logo
ಕನ್ನಡ ಸುದ್ದಿ  /  ಕರ್ನಾಟಕ  /  Forest Tales: ಅಜಯ್‌ ಮಿಶ್ರ ಎಂಬ ಅಧಿಕಾರಿ ರೂಪಿಸಿದ ಅಂಚೆಯೊಳಗಿನ ಅರಣ್ಯ ಲೋಕ, ನೋಡುವ ಆಸಕ್ತಿಯುಂಟೆ

Forest Tales: ಅಜಯ್‌ ಮಿಶ್ರ ಎಂಬ ಅಧಿಕಾರಿ ರೂಪಿಸಿದ ಅಂಚೆಯೊಳಗಿನ ಅರಣ್ಯ ಲೋಕ, ನೋಡುವ ಆಸಕ್ತಿಯುಂಟೆ

Umesha Bhatta P H HT Kannada

May 08, 2024 07:38 PM IST

ಅಂಚೆ ಇಲಾಖೆಯಲ್ಲಿ ಅರಣ್ಯಲೋಕ. ಅಜಯ್‌ ಮಿಶ್ರ ಅಂಚೆ ಸಂಗ್ರಹದ ವಿಶೇಷ.

  • Forest in Postal eye ಅಂಚೆ ಇಲಾಖೆಯಲ್ಲುಂಟು ಅರಣ್ಯ ಲೋಕ. ಉತ್ತರ ಪ್ರದೇಶದವರಾದರೂ ಕರ್ನಾಟಕದಲ್ಲಿಯೇ ಮೂರೂವರೆ ದಶಕ ಅರಣ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಜಯ್‌ ಮಿಶ್ರ( Ajay Mishra) ಸಂಗ್ರಹದಲ್ಲುಂಟು ಪೋಸ್ಟ್‌ ಕಾರ್ಡ್‌, ಚೀಟಿಗಳ ಸಂಗ್ರಹ. ಅದರ ಕಥನ ಇಲ್ಲಿದೆ.

ಅಂಚೆ ಇಲಾಖೆಯಲ್ಲಿ ಅರಣ್ಯಲೋಕ. ಅಜಯ್‌ ಮಿಶ್ರ ಅಂಚೆ ಸಂಗ್ರಹದ ವಿಶೇಷ.
ಅಂಚೆ ಇಲಾಖೆಯಲ್ಲಿ ಅರಣ್ಯಲೋಕ. ಅಜಯ್‌ ಮಿಶ್ರ ಅಂಚೆ ಸಂಗ್ರಹದ ವಿಶೇಷ.

ಅದು ಆನೆಗಳ ಲೋಕ. ಆನೆಗಳ ಜಗತ್ತು ಅನಾವರಣಗೊಂಡ ಅಪರೂಪದ ಕ್ಷಣ. ಗಣೇಶನ ಅವತಾರವೆಂಬ ಹೆಸರಿನ ಕರಿಪಡೆಯ ವಿಭಿನ್ನ ನೋಟ. ಅರಣ್ಯ ಇಲಾಖೆಯ ಅತಿ ದೊಡ್ಡ ಪ್ರಾಣಿಗಳ ಪಟ್ಟಿಯಲ್ಲಿರುವ ಆನೆಗಳನ್ನು ಮತ್ಯಾವ ರೂಪದಲ್ಲಿ ನೋಡಬಹುದು. ಆನೆಗೂ ಅಂಚೆ ಚೀಟಿಯಲ್ಲಿ ಸ್ಥಾನ ಸಿಕ್ಕಿದೆ. ಹತ್ತಾರು ಅಂಚೆ ಚೀಟಿಗಳು ಆನೆಯ ಮೇಲೆಯೇ ಬಂದಿವೆ.

ಟ್ರೆಂಡಿಂಗ್​ ಸುದ್ದಿ

Mandya News: ಮಂಡ್ಯ ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 180 ಬಾಲ್ಯವಿವಾಹ ಪ್ರಕರಣ, 75ರಲ್ಲಿ ಎಫ್‌ಐಆರ್‌ ದಾಖಲು

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ವಿಶ್ವದಲ್ಲಿಯೇ ಹೆಚ್ಚು ಹುಲಿ ಹೊಂದಿರುವ ಭಾರತದಲ್ಲಿ ಹುಲಿಗಳ ಮಹತ್ವ ಸಾರಿದ್ದು ವನ್ಯಪ್ರಿಯ ಜಿಮ್‌ ಕಾರ್ಬೆಟ್‌. ಅದೂ ಒಂದೂವರೆ ಶತಮಾನದ ಹಿಂದೆಯೇ ಹುಲಿ ಬೇಟೆ ರೋಚಕ ಕ್ಷಣಗಳಿಗೆ ಸಾಕ್ಷಿಯಾದಾತ. ಅರಣ್ಯ ಜಗತ್ತಿನ ಅಂತಹ ವಿಸ್ಮಯದ ಮಹತ್ವದ ಸನ್ನಿವೇಶಗಳಿಗೆ ಅಂಚೆ ಇಲಾಖೆ ಜೀವ ನೀಡಿದೆ. ವಿಭಿನ್ನ ಅಂಚೆ ಚೀಟಿಗಳು ಜಿಮ್‌ ಕಾರ್ಬೆಟ್‌ ನೆನಪಲ್ಲಿ ಬಂದಿದೆ. ಅದೆಷ್ಟು ಹುಲಿಗಳು ಅಂಚೆ ಚೀಟಿ ಮೂಲಕ ಮನೆಗಳನ್ನು ತಲುಪಿವೆ. ಅದೆಷ್ಟು ಜನರ ಸಂಗ್ರಹದಲ್ಲಿವೆ ಎಂದರೆ ನಿಮಗೆ ಅಚ್ಚರಿಯೂ ಆಗಬಹುದು.

ಕರ್ನಾಟಕದ ಗದಗ ಜಿಲ್ಲೆ ಎಂದತಕ್ಷಣ ಬಯಲು ಪ್ರದೇಶ ಎಂದು ಸಾರಾಸಗಟಾಗಿ ಹೇಳಿ ಬಿಡುತ್ತೇವೆ. ಅಲ್ಲಿಯೂ ಅರಣ್ಯವಿದೆ. ಹಸಿರು ಲೋಕವಿದೆ. ಅದು ಕಪ್ಪತಗುಡ್ಡವೆಂಬ ಆಮ್ಲಜನಕ ಘಟಕವೂ ಹೌದು. ಇಂತಹ ಬೆಟ್ಟ ಬರೀ ಜನರ ಕಣ್ಣಿಗೆ ಮಾತ್ರ ಅಂಚೆ ಇಲಾಖೆ ಪುಟಗಳಲ್ಲೂ ಸೇರಿ ಹೋಗಿದೆ. ಗದಗ ಜಿಲ್ಲೆಯ ಹಕ್ಕಿಗಳ ಔತಣ ತಾಣ ವಿಶಾಲ ಮಾಗಡಿ ಕೆರೆ ಕೂಡ ಅಂಚೆ ಕಣ್ಣಲ್ಲಿ ಮೂಡಿದೆ.

ಆರು ವರ್ಷದ ಹಿಂದೆ ಕರ್ನಾಟಕದ ಅರಣ್ಯದಲ್ಲಿ ದುರಂತವೊಂದು ನಡೆದು ಹೋಯಿತು. ಅರಣ್ಯದೊಳಗೆ ಸೇವೆಯಲ್ಲಿದ್ದ ಮಣಿಕಂದನ್‌( Ifs Manikandan) ಎಂಬ ದಕ್ಷ ಐಎಫ್‌ಎಸ್‌ ಅಧಿಕಾರಿ ಮೇಲೆ ಕಾಡಾನೆ ಎರಗಿ ಅವರು ಹುತಾತ್ಮರೂ ಆದರು. ಅವರ ನೆನಪನ್ನು ಉಳಿಸುವ ಹಲವು ಚಟುವಟಿಕೆಗಳಲ್ಲಿ ಅಂಚೆ ಚೀಟಿಯೂ ಕೂಡ ಒಂದಾಗಿತ್ತು. ಪೋಸ್ಟ್‌ ಕಾರ್ಡ್‌ ರೂಪದಲ್ಲೂ ಅರಣ್ಯ ಅಧಿಕಾರಿಗೆ ಗೌರವ ಸಲ್ಲಿಸಲಾಯಿತು. 

ಇಂತಹ ಅರಣ್ಯ,ವನ್ಯಜೀವಿ ಮಹತ್ವ ಸಾರುವ ಅಂಚೆ ಚೀಟಿಗಳ ಸಂಗ್ರಹ ಕೂಡ ವಿಶಿಷ್ಟ ಹವ್ಯಾಸವೇ. 

ಅಜಯ್‌ ಮಿಶ್ರ ಎಂಬ ಅಂಚೆ ಮಿತ್ರ

ಅಂಚೆ ಹಾಗೂ ಅರಣ್ಯ ಇಲಾಖೆ ಭಾರತದ ಹಸಿರು ಹಾದಿ, ಪ್ರಾಣಿ,ಸಸ್ಯ ಸಂಕುಲ, ಪ್ರಕೃತಿಯ ಮಹತ್ವವನ್ನು ಸಾರುತ್ತಾ ಬಂದಿವೆ. ಅರಣ್ಯದ ಈ ಮಹತ್ವದೊಟ್ಟಿಗೆ ಅದನ್ನು ಸಂರಕ್ಷಿಸುವ ನಿಟ್ಟಿನಲ್ಲೂ ಅಂಚೆ ಇಲಾಖೆ ಕೊಡುಗೆ ನೀಡಿದೆ. ಇಂತಹ ಅಂಚೆ ಚೀಟಿಗಳು ನಿರಂತರವಾಗಿ ಬಿಡುಗಡೆಯಾಗುತ್ತಿದ್ದರೂ ಅವುಗಳನ್ನು ಒಂದೆಡೆ ಕಲೆಹಾಕಿ, ಆಸಕ್ತರಿಗೆ ನೋಡುವಂತೆ ಮಾಡುತ್ತಿರುವವರು ಕರ್ನಾಟಕದಲ್ಲಿಯೇ ಅರಣ್ಯ ಅಧಿಕಾರಿಯಾಗಿ ಮೂರೂವರೆ ದಶಕ ಸೇವೆ ಸಲ್ಲಿಸಿ ನಿವೃತ್ತರಾದ ಅಜಯ್‌ ಮಿಶ್ರ.

ಕರ್ನಾಟಕ ಸೇವೆಯ ಹಿರಿಮೆ

ಮಿಶ್ರ ಮೂಲತಃ ಉತ್ತರ ಪ್ರದೇಶದವರು. ಐಎಫ್‌ಎಸ್‌ ಅಧಿಕಾರಿಯಾಗಿ ಕರ್ನಾಟಕದಲ್ಲಿ 35 ವರ್ಷಗಳ ಕಾಲ ನಾನಾ ಹುದ್ದೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರು. 1986 ರಲ್ಲಿ ಅರಣ್ಯ ಸೇವೆಗೆ ಸೇರಿದವರು. ಕೊಳ್ಳೇಗಾಲ, ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ಕಾರ್ಯಯೋಜನೆ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದವರು. ಈ ವೇಳೆ ಮೈಸೂರು, ಮಡಿಕೇರಿ, ವಿರಾಜಪೇಟೆ, ಮಂಡ್ಯ, ಕೊಳ್ಳೆಗಾಲ ಹಾಗೂ ಹುಣಸೂರು ಉಪವಿಭಾಗಗಳ ಕಾರ್ಯಯೋಜನೆ ತಯಾರಿಸಿದ್ದು ಅಜಯ್‌ ಮಿಶ್ರ ಅವರ ಅವಧಿಯಲ್ಲಿಯೇ. ಬೆಂಗಳೂರು ಸಹಿತ ಹಲವು ಕಡೆಗಳಲ್ಲಿ ಕೆಲಸ ಮಾಡಿದವರು. ಅರಣ್ಯ ಇಲಾಖೆಯಲ್ಲಿಯೇ ಆನೆ, ಹುಲಿ ಯೋಜನೆ, ಸಂಶೋಧನೆ, ಅಭಿವೃದ್ದಿ, ಸಿಬ್ಬಂದಿ ಆಡಳಿತ ಹಾಗೂ ನೇಮಕಾತಿ, ವನ್ಯಜೀವಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದವರು. ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರೂ ಆಗಿದ್ದರು. ಅರಣ್ಯ ಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 2021ರಲ್ಲಿ ನಿವೃತ್ತರಾಗಿ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.

ಆಸಕ್ತಿ ಹಳೆಯದ್ದು

ಅಜಯ್‌ ಮಿಶ್ರ ಅವರಿಗೆ ಅರಣ್ಯ ಇಲಾಖೆಗೆ ಸೇರಬೇಕು ಎನ್ನುವ ಆಸಕ್ತಿ ಸಣ್ಣ ವಯಸ್ಸಿನಲ್ಲೇ ಇತ್ತು. ಹಸಿರು, ಪರಿಸರ ಅವರಿಗೆ ಹತ್ತಿರವಾದ ವಿಷಯವೂ ಆಗಿತ್ತು. ಪದವಿ ಮುಗಿಸಿದ ನಂತರ ಅವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಐಎಫ್‌ಎಸ್‌ ಅಧಿಕಾರಿಯಾಗಿ ಆಯ್ಕೆಯೂ ಆದರು. ಆನಂತರ ಅವರಿಗೆ ಸಿಕ್ಕಿದ್ದು ಉತ್ತರ ಪ್ರದೇಶದ ಬದಲು ಕರ್ನಾಟಕದ ಸೇವೆಯ ಅವಕಾಶ. ಗಂಧದ ಬೀಡು ಎಂದು ಕರೆಯಿಸಿಕೊಳ್ಳುವ ಕರ್ನಾಟಕಕ್ಕೆ ಬಂದಿದ್ದು ನನ್ನ ಹವ್ಯಾಸಕ್ಕೆ ಬಲ ಸಿಕ್ಕಿತು ಎಂದು ನೆನಪಿಸಿಕೊಳ್ಳುತ್ತಾರೆ ಅಜಯ್‌ ಮಿಶ್ರ.

ಕಾಲೇಜು ದಿನಗಳಲ್ಲಿಯೇ ಅವರಿಗೆ ಅಂಚೆ ಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು. ಯಾವುದಾದರೂ ಅಂಚೆ ಚೀಟಿ ಸಿಕ್ಕಿರೆ ಅದು ಅವರು ಸಂಗ್ರಹ ಸೇರುತ್ತಿತ್ತು. ಅರಣ್ಯ ಇಲಾಖೆ ಸೇರಿದ ಮೇಲೆ ಅವರು ಎಲ್ಲಾ ಅಂಚೆ ಚೀಟಿ ಸಂಗ್ರಹಿಸುವ ಬದಲು ಅರಣ್ಯ, ಪರಿಸರಕ್ಕೆ ಸಂಬಂಧಿಸಿದ ಅಂಚೆ ಚೀಟಿಗಳತ್ತಲೇ ಗಮನ ನೀಡತೊಡಗಿದರು. ಅದರಲ್ಲೂ ಭಾರತದ ಅರಣ್ಯ ಹಾಗೂ ವನ್ಯಜೀವಿಗಳು ಎನ್ನುವ ವಿಷಯದ (Forest and Wild life of India) ಅಂಚೆ ಚೀಟಿ ಹೆಚ್ಚು ಸಂಗ್ರಹಿಸಿದ್ದಾರ. ವಿಶೇಷ, ಅಪಾಯ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿ( Rare Endageored Threatned), ಪಕ್ಷಿಗಳ ಅಂಚೆ ಚೀಟಿ, ಆನೆಗಳ ಕುರಿತಾದ( Elephants The gentle Gaints) ಅಂಚೆ ಚೀಟಿಗಳ ಸಂಗ್ರಹಕ್ಕೆ ಅವರು ವಿಶೇಷ ಒತ್ತು ನೀಡಿದರು. ಅವರ ಸಂಗ್ರಹದಲ್ಲೇ ಹತ್ತು ಸಾವಿರಕ್ಕೂ ಅಧಿಕ ಅಂಚೆ ಚೀಟಿ, ಕವರ್‌ಗಳು. ಕಾರ್ಡ್‌ಗಳು, ನಾಣ್ಯಗಳೂ ಕೂಡ ಇವೆ.

ಅಪಾರ ಸಂಗ್ರಹ ಲೋಕ

ವಿಶೇಷವಾಗಿ ಬಿಡುಗಡೆ ಮಾಡುವ ಅಂಚೆ ಚೀಟಿಗಳು ಬೇಕು ಎಂದರೆ ನೀವು ಮೊದಲೇ ಇಂತಿಷ್ಟು ಹಣ ಪಾವತಿಸಿ ಕಾಯ್ದಿರಿಸಿಕೊಳ್ಳಬೇಕು. ಕೆಲವು ಅಂಚೆ ಚೀಟಿಗಳಿಗೆ ಹೆಚ್ಚಿನ ಬೆಲೆ. ಕೆಲವೊಂದು ಮಹತ್ವ ಸಾರುವ ಚಿತ್ರಗಳನ್ನು ಬಳಸಿಯೇ ಅಂಚೆ ಚೀಟಿ ಮುದ್ರಿಸಲಾಗುತ್ತದೆ. ಇದಕ್ಕೆಲ್ಲ ಸಾಕಷ್ಟು ಹಣ ವೆಚ್ಚ ಮಾಡಬೇಕು. ಮಿಶ್ರ ಅವರಿಗೆ ಹಣಕ್ಕಿಂತ ತಮ್ಮ ಇಲಾಖೆ, ಅದರ ಮಹತ್ವದ ದಾಖಲೆ ಸಂಗ್ರಹಿಸುವುದೇ ಮುಖ್ಯವಾಗಿತ್ತು. ಅರಣ್ಯ ಹಾಗೂ ಅಂಚೆ ಇಲಾಖೆ ಸೇತುಬಂಧದ ರೀತಿ ಅವರು ಮೂರೂವರೆ ದಶಕದಿಂದ ಅದೆಷ್ಟೋ ಅಂಚೆ ಚೀಟಿ ಸಂಗ್ರಹಿಸಿದ್ದಾರೆ. ಇದು ಭಾರತದ ಮಾತಾಯಿತು. ಜಗತ್ತಿನಲ್ಲೂ ಹಲವಾರು ದೇಶಗಳು ಹೀಗೆಯೇ ಅರಣ್ಯ, ಹಸಿರು, ಪ್ರಕೃತಿ, ಪ್ರಾಣಿ, ಪಕ್ಷಿಗಳು, ಘಟನೆಗಳನ್ನಾಧರಿಸಿ ಅಂಚೇ ಚೀಟಿ ಹೊರ ತಂದಿವೆ. ಅದರಲ್ಲು ಭಾರತದ ಮೇಲಿನ ಅರಣ್ಯ ಸಂಪತ್ತಿನ ಅಂಚೆ ಚೀಟಿಗಳೂ ಉಂಟು. ಅವುಗಳನ್ನು ಅಜಯ್‌ ಮಿಶ್ರ ಸಂಗ್ರಹಿಸಿದ್ದಾರೆ.

ಕರ್ನಾಟಕ ಮಾತ್ರವಲ್ಲದೇ ದೇಶದ ಹಲವು ಕಡೆಯೂ ಅವರು ಅಂಚೆ ಚೀಟಿಗಳ ಪ್ರದರ್ಶನ ಮಾಡಿದ್ದಾರೆ. ಈಗಲೂ ಕೆಲವು ವಿಷಯಾಧಾರಿತ ಅಂಚೆ ಚೀಟಿಗಳ ಪ್ರದರ್ಶನಕ್ಕೆ ಹೋಗುತ್ತಾರೆ. ಹೊಸ ಪೀಳಿಗೆಯವರಿಗೆ ಅರಣ್ಯದ ಮಹತ್ವವನ್ನು ಈ ರೀತಿಯಲ್ಲಿ ಅವರು ಸಾರುತ್ತಾರೆ.

ಅಂಚೆ ಅರಣ್ಯದ ನಂಟು

ಭಾರತದಲ್ಲಿ ಅಂಚೆ ಇಲಾಖೆ ಇತಿಹಾಸ ಶತಮಾನಕ್ಕೂ ಮೀರಿದ್ದು. ಆಗಲೇ ಇದ್ದ ಅಂಚೆ ಇಲಾಖೆ ಕಾಲಕಾಲಕ್ಕೆ ತನ್ನ ವಿಶಿಷ್ಟ ಸೇವೆಗಳ ಮೂಲಕ ಜನ ಮಾನಸದಲ್ಲಿ ಉಳಿದುಕೊಂಡಿದೆ. ಅಂಚೆ ಇಲಾಖೆ ಹಲವಾರು ವಿಷಯಗಳ ಮೇಲೆ ಅಂಚೆ ಚೀಟಿಗಳನ್ನು ಮುದ್ರಿಸುತ್ತಾ ಬಂದಿದೆ. ಕೆಲವೊಂದು ವ್ಯಾವಹಾರಿಕ ಬಳಕೆ ಅಂಚೆ ಚೀಟಿ, ಪೋಸ್ಟ್‌ ಕಾರ್ಡ್‌ಗಳಾದರೆ, ಇನ್ನು ಸ್ಮರಣೀಯ ಎನ್ನುವ ಅಂಚೆ ಚೀಟಿ, ಕಾರ್ಡ್‌, ಸ್ಮರಣಿಕೆಗಳನ್ನು ನಿಯಮಿತವಾಗಿ ಪ್ರಕಟಿಸುತ್ತಾ ಬಂದಿದೆ. ಆಯಾ ಇಲಾಖೆ, ವಲಯಗಳ ಬೇಡಿಕೆಗೆ ಅನುಗುಣವಾಗಿ ಅಂಚೆ ಚೀಟಿಗಳು ಮುದ್ರಿತಗೊಂಡಿವೆ, ಇದರಲ್ಲಿ ಅರಣ್ಯ, ಪರಿಸರ ವಿಭಾಗದ ಮುದ್ರಣವೂ ದೊಡ್ಡದಿದೆ. ಸಾವಿರಾರು ಸಂಖ್ಯೆಯಲ್ಲಿ ವನ್ಯಜೀವಿಗಳು, ಸಸ್ಯಲೋಕ, ಮರಗಳು, ಪ್ರಮುಖ ಹಸಿರು ತಾಣಗಳು, ಪಕ್ಷಿ ಜಗತ್ತು, ಚಿಟ್ಟೆಗಳು, ಹೂವುಗಳು ಇದರಲ್ಲಿ ಸೇರಿಕೊಂಡಿವೆ. ಒಂದೊಂದು ವಿಭಾಗದಲ್ಲೂ ಹತ್ತಾರು ಅಂಚೆ ಚೀಟಿಗಳು ಬಂದಿವೆ. ಕೆಲವು ಜನ ಬಳಕೆಗೆ ಇದ್ದರೆ, ಇನ್ನಷ್ಟು ಸ್ಮರಣೀಯ ಅಂಚೆ ಚೀಟಿಗಳು.

ಹಕ್ಕಿಗಳ ಜಗತ್ತು ಅಂಚೆಯಲ್ಲಿ

ಭಾರತೀಯ ಅಂಚೇ ಇಲಾಖೆಯು 1954ರಿಂದಲೂ ಹಕ್ಕಿಗಳ ಮೇಲೆ ವಿಶೇಷ ಅಂಚೆ ಚೀಟಿಗಳನ್ನು ಮುದ್ರಿಸುತ್ತಾ ಬಂದಿದೆ. ನೂರಾರು ಬಗೆಯ ಹಕ್ಕಿಗಳು. ಅಳಿವಂಚಿನ ಪಕ್ಷಿಗಳ ಚಿತ್ರಗಳಿಗೆ ಅಂಚೆ ಇಲಾಖೆ ಜೀವ ತುಂಬಿದೆ. 1966 ರ ಮಕ್ಕಳ ದಿನಕ್ಕೆ ಪಾರಿವಾಳ ಹಿನ್ನೆಯ ಅಂಚೆ ಚೀಟಿ ಬಿಡುಗಡೆಯಾಗಿತ್ತು. ಪಾರಿವಾಳವನ್ನು ಶಾಂತಿಯ ಸಂಕೇತವಾಗಿ ಮುದ್ರಿಸಿ ಮಕ್ಕಳ ದಿನದ ಗೌರವ ಹೆಚ್ಚಿಸಲಾಗಿತ್ತು.ಆನಂತರ ಇದೇ ರೀತಿ ವಿಶೇಷ ದಿನಗಳಿಗೆ ಮಹತ್ವದ ಹಕ್ಕಿಗಳನ್ನು ಜೋಡಿಸಿ ಅಂಚೆ ರೂಪ ನೀಡುತ್ತಾ ಬಂದಿರುವ ದೊಡ್ಡ ಇತಿಹಾಸವೇ ಇದೆ. ಇದರಲ್ಲಿ ಹಿಮಾಲಯದ ಹತ್ತಾರು ಹಕ್ಕಿಗಳು ಕೂಡ ಅಂಚೇ ರೂಪ ಪಡೆದಿವೆ. ಆಂಧ್ರಪ್ರದೇಶದಲ್ಲಿ ಐಎಫ್‌ಎಸ್‌ ಅಧಿಕಾರಿಯಾಗಿದ್ದ ಮಾದಿರಾಜು ಲೋಕೇಶ್ವರ ರಾವ್‌ ಅವರಿಗೂ ಇದೇ ರೀತಿಯ ಹವ್ಯಾಸ. ಅರಣ್ಯಕ್ಕೆ ಸಂಬಂಧಿಸಿದ ಅಂಚೆ ಚೀಟಿಗಳು, ಪೋಸ್ಟ್‌ ಕಾರ್ಡ್‌ಗಳು, ಕವರ್‌ಗಳನ್ನು ಸಂಗ್ರಹಿಸಿದ್ದಾರೆ. ಅದರಲ್ಲೂ ಹಿಮಾಲಯದ ಹಕ್ಕಿಗಳ ಕುರಿತು ಅಂಚೆ ಇಲಾಖೆ ಹೊರ ತಂದಿರುವ ಅಂಚೆಚೀಟಿ ಹಾಗೂ ಇತರೆ ಮಾಹಿತಿ ಆಧರಿಸಿ ಪುಸ್ತಕವೊಂದನ್ನು ಪ್ರಕಟಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿರುವ ಈ ಪುಸ್ತಕ ಅರಣ್ಯ ಹಾಗೂ ಅಂಚೆಯ ಕೊಂಡಿಯಂತಿದೆ.

ಭಾರತದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಪರಿಸರ ಪ್ರಿಯರ ಸಂಗ್ರಹದಲ್ಲಿ ಹತ್ತಾರು ಅಂಚೆ ಚೀಟಿಗಳು. ಅದಕ್ಕೆ ಪೂರಕವಾದ ಪುಸ್ತಕಗಳೂ ಇರಬಹುದು. ಅಜಯ್‌ ಮಿಶ್ರ ಅವರ ಬಳಿ ಖಜಾನೆಯಷ್ಟು ಅಂಚೆ ಚೀಟಿಗಳು ತುಂಬಿವೆ. ಅಗತ್ಯ ಬಿದ್ದರೆ ಅಂಚೆಯೊಳಗಿನ ಅರಣ್ಯ ಸಂಪತ್ತನ್ನು ನಿಮ್ಮೂರಿಗೂ ತರಬಲ್ಲರು. ನೋಡಲು ಆಸಕ್ತಿ ನಿಮಗೆ ಇರಬೇಕಷ್ಟೇ !

-ಕುಂದೂರು ಉಮೇಶಭಟ್ಟ, ಮೈಸೂರು

 

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ