Hassan Scandal: ರೇವಣ್ಣಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಒಂದು ದಿನಕ್ಕೆ ಮಾತ್ರ ಜಾಮೀನು, ಇಂದು ವಿಚಾರಣೆ
May 17, 2024 12:52 AM IST
ರೇವಣ್ಣ ಅವರಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ದೊರೆತಿದೆ.
- ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ಅವರಿಗೆ ಬೆಂಗಳೂರಿನ 42 ನೇ ಎಸಿಎಂಎಂ ನ್ಯಾಯಾಲಯದಿಂದ ಜಾಮೀನು ದೊರೆತಿದೆ.
ಬೆಂಗಳೂರು: ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ತಮ್ಮ ಪುತ್ರ ಪ್ರಜ್ವಲ್ ರೇವಣ್ಣ ಅವರೊಂದಿಗೆ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ದೊರೆತಿದೆ. ಆದರೆ ಒಂದು ದಿನದ ಮಟ್ಟಿಗೆ ಮಾತ್ರ ಜಾಮೀನು ದೊರೆತಿದ್ದು. ಶುಕ್ರವಾರ ಮಧ್ಯಾಹ್ನ ಇದೇ ಪ್ರಕರಣದ ವಿಚಾರಣೆ ಮತ್ತೆ ನಡೆಯಲಿದೆ. ಆಗ ರೇವಣ್ಣ ಅವರಿಗೆ ಜಾಮೀನು ಸಿಗಲಿದೆಯೋ ಅಥವಾ ಮತ್ತೆ ಜೈಲು ಶಿಕ್ಷೆ ಆಗಲಿದೆಯಾ ಎನ್ನುವ ಕುತೂಹಲವಿದೆ. ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆ ಅಪಹರಣಕ್ಕೆ ಬೆಂಬಲ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ರೇವಣ್ಣ ಅವರಿಗೆ ಮೂರು ದಿನದ ಹಿಂದೆಯೇ ಜಾಮೀನು ದೊರೆತಿದೆ.
ಏಪ್ರಿಲ್ 28ರಂದು ಹೊಳೆ ನರಸೀಪುರದಲ್ಲಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ರೇವಣ್ಣ ಎರಡನೇ ಆರೋಪಿ. ಇದರಲ್ಲಿ ರೇವಣ್ಣ ವಿರುದ್ದ ಗಂಭೀರ ಆರೋಪಗಳಿಲ್ಲ. ಜಾಮೀನಿನ ಅಗತ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಮರು ದಿನವೇ ಸಂತ್ರಸ್ತ ಮಹಿಳೆ ಅಪಹರಣ ಹಾಗೂ ಬೆದರಿಕೆ ಪ್ರಕರಣ ದಾಖಲಾಗಿ ರೇವಣ್ಣ ಬಂಧನಕ್ಕೆ ಒಳಗಾಗಿದ್ದರು. ಹದಿನೈದು ದಿನಗಳ ಕಾಲ ಅಪಹರಣ ಆರೋಪ ಪ್ರಕರಣದ ವಿಚಾರಣೆಯನ್ನು ರೇವಣ್ಣ ಎದುರಿಸಿದ್ದರು. ಇದರ ನಡುವೆಯೇ ಬೆಂಗಳೂರಿನ 2 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಗುರುವಾರ ಮೊದಲನೇ ಪ್ರಕರಣದ ವಿಚಾರಣೆ ಇತ್ತು. ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಎಸ್‌ಐಟಿ ಪಿಪಿ ಜಯ್ನಾ ಕೊಠಾರಿ ವಾದಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಮಧ್ಯಂತರ ಜಾಮೀನು ನೀಡಿದ್ದಾರೆ. ಶುಕ್ರವಾರ ಈ ಪ್ರಕರಣದ ವಿಚಾರಣೆ ಮತ್ತೆ ಬರಲಿದೆ.
ಬಾರದ ಪ್ರಜ್ವಲ್
ಇದರ ನಡುವ ಈ ಪ್ರಕರಣದ ಪ್ರಮುಖ ಆರೋಪಿಯಾಗಿ ಮೂರು ವಾರದಿಂದ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಗುರುವಾರವೂ ಬರಲಿಲ್ಲ. ಎಸ್‌ಐಟಿ ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣ ಅಧಿಕಾರಿಗಳಿಂದ ರೇವಣ್ಣದ ಚಲನವಲನದ ಕುರಿತು ಮಾಹಿತಿ ಕಲೆ ಹಾಕಿದರು.
ಟಿಕೆಟ್ ಬುಕ್ ಮಾಡಿಸಿರುವುದು ಅಥವಾ ವಾಪಾಸ್ ಬರಲು ಮುಂದಾಗಿರುವ ಕುರಿತೂ ವಿವರ ಸಂಗ್ರಹಿಸಿದರು, ಆದರೆ ಅಂತಹ ಸೂಚನೆಗಳೇನೂ ಗುರುವಾರ ಕಂಡು ಬರಲಿಲ್ಲ. ಆದರೂ ಪೊಲೀಸರು ಪ್ರಜ್ವಲ್ ರೇವಣ್ಣ ಬಂಧನಕ್ಕೆ ಸಂಬಂಧಿಸಿದ ಪ್ರಕ್ರಿಯೆ ಮುಂದುವರೆಸಿದ್ದಾರೆ.
ಹಾಸನದಲ್ಲಿ ಎಸ್‌ಐಟಿ ತಂಡಗಳು
ಹಾಸನದಲ್ಲಿಯೇ ಕೆಲ ದಿನಗಳಿಂದ ಬೀಡು ಬಿಟ್ಟಿರುವ ಎಸ್‌ಐಟಿಯ ನಾಲ್ಕೈದು ತಂಡಗಳು ಪ್ರತ್ಯೇಕವಾಗಿ ದಾಳಿ ಮುಂದುವರೆಸಿವೆ.
ಒಂದು ತಂಡ ಪೆನ್‌ಡ್ರೈವ್ ಹಂಚಿದ ಪ್ರಕರಣ ಎದುರಿಸುತ್ತಿರುವ ನವೀನ್‌ಗೌಡ ಹಾಗೂ ಇತರರ ಮಾಹಿತಿ ಕಲೆ ಹಾಕಿತು. ಮತ್ತೊಂದು ತಂಡ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರತ್ತ ಗಮನ ಹರಿಸಿವೆ.
ಅವರ ಬಳಿ ಇರುವ ಪೆನ್ ಡ್ರೈವ್ ಹಾಗೂ ಇತರೆ ಮಾಹಿತಿ ಕಲೆ ಹಾಕಿದೆ. ಪ್ರಕರಣ ಬೆಳಕಿಗೆ ಬರಲು ಕಾರಣವಾಗಿ ಸಿಎಂ ಸಿದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಆರೋಪ ಮಾಡಿ ನಂತರ ಪ್ರಕರಣ ಎದುರಿಸಿ ಬಂಧನಕ್ಕೆ ಒಳಗಾಗಿರುವ ವಕೀಲ ದೇವರಾಜೇಗೌಡ ಅವರ ನಿವಾಸದಲ್ಲಿ ಮಾಹಿತಿ ಕಲೆ ಹಾಕಲಾಯಿತು.
ದೇವರಾಜೇಗೌಡ ಅವರೊಂದಿಗೆ ಆಗಮಿಸಿದ ಅಧಿಕಾರಿಗಳು ಸಾಕ್ಷ್ಯಗಳನ್ನು ಸಂಗ್ರಹಿಸಿದರು.
ಮತ್ತೊಂದು ಕಡೆ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ಅವರ ವಿರುದ್ದ ದಾಖಲಾಗಿರುವ ದೌರ್ಜನ್ಯದ ಪ್ರಕರಣಗಳ ಕುರಿತು ಸಾಕ್ಷ್ಯ ಕಲೆ ಹಾಕುವ ಕೆಲಸವೂ ಇನ್ನೊಂದು ತಂಡದಿಂದ ನಡೆದಿದೆ.
ನಂಜನಗೂಡಿನಲ್ಲಿ ರೇವಣ್ಣ
ಈ ನಡುವೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ತಮ್ಮ ಮನೆದೇವರಾದ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ದೇಗುಲದಲ್ಲಿದ್ದ ರೇವಣ್ಣ ಬೇಸರದಿಂದಲೇ ಪೂಜೆ ಸಲ್ಲಿಸಿದರು. ಈಗಾಗಲೇ ಬೆಂಗಳೂರು, ಮೈಸೂರಿನ ಹಲವು ದೇವಾಲಯಗಳಿಗೆ ರೇವಣ್ಣ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದು. ಗುರುವಾರವೂ ಮುಂದುವರೆಸಿದರು.