logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Election 2023: ಮಾದರಿ ನೀತಿ ಸಂಹಿತೆ ಎಂದರೇನು, ಉಲ್ಲಂಘನೆಗೆ ಯಾವ ಶಿಕ್ಷೆ ಇದೆ; ಮತದಾರರು ದೂರು ಸಲ್ಲಿಸುವುದು ಹೇಗೆ?

Karnataka Election 2023: ಮಾದರಿ ನೀತಿ ಸಂಹಿತೆ ಎಂದರೇನು, ಉಲ್ಲಂಘನೆಗೆ ಯಾವ ಶಿಕ್ಷೆ ಇದೆ; ಮತದಾರರು ದೂರು ಸಲ್ಲಿಸುವುದು ಹೇಗೆ?

Rakshitha Sowmya HT Kannada

May 04, 2023 06:50 PM IST

ಚುನಾವಣೆ ನೀತಿ ಸಂಹಿತೆ

    • ಚುನಾವಣಾ ಆಯೋಗವು ಚುನಾವಣೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗುತ್ತದೆ. ಈ ಸಮಯದಿಂದಲೇ ಅಧಿಕಾರದಲ್ಲಿರುವ ಸರ್ಕಾರ ತನ್ನ ಅಧಿಕಾರ ಕಳೆದುಕೊಳ್ಳುತ್ತದೆ. ಸರ್ಕಾರದಿಂದ ದೊರೆಯುವ ಯಾವುದೇ ಸವಲತ್ತುಗಳನ್ನು ಬಳಸುವಂತಿಲ್ಲ.
ಚುನಾವಣೆ ನೀತಿ ಸಂಹಿತೆ
ಚುನಾವಣೆ ನೀತಿ ಸಂಹಿತೆ

ಮತದಾನ ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ. ನಮ್ಮ ಕ್ಷೇತ್ರಗಳಿಗೆ ಸೂಕ್ತ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಬಹಳ ದಿನಗಳ ನಂತರ ಈ ಹೊಣೆ ಮತ್ತೆ ಬರುತ್ತಿದೆ. ಮೇ 10 ರಂದು ಒಂದೇ ಹಂತದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಸದ್ಯಕ್ಕೆ ಅಭ್ಯರ್ಥಿಗಳು / ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್ ರೇವಣ್ಣ ಕೇಸ್‌; ಜರ್ಮನಿಯಿಂದ ಲಂಡನ್‌ಗೆ ಹೊರಟ್ರಾ ಹಾಸನ ಸಂಸದ, 2 ದಿನಗಳ 10 ವಿದ್ಯಮಾನಗಳು

Raghunandan S Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಪ್ರಜ್ವಲ್‌ ರೇವಣ್ಣ ಕೇಸ್‌; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಚುನಾವಣೆ ಎಂದರೆ ಅದಕ್ಕೆ ಕೆಲವೊಂದು ನೀತಿ ನಿಯಮಗಳಿವೆ. ಆದ್ದರಿಂದ ಚುನಾವಣೆ ಘೋಷಣೆಯಾದಾಗ ಚುನಾವಣಾ ಆಯೋಗವು ಕೆಲವೊಂದು ನಿಯಮಗಳನ್ನು ಜಾರಿಗೆ ತರುತ್ತದೆ. ಅದರಲ್ಲಿ ಬಹಳ ಮುಖ್ಯವಾದದ್ದು ಚುನಾವಣೆ ನೀತಿ ಸಂಹಿತೆ. ಮಾರ್ಚ್‌ 29ರಿಂದಲೇ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆ ಎಂದರೇನು? ಉಲ್ಲಂಘಿಸಿದವರಿಗೆ ಏನು ಶಿಕ್ಷೆ? ಇದರ ಬಗ್ಗೆ ಸಾರ್ವಜನಿಕರು ಹೇಗೆ ದೂರು ನೀಡಬಹುದು? ಈ ಎಲ್ಲಾ ವಿಚಾರಗಳ ಬಗ್ಗೆ ಇಲ್ಲಿ ಮಾಹಿತಿ ಇದೆ.

ಮಾದರಿ ನೀತಿ ಸಂಹಿತೆ ಎಂದರೇನು?

ಭಾರತ ಹೊರತುಪಡಿಸಿ ವಿಶ್ವದ ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೂಡಾ ಮಾದರಿ ನೀತಿ ಸಂಹಿತೆ ಪರಿಕಲ್ಪನೆ ಇಲ್ಲ ಎನ್ನಬಹುದು. 1960 ಕೇರಳ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗವು ಮೊದಲ ಬಾರಿಗೆ ಮಾದರಿ ನೀತಿ ಸಂಹಿತೆಯನ್ನು ಜಾರಿ ಮಾಡಿತು. ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು, ಆಯಾ ಪಕ್ಷಗಳು ಯಾವ ರೀತಿ ನಡೆದುಕೊಳ್ಳಬೇಕು? ಯಾವ ರೀತಿ ಪ್ರಚಾರ ಕೈಗೊಳ್ಳಬೇಕು? ಅಭ್ಯರ್ಥಿಗಳು ಹಾಗೂ ಮತದಾರರು ಏನು ಮಾಡಬಾರದು? ಯಾವ ವಿಚಾರವನ್ನು ಗಮನದಲ್ಲಿಡಬೇಕು? ಎಂಬುದರ ಬಗ್ಗೆ ಸೂಚನೆ ನೀಡುವ ಮಾರ್ಗಸೂಚಿಯಾಗಿದೆ.

ಅಭ್ಯರ್ಥಿಗಳು/ರಾಜಕೀಯ ಪಕ್ಷಗಳು ಯಾವ ರೀತಿ ಇರಬೇಕು ?

ಸರ್ಕಾರದ ಸವಲತ್ತುಗಳನ್ನು ಬಳಸುವಂತಿಲ್ಲ

ಚುನಾವಣಾ ಆಯೋಗವು ಚುನಾವಣೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗುತ್ತದೆ. ಈ ಸಮಯದಿಂದಲೇ ಅಧಿಕಾರದಲ್ಲಿರುವ ಸರ್ಕಾರ ತನ್ನ ಅಧಿಕಾರ ಕಳೆದುಕೊಳ್ಳುತ್ತದೆ. ಸರ್ಕಾರದಿಂದ ದೊರೆಯುವ ಯಾವುದೇ ಸವಲತ್ತುಗಳನ್ನು ಬಳಸುವಂತಿಲ್ಲ.

ಹೊಸ ಯೋಜನೆ ಘೋಷಣೆ ಮಾಡುವಂತಿಲ್ಲ

ನೀತಿ ಸಂಹಿತೆ ಜಾರಿಯಾದ ದಿನದಿಂದ ಅಧಿಕಾರದಲ್ಲಿದ್ದ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಯೋಜನೆಗಳನ್ನು ಮುಂದುವರೆಸಬಹುದೇ ಹೊರತು, ಯಾವುದೇ ಹೋಸ ಯೋಜನೆಗಳನ್ನಾಗಲೀ ವಿನಾಯಿತಿಯನ್ನಾಗಲೀ ಘೋಷಣೆ ಮಾಡುವಂತಿಲ್ಲ. ಮತದಾರರ ಗಮನ ಸೆಳೆಯುವಂತ ಯಾವುದೇ ಭರವಸೆ ನೀಡುವುದಾಗಲೀ ಅಥವಾ ಯಾವುದೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವುದು ನಿಷಿದ್ಧ.

ಸರ್ಕಾರಿ ಯೋಜನೆಗಳಿಗೆ ಅನುದಾನ ನೀಡುವ ಹಾಗಿಲ್ಲ

ಸಚಿವರು ಅಥವಾ ಶಾಸಕರು ಯಾವುದೇ ಯೋಜನೆಗಳ ಪರಿಶೀಲನೆ ಮಾಡುವುದು ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಆದ್ದರಿಂದ ಹೊಸ ಸರ್ಕಾರಿ ಯೋಜನೆಗಳಿಗೆ ಅನುದಾನ ನೀಡುವಂತಿಲ್ಲ. ಚುನಾವಣೆ ಘೋಷಣೆಗೂ ಮುನ್ನ ಒಂದು ವೇಳೆ ಯೋಜನೆಗಳು ಜಾಲ್ತಿಯಲ್ಲಿದ್ದರೆ, ಎಲೆಕ್ಷನ್‌ ಮುಗಿಯುವವರೆಗೂ ಅದನ್ನು ನಿಲ್ಲಿಸಬೇಕು.

ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ

ನೀತಿ ಸಂಹಿತೆ ಜಾರಿಯಲ್ಲಿರುವಾಗ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳನ್ನು ಹೊರತುಪಡಿಸಿ ಯಾವುದೇ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಹಾಗಿಲ್ಲ. ಕೆಲವು ಅಧಿಕಾರಿಗಳ ವಾಹನಗಳನ್ನು ಚುನಾವಣೆ ಕೆಲಸಗಳಿಗೆ ಬಳಸುವಂತಿಲ್ಲ. ಚುನಾವಣಾ ಆಯೋಗದ ಒಪ್ಪಿಗೆ ಇಲ್ಲದೆ ಅಧಿಕಾರಿಗಳ ನೇಮಕಾತಿ, ಪ್ರಮೋಷನ್‌ ಕೂಡಾ ಮಾಡುವುದು ನಿಷೇಧಿಸಲಾಗಿದೆ. ಹಾಗೇ ಯಾವುದೇ ಅಧಿಕಾರಿಗಳಾಗಲೀ ಸಚಿವರು, ಶಾಸಕರನ್ನು ವೈಯಕ್ತಿಕ ವಿಷಯಗಳಿಗೆ ಭೇಟಿ ಮಾಡುವಂತಿಲ್ಲ.

ಸರ್ಕಾರದ ಹಣದಲ್ಲಿ ಜಾಹೀರಾತು ನೀಡಬಾರದು

ಅಭ್ಯರ್ಥಿಗಳು ತಮ್ಮ ಪಕ್ಷದ ಪ್ರಚಾರಕ್ಕಾಗಿ ಸರ್ಕಾರಿ ವಾಹನ ಅಥವಾ ಇನ್ನಾವುದೇ ಸವಲತ್ತುಗಳನ್ನು ಬಳಸಬಾರದು. ಸರ್ಕಾರಿ ಹಣದಲ್ಲಿ ಪ್ರಿಂಟ್‌, ಮುದ್ರಣ ಮಾಧ್ಯಮಗಳಲ್ಲಾಗಲೀ ಜಾಹೀರಾತು ನೀಡುವಂತಿಲ್ಲ. ಪೋಸ್ಟರ್‌, ಕಟೌಟ್‌, ಬಂಟಿಗ್‌ಗಳನ್ನು ಬಳಸುವ ಹಾಗಿಲ್ಲ.

ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಸಭೆಗಳನ್ನು ನಡೆಸುವಂತಿಲ್ಲ

ದೇವಸ್ಥಾನ, ಮಸೀದಿ, ಚರ್ಚ್‌ಗಳಂತ ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಸಭೆಯನ್ನು ನಡೆಸಲು ಅನುಮತಿ ಇರುವುದಿಲ್ಲ. ಇತ್ತೀಚೆಗೆ ತುಮಕೂರಿನಲ್ಲಿ ರಾಹುಲ್‌ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ, ಅಜಾನ್‌ ಆರಂಭವಾಗುತ್ತಿದ್ದಂತೆ ಭಾಷಣವನ್ನು ನಿಲ್ಲಿಸಿದ್ದ ಘಟನೆಯನ್ನು ಇಲ್ಲಿ ಸ್ಮರಿಸಬಹುದು. ಚುನಾವಣಾ ಪ್ರಚಾರದ ವೇಳೆ ರಾತ್ರಿ 10 ಗಂಟೆ ಯಿಂದ ಬೆಳಗ್ಗೆ 6 ವರೆಗೆ ಮೈಕ್‌ ಬಳಸುವಂತಿಲ್ಲ.

ಸಿನಿಮಾ ನಟರ ಜಾಹೀರಾತು, ಸಿನಿಮಾ ಪ್ರದರ್ಶಿಸುವಂತಿಲ್ಲ

ಒಂದು ವೇಳೆ ಸಿನಿಮಾ ನಟ ಅಥವಾ ನಟಿಯರು ಚುನಾವಣೆಗೆ ಸ್ಪರ್ಧಿಸಿದಲ್ಲಿ ನೀತಿಸಂಹಿತೆ ಜಾರಿಯಾದಾಗಿನಿಂದ ಚುನಾವಣೆ ಮುಗಿಯುವವರೆಗೂ ನಟ/ನಟಿಯರು ಜಾಹೀರಾತುಗಳಾಗಲೀ, ಸಿನಿಮಾವನ್ನಾಗಲಿ ಪ್ರಸಾರ ಮಾಡುವಂತಿಲ್ಲ. ಈ ಬಾರಿ ನಟ ಜಗ್ಗೇಶ್‌ ಬಿಜೆಪಿ ಸ್ಟಾರ್‌ ಪ್ರಚಾರಕನಾಗಿ ರಾಜ್ಯದ ವಿವಿಧ ಕಡೆ ಸಂಚರಿಸುತ್ತಿದ್ದಾರೆ. ಜೊತೆಗೆ ಅವರು ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದ್ದರಿಂದ ದೂರಿನ ಮೇರೆಗೆ ಚುನಾವಣಾ ಅಧಿಕಾರಿಗಳು ಜಗ್ಗೇಶ್‌ ಅಭಿನಯದ ರಾಘವೇಂದ್ರ ಸ್ಟೋರ್ಸ್‌ ಚಿತ್ರದ ಪೋಸ್ಟರ್‌ಗಳಲ್ಲಿ ಜಗ್ಗೇಶ್‌ ಮುಖ ಕಾಣದಂತೆ ಬಿಳಿ ಹಾಳೆಗಳನ್ನು ಮುಚ್ಚಿದ್ದಾರೆ.

ಹೆಚ್ಚು ಮೊತ್ತದ ಹಣ ಕೊಂಡೊಯ್ಯುವಂತಿಲ್ಲ

ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳು ಮತದಾರರನ್ನು ಓಲೈಸಲು ಹಣ, ಮದ್ಯ, ಸೀರೆಯಂತ ಉಡುಗೊರೆಗಳನ್ನು ನೀಡುವುದು, ಬಾಡೂಟ ಹಾಕಿಸುವುದು ನಿಷಿದ್ಧ. ಹಾಗೇ ಹೆಚ್ಚು ಮೊತ್ತದ ಹಣದ ಜೊತೆಗೆ ಓಡಾಡುವಂತಿಲ್ಲ. ಅಭ್ಯರ್ಥಿಗಳು ಮಾತ್ರವಲ್ಲದೆ ಜನ ಸಾಮಾನ್ಯರು ಕೂಡಾ ಚುನಾವಣೆ ಸಮಯದಲ್ಲಿ ಹೆಚ್ಚು ಮೊತ್ತದ ಹಣವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವಂತಿಲ್ಲ. ಹಾಗೇ ಮತರಾರರು ತಾವು ಯಾವ ಪಕ್ಷಕ್ಕೆ ಮತ ಹಾಕಿದ್ದೇವೆ ಎಂಬುದನ್ನು ಬಹಿರಂಗವಾಗಿ ಹೇಳುವಂತಿಲ್ಲ.

ಇನ್ನು ಚುನಾವಣೆ ದಿನ ಮತದಾರರನ್ನು ಹೊರತುಪಡಿಸಿ, ಚುನಾವಣಾ ಆಯೋಗದಿಂದ ನೀಡಲಾದ ಪಾಸ್ ಇಲ್ಲದೆ ಯಾವ ಅಭ್ಯರ್ಥಿಗಳಾಗಲೀ ಪಕ್ಷದ ಕಾರ್ಯಕರ್ತರಾಗಲೀ ಮತಗಟ್ಟೆ ಒಳಗೆ ಪ್ರವೇಶಿಸಬಾರದು.

ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದರೆ ಏನು ಶಿಕ್ಷೆ?

ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಕಾನೂನು ಇದ್ದರೂ ಪ್ರತಿ ಬಾರಿ ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘಿಸುತ್ತಲೇ ಬರುತ್ತಿದ್ದಾರೆ. ಉನ್ನತ ಹುದ್ದೆಯಲ್ಲಿರುವ ರಾಜಕೀಯ ನಾಯಕರೇ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸುವುದು ವಿಪರ್ಯಾಸ. ಈ ಬಾರಿ ಕೂಡಾ ಬಹಳಷ್ಟು ಅಭ್ಯರ್ಥಿಗಳು ಬಹಿರಂಗವಾಗಿ ಮತದಾರರನ್ನು ಓಲೈಸಲು ಬಾಡೂಟ ಹಾಕಿಸಿದ್ದಾರೆ. ಮನೆ ಮನೆಗೆ ತೆರಳಿ ಗಿಫ್ಟ್‌ ನೀಡುತ್ತಿದ್ದಾರೆ. ಕೋಟಿಗಟ್ಟಲೆ ಹಣವನ್ನು ಸಾಗಿಸುತ್ತಲೇ ಇದ್ದಾರೆ. ಇಂತವರ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 171 E ಮತ್ತು 717 I ಅಡಿಯಲ್ಲಿ ಎಫ್‌ಐಆರ್‌ ದಾಖಲಾಗುತ್ತದೆ. ಆರೋಪ ಸಾಬೀತಾದಲ್ಲಿ 3 ವರ್ಷಗಳ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ.

ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ವಿರುದ್ಧ ಸಾರ್ವಜನಿಕರು ಹೇಗೆ ದೂರು ಸಲ್ಲಿಸಬಹುದು?

1. ಸಿವಿಜಿಲ್ ಆಪ್‌

ಅಭ್ಯರ್ಥಿಗಳು/ ರಾಜಕೀಯ ಪಕ್ಷಗಳು ನೀತಿ ಸಹಿಂತೆ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಸಾರ್ವಜನಿಕರು ಸಿವಿಜಿಲ್ (Cvigil)ಎಂಬ ಆಪ್‌ ಮೂಲಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಬಹುದು.

ಪ್ರತಿಯೊಬ್ಬ ನಾಗರಿಕನು ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಬಳಸಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ನಂತರ ನಿಮ್ಮ ಮೊಬೈಲ್‌ ಸಂಖ್ಯೆಯ ಮೂಲಕ ಲಾಗಿನ್‌ ಆಗಬೇಕು. ನೀತಿ ಸಂಹಿತೆ ಉಲ್ಲಂಘನೆಯ ಫೋಟೋ ಕ್ಲಿಕ್‌ ಮಾಡಲು ಅಥವಾ 2 ನಿಮಿಷದ ವೀಡಿಯೊ ರೆಕಾರ್ಡ್‌ ಮಾಡಲು ಇದರಲ್ಲಿ ಅವಕಾಶವಿದೆ. ಮತದಾರರು ತಮ್ಮ ಗುರುತನ್ನು ರಿವೀಲ್‌ ಮಾಡಲು ಇಷ್ಟವಿಲ್ಲದಿದ್ದಲ್ಲಿ ಅನಾಮಧೇಯ ಬಳಕೆದಾರರಾಗಿ ದೂರು ಸಲ್ಲಿಸಬಹುದು. ಆದರೆ ನಿಮಗೆ ನಿಮ್ಮ ದೂರಿಗೆ ಸಂಬಂಧಿಸಿದಂತೆ ಯಾವುದೇ ಅಪ್‌ಡೇಟ್‌ ಸಿಗುವುದಿಲ್ಲ. ನಿಮ್ಮದೇ ಮೊಬೈಲ್‌ ಸಂಖ್ಯೆಯಿಂದ ನೀವು ಲಾಗಿನ್‌ ಆದರೆ ಅಪ್‌ಡೇಟ್‌ ಟ್ರ್ಯಾಕ್ ಮಾಡಲು ಮತ್ತು ವಿವರ ಸ್ವೀಕರಿಸಲು ನಿಮ್ಮ ದೂರಿಗೆ ಸಂಬಂಧಿಸಿದ ಪ್ರತ್ಯೇಕ ಐಡಿ ಸಿಗುತ್ತದೆ. ಮುಖ್ಯ ಚುನಾವಣಾ ಆಯುಕ್ತರು ಹೇಳಿರುವ ಪ್ರಕಾರ, ಇಂತಹ ದೂರುಗಳಿಗೆ ಚುನಾವಣಾ ಆಯೋಗ 100 ನಿಮಿಷದ ಒಳಗೆ ಸ್ಪಂದಿಸುತ್ತದೆ.

2. ರಾಷ್ಟ್ರೀಯ ಕುಂದುಕೊರತೆಗಳ ಸೇವಾ ಪೋರ್ಟಲ್ (National Grievances Service Portal)

https://eci-citizenservices.eci.nic.in/ ಚುನಾವಣಾ ಆಯೋಗದ ವೆಬ್‌ಸೈಟ್‌ ಮೂಲಕ ಮತದಾರರು ಚುನಾವಣೆಗೆ ಹಾಗೂ ಚುನಾವಣೆಯೇತರ ದೂರುಗಳನ್ನು ನೀಡಬಹುದು. ನಂತರ https://eci-citizenservices.eci.nic.in/trackstatus.aspx ಮೂಲಕ ನೀವು ನಿಮ್ಮ ದೂರಿನ ಸ್ಟೇಟಸ್‌ ಚೆಕ್‌ ಮಾಡಬಹುದು.

3. ವೋಟರ್‌ ಹೆಲ್ಪ್‌ಲೈನ್‌ ಆಪ್‌ (Voter Helpline App)

ಆಂಡ್ರಾಯ್ಡ್‌ ಫೋನ್‌ ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ Voter Helpline App ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ದೂರು ಸಲ್ಲಿಸಬಹುದಾಗಿದೆ. ಹಾಗೇ 1950 ಹೆಲ್ಪ್‌ ಲೈನ್‌ ನಂಬರ್‌ ಡಯಲ್‌ ಮಾಡಿ ಚುನಾವಣಾ ಆಯೋಗದ ಮೂಲಕ ನಿಮಗೆ ಬೇಕಾದ ಮಾಹಿತಿ ಪಡೆಯಬಹುದು.

4. ಇ ಮೇಲ್‌ ಹಾಗೂ ದೂರವಾಣಿ ಸಂಖ್ಯೆ

ನೀವು ಇ ಮೇಲ್‌ ಮೂಲಕ ದೂರು ಸಲ್ಲಿಸಲು complaints@eci.gov.in ಹಾಗೂ 23052220, 23052221 ನಂಬರ್‌ಗೆ ಕರೆ ಮಾಡುವ ಮೂಲಕ ದೂರು ನೀಡಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ