logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಮುಂಗಾರು ಬಿತ್ತನೆಗೆ ಸಜ್ಜಾದ ಬಿಸಿಲೂರಿನ ಅನ್ನದಾತ; ಕಲಬುರಗಿಯಲ್ಲಿ 8.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ

Kalaburagi News: ಮುಂಗಾರು ಬಿತ್ತನೆಗೆ ಸಜ್ಜಾದ ಬಿಸಿಲೂರಿನ ಅನ್ನದಾತ; ಕಲಬುರಗಿಯಲ್ಲಿ 8.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ

HT Kannada Desk HT Kannada

Jun 01, 2023 09:46 AM IST

ಕಲಬುರಗಿಯಲ್ಲಿ ಜಮೀನು ಹದಗೊಳಿಸುತ್ತಿರುವ ರೈತ

    • ಕಲಬುರಗಿ ಜಿಲ್ಲೆಯ ಒಟ್ಟು 8.91 ಲಕ್ಷ ಹೆಕ್ಟೇರು ನಿವ್ವಳ ಬಿತ್ತನೆ ಕ್ಷೇತ್ರ ಹೊಂದಿದ್ದು, ಮುಂಗಾರು ಹಂಗಾಮಿನಲ್ಲಿ 8.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳುವ ಗುರಿ ಹೊಂದಲಾಗಿದೆ.
ಕಲಬುರಗಿಯಲ್ಲಿ ಜಮೀನು ಹದಗೊಳಿಸುತ್ತಿರುವ ರೈತ
ಕಲಬುರಗಿಯಲ್ಲಿ ಜಮೀನು ಹದಗೊಳಿಸುತ್ತಿರುವ ರೈತ

ಕಲಬುರಗಿ: ಜೂನ್‌ ಮೊದಲ ವಾರದಲ್ಲಿ ಮಳೆ ಬರುವ ಮುನ್ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಬಿಸಿಲೂರು ಜಿಲ್ಲೆಯ ಅನ್ನದಾತ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಮನೆಯ ಮೂಲೆಗೆ, ಗುಡುಸಿಲಿನೊಳಗೆ ಬಿದ್ದಿರುವ ನೇಗಿಲು ಮತ್ತು ಬಿತ್ತನೆಗೆ ಬಳಸುವ ಇತರೆ ಸಾಮಾಗ್ರಿಗಳನ್ನು ಹೊರ ತಂದು ಸ್ವಚ್ಛಗೊಳಿಸಿ ಪೂಜೆ ಮಾಡುವುದರ ಜೊತೆಗೆ ಎತ್ತುಗಳನ್ನು ಸಹ ಶುಭ್ರವಾಗಿ ತೊಳೆದು ನಮಸ್ಕರಿಸಿ ಜಮೀನು ಹದಗೊಳಿಸುತ್ತಿರುವುದು ಕಂಡು ಬರುತ್ತಿದೆ.

ಟ್ರೆಂಡಿಂಗ್​ ಸುದ್ದಿ

Karnataka Rains: 6 ದಿನ ಕರ್ನಾಟಕ ಬಹುತೇಕ ಕಡೆ ಮಳೆ; ಬೆಂಗಳೂರು, ಮೈಸೂರು ಸಹಿತ ಕೆಲವೆಡೆ ಗುಡುಗು, ಸಿಡಿಲಿನ ಮುನ್ನೆಚ್ಚರಿಕೆ

ಮೋದಿ ಸಾಧನೆ ಶೂನ್ಯ, ಈ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಿದ್ದಂತೆ: ಸಿಎಂ ಸಿದ್ದರಾಮಯ್ಯ

Prajwal Revanna Scandal: ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ; ಶೀಘ್ರದಲ್ಲೇ ಹಾಸನ ಸಂಸದ ಇರುವ ಸ್ಥಳ ಪತ್ತೆ

Bangalore News:ಮುಂಗಾರಿಗೆ ಅಣಿಯಾಗುತ್ತಿದೆ ಬೆಂಗಳೂರು, ಬಿಬಿಎಂಪಿಯಿಂದ ಸ್ವಚ್ಛ ಕಾರ್ಯ ಚುರುಕು

ಉತ್ತಮ ಇಳುವರಿ ಪಡೆಯುವ ಚಿಂತನೆ

ಯಾವ ರಸಗೊಬ್ಬರ ಮತ್ತು ಬೀಜ ಬಿತ್ತನೆ ಮಾಡಿದರೆ, ಉತ್ತಮ ಇಳುವರಿ ಬರುತ್ತದೆ ಎಂಬುದರ ಬಗ್ಗೆ ಚಿಂತನೆ ಮಾಡುತ್ತಿದ್ದಾನೆ. ಇನ್ನೇನು ಮಳೆ ಆರಂಭಕ್ಕೂ ಮುಂಚೆಯೇ ಕೃಷಿ ಇಲಾಖೆ ನೀಡುವ ರಸಗೊಬ್ಬರ ಮತ್ತು ಬಿತ್ತನೆ ಬೀಜ ಖರೀದಿಸಿ ಬಿತ್ತನೆಗೆ ಅಣಿಯಾಗುತ್ತಿದ್ದಾನೆ. ಜೊತೆಗೆ ಕೃಷಿಯೊಂದಿಗೆ ಕೃಷಿಯೇತರ ಉಪ ಕಸಬುಗಳನ್ನು ಕೈಗೊಳ್ಳುವುದರ ಮೂಲಕ ಆರ್ಥಿಕ ಸಬಲವಾಗುವ ನಿಟ್ಟಿನಲ್ಲಿಯೂ ನುರಿತ ಕೃಷಿ ತಜ್ಞರನ್ನು ಭೇಟಿಯಾಗಿ ಸಲಹೆ, ಮಾರ್ಗದರ್ಶನ ಪಡೆಯುತ್ತಿದ್ದಾನೆ.

8.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ

ಕಲಬುರಗಿ ಜಿಲ್ಲೆಯ ಒಟ್ಟು 8.91 ಲಕ್ಷ ಹೆಕ್ಟೇರು ನಿವ್ವಳ ಬಿತ್ತನೆ ಕ್ಷೇತ್ರ ಹೊಂದಿದ್ದು, ಮುಂಗಾರು ಹಂಗಾಮಿನಲ್ಲಿ 8.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳುವ ಗುರಿ ಹೊಂದಲಾಗಿದೆ. ಈ ಪೈಕಿ 1 ಲಕ್ಷ ಹೆಕ್ಟೇರ್‌ನಷ್ಟು ಮುಂಗಾರು ಬೆಳೆ ನೀರಾವರಿ ಆಶ್ರಯದಲ್ಲಿ ಹಾಗೂ ಖುಷ್ಕಿ ಆಶ್ರಯದಲ್ಲಿ 7.870 ಲಕ್ಷದಷ್ಟು ಬಿತ್ತನೆ ಗುರಿ ಹೊಂದಲಾಗಿದೆ.

ಬೆಳೆಕಾಳು ಕಣಜ

ಮುಂಗಾರು ಹಂಗಾಮಿನಲ್ಲಿ 14,382 ಹೆಕ್ಟೇರ್​​ನಲ್ಲಿ ಏಕದಳ ಧಾನ್ಯಗಳನ್ನು, 6,69,238 ಹೆಕ್ಟೇರ್​​ನಲ್ಲಿ ದ್ವಿದಳ ಧಾನ್ಯಗಳನ್ನು, 58,314 ಹೆಕ್ಟೇರ್​​ನಲ್ಲಿ ಎಣ್ಣೆ ಕಾಳುಗಳನ್ನು ಹಾಗೂ 1,45,080 ಹೆಕ್ಟೇರ್ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಬೇಳೆಕಾಳುಗಳ ಅತ್ಯಧಿಕ ಉತ್ಪಾದಿಸುವ ಕಾರಣ ಕಲಬುರಗಿ ಜಿಲ್ಲೆಯನ್ನು “ಬೆಳೆಕಾಳು ಕಣಜ” ಎಂದು ಕರೆಯಲಾಗುತ್ತಿದೆ.

50,461 ಮೆಟ್ರಿಕ್ ಟನ್‌ ರಸಗೊಬ್ಬ ದಾಸ್ತಾನು

ವಿವಿಧ ಮುಂಗಾರು ಬೆಳೆಗಳಿಂದ ಸಮರ್ಪಕವಾದ ಇಳುವರಿ ಪಡೆಯಲು ಬೇಕಿರುವ 76,648 ಮೆಟ್ರಿಕ್ ಟನ್ ರಸಗೊಬ್ಬರ ಪೈಕಿ ಜಿಲ್ಲೆಯಲ್ಲಿ ಈಗಾಗಲೇ 50,461 ಮೆಟ್ರಿಕ್ ಟನ್‌ಗಳಷ್ಟು ರಸಗೊಬ್ಬರವನ್ನು ಕೃಷಿ ಇಲಾಖೆ ಪೂರ್ವಭಾವಿ ದಾಸ್ತಾನು ಮಾಡಿದೆ.

ಡಿಎಪಿ 19,802 ಟನ್ ದಾಸ್ತಾನು

ಡಿಎಪಿ 27,216 ಟನ್ ಬೇಡಿಕೆಯಿದ್ದು, 19,802 ಟನ್ ದಾಸ್ತಾನು ಮಾಡಲಾಗಿದೆ. ಯೂರಿಯಾ 23,653 ಟನ್ ಬೇಡಿಕೆಯಿದ್ದು, 17,363 ಟನ್ ದಾಸ್ತಾನು ಮಾಡಲಾಗಿದೆ. ಕಾಂಪ್ಲೇಕ್ಷ್ 21,494 ಟನ್ ಬೇಡಿಕೆಯಿದ್ದು, 10,740 ಟನ್ ದಾಸ್ತಾನು ಮಾಡಲಾಗಿದೆ. ಎಮ್ಒಪಿ 2035 ಟನ್ ಬೇಡಿಕೆಯಿದ್ದು 238 ಟನ್ ದಾಸ್ತಾನು ಮಾಡಲಾಗಿದೆ. ಎಸ್ಎಸ್​​ಪಿ 2250 ಟನ್ ಬೇಡಿಕೆಯಿದ್ದು, 2318 ಟನ್ ದಾಸ್ತಾನು ಮಾಡಲಾಗಿದೆ. ಈ ಗೊಬ್ಬರಗಳನ್ನು ಖಾಸಗಿ ಮಾರಾಟಗಾರರ ಹಾಗೂ ವ್ಯವಸಾಯ ಸೇವ ಸಹಕಾರ ಸಂಘಗಳ ಮೂಲಕ ರೈತರಿಗೆ ಲಭ್ಯಗೊಳಿಸಲಾಗುತ್ತಿದೆ.

32 ಕೇಂದ್ರಗಳಲ್ಲಿ ಬೀಜ ವಿತರಣೆ ಕ್ರಮ

ಮುಂಗಾರು ಹಂಗಾಮಿಗಾಗಿ ಬೀಜ ಬದಲಿಕೆ ಆಧಾರದ ಮೇಲೆ 27,865 ಕ್ವಿಂಟಾಲ್​ಗಳಷ್ಟು ವಿವಿಧ ಬೀಜಗಳ ಬೇಡಿಕೆ ಇದೆ. ಈಗಾಗಲೆ 27,865 ಕ್ವಿಂಟಾಲ್‌ನಷ್ಟು ಪ್ರಮಾಣಿತ ಬೀಜಗಳನ್ನು ವಿತರಣೆಗಾಗಿ ದಾಸ್ತಾನ್ನು ಸಿದ್ದಪಡಿಸಿಕ್ಕೊಳ್ಳಲಾಗಿದ್ದು, ಜಿಲ್ಲೆಯ 32 ರೈತ ಸಂಪರ್ಕ ಕೇಂದ್ರಗಳಲ್ಲಿ ಮತ್ತು 7 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳ ಮುಖಾಂತರ ರಿಯಾಯ್ತಿ ದರದಲ್ಲಿ ರೈತರಿಗೆ ವಿತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಬಿತ್ತನೆ ಬೀಜಗಳ ವಿವರ

ಈ ಸಲದ ಮುಂಗಾರು ಹಂಗಾಮಿಗೆ ಒಟ್ಟು 8.87 ಲಕ್ಷ ಹೆಕ್ಟೇರ್ ಗುರಿ ನಿಗದಿಪಡಿಸಲಾಗಿದೆ. ಇದರಲ್ಲಿ 5.93 ಲಕ್ಷ ಹೆಕ್ಟೇರ್ ತೊಗರಿ, 24,000 ಹೆಕ್ಟೇರ್ ಉದ್ದು, 51,000 ಹೆಕ್ಟೇರ್ ಹೆಸರು, 99,450 ಹೆಕ್ಟೇರ್ ಹತ್ತಿ, 45, 535 ಹೆಕ್ಟೇರ್ ಕಬ್ಬು, 48,200 ಹೆಕ್ಟೇರ್ ಸೋಯಾಬಿನ್ ಗುರಿ ನಿಗದಿಪಡಿಸಲಾಗಿದೆ. ಈ ಪೈಕಿ ಪ್ರಸ್ತುತ ಹೆಸರು 1000 ಕ್ವಿಂಟಾಲ್, ಉದ್ದು 500 ಕ್ವಿಂಟಾಲ್, ತೊಗರಿ 6334 ಕ್ವಿಂಟಾಲ್, ಸೋಯಾಬಿನ್ 18,516 ಕ್ವಿಂಟಾಲ್, ಸೂರ್ಯಕಾಂತಿ 120 ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ ಎಂದು ಕಲಬುರಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್‌ ಪಟೇಲ್‌ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ 8.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಕಾರ್ಯ ಕೈಗೊಳ್ಳುವ ಗುರಿ ಹೊಂದಲಾಗಿದೆ. ಜಿಲ್ಲೆಯ 32 ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರ ಮತ್ತು ಬೀಜಗಳ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಮದ್‌ ಪಟೇಲ್‌ ತಿಳಿಸಿದ್ದಾರೆ.

ರೈತನ ಮಾತು

ಒಟ್ಟು 6 ಎಕರೆ ಜಮೀನು ಹೊಂದಿದ್ದು, ಈ ಪೈಕಿ ಮೂರು ಎಕರೆಯಲ್ಲಿ ತೊಗರಿ ಮತ್ತು ಇನ್ನೂ ಮೂರು ಎಕರೆ ಪ್ರದೇಶದಲ್ಲಿ ಗೋದಿ ಬಿತ್ತನೆ ಮಾಡಲು ಭೂಮಿ ಹದ ಮಾಡುತ್ತಿರುವೆ. ಈಗಾಗಲೇ ಬೀಜ ಮತ್ತು ರಸಗೊಬ್ಬರ ಪಡೆದುಕೊಂಡಿರುವೆ. ಮಳೆಗಾಗಿ ಕಾಯುತ್ತಿರುವೆ ಎಂದು ಇಲ್ಲಿನ ರಾಜಾಪುರದ ರೈರ ಚಂದ್ರಕಾಂತ ಬಿರಾದಾರ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು