logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Election 2023: ಕರ್ನಾಟಕ ವಿಧಾನಸಭೆ ಚುನಾವಣೆ, ಪಕ್ಷಗಳ ಬಲಾಬಲ ಕುರಿತು ನೀವು ತಿಳಿದಿರಬೇಕಾದ 14 ಅತಿಮುಖ್ಯ ಸಂಗತಿಗಳಿವು

Karnataka Election 2023: ಕರ್ನಾಟಕ ವಿಧಾನಸಭೆ ಚುನಾವಣೆ, ಪಕ್ಷಗಳ ಬಲಾಬಲ ಕುರಿತು ನೀವು ತಿಳಿದಿರಬೇಕಾದ 14 ಅತಿಮುಖ್ಯ ಸಂಗತಿಗಳಿವು

Reshma HT Kannada

May 03, 2023 07:00 AM IST

ಕರ್ನಾಟಕ ವಿಧಾನಸಭಾ ಚುನಾವಣೆ 2023

    • Karnataka Election 2023 Important Facts: ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಮುಖ ಅಂಶಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. ಈ 14 ಅಂಶಗಳನ್ನು ಓದಿದರೆ ನಿಮಗೆ ರಾಜ್ಯದಲ್ಲಿ ಈಗ ಏನಾಗುತ್ತಿದೆ? ಭಾರತಕ್ಕೆ ಕರ್ನಾಟಕದ ಈ ಚುನಾವಣೆ ಏಕೆ ಮುಖ್ಯ ಎಂಬುದು ಮನವರಿಕೆಯಾಗುತ್ತದೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023
ಕರ್ನಾಟಕ ವಿಧಾನಸಭಾ ಚುನಾವಣೆ 2023

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿದೆ. ಕರ್ನಾಟಕದ ಭವಿಷ್ಯವನ್ನೇ ನಿರ್ಧರಿಸುವ, ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸುತ್ತಿರುವ ಈ ಮಹತ್ವದ ಚುನಾವಣೆ ಇಷ್ಟು ಹತ್ತಿರದಲ್ಲಿದ್ದರೂ ಹಲವರಿಗೆ ಪ್ರಮುಖ ಮಾಹಿತಿ ಲಭ್ಯವಾಗಿಲ್ಲ. ಮಾಹಿತಿ ಮಹಾಪೂರದಲ್ಲಿ ಯಾವುದು ಮುಖ್ಯ ಎಂದು ಸೋಸುವುದೇ ಕಷ್ಟ. ಹೀಗಾಗಿ ನಿಮಗೆ ಅತ್ಯಂತ ಸರಳವಾಗಿ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಮುಖ ಅಂಶಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಈ 14 ಅಂಶಗಳನ್ನು ಓದಿದರೆ ನಿಮಗೆ ರಾಜ್ಯದಲ್ಲಿ ಈಗ ಏನಾಗುತ್ತಿದೆ? ಭಾರತಕ್ಕೆ ಕರ್ನಾಟಕದ ಈ ಚುನಾವಣೆ ಏಕೆ ಮುಖ್ಯ ಎಂಬುದು ಮನವರಿಕೆಯಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

Bangalore Mysore Expressway: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮೊಬೈಲ್ ನಲ್ಲಿ ಮಾತಾಡಿಕೊಂಡು ಡ್ರೈವ್ ಮಾಡಿದರೆ ದಂಡ ಗ್ಯಾರಂಟಿ

Mangalore News: ವಿರೋಧ ಪಕ್ಷದವರ ಮನೆ ಬಾಗಿಲಿಗೂ ಹೋಗಿ ವರ್ಷದ ಸಾಧನೆ ವರದಿ ನೀಡಿದ ಪುತ್ತೂರು ಶಾಸಕ, ಏನಿದೆ ವಿಶೇಷ

Indian Railways: ಬೆಂಗಳೂರು-ಧರ್ಮಪುರಿ, ಹರಿಪ್ರಿಯಾ, ಮೈಸೂರು-ಕಾಚೀಗುಡ, ವಾಸ್ಕೋ ಸಹಿತ 7 ರೈಲುಗಳ ಸಂಚಾರ ಸಮಯ ಬದಲು

ಪ್ರಜ್ವಲ್ ರೇವಣ್ಣ ಕೇಸ್‌; ಜರ್ಮನಿಯಿಂದ ಲಂಡನ್‌ಗೆ ಹೊರಟ್ರಾ ಹಾಸನ ಸಂಸದ, 2 ದಿನಗಳ 10 ವಿದ್ಯಮಾನಗಳು

1) ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು ಯಾವುವು? ಮತದಾನ ಎಂದು ನಡೆಯಲಿದೆ?

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಒಂದೇ ಹಂತದಲ್ಲಿ ಮೇ 10, 2023 ರಂದು ಮತದಾನ ನಡೆಯಲಿದೆ. ಮೇ 13, 2023 ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರ ಬೀಳಲಿದೆ. ನೀವು ತಿಳಿಯಲು ಬಯಸುವ ಇತರ ಪ್ರಮುಖ ದಿನಾಂಕಗಳಿವು...

ಚುನಾವಣೆ ಘೋಷಣೆಯಾದ ದಿನಾಂಕ: ಮಾರ್ಚ್ 29, 2023. ಗೆಜೆಟ್‌ ಅಧಿಸೂಚನೆ ಹೊರಡಿಸಿದ ದಿನಾಂಕ: ಏಪ್ರಿಲ್‌ 13, 2023. ನಾಮಪತ್ರ ಸಲ್ಲಿಸಲು ನಿಗದಿಯಾಗಿದ್ದ ಕೊನೆಯ ದಿನಾಂಕ: ಏಪ್ರಿಲ್‌ 20, 2023. ನಾಮಪತ್ರ ಪರಿಶೀಲನೆಯ ದಿನಾಂಕ: ಏಪ್ರಿಲ್‌ 21, 2023. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಏಪ್ರಿಲ್‌ 24, 2023. ಹಾಲಿ ಅಸ್ತಿತ್ವದಲ್ಲಿರುವ 15ನೇ ವಿಧಾನಸಭೆಯ ಅವಧಿ ಮುಕ್ತಾಯವಾಗುವ ದಿನಾಂಕ: ಮೇ 23, 2023.

2) ಕರ್ನಾಟಕದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಪಕ್ಷ ಯಾವುದು? ಅಧಿಕೃತ ವಿರೋಧ ಪಕ್ಷ ಯಾವುದು? ಪ್ರಮುಖ ವಿರೋಧ ಪಕ್ಷ ಯಾವುದು?

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸದ್ಯ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷವು ಅಧಿಕೃತ ವಿರೋಧ ಪಕ್ಷವಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದಾರೆ. ಜೆಡಿಎಸ್ ಕರ್ನಾಟಕದ ಪ್ರಮುಖ ವಿರೋಧ ಪಕ್ಷವಾಗಿದೆ.

3) ಕರ್ನಾಟಕದಲ್ಲಿ ಒಟ್ಟು ಎಷ್ಟು ವಿಧಾನಸಭಾ ಕ್ಷೇತ್ರಗಳಿವೆ? ಮ್ಯಾಜಿಕ್ ನಂಬರ್ ಎಂದರೇನು? ಪ್ರಸ್ತುತ ಯಾವ ಪಕ್ಷಕ್ಕೆ ಎಷ್ಟು ಸ್ಥಾನವಿದೆ?

ಕರ್ನಾಟಕದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ. ಅಧಿಕಾರಕ್ಕೆ ಬರಲು 113 ಸ್ಥಾನಗಳು ಬೇಕು. ಈ ಸಂಖ್ಯೆಯನ್ನು ಮ್ಯಾಜಿಕ್ ನಂಬರ್ ಎನ್ನುತ್ತಾರೆ. ಪ್ರಸ್ತುತ ಬಿಜೆಪಿ 119, ಕಾಂಗ್ರೆಸ್ 75, ಜೆಡಿಎಸ್‌ 28 ಶಾಸಕ ಬಲ ಹೊಂದಿವೆ.

4) ಕರ್ನಾಟಕದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಿವೆ? ಈ ಬಾರಿಯ ವಿಧಾನಸಭೆ ಚುನಾವಣೆ ದೇಶದ ಗಮನ ಸೆಳೆದಿರುವುದು ಏಕೆ?

ಕರ್ನಾಟಕವು 28 ಲೋಕಸಭೆ ಹಾಗೂ 12 ರಾಜ್ಯಸಭಾ ಸ್ಥಾನಗಳನ್ನು ಹೊಂದಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ಜೊತೆಗೆ ಬಿಜೆಪಿ ಆಡಳಿತದಲ್ಲಿದ್ದ ರಾಜ್ಯ ಕರ್ನಾಟಕ. ಹೀಗಾಗಿ ಬಿಜೆಪಿಗೆ ಇಲ್ಲಿ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆ. ಭಾರತದಲ್ಲಿ ಕಾಂಗ್ರೆಸ್ ಸಂಘಟನೆ ಪ್ರಬಲವಾಗಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಹಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ತೋರಬಹುದು ಎಂಬ ಇಣುಕುನೋಟ ನೀಡಿರುವುದರಿಂದ ಕಾಂಗ್ರೆಸ್ ಸಹ ಕರ್ನಾಟಕದಲ್ಲಿ ಚುರುಕು ಹೋರಾಟ ನೀಡಿದೆ.

5) ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶವು ಸಂಸತ್ತಿನ ಸ್ಥಾನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆಯೇ?

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವು ಭಾರತೀಯ ಸಂಸತ್ತಿನ ಮೇಲ್ಮನೆಯಾಗಿರುವ ರಾಜ್ಯಸಭೆಯಲ್ಲಿ ಪಕ್ಷಗಳ ಬಲಾಬಲದ ಮೇಲೆ ಪರಿಣಾಮ ಬೀರುತ್ತದೆ. ಲೋಕಸಭೆ ಸ್ಥಾನಗಳ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ. ಆದರೆ ಪರೋಕ್ಷವಾಗಿ ಲೋಕಸಭೆ ಚುನಾವಣೆ ಫಲಿತಾಂಶ ಪ್ರಭಾವಿಸುವ ಸಾಧ್ಯತೆ ಇದ್ದೇ ಇರುತ್ತದೆ.

6) ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಎಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ?

224 ವಿಧಾನಸಭಾ ಸ್ಥಾನಗಳಲ್ಲಿ 36 ಸ್ಥಾನಗಳು ಪರಿಶಿಷ್ಟ ಜಾತಿ ಹಾಗೂ 15 ಸ್ಥಾನಗಳನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ.

7) ಕರ್ನಾಟಕದಲ್ಲಿನ ನೋಂದಾಯಿತ ಮತದಾರರ ಸಂಖ್ಯೆ ಎಷ್ಟು?

ಮತದಾರರ ಪಟ್ಟಿಯ ಇತ್ತೀಚಿನ ಮಾಹಿತಿಯ ಪ್ರಕಾರ, ಕರ್ನಾಟಕವು 5,24,11,557 ಮತದಾರರನ್ನು ಹೊಂದಿದೆ. ಅದರಲ್ಲಿ 5,23,63,948 ಸಾಮಾನ್ಯ ಮತದಾರರು ಮತ್ತು 47,609 ಸೇವಾ ಮತದಾರರು.

8) 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಯಾವ ಪಕ್ಷಗಳು ಸ್ಪರ್ಧಿಸುತ್ತಿವೆ?

2023ರ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖ ಸ್ಪರ್ಧಿಗಳಾಗಿವೆ. ಜೆಡಿಎಸ್‌ ಕೂಡ ಮಂಚೂಣಿಯಲ್ಲಿದೆ. ಇದರೊಂದಿಗೆ ಬಿಎಸ್‌ಪಿ, ಸಿಪಿಐ, ಎಸ್‌ಡಿಪಿಐ, ಎಐಎಂಐಎಂ, ಪ್ರಜಾಕೀಯ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಾಗೂ ಇತರೆ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲಿವೆ.

9) ಕರ್ನಾಟಕದಲ್ಲಿ ಕಳೆದ ಬಾರಿ ವಿಧಾನಸಭಾ ಚುನಾವಣೆ ನಡೆದಿದ್ದು ಯಾವಾಗ?

ಕಳೆದ ಬಾರಿ ಮೇ 12, 2018ರಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಮೇ 15, 2018ರಂದು ಫಲಿತಾಂಶ ಹೊರ ಬಿದ್ದಿತ್ತು. ಆಗ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದಿತ್ತು.

10) 2018ರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೇಗಿತ್ತು?

2018ರ ಕರ್ನಾಟಕ ಚುನಾವಣೆಯಲ್ಲಿ, 1952ರ ವಿಧಾನಸಭಾ ಚುನಾವಣೆಯ ನಂತರ ಅತಿ ಹೆಚ್ಚು ಮತದಾನ ನಡೆದ ವರ್ಷವಾಗಿತ್ತು. ರಾಜ್ಯದ ಒಟ್ಟು ನೋಂದಾಯಿತ ಮತದಾರರಲ್ಲಿ 72.13 ಪ್ರತಿಶತದಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದರು.

11) 2018ರ ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಮುಖ ದಿನಾಂಕ ಹಾಗೂ ಬೆಳವಣಿಗೆಗಳೇನು?

2018ರ ಕರ್ನಾಟಕ ವಿಧಾನಸಭಾ ಚುನಾವಣೆಯು ಮೇ 12, 2018 ರಂದು ನಡೆದಿತ್ತು. ರಾಜ್ಯದ 224 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಮೇ 15, 2018 ರಂದು ಫಲಿತಾಂಶ ಘೋಷಣೆಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಎರಡನೇ ಅವಧಿಗೆ ಅಧಿಕಾರವನ್ನು ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸಿತು, ಬಿಜೆಪಿ ಕೂಡ ಗೆಲುವಿಗಾಗಿ ತೀವ್ರ ಪೈಪೋಟಿ ನೀಡಿತ್ತು. ಜೆಡಿಎಸ್‌ ಕೂಡ ರಾಜ್ಯದಲ್ಲಿ ಆಡಳಿತ ನಡೆಸುವ ಅಕಾಂಕ್ಷೆ ಹೊಂದಿದ್ದ ಮೂರನೇ ಪ್ರಮುಖ ಪಕ್ಷವಾಗಿತ್ತು. ಆದರೆ ಚುನಾವಣಾ ಅಂತಿಮ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೆ ಸ್ವಂತವಾಗಿ ಬಹುಮತ ಪಡೆಯಲು ಸಾಧ್ಯವಾಗಿರಲಿಲ್ಲ. ಬಿಜೆಪಿ 104 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್‌ 78 ಸ್ಥಾನ ಮತ್ತು ಜೆಡಿಎಸ್ 37 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹಲವು ಸುತ್ತಿನ ಸಂಧಾನದ ನಂತರ ಜೆಡಿಎಸ್‌ ಪಕ್ಷವು ಸಮ್ಮಿಶ್ರ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿತ್ತು. 2018ರ ಮೇ 23ರಂದು ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

12) ಕರ್ನಾಟಕದಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಹೇಗೆ?

ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರವು 14 ತಿಂಗಳುಗಳ ಕಾಲ ನಡೆಯಿತು. ಈ ಅವಧಿಯಲ್ಲಿ ಈ ಪಕ್ಷಗಳ 16 ಶಾಸಕರು ಎರಡು ದಿನಗಳ ಅವಧಿಯಲ್ಲಿ ರಾಜೀನಾಮೆ ನೀಡಿದರು. ಇಬ್ಬರು ಸ್ವತಂತ್ರ ಶಾಸಕರು ಬಿಜೆಪಿಗೆ ತಮ್ಮ ಬೆಂಬಲವನ್ನು ಸೂಚಿಸುವುದಾಗಿ ತಿಳಿಸಿದರು. ಇದರಿಂದ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರಗಳ ಬಹುಮತದ ಸಂಖ್ಯೆಯು 105ಕ್ಕೆ ಇಳಿಯಿತು. ಆಡಳಿತಾರೂಢ ಸಮ್ಮಿಶ್ರ ಸರ್ಕಾರಕ್ಕೆ 101 ಶಾಸಕರ ಬೆಂಬಲ ಸಿಕ್ಕಿತ್ತು. ಪ್ರತಿಪಕ್ಷ ಬಿಜೆಪಿಗೆ 107 ಶಾಸಕರ ಬೆಂಬಲವಿತ್ತು. ವಿಶ್ವಾಸ ಮತ ಕಳೆದುಕೊಂಡ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಜುಲೈ 26, 2019 ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

13) ಇಪಿಐಸಿ ಅಥವಾ ಮತದಾರರ ಗುರುತಿನ ಚೀಟಿ ಎಂದರೇನು?

ಮತದಾರರ ಫೋಟೊ ಗುರುತಿನ ಚೀಟಿ (EPIC), ಸಾಮಾನ್ಯವಾಗಿ ಇದನ್ನು ವೋಟರ್ ಐಡಿ ಎಂದು ಕರೆಯಲಾಗುತ್ತದೆ. ಇದು ಮತದಾನದ ಸಮಯದಲ್ಲಿ ಮತದಾರರ ಗುರುತನ್ನು ತೋರಿಸುವ ದಾಖಲೆಗಳಲ್ಲಿ ಒಂದಾಗಿದೆ. ಭಾರತದ ಚುನಾವಣಾ ಆಯೋಗವು (ಇಸಿಐ) ಹೊಸದಾಗಿ ನೋಂದಾಯಿತ ಮತದಾರರಿಗೆ ಇಪಿ ಸಂಖ್ಯೆ ಎಂದು ಕರೆಯಲ್ಪಡುವ ವಿಶಿಷ್ಟ ಸಂಖ್ಯೆಗಳು ಮತ್ತು ಅಕ್ಷರಗಳನ್ನು ನೀಡುತ್ತದೆ. ʼನಾಮನಿರ್ದೇಶನ ಸಲ್ಲಿಸುವ ಕೊನೆಯ ದಿನಾಂಕದ ಮೊದಲು ಹೊಸದಾಗಿ ನೋಂದಾಯಿತ ಮತದಾರರಿಗೆ ಶೇ 100 ಮತದಾರರ ಫೋಟೊ ಗುರುತಿನ ಚೀಟಿ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆʼ ಎನ್ನುತ್ತದೆ ಚುನಾವಣಾ ಸಮಿತಿ.

14) ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಇತರ ಯಾವ ದಾಖಲೆಗಳನ್ನು ದಾಖಲಾತಿ ಪುರಾವೆಗಳಾಗಿ ಬಳಸಬಹುದು?

ಮತದಾರರ ಫೋಟೊ ಗುರುತಿನ ಚೀಟಿ ಅಥವಾ ವೋಟರ್‌ ಐಡಿಯ ಹೊರತಾಗಿ, ಮತದಾನ ಕೇಂದ್ರದಲ್ಲಿ ತಮ್ಮ ಗುರುತನ್ನು ಸ್ಥಾಪಿಸಲು ಮತದಾರರು ಈ ಕೆಲವು ದಾಖಲೆಗಳಲ್ಲಿ ಒಂದನ್ನು ಬಳಸಬಹುದು:

ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್‌ಗಳು, ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ (ಡ್ರೈವಿಂಗ್‌ ಲೈಸನ್ಸ್‌), ಪ್ಯಾನ್ ಕಾರ್ಡ್, ಎಸ್‌ಪಿಆರ್‌ ಅಡಿಯಲ್ಲಿ ಆರ್‌ಐಜಿ ನೀಡಿದ ಸ್ಮಾರ್ಟ್ ಕಾರ್ಡ್, ಪಾಸ್‌ಪೋರ್ಟ್, ಪಿಂಚಣಿ ದಾಖಲೆಯೊಂದಿಗೆ ಛಾಯಾಚಿತ್ರ, ಕೇಂದ್ರ/ರಾಜ್ಯ ಸರ್ಕಾರ/ಪಿಎಸ್‌ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಕಾರ್ಡ್‌ಗಳು, ಎಂಪಿಗಳು/ಎಂಎಲ್‌ಎಗಳು/ಎಂಎಲ್‌ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು ಮತ್ತು ವಿಶಿಷ್ಟ ಅಂಗವಿಕಲರ ಐಡಿ (ಯುಡಿಐಡಿ) ಕಾರ್ಡ್.

ಎಚ್‌ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್‌ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್‌ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ