈಸೂರು, ಮಂಡ್ಯ ಸೇರಿ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉಳಿದೆಡೆ ಮಳೆ ಮುನ್ಸೂಚನೆ

Bangalore Crime: ಗೃಹ ಸಚಿವರ ಆಪ್ತ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ 1 ಕೋಟಿ ರೂ. ವಂಚಿಸಿದ್ದ ಯುವಕ ಬಂಧನ

Hassan Scandal: ರೇವಣ್ಣಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಒಂದು ದಿನಕ್ಕೆ ಮಾತ್ರ ಜಾಮೀನು, ಇಂದು ವಿಚಾರಣೆ

ಬುಧವಾರ ಬೆಳಗ್ಗಿನಿಂದಲೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ತಮ್ಮ ಬೀಡಿನಲ್ಲಿ ವಧುವಿಗೆ ಸೀರೆ, ರವಿಕೆ ಮತ್ತು ವರನಿಗೆ ಧೋತಿ, ಶಾಲು ವಿತರಿಸಿದರು. ಸಂಜೆ 6 ಗಂಟೆಯಿಂದ ವಧು-ವರ ಜೋಡಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಭವ್ಯ ಮೆರವಣಿಗೆಯಲ್ಲಿ ಅಮೃತವರ್ಷಿಣಿ ಸಭಾಭವನಕ್ಕೆ ಹೋದರು. ಮುಹೂರ್ತಕ್ಕೆ ಅರ್ಧಗಂಟೆ ಮುಂಚಿತವಾಗಿ ಹೆಗ್ಗಡೆ ದಂಪತಿ ಮತ್ತು ಚಲನಚಿತ್ರ ನಟ ದೊಡ್ಡಣ್ಣ ದಂಪತಿ ಮಂಗಳಸೂತ್ರ ವಿತರಿಸಿದರು. ಆಯಾ ಜಾತಿ-ಮತ ಸಂಪ್ರದಾಯದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.

ಸಂಜೆ 6.45ಕ್ಕೆ ಸರಿಯಾಗಿ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವೇದಿಕೆಯಿಂದ ವೇದ-ಮಂತ್ರ ಘೋಷ ಪಠಣದೊಂದಿಗೆ ವರನು ವಧುವಿಗೆ ಮಂಗಳಸೂತ್ರ ಧಾರಣೆ ಮಾಡಿದರು. ಈ ಸಂದರ್ಭ ನಟ ದೊಡ್ಡಣ್ಣ ವಧುವರರಿಗೆ ಹಿತವಚನ ನೀಡಿದರು. ಉತ್ತಮ ಚಾರಿತ್ರ್ಯವಂತರಾಗಿ ಮತ್ತು ಸಭ್ಯ-ಸುಸಂಸ್ಕೃತ ನಾಗರಿಕರಾಗಿ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬೇಕು ಎಂದು ದೊಡ್ಡಣ್ಣ ಹೇಳಿದರು. ಪ್ರೀತಿ-ವಿಶ್ವಾಸ, ಪರೋಪಕಾರ ಸೇವಾ ಕಳಕಳಿ, ಸಾಮಾಜಿಕ ಬದ್ಧತೆ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸಾಮೂಹಿಕ ವಿವಾಹ ಅಂದರೆ ಸರಳ ವಿವಾಹ. ಸಾಮೂಹಿಕ ವಿವಾಹದಿಂದಾಗಿ ವರದಕ್ಷಿಣೆ ಪಿಡುಗು ಮತ್ತು ಮದುವೆಗಾಗುವ ದುಂದುವೆಚ್ಚ ಕಡಿಮೆಯಾಗಿದೆ. ನೂತನ ದಂಪತಿಗಳು ಸತ್ಸಂಗ ಮಾಡಿ ಸಂಸಾರವನ್ನು ಹೊಣೆಗಾರಿಕೆ ಮತ್ತು ಜವಬ್ದಾರಿಯಿಂದ ಅರ್ಥಪೂರ್ಣವಾಗಿ ನಿರ್ವಹಿಸಬೇಕು ಎಂದರು.

ಪ್ರತ್ಯೇಕ ವೇದಿಕೆ ನಿರ್ಮಾಣ

ಅಪಘಾತದಲ್ಲಿ ಕಾಲಿಗೆ ಪೆಟ್ಟಾದ ಪ್ರವೀಣ ಖನ್ನೂರು ಮತ್ತು ಕವಿತಾ ಗಿಡಕೆಂಚಣ್ಣವರ್ ಪರಸ್ಪರ ಪ್ರೀತಿಸಿ ಮದುವೆಗೆ ಒಪ್ಪಿದ್ದು ಅವರಿಗೆ 12,900ನೇ ಜೋಡಿ ಎಂಬ ವಿಶೇಷ ಮಾನ್ಯತೆಯೊಂದಿಗೆ ಪ್ರತ್ಯೇಕ ವೇದಿಕೆ ನಿರ್ಮಿಸಲಾಯಿತು. ಸಾಂಪ್ರದಾಯಿಕ ಶೋಭಾನೆ ಹಾಡುಗಳು ಮದುವೆಗೆ ವಿಶೇಷ ಶೋಭೆ ನೀಡಿದವು. ಧರ್ಮಸ್ಥಳದ ವತಿಯಿಂದ ನೂತನ ದಂಪತಿಗಳಿಗೆ ವಿಶೇಷ ಉಡುಗೊರೆ ನೀಡಿ ಸತ್ಕರಿಸಲಾಯಿತು. ಧರ್ಮ, ಅರ್ಥ ಮತ್ತು ಕಾಮದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಸಹಚರರಾಗಿ, ಯಾವುದೇ ದುರಭ್ಯಾಸಕ್ಕೆ ಬಲಿಯಾಗದೆ ಸಾರ್ಥಕಜೀವನ ನಡೆಸುವುದಾಗಿ ದಾಂಪತ್ಯದೀಕ್ಷೆಯನ್ನು ಸ್ವೀಕರಿಸಿದರು. ಅನೇಕ ಮಠ-ಮಂದಿರಗಳು ಹಾಗೂ ರೋಟರಿಕ್ಲಬ್ ನಂತಹ ಸೇವಾ ಸಂಸ್ಥೆಗಳು ಇದನ್ನು ಮಾದರಿ ಕಾರ್ಯಕ್ರಮ ಎಂದು ಮಾನ್ಯತೆ ನೀಡಿ ಅಲ್ಲಲ್ಲಿ ಸಾಮೂಹಿಕ ವಿವಾಹ ನಡೆಸುತ್ತಿರುವುದು ತನಗೆ ಸಂತೋಷ ನೀಡುತ್ತಿದೆ ಎಂದು ಡಿ. ವೀರೇಂದ್ರ ಹೆಗ್ಗಡೆ ಸಂತಸ ವ್ಯಕ್ತಪಡಿಸಿದರು.

ಧರ್ಮಸ್ಥಳ ಸಾಮೂಹಿಕ ವಿವಾಹದ ಆಸಕ್ತಿಕ ಮಾಹಿತಿ ಇದು

ಮದುವೆಗಾಗುವ ದುಂದುವೆಚ್ಚ ಮತ್ತು ವರದಕ್ಷಿಣೆ ತಡೆಗಟ್ಟಲು 1972 ರಲ್ಲಿ 88 ಜೊತೆ ಮದುವೆಯೊಂದಿಗೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉಚಿತ ಸಾಮೂಹಿಕ ವಿವಾಹ ಪ್ರಾರಂಭಿಸಿದರು. ಪ್ರತಿ ವರ್ಷ ಎಪ್ರಿಲ್/ಮೇ ತಿಂಗಳಿನಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ನಡೆಸಲಾಗುತ್ತದೆ. ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಹಾಗೂ ಮಂಗಳಸೂತ್ರ ನೀಡಿ ಮದುವೆಯ ಎಲ್ಲಾ ವೆಚ್ಚವನ್ನು ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಭರಿಸಲಾಗುತ್ತದೆ. ಕಳೆದ ವರ್ಷದವರೆಗೆ 12,777 ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈವರೆಗೆ ಒಂದು ಕೂಡಾ ವಿಚ್ಛೇದನ ಪ್ರಕರಣ ವರದಿಯಾಗಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ