Kambala: ಕಂಬಳ ಪ್ರಿಯರು ನಿರಾಳ; ಕರಾವಳಿಯ ಜಾನಪದ ಕ್ರೀಡೆ ಉಳಿಸಲು ನಡೆದಿತ್ತು ನಿರಂತರ ಹೋರಾಟ
ಕನ್ನಡ ಸುದ್ದಿ  /  ಕರ್ನಾಟಕ  /  Kambala: ಕಂಬಳ ಪ್ರಿಯರು ನಿರಾಳ; ಕರಾವಳಿಯ ಜಾನಪದ ಕ್ರೀಡೆ ಉಳಿಸಲು ನಡೆದಿತ್ತು ನಿರಂತರ ಹೋರಾಟ

Kambala: ಕಂಬಳ ಪ್ರಿಯರು ನಿರಾಳ; ಕರಾವಳಿಯ ಜಾನಪದ ಕ್ರೀಡೆ ಉಳಿಸಲು ನಡೆದಿತ್ತು ನಿರಂತರ ಹೋರಾಟ

Kambala: 2014ರ ಸಮಯದಿಂದಲೇ ಕಂಬಳವನ್ನು ಆಯೋಜಿಸಲು ಪ್ರಾಣಿ ದಯಾ ಸಂಘದವರು ಅಡ್ಡಿ, ಆತಂಕ ಒಡ್ಡುತ್ತಿದ್ದರು. ಕೋಣಗಳಿಗೆ ಹೊಡೆಯುತ್ತಾರೆ, ಇದರಲ್ಲಿ ಪ್ರಾಣಿಹಿಂಸೆ ಆಗುತ್ತದೆ ಎಂಬುದು ಅವರ ಮುಖ್ಯ ತಕರಾರು. ರಿಟ್ ಅರ್ಜಿ ಸಲ್ಲಿಸಿದ ವೇಳೆ 2016ರಲ್ಲಿ ಕಂಬಳವೇ ನಿಂತುಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಂಬಳಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ
ಕಂಬಳಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ

ಮಂಗಳೂರು: ರಾಜ್ಯದಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ ತಂದು, ಕರಾವಳಿ ಕರ್ನಾಟಕದಲ್ಲಿ ನಡೆಯುವ ಕಂಬಳಕ್ಕೆ (Kambala) ಮಾನ್ಯತೆ ನೀಡಿರುವುದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪ್ರಾಣಿದಯಾ ಸಂಘಗಳು ಸಲ್ಲಿಸಿದ ರಿಟ್ ಅರ್ಜಿಯನ್ನು ವಜಾಗೊಳಿಸಿರುವುದು ಕರಾವಳಿಯ ಕಂಬಳಾಭಿಮಾನಿಗಳಿಗೆ ಖುಷಿ ತಂದಿದೆ.

ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳ್ ರೋಹಿತ್ ಹೆಗ್ಡೆ ಹರ್ಷ ವ್ಯಕ್ತಪಡಿಸಿದ್ದು, ಬಹಳಷ್ಟು ವರ್ಷಗಳಿಂದ ಇದ್ದ ಅಡಚಣೆ ಕೊನೆಗೂ ದೂರವಾಗಿದೆ ಎಂದಿದ್ದಾರೆ. ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರೂ ಪತ್ರಿಕಾ ಹೇಳಿಕೆ ನೀಡಿ ಸ್ವಾಗತಿಸಿದ್ದಾರೆ.

ಕಂಬಳಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ, ಕಂಬಳಕ್ಕಿದ್ದ ನಿಷೇಧದ ಭೀತಿ ಮರೆಯಾಗಿದೆ ಎಂದು ಹೇಳಿರುವ ಅವರು, ಕರಾವಳಿಯ ಹೆಮ್ಮೆಯ ಸಂಸ್ಕೃತಿಯ ಪ್ರತೀಕವಾಗಿರುವ ಐತಿಹಾಸಿಕ ಜಾನಪದ ಕ್ರೀಡೆ ಕಂಬಳಕ್ಕಿದ್ದ ನಿಷೇಧದ ತೂಗುಗತ್ತಿ ಸುಪ್ರೀಂ ಕೋರ್ಟಿನ ಮಹತ್ವದ ತೀರ್ಪಿನ ಮೂಲಕ ನಿವಾರಣೆಯಾಗಿದೆ. ಈ ಮಹತ್ವದ ತೀರ್ಪನ್ನು ಸ್ವಾಗತಿಸುತ್ತೇನೆ. ತುಳುನಾಡಿನ ಜನತೆಯ ಕೆಚ್ಚೆದೆಯ ಹೋರಾಟಕ್ಕೆ ಮಾನ್ಯ ಸುಪ್ರೀಂ ಕೋರ್ಟ್ ಮೂಲಕ ನ್ಯಾಯ ದೊರಕಿದೆ. ಕಂಬಳದ ನಿಷೇಧದ ಬಗೆಗೆ ಪ್ರಾಣಿ ದಯಾ ಸಂಘಗಳ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು, ಈ ಹಿಂದೆ ಕರ್ನಾಟಕ ಸರಕಾರ ಪ್ರಾಣಿ ಹಿಂಸಾ ಕಾಯ್ದೆಗೆ ತಂದ ತಿದ್ದುಪಡಿಯನ್ನು ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ಎತ್ತಿ ಹಿಡಿದಿದೆ. ಇದರಿಂದ ನಮ್ಮ ಹೆಮ್ಮೆಯ ಕಂಬಳವನ್ನು ಸುಸೂತ್ರವಾಗಿ ನಡೆಸಲು ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದು ಹೇಳಿದ್ದಾರೆ. ಇದೇ ರೀತಿ ಹಲವು ಕಂಬಳ ಆಯೋಜಕರು ಸ್ವಾಗತಿಸಿ ಹೇಳಿಕೆ ನೀಡಿದ್ದಾರೆ. ಸರಾಗವಾಗಿ ನಡೆಯುತ್ತಿದ್ದ ಕಂಬಳಕ್ಕೆ ಅಡೆ, ತಡೆ ಬಂದದ್ದು ಹೇಗೆ? ಇಲ್ಲಿದೆ ಮಾಹಿತಿ.

ಕಂಬಳವೇ ನಿಂತು ಹೋಗುವ ಪರಿಸ್ಥಿತಿ

2014ರ ಸಮಯದಿಂದಲೇ ಕಂಬಳವನ್ನು ಆಯೋಜಿಸಲು ಪ್ರಾಣಿ ದಯಾ ಸಂಘದವರು ಅಡ್ಡಿ, ಆತಂಕ ಒಡ್ಡುತ್ತಿದ್ದರು. ಕೋಣಗಳಿಗೆ ಹೊಡೆಯುತ್ತಾರೆ, ಇದರಲ್ಲಿ ಪ್ರಾಣಿಹಿಂಸೆ ಆಗುತ್ತದೆ ಎಂಬುದು ಅವರ ಮುಖ್ಯ ತಕರಾರು. ರಿಟ್ ಅರ್ಜಿ ಸಲ್ಲಿಸಿದ ವೇಳೆ 2016ರಲ್ಲಿ ಕಂಬಳವೇ ನಿಂತುಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭ ಮತ್ತೆ ಕಂಬಳ ಸಂಘಟನೆ ಮಾಡಲು ಹಲವು ಹಿರಿಯರು ಒಗ್ಗೂಡಿದರು. ದೊಡ್ಡ ಮಟ್ಟದ ಸಭೆಗಳೂ ನಡೆದವು. ಭಾಸ್ಕರ ಕೋಟ್ಯಾನ್ ನೇತೃತ್ವದಲ್ಲಿ ನ್ಯಾಯಾಲಯದಲ್ಲಿ ಮತ್ತು ಹೊರಗೆ ಹೋರಾಟ ನಡೆದವು. 2018ರಲ್ಲಿ ಕರ್ನಾಟಕ ರಾಜ್ಯ ಸರಕಾರ ಪ್ರಾಣಿಹಿಂಸಾ ಕಾಯ್ದೆಗೆ ತಿದ್ದುಪಡಿ ತಂದಿತು. ರಾಷ್ಟ್ರಪತಿಗಳು ಇದಕ್ಕೆ ಅಂಕಿತ ಹಾಕಿದರು. ಬಳಿಕ ಈ ತಿದ್ದುಪಡಿ, ಸಂವಿಧಾನದ ಆಶಯಕ್ಕೆ ವಿರುದ್ಧ ಎಂದು ಪ್ರಾಣಿದಯಾ ಸಂಘಗಳು ಮತ್ತೆ ಸುಪ್ರೀಂ ಕೋರ್ಟಿಗೆ ರಿಟ್ ಸಲ್ಲಿಸಿತು. ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಪಂಚಪೀಠ ಸಮಿತಿ ವಾದ, ಪ್ರತಿವಾದ ಆಲಿಸಿ ರಿಟ್ ಅರ್ಜಿ ವಜಾಗೊಳಿಸಿತು.

ಕಂಬಳದ ಮೇಲೆ ನಿಗಾ ಇಟ್ಟಿದ್ದರು

2017ರಲ್ಲಿ ಷರತ್ತುಬದ್ಧವಾಗಿ ಕಂಬಳ ಕೂಟ ನಡೆಯಿತು. ಈ ಸಂದರ್ಭ ಅದನ್ನು ನೋಡಲೆಂದೇ ಪ್ರಾಣಿದಯಾ ಸಂಘದವರು ಆಗಮಿಸಿ, ಪ್ರತಿಯೊಂದು ಕೂಟದ ಮೇಲೆಯೂ ನಿಗಾ ಇಟ್ಟಿದ್ದರು. ಕಂಬಳ ನಡೆಯುವ ಜಾಗಗಳಿಗೆ ಅವರು ಆಗಮಿಸುತ್ತಿದ್ದರು. ಅಕ್ಷರಶಃ ಕಂಬಳ ಕೂಟದ ಆಯೋಜನೆ ಮಾಡುವವರಿಗೆ ಇದು ಕಿರಿಕಿರಿಯಾಗುತ್ತಿತ್ತು. ಜೊತೆಗೆ ಕೋಣಗಳನ್ನು ಅತಿಯಾಗಿ ಪ್ರೀತಿಸುವ ಪ್ರೇಕ್ಷಕರಿಗೂ, ಕೋಣಗಳ ಮಾಲೀಕರಿಗೂ ಇದು ಅಡ್ಡಿಯಾಗುತ್ತಿತ್ತು.

ನ್ಯಾಯಪೀಠ ಹೇಳಿದ್ದೇನು?

ಅರ್ಜಿಗಳ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ, ಜಲ್ಲಿಕಟ್ಟು, ಎತ್ತಿನಗಾಡಿ ಓಟದ ಸ್ಪರ್ಧೆ ಅಥವಾ ಕಂಬಳವನ್ನು ರಕ್ತದೋಕುಳಿಯ ಕ್ರೀಡೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇಲ್ಲಿ ಯಾರೂ ಪ್ರಾಣಿಗಳ ಮೇಲೆ ಶಸ್ತ್ರ ಪ್ರಯೋಗ ಮಾಡುವುದಿಲ್ಲ. ಈ ಕ್ರೀಡೆಗಳಲ್ಲಿ ಅಲ್ಪಮಟ್ಟಿಗೆ ಕ್ರೌರ್ಯ ಇದೆ ಎಂದು ಎನಿಸಿದರೂ ನೋಡಲು ಸೇರುವ ಜನರು ಪ್ರಾಣಿಗಳನ್ನು ಕೊಲ್ಲುವ ಉದ್ದೇಶದಿಂದ ಸೇರಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner