logo
ಕನ್ನಡ ಸುದ್ದಿ  /  ಕರ್ನಾಟಕ  /  Haveri Crime: ಹೊಟೇಲ್‌ನಲ್ಲಿ ಅನ್ಯಕೋಮಿನ ಜೋಡಿ: ನೈತಿಕ ಪೊಲೀಸ್‌ ಗಿರಿ ನಡೆಸಿದ ಮೂವರ ಬಂಧನ

Haveri crime: ಹೊಟೇಲ್‌ನಲ್ಲಿ ಅನ್ಯಕೋಮಿನ ಜೋಡಿ: ನೈತಿಕ ಪೊಲೀಸ್‌ ಗಿರಿ ನಡೆಸಿದ ಮೂವರ ಬಂಧನ

HT Kannada Desk HT Kannada

Jan 11, 2024 08:36 PM IST

google News

ಹಾವೇರಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ ಗಿರಿ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    • Haveri police ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿಗೆ ಬಂದಿದ್ದ ಉತ್ತರ ಕನ್ನಡ ಜಿಲ್ಲೆಶಿರಸಿಯ ಅನ್ಯಕೋಮಿನ ಜೋಡಿ ಮೇಲೆ ನೈತಿಕ ಪೊಲೀಸ್‌ ಗಿರಿ ತೋರಿದ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ ಗಿರಿ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ ಗಿರಿ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಹಾವೇರಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ವರದಿಯಾಗುವ ನೈತಿಕ ಪೊಲೀಸ್‌ಗಿರಿ ಉತ್ತರ ಕರ್ನಾಟಕ ಭಾಗಕ್ಕೂ ಹಬ್ಬಿದೆ. ಹಾವೇರಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ ಗಿರಿ ನಡೆಸಿದ ಮೂವರು ಮುಸ್ಲೀಂ ಯುವಕರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಇಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ. ಹೊಟೇಲ್‌ವೊಂದರಲ್ಲಿ ಜೋಡಿ ಕಾಣಿಸಿಕೊಂಡರು ಎನ್ನುವುದನ್ನು ಸಹಿಸಲಾಗದೇ ಐವರ ಗುಂಪು ಇಬ್ಬರ ಮೇಲೂ ಹಲ್ಲೆ ಮಾಡಿದ್ದು, ಕೂಡಲೇ ಹಾವೇರಿ ಜಿಲ್ಲಾ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇದು ನಡೆದಿರುವುದು ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ನಾಲ್ಕರ್‌ ಕ್ರಾಸ್‌ ಎಂಬಲ್ಲಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನವರಾದ ಹಿಂದೂ ವ್ಯಕ್ತಿಯೊಬ್ಬರು ಅದೇ ತಾಲ್ಲೂಕಿನ ವಿವಾಹಿತ ಮುಸ್ಲೀಂ ಮಹಿಳೆಯೊಂದಿಗೆ ನಾಲ್ಕರ್‌ ಹೊಟೇಲ್‌ಗೆ ಹೋಗಿದ್ದರು. ಇದನ್ನು ಗಮನಿಸಿದ ಇದೇ ಗ್ರಾಮದ ಆಟೋ ಚಾಲಕನೊಬ್ಬ ಅಕ್ಕಿ ಆಲೂರು ಗ್ರಾಮದ ಯುವಕರಿಗೆ ಮಾಹಿತಿ ನೀಡಿದ್ದ. ತಕ್ಷಣವೇ ಅಲ್ಲಿಗೆ ಬಂದ ಐವರ ಗುಂಪು ಇಬ್ಬರನ್ನು ಕೂಡಿ ಹಾಕಿ ಹಲ್ಲೆ ನಡೆಸಿತ್ತು. ನಾವು ಪರಿಚಯಸ್ಥರು, ತೊಂದರೆ ಕೊಡಬೇಡಿ ಎಂದು ಬೇಡಿಕೊಂಡರೂ ಹಲ್ಲೆ ಮಾಡಿದ್ದರು. ಅಲ್ಲಿದ್ದವರು ಬಿಡಿಸಲು ಹೋದರೂ ಬಿಟ್ಟಿರಲಿಲ್ಲ.

ಕೆಲವರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದರು. ಇದು ಕೂಡ ವೈರಲ್‌ ಆಗಿತ್ತು.

ವಿಷಯ ತಿಳಿಯುತ್ತಲೇ ಹಾನಗಲ್‌ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಇಬ್ಬರನ್ನು ರಕ್ಷಿಸಿದ್ದರು. ಹಲ್ಲೆ ಮಾಡಿ ಪರಾರಿಯಾಗಿದ್ದ ಅಫ್ತಾಬ್ ಮಕ್ಬೂಲ್‍ ಅಹ್ಮದ್ ಚಂದನಕಟ್ಟಿ (24), ಮದರ್‌ಸಾಬ್‌ ಮಹ್ಮದ್‍ ಇಸಾಕ್ ಮಂಡಕ್ಕಿ (23) ಎಂಬುವವರನ್ನು ಬಂಧಿಸಿದ್ದರು. ಆನಂತರ ಸಮೀವುಲ್ಲಾ ಲಾಲನವರ್‌ ಎಂಬಾತನನ್ನು ಸೆರೆ ಹಿಡಿದಿದ್ದರು. ಇನ್ನೂ ಇಬ್ಬರು ತಲೆ ಮರೆಸಿಕೊಂಡಿದ್ದು ಅವರ ಸೆರೆಗೆ ಬಲೆ ಬೀಸಲಾಗಿದೆ.

ಘಟನೆ ಕುರಿತು ಮಾಹಿತಿ ನೀಡಿರುವ ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಶುಕುಮಾರ್‌, ನೈತಿಕ ಪೊಲೀಸ್‌ ಗಿರಿ ನಡೆಸಿರುವ ಐವರ ವಿರುದ್ದ ಪ್ರಕರಣ ದಾಖಲಾಗಿದೆ. ಮೂವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಬೊಮ್ಮಾಯಿ ಟೀಕೆ

ನೈತಿಕ ಪೊಲೀಸ್ ಗಿರಿ ವಿರುದ್ಧ ಯಾವಾಗಲೂ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನಲ್ಲಿ ನಡೆದಿರುವ ನೈತಿಕ ಪೊಲಿಸ್ ಗಿರಿಯ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ. ಈ ಪ್ರಕರಣದಲ್ಲಿ ಸಿಎಂ ತಮ್ಮ ನಿಲುವು ಪ್ರಕಟಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪ ಸಂಖ್ಯಾತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆಗಿರುವ ಆರೋಪ ಕೇಳಿ ಬಂದಿದ್ದು, ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿ, ಪೊಲೀಸರು ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಗಡ್ಡೆಗಳ ಬೆಳವಣಿಗೆ ತಡೆಯುವ ಕುಂಬಳಕಾಯಿ; ಇತರ ಆರೋಗ್ಯ ಪ್ರಯೋಜನಗಳಿವು

ವಿಭಿನ್ನ ಕೋಮಿನವರು ಒಂದು ರೂಮಿನಲ್ಲಿ ಇದ್ದಾಗ ಅವರ ಮೇಲೆ ಹಲ್ಲೆಯಾಗಿದೆ. ಗ್ಯಾಂಗ್ ರೇಪ್ ಆಗಿದೆ ಅಂತ ಆರೋಪ ಇದೆ. ಈ ಬಗ್ಗೆ ಹಾವೇರಿ ಪೊಲಿಸ್ ವರಿಷ್ಠರ ಜೊತೆ ಮಾತನಾಡಿದ್ದೇನೆ‌. ಅವರು ಅದನ್ನು ಅಲ್ಲಗಳೆಯುತ್ತಿದ್ದಾರೆ. ಆದರೆ, ತಕ್ಷಣ ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದೇನೆ. ನೈತಿಕ ಪೊಲಿಸ್ ಗಿರಿ ಮಾಡಿದರೆ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದರು. ಈಗ ಅಲ್ಪ ಸಂಖ್ಯಾತ ಮಹಿಳೆಯ ಮೇಲೆಯೇ ದೌರ್ಜನ್ಯ ಆಗಿದೆ‌. ಅವರಿಗೆ ರಕ್ಷಣೆ ಕೊಡಲು ಆಗುತ್ತಿಲ್ಲ. ಈ ಪ್ರಕರಣ ದಲ್ಲಿ ಎಲ್ಲ ಆಯಾಮದಲ್ಲೂ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ