Forest Tales column: ಕಾಡು ಮತ್ತು ಮಳೆ ವೈಭವ: ಅಟನ್‌ಬರೋ ತೆರೆದಿಟ್ಟ ಹವಾಮಾನ ವೈಪರೀತ್ಯದ ನೋಟಗಳು
ಪಶ್ಚಿಮ ಘಟ್ಟಗಳ ಸೆರಗಿನಲ್ಲಿಯೇ ಇದ್ದುಕೊಂಡು ದಟ್ಟಾರಣ್ಯದೊಂದಿಗೆ ಮಳೆಯನ್ನುತರುತ್ತಿದ್ದ ಮಲೆನಾಡು, ಕರಾವಳಿ ಪ್ರದೇಶದಲ್ಲೂ ಸರ್ವೇ ಸಾಮಾನ್ಯವಾಗಿದೆ. ಮಳೆ ಏಕೆ ಹೋಯಿತು ಎಂದು ಚರ್ಚಿಸುತ್ತೇವೆ. ಕಾಡು ಹಾಳಾಗಿ ಹೋಗಿದೆ. ಹವಾಮಾನ ವೈಪರೀತ್ಯದ ಪರಿಣಾಮ ಮಳೆಗಳೂ ಬದಲಾಗಿ ಹೋಗಿವೆ ಎನ್ನುವ ಕಡೆಗೆ ಮಾತು ಹೊರಳುತ್ತದೆ. ಕಾಡು ಮತ್ತು ಮಳೆ ಕುರಿತು ಈ ವಾರದ ಕಾಡಿನ ಕಥೆಗಳಲ್ಲಿ…
ಮಳೆಗೂ ಕಾಡಿಗೂ ನಂಟಿದೆಯೇ?. ಇಲ್ಲ ಎನ್ನುವ ಸ್ಥಿತಿಯಲ್ಲಿ ನಾವಿಲ್ಲ. ಮಳೆ ಬರಬೇಕೆಂದರೆ ಕಾಡೇ ಬೇಕಿಲ್ಲವೇನು ಎನ್ನುವ ಮರು ಪ್ರಶ್ನೆಯನ್ನೇ ನಾವು ಹಾಕುತ್ತೇವೆ. ಕೃತಕ ಮಳೆ, ಕಾಡನ್ನೇ ಸೃಷ್ಟಿಸುವ ಕಾಲದಲ್ಲಿ ನಾವಿದ್ದೇವೆ. ಕೊನೆಗೆ ಕಾಡು ಸಮೃದ್ದವಾಗಿದ್ದರೆ ಮಳೆ ಯಥೇಚ್ಛವಾಗಿ ಬರುತ್ತದೆ. ಕಾಡೇ ಮಳೆಗೆ ಮೂಲ ಎಂದು ಪ್ರಬಂಧ ಶೈಲಿಯಲ್ಲಿ ಭಾಷಣ ಶುರು ಮಾಡಿಕೊಳ್ಳುತ್ತೇವೆ. ಆಗ ಹೇಗಿತ್ತು ಗೊತ್ತಾ? ಮಳೆಗಾಲ ಅಂದರೆ ಎಷ್ಟು ಚೆಂದ ಅನುಭವಿಸುತ್ತಿದ್ದೆವು. ಕಾಡು ಸಮೃದ್ದವಾಗಿತ್ತು. ಮಳೆಯೂ ಹಾಗೆಯೇ... ಎನ್ನುತ್ತಾ ಹಳೆಯದನ್ನು ನೆನಪಿಸಿಕೊಂಡು ಹಳ ಹಳಿಸುತ್ತೇವೆ. ಕಾಲ ಕೆಟ್ಟು ಹೋಗಿದೆ ಬಿಡಿ. ಎಲ್ಲವೂ ಬದಲಾಗಿದೆ. ಕಾಡುಗಳಲ್ಲೇ ಮಳೆ ಇಲ್ಲ. ಮಲೆನಾಡೇ ಮಳೆ ಕಾಣದ ಕಾಲ ಬಂದಿದೆ ಎಂದು ಕಾಲವನ್ನೂ ದೂರಿ ಬಿಡುತ್ತೇವೆ.
ಇಂತಹ ಚರ್ಚೆಗಳು ಬಯಲು ಸೀಮೆ, ಅರೆಮಲೆನಾಡು ಪ್ರದೇಶದವರು ಮಾತ್ರವಲ್ಲ. ಪಶ್ಚಿಮ ಘಟ್ಟಗಳ ಸೆರಗಿನಲ್ಲಿಯೇ ಇದ್ದುಕೊಂಡು ದಟ್ಟಾರಣ್ಯದೊಂದಿಗೆ ಮಳೆಯನ್ನುತರುತ್ತಿದ್ದ ಮಲೆನಾಡು, ಕರಾವಳಿ ಪ್ರದೇಶದಲ್ಲೂ ಸರ್ವೇ ಸಾಮಾನ್ಯವಾಗಿದೆ. ಮಳೆ ಏಕೆ ಹೋಯಿತು ಎಂದು ಚರ್ಚಿಸುತ್ತೇವೆ. ಕಾಡು ಹಾಳಾಗಿ ಹೋಗಿದೆ. ಹವಾಮಾನ ವೈಪರಿತ್ಯದ ಪರಿಣಾಮ ಮಳೆಗಳೂ ಬದಲಾಗಿ ಹೋಗಿವೆ ಎನ್ನುವ ಕಡೆಗೆ ಮಾತು ಹೊರಳುತ್ತದೆ.
ಇದು ಹಿಂದೆಲ್ಲಾ ಮಳೆಯನ್ನು ಕಂಡು ಅನುಭವಿಸಿ ದಟ್ಟ ಅನುಭವ ಹೊಂದಿರುವವರೇ ಹೇಳುವ ಮಾತುಗಳಿವು. ಮಾಸಕ್ಕೆ ಅನುಗುಣವಾಗಿ ಮಳೆಗಳನ್ನು ಲೆಕ್ಕ ಹಾಕುತ್ತಿದ್ದರು. ಎಷ್ಟು ಮಳೆ ಬಂದಿತು. ಯಾವ ಮಳೆ ಬರಬೇಕು ಎಂದು ನಿಖರವಾಗಿಯೂ ಹೇಳುತ್ತಿದ್ದರು. ಮಳೆಗಳು ಅವರ ಬದುಕಿನ ಭಾಗವೇ ಆಗಿ ಹೋಗಿದ್ದವು. ಮಳೆಗೆ ಹೊಂದಿಕೊಂಡು ಹೇಗೆ ಜೀವನ ನಡೆಸಬೇಕು. ಮಳೆಗಾಲಕ್ಕೆ ನಮ್ಮ ಜೀವನ ಹೇಗಿರಬೇಕು ಎಂದು ಯೋಜಿಸಿಕೊಳ್ಳುವವರೂ ಇದ್ದರು. ಅದೆಲ್ಲವೂ ನಿಜ ಮಳೆಗಾಲದ ಕಥೆ ಹಾಗೂ ಮಲೆನಾಡುಗಳ ಕಥೆ.
ಕಾಡುಗಳ ಬಗ್ಗೆಯೂ ಅವರಿಗೆ ಅದೇ ಗೌರವ. ನಮ್ಮನ್ನು ಕಾಪಾಡಳುವವಳು ವನದೇವತೆ ಎನ್ನುವ ನಂಬಿಕೆ. ಕಾಡು ಉಳಿಸಿಕೊಂಡರೆ ಮುಂದಿನ ಪೀಳಿಗೆಯೂ ಉಳಿದೀತು ಎನ್ನುವ ನಂಬಿಕೆ. ಅಂತಹ ನಂಬಿಕೆಗಳು ಬರೀ ಮಾತಿನಲ್ಲಿ ಉಳಿಯದೇ ಕೃತಿಯಲ್ಲೂ ಇರುತ್ತಿದ್ದವು. ವನದೇವತೆಯ ನಿಜ ಆರಾಧಕರೂ ಆಗಿದ್ದರು ಹಿಂದಿನವರು. ಇದರಿಂದಲೇ ಏನೋ ಮಳೆ ಮತ್ತು ಕಾಡು ಜನರ ಅವಿಭಾಜ್ಯ ಅಂಗಗಳೇ ಆಗಿ ಹೋಗಿದ್ದವು. ಒಂದನ್ನು ಬಿಟ್ಟು ಮತ್ತೊಂದು ಇಲ್ಲ. ಅವುಗಳೊಂದಿಗೆ ನಮ್ಮ ಬದುಕು ಎಂದು ನಂಬಿ ನಡೆಯುತ್ತಿದ್ದರು.
ನಾಲ್ಕು ದಶಕದ ಹಿಂದಿನ ಮಾತು. ಸಂಬಂಧಿಕರ ಮನೆಗೆಂದು ಅಪ್ಪಟ ಮಲೆನಾಡು ತೀರ್ಥಹಳ್ಳಿಗೆ ಹೋಗಿದ್ದೆವು. ದಟ್ಟ ಕಾಡು, ಹಸಿರು ರಾಶಿಯ ಮಧ್ಯೆ ಹೋಗುವುದೇ ಚೆಂದ. ಜತೆಗೆ ಮಳೆಯೋ ಮಳೆ. ಗಾಳಿ, ಮಿಂಚು ಗುಡುಗಿನ ಬಳಿಕ ವರುಣ ದರ್ಶನವಾಗುತ್ತಿತ್ತು. ಆನಂತರ ಸುರಿಯುತ್ತಿದ್ದ ಮಳೆಯನ್ನು ಕುಳಿತು ನೋಡುವುದೇ ಚಂದ. ಕೆಲವೊಮ್ಮೆ ರಣಮಳೆಗಳೂ ಕೂಡ. ಚಂಡಿ ಹಿಡಿದು ಸುರಿಯುತ್ತಿದ್ದವು. ಆ ದಟ್ಟ ಮಳೆ- ಕಾಡಿನ ನೆನಪು ಈಗಲೂ ಮನದ ಮೂಲೆಯಲ್ಲಿ ಸ್ಥಾನ ಪಡೆದಿದೆ.
ಎರಡೂವರೆ ದಶಕದ ಹಿಂದೆ ಮೈಸೂರಿಗೆ ಬಂದಾಗ ಕೊಡಗಿನಲ್ಲಿ ಕೆಲಸ ಮಾಡುವ ಸಂದರ್ಭ. ಅದು ಮಳೆಗಾಲದ ಸಮಯ ಬೇರೆ. ಮೈಸೂರು ಜಿಲ್ಲೆಯ ಕಾವೇರಿ ಸೇತುವೆ ದಾಟಿ ಕೊಡಗನ್ನು ಪ್ರವೇಶಿಸಿದರೆ ಆ ಅನುಭವವೇ ಭಿನ್ನ. ಕಾಡ ನಡುವೆಯೇ ರೂಪುಗೊಂಡಿರುವ ರಸ್ತೆಯಲ್ಲಿ ಹೋಗುತ್ತಿದ್ದರೆ ಮುಗಿಲೆತ್ತರದ ಮರಗಳು, ಅದರ ಮೇಲೆ ಆಕಾಶವೇ ಎನ್ನುವಷ್ಟರ ಮಟ್ಟಿಗೆ ಕಾಡು. ಒಂದು ತಿಂಗಳು ಕೊಡಗು ಜಿಲ್ಲೆಯ ವಾಸ ಮಲೆನಾಡಿನ ದಟ್ಟ ಅನುಭವವನ್ನೇ ಕಟ್ಟಿಕೊಟ್ಟಿತ್ತು.
ಉತ್ತರ ಕರ್ನಾಟಕದ ವಿಜಯಪುರ ಬಾಗಲಕೋಟೆ, ಯಾದಗಿರಿ, ರಾಯಚೂರು ಕಲಬುರಗಿ ಜಿಲ್ಲೆಗಳು. ಬರವನ್ನೇ ಹೊದ್ದು ಮಲಗಿರುವ ಜಿಲ್ಲೆಗಳು. ಕರ್ನಾಟಕದಲ್ಲೇ ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾದ ಆಲಮಟ್ಟಿ ಈ ಭಾಗದವರ ಜೀವನಾಡಿ. ಈ ಜಲಾಶಯಕ್ಕೆ ನೀರು ಬರಬೇಕಂದರೆ ಪಶ್ಚಿಮಘಟ್ಟದ ದಟ್ಟ ಭಾಗವಾದ ಮಹಾರಾಷ್ಟ್ರ ಸಹ್ಯಾದ್ರಿ ಕಣಿವೆಯಲ್ಲಿ ಭಾರೀ ಮಳೆಯಾಗಬೇಕು. ಅಲ್ಲಿ ಸುರಿದ ಮಳೆ ನಮ್ಮ ನಾಡಿನ ದಾಹವನ್ನು ತಣಿಸುವಂತದ್ದು. ಅಲ್ಲಿ ಅನಾವೃಷ್ಟಿಯಿಂದ ಮಳೆ ಕೊರತೆಯಾದರೆ ನಮಗೆ ಬರ. ಅಲ್ಲಿ ಅತಿವೃಷ್ಟಿಯಿಂದ ಮಳೆ ಸುರಿದರೇ ನಮಗೆ ಅನಾಹುತ ಎನ್ನುವ ಸನ್ನಿವೇಶ. ಮೂರು ವರ್ಷದ ಹಿಂದೆ ಸುರಿದ ಭಾರೀ ಮಳೆಯಿಂದ ಕೃಷ್ಣಾ, ಮಲಪ್ರಭ, ಘಟಪ್ರಭ ಏಕಕಾಲಕ್ಕೆ ಉಕ್ಕಿ ಹರಿದಿದ್ದರಿಂದ ಜನ ಜೀವನ ಅಸ್ತವ್ಯಸ್ತವಾಗಿ ಹೋಗಿತ್ತು. ದಶಕದ ಹಿಂದೆ ಅನುಭವಿಸಿದ್ದ ಮಳೆ ಅನಾಹುತವನ್ನು ಇದು ನೆನಪಿಸಿ ಎಷ್ಟೋ ಜನ ಮನೆ, ಜಾನುವಾರುಗಳನ್ನು ಕಳೆದುಕೊಂಡರು. ಅಂದರೆ ನಿಗದಿತ ಸಮಯಕ್ಕೆ, ಇಂತಿಷ್ಟೇ ಎಂದು ಬರಬೇಕಾದ ಮಳೆ ಒಂದೇ ಅವಧಿಗೆ ಸುರಿದು ಬಿಟ್ಟಾಗ ಅನಾಹುತ ಅನಿವಾರ್ಯವೇ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
ಇಷ್ಟೆಲ್ಲಾ ಅನಾಹುತಗಳ ಹಿಂದಿನ ಕಾರಣ ಹುಡುಕಿದರೆ ಈಗಲೂ ಮಲೆನಾಡುಗಳು ಹಾಗೆಯೇ ಇವೆ. ಏನು ಬದಲಾಗಿದೆ ಎಂದು ಕೇಳಿಕೊಂಡರೆ ಬದಲಾವಣೆ ಗೊತ್ತಾಗುತ್ತದೆ. ಬೆಟ್ಟ ಗುಡ್ಡಗಳು ದಟ್ಟ ಮಲೆನಾಡಿನಲ್ಲೇ ಕರಗಿವೆ. ಅಭಿವೃದ್ದಿ ನೆಪದಲ್ಲಿ ಎಲ್ಲವನ್ನೂ ಅಯೋಮಯ ಮಾಡಿದ್ದೇವೆ. ಕಾಡು ಕಡಿದು ರೆಸಾರ್ಟ್‌ಗಳು, ಪ್ರವಾಸಿ ತಾಣಗಳು ಎಲ್ಲೆಲ್ಲೂ ತಲೆ ಎತ್ತಿವೆ. ಎಷ್ಟು ಪ್ರಮಾಣ ಎಷ್ಟಿರಬೇಕಿತ್ತೋ ಅದನ್ನೂ ಮೀರಿ ಅಭಿವೃದ್ದಿಯ ಹಾದಿಯನ್ನು ನಾವು ದಾಟಿದ್ದೇವೆ. ಇದರ ಪರಿಣಾಮ ಮೂರು ವರ್ಷದ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಗುಡ್ಡಗಳ ಕುಸಿತದಂತಹ ಉದಾಹರಣೆಗಳನ್ನು ಕಂಡಿದ್ದೇವೆ.
ಇದನ್ನು ನಾವು ಹೇಗೆ ನೋಡಬಹುದು. ಮನುಷ್ಯದ ಮಿತಿ ಮೀರಿದ ಆಸೆಯೇ. ಕಾಡು- ಮಳೆ ಇವುಗಳನ್ನೇ ಬದಲಿಸುವ ಅನಗತ್ಯ ಪ್ರಯತ್ನವೇ. ಹೊಸ ತಲೆಮಾರಿಗೆ ಅರಣ್ಯದ ಬಗ್ಗೆ ಪ್ರೀತಿ, ಮಳೆಯ ಮಹತ್ವವನ್ನು ತಿಳಿಸಲು ನಾವು ವಿಫಲರಾಗಿದ್ದೇವೆ. ಪ್ರಶ್ನೆಗಳಿಗೆ ಉತ್ತರ ಬಲು ಸುಲಭ. ಆಗಿರುವ ಪರಿಣಾಮಗಳು ಮಾತ್ರ ಅಪಾರ.
ಕರ್ನಾಟಕದ ಅರಣ್ಯ ಮಹತ್ವವನ್ನು ಸಾರುವ ವಿಶೇಷ ಸಾಕ್ಷ್ಯಚಿತ್ರವೊಂದು ಮೂರು ವರ್ಷದ ಹಿಂದೆ ಬಿಡುಗಡೆಯಾಯಿತು. ಅಮೋಘವರ್ಷ ಜೆ.ಎಸ್, ಕಲ್ಯಾಣ್ ವರ್ಮಾ, ಶರತ್ ಚಂಪತಿ, ವಿಜಯ್ ಮೋಹನ್ ರಾಜ್ ನಿರ್ದೇಶನದ 'ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರ ಗಮನ ಸೆಳೆಯಿತು. ಈ ಸಿನೆಮಾಕ್ಕೆ ಮಹತ್ವ ಬಂದಿದ್ದುಆ ಸಾಕ್ಷ್ಯ ಚಿತ್ರಕ್ಕೆ ಹಿನ್ನಲೆ ನೀಡಿದ ಡೇವಿಡ್ ಅಟನ್‌ಬರೋ ಎನ್ನುವ 97 ವರ್ಷದ ಆ ಹಿರಿಜೀವದ ವಿಶಿಷ್ಟ ಧ್ವನಿಯಿಂದ. ಅಟನ್‌ಬೊರೊ ಪ್ರಕೃತಿ ವಿಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ ಮಹಾ ಸಾಧಕ.
ಕೆಲ ದಿನಗಳ ಹಿಂದೆ ಲಂಡನ್‌ನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಟನ್‌ಬರೋ ಹವಾಮಾನ ವೈಪರೀತ್ಯ ಮತ್ತು ಕಾಡಿನ ಮಹತ್ವವನ್ನು ತಮ್ಮದೇ ಮಾತುಗಳಲ್ಲಿ ಬಿಡಿಸಿಟ್ಟಿದ್ದರು.
ಈಗಾಗಲೇ ಕಾಡು ಕಣ್ಮರೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಸಮುದ್ರದಲ್ಲಿನ ಹವಳದ ದಿಬ್ಬಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಉತ್ತರ ತುದಿ ಕರಗುತ್ತಿರುವ ಸನ್ನಿವೇಶವೂ ನಮ್ಮ ಕಣ್ಣ ಮುಂದೆ ಇದೆ. ಪ್ರಕೃತಿ ಅದರಂತೆಯೇ ಇರಲು ಬಿಟ್ಟರೆ ನಮ್ಮ ಸುತ್ತಮುತ್ತಲಿನ ಹವಾಗುಣವನ್ನು ಸ್ವಚ್ಛವಾಗಿಡುತ್ತದೆ. ಹವಾಮಾನವೈಪರಿತ್ಯಕ್ಕೆ ಕಾರಣವಾದ ಚಟುವಟಿಕೆಗಳಿಗೆ ತಡೆಯೊಡ್ಡಿದರೆ ಮಾತ್ರ ನಮ್ಮ ಜೀವನವೂ ಸುಧಾರಿಸಲಿದೆ. ಮೂರು ವರ್ಷದ ಹಿಂದೆ ಕೋವಿಡ್ ಎನ್ನುವ ಕಾಣದ ವೈರಾಣು ಮಾನವ ಜೀವ ಸಂಕುಲವನ್ನು ಇನ್ನಿಲ್ಲದಂತೆ ಹಿಂಡಿ ಹಾಕಿತು. ಆಗ ನಮ್ಮನ್ನು ಸಂತೈಸಿದು ಇದೇ ಹಸಿರು, ಪ್ರಕೃತಿ. ನಮ್ಮ ಪ್ರಾಕೃತಿಕ ಸಂಪತ್ತು ಈಗ ಗಂಭೀರ ಅಪಾಯದಲ್ಲಿದೆ. ಇದರ ಪರಿಣಾಮಗಳನ್ನು ಊಹಿಸಲು ಸಾಧ್ಯವಿಲ್ಲ. ದೊಡ್ಡ ದುರಂತವಂತೂ ನಮ್ಮನ್ನು ಕಾಡಲಿದೆ.ಮುಂದಿನ ಹತ್ತು ವರ್ಷ ನಾವು ದೊಡ್ಡ ಬದಲಾವಣೆ ಮಾಡಲು ಮನಸು ಮಾಡಲೇಬೇಕು. ಈಗಿನಿಂದಲೇ ಪ್ರಕೃತಿಯ ಉಳಿವಿಗೆ ಪ್ರಯತ್ನಿಸಲೇಬೇಕು ಎಂದರು ಅಟನ್‌ಬೊರೊ
ಇದು ಅಟನ್‌ಬರೋ ಅವರ ಕಳಕಳಿ ಮಾತ್ರವಲ್ಲ. ನಮ್ಮೆಲ್ಲರ ಜವಾಬ್ದಾರಿಯೂ ಹೌದು.
(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರೆಹಗಳಿಗೆ ಜೀವಾಳ. umesh.bhatta@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್ ಮಾಡಬಹುದು.)
ವಿಭಾಗ