logo
ಕನ್ನಡ ಸುದ್ದಿ  /  ಕರ್ನಾಟಕ  /  ಏನಿದು ಜೆಪ್ಪು ಸಂತ ಜೆರೋಸಾ ಶಾಲಾ ವಿವಾದ; ಫೆ 10 ರಿಂದ ಇದುವರೆಗೆ ಏನೇನಾಯಿತು, ಇಲ್ಲಿದೆ 5 ಅಂಶಗಳ ವಿವರಣೆ

ಏನಿದು ಜೆಪ್ಪು ಸಂತ ಜೆರೋಸಾ ಶಾಲಾ ವಿವಾದ; ಫೆ 10 ರಿಂದ ಇದುವರೆಗೆ ಏನೇನಾಯಿತು, ಇಲ್ಲಿದೆ 5 ಅಂಶಗಳ ವಿವರಣೆ

Umesh Kumar S HT Kannada

Feb 19, 2024 02:45 PM IST

ಮಂಗಳೂರಿನ ಜೆಪ್ಪು ಸಂತ ಜೆರೋಸಾ ಶಾಲಾ ವಿವಾದ ತಾರಕಕ್ಕೇರಿದೆ. ಏನಿದು ವಿವಾದ, ಫೆ 10 ರಿಂದ ಇದುವರೆಗೆ ಏನೇನಾಯಿತು ಎಂಬುದರ 5 ಅಂಶಗಳ ವಿವರಣೆ ಇಲ್ಲಿದೆ.

  • ಮಂಗಳೂರಿನ ಜೆಪ್ಪು ಸಂತ ಜೆರೋಸಾ ಶಾಲಾ ವಿವಾದ ಹೊಸ ಹೊಸ ತಿರುವು ಪಡೆಯುತ್ತಿದೆ. ಏನಿದು ವಿವಾದ, ಫೆ 10 ರಿಂದ ಇದುವರೆಗೆ ಏನೇನಾಯಿತು ಎಂಬುದರ 5 ಅಂಶಗಳ ವಿವರಣೆ ಇಲ್ಲಿದೆ. (ವರದಿ ಹರೀಶ ಮಾಂಬಾಡಿ, ಮಂಗಳೂರು)

ಮಂಗಳೂರಿನ ಜೆಪ್ಪು ಸಂತ ಜೆರೋಸಾ ಶಾಲಾ ವಿವಾದ ತಾರಕಕ್ಕೇರಿದೆ. ಏನಿದು ವಿವಾದ, ಫೆ 10 ರಿಂದ ಇದುವರೆಗೆ ಏನೇನಾಯಿತು ಎಂಬುದರ 5 ಅಂಶಗಳ ವಿವರಣೆ ಇಲ್ಲಿದೆ.
ಮಂಗಳೂರಿನ ಜೆಪ್ಪು ಸಂತ ಜೆರೋಸಾ ಶಾಲಾ ವಿವಾದ ತಾರಕಕ್ಕೇರಿದೆ. ಏನಿದು ವಿವಾದ, ಫೆ 10 ರಿಂದ ಇದುವರೆಗೆ ಏನೇನಾಯಿತು ಎಂಬುದರ 5 ಅಂಶಗಳ ವಿವರಣೆ ಇಲ್ಲಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಂತ ಜೆರೋಸಾ ಶಾಲೆಯ ಶಿಕ್ಷಕಿಯೊಬ್ಬರು ನೀಡಿದ ಪಠ್ಯ ವಿವರಣೆ ನಂತರ ಸಂಭವಿಸಿದ ವಿವಾದಕ್ಕೆ ಸಂಬಂಧಿಸಿ ಇಬ್ಬರು ಬಿಜೆಪಿ ಶಾಸಕರ ಮೇಲೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವಿಚಾರ ವಿಧಾನಸಭೆಯಲ್ಲಿ ಭಾರೀ ಚರ್ಚೆ, ವಾಗ್ವಾದಕ್ಕೂ ಕಾರಣವಾಯಿತು.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು; ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ

ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಜೆಪ್ಪು ಸಂತ ಜೆರೋಸಾ ಶಾಲೆಯ ಆಂಗ್ಲ ಭಾಷಾ ಶಿಕ್ಷಕಿಯೊಬ್ಬರು ಕವಿತೆಯ ವಿವರಣೆ ನೀಡಿದ ವಿಚಾರಕ್ಕೆ ಸಂಬಂಧಿಸಿದ ಆಡಿಯೋ ಸಂದೇಶ ವೈರಲ್‌ ಆಗಿದೆ. ಇದರ ಬೆನ್ನಿಗೆ ಫೆ.10ರಂದು ಈ ಕುರಿತು ವಿವಾದ ಉಂಟಾಗಿದ್ದು, ಬಳಿಕ ನಡೆದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಪ್ರಕರಣದ ತನಿಖೆಗೆ ಐಎಎಸ್‌ ಅಧಿಕಾರಿಯನ್ನು ನೇಮಿಸಿದೆ.

1) ಜೆಪ್ಪು ಶಾಲಾ ವಿವಾದ ತನಿಖೆಗೆ ಐಎಎಸ್ ಅಧಿಕಾರಿ

ಮಂಗಳೂರು ಜೆಪ್ಪು ಎಂಬಲ್ಲಿರುವ ಸಂತ ಜೆರೋಸಾ ಶಾಲೆಯ ಶಿಕ್ಷಕರೊಬ್ಬರು ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಕರ್ನಾಟಕ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಯನ್ನು ತನಿಖಾಧಕಾರಿಯನ್ನಾಗಿ ನೇಮಕ ಮಾಡಿದೆ. ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರೂ ಆಗಿರುವ ಕಲಬುರಗಿಯ ಆಕಾಶ್ ಐಎಎಸ್‌ಗೆ ತನಿಖೆಯ ಹೊಣೆಗಾರಿಕೆ ನೀಡಲಾಗಿದೆ.

2) ವಿಧಾನಸಭೆಯಲ್ಲಿ ಜೆರೋಸಾ ಶಾಲೆ ವಿವಾದ ಪ್ರಸ್ತಾಪ

ವಿಧಾನಸಭೆ ಕಲಾಪದ ನಡುವೆ, ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ತನ್ನ ಮೇಲೆ ಪ್ರಕರಣ ದಾಖಲಿಸಿದ ಔಚಿತ್ಯವನ್ನು ಪ್ರಶ್ನಿಸಿದರಲ್ಲದೆ, ಶಿಕ್ಷಕಿ ಮೇಲೆ ಕೇಸ್ ಯಾಕೆ ಹಾಕಿಲ್ಲ ಎಂದು ಕೇಳಿದರು. ಗೃಹಸಚಿವ ಪರಮೇಶ್ವರ್ ಮತ್ತು ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಧ್ಯೆ ತೀವ್ರ ವಾಗ್ವಾದವೂ ನಡೆಯಿತು. ಕೊನೆಗೆ ಸ್ಪಷ್ಟ ಉತ್ತರ ದೊರಕದೆ, ಸದನವನ್ನು ಮುಂದೂಡಲಾಯಿತು. ಈ ಮಧ್ಯೆ ಪ್ರಗತಿಪರರ ನಿಯೋಗ ಹಾಗೂ ಕಾಂಗ್ರೆಸ್ ನಿಯೋಗ ಶಾಲೆಗೆ ಪ್ರವೇಶಿಸಿದ್ದು, ಬಿಜೆಪಿ ಶಾಸಕರಿಗೆ ಶಾಲೆಯೊಳಗೆ ಪ್ರವೇಶಿಸಲು ಅವಕಾಶ ಕೊಡಲಿಲ್ಲ ಎಂಬ ವಿಚಾರವೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.

3) ಇಬ್ಬರು ಬಿಜೆಪಿ ಶಾಸಕರ ವಿರುದ್ಧ ದೂರು

ಶಾಲೆಯೊಂದರ ಮುಂಭಾಗ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ ಮತ್ತು ನಿಂದನೆ ಹಾಗೂ ವಿವಿಧ ಆರೋಪಗಳ ಮೇಲೆ ಇಬ್ಬರು ಬಿಜೆಪಿ ಶಾಸಕರು ಸೇರಿದಂತೆ ಆರು ಮಂದಿ ಮೇಲೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಕಾರ್ಪೊರೇಟರ್ಗಳಾದ ಸಂದೀಪ್ ಗರೋಡಿ, ಭರತ್ ಕುಮಾರ್ ಸೇರಿದಂತೆ ಮತ್ತೋರ್ವನ ಮೇಲೆ ಅನಿಲ್ ಜೆರಾಲ್ಡ್ ಲೋಬೊ ಎಂಬವರು ನೀಡಿರುವ ದೂರಿನನ್ವಯ ಈ ಪ್ರಕರಣ ದಾಖಲಾಗಿದೆ.

ಈ ವಿಚಾರವನ್ನು ಮಂಗಳೂರು ಪೊಲೀಸ್ ಆಯುಕ್ತರು ಖಚಿತಪಡಿಸಿದ್ದಾರೆ. ಶಾಲೆಯ ಶಿಕ್ಷಕಿ ಯಾವುದೇ ಧರ್ಮಕ್ಕೆ ಅವಮಾನ ಮಾಡದಿದ್ದರೂ, ಈ ಬಗ್ಗೆ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸದೇ ಈ ಏಳು ಮಂದಿ ಶಾಲೆಯ ಬಳಿ ಅಕ್ರಮವಾಗಿ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ. ಶಾಲಾ ಆಡಳಿತ ಮಂಡಳಿಯ ನಿಯಮಗಳನ್ನು ವಿದ್ಯಾರ್ಥಿಗಳು ಉಲ್ಲಂಘಿಸುವಂತೆ ಪ್ರಚೋದಿಸಿರುತ್ತಾರೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಬೆದರಿಕೆ ಹಾಕಿದ್ದಾರೆ. ಈ ಮೂಲಕ ಸಮುದಾಯಗಳ ನಡುವೆ ಗಲಭೆ ಉಂಟಾಗುವಂತೆ ಪ್ರಚೋದಿಸಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿನ ಶಾಂತಿ ಸುವ್ಯವಸ್ಥೆಗೆ ಭಂಗ ತರಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

4) ಜೆಪ್ಪು ಸಂತ ಜೆರೋಸಾ ಶಾಲೆಯಲ್ಲಿ ಏನು ನಡೆಯಿತು

ಮಂಗಳೂರಿನ ಜೆಪ್ಪುವಿನಲ್ಲಿರುವ ಶಿಕ್ಷಣ ಸಂಸ್ಥೆಯ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಕೆಲ ವಿಚಾರಗಳ ಬಗ್ಗೆ ನಿಂದನೆ ಮಾಡಿದ್ದಾರೆ ಎಂದು ಪೋಷಕರು ಆಡಿಯೋ ಮೂಲಕ ಸಂಘಟನೆಗಳ ಗಮನಕ್ಕೆ ತಂದಿದ್ದರು. ಫೆ.10 ರ ಶನಿವಾರ ಪೋಷಕರು ಶಾಲಾ ಗೇಟ್ ಬಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಫೆ.12 ರಂದು ಸಂಘಟನೆಗಳ ಕಾರ್ಯಕರ್ತರು ಶಿಕ್ಷಣ ಸಂಸ್ಥೆ ಮುಂದೆ ಜಮಾಯಿಸಿ ಶಿಕ್ಷಕಿಯ ಅಮಾನತಿಗೆ ಆಗ್ರಹಿಸಿದ್ದರು. ಸಂಜೆಯ ವೇಳೆಗೆ ಶಾಲೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಶಾಲಾ ಆಡಳಿತ ಮಂಡಳಿಯೊಂದಿಗೆ ಒಂದು ಗಂಟೆ ಮಾತುಕತೆ ನಡೆಸಿದ್ದರು.

ಬಳಿಕ ಮುಖ್ಯ ಶಿಕ್ಷಕಿ ಅನಿತಾ ಮಾತನಾಡಿ, ಆರೋಪ ಎದುರಿಸುತ್ತಿರುವ ಶಿಕ್ಷಕಿಯನ್ನು ಈ ಕ್ಷಣದಿಂದ ನಮ್ಮ ಸಂಸ್ಥೆಯಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ತನಿಖೆ ಪಾರದರ್ಶಕದಿಂದ ಕೂಡಿರಲು ನಮ್ಮ ಸಹಕಾರಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ತನಿಖೆಯ ಅಂತಿಮ ಆದೇಶಕ್ಕೆ ಬದ್ಧರಾಗಿದ್ದೇವೆ ಎಂದಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಡಿಡಿಪಿಐ ವರ್ಗಾವಣೆ ಹೊಂದಿದ್ದರು. ಶಾಲಾ ವಿವಾದ ನಿರ್ವಹಣೆಯಲ್ಲಿ ಅವರು ವಿಫಲರಾಗಿದ್ದಾರೆ ಎಂದು ಮಂಗಳವಾರ ಶಾಲೆಗೆ ಭೇಟಿ ನೀಡಿದ್ದ ಮಾಜಿ ಸಚಿವ ರಮಾನಾಥ ರೈ, ವಿನಯ ಕುಮಾರ್ ಸೊರಕೆ ನಿಯೋಗ ಅಸಮಧಾನ ಹೊರಹಾಕಿತ್ತು. ಇದರ ಬೆನ್ನಲ್ಲೇ ಡಿಡಿಪಿಐ ಅವರನ್ನು ವರ್ಗಾಯಿಸಲಾಯಿತು.

5) ರಾಜಕೀಯ ದುರುದ್ದೇಶ ಇದರಲ್ಲಿದೆ: ಪ್ರಗತಿಪರ ಸಂಘಟನೆಗಳ ಆರೋಪ

ಶಾಲೆಯ ಶಿಕ್ಷಕಿ ವಿರುದ್ಧ ಧಾರ್ಮಿಕ ನಿಂದನೆ ಆರೋಪ ಹೊರಿಸಿದ್ದರ ಹಿಂದೆ ರಾಜಕೀಯ ದುರುದ್ದೇಶ ಇದೆ. ಕೋಮುಹಿಂಸೆಗೆ ಪ್ರಚೋದನೆ ನೀಡುವ ಯೋಜಿತ ಷಡ್ಯಂತ್ರ ಎಂದು ಈ ನಡುವೆ ಶಾಲೆಗೆ ಭೇಟಿ ನೀಡಿದ ಪ್ರಗತಿಪರ ಸಂಘಟನೆಗಳ ನಿಯೋಗ ಬಳಿಕ ಹೇಳಿತು. ನಿಯೋಗದ ನೇತೃತ್ವವನ್ನು ಮುನೀರ್ ಕಾಟಿಪಳ್ಳ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗಡೆ, ವಕೀಲರಾದ ದಿನೇಶ್ ಹೆಗ್ಡೆ ಉಳೇಪಾಡಿ, ಯಶವಂತ ಮರೋಳಿ, ಮಂಜುಳಾ ನಾಯಕ್, ಕೆ.ಅಶ್ರಫ್, ಪಿ.ವಿ.ಮೋಹನ್ ಮತ್ತಿತರರು ಇದ್ದರು. ಯಾವುದಾದರೂ ವಿದ್ಯಾರ್ಥಿಯ ಪೋಷಕರು ಲಿಖಿತ ದೂರು ನೀಡಿದ್ದಾರೆಯೇ, ಶಿಕ್ಷಕಿ ತಪ್ಪೆಸಗಿದ್ದರೆ, ಅದರ ಕುರಿತು ವಿದ್ಯಾರ್ಥಿ ಪೋಷಕರು ಶಿಕ್ಷಕ ರಕ್ಷಕರ ಗಮನಕ್ಕೆ ತಂದಿಲ್ಲ ಏಕೆ ಎಂದು ಪ್ರಶ್ನಿಸಿದರು.

ರಬೀಂದ್ರನಾಥ ಟಾಗೋರ್ ಅವರ “ Work is worship “ ಎಂಬ ಕವಿತೆಯನ್ನು ಇಂಗ್ಲಿಷ್ ಪಠ್ಯಪುಸ್ತಕದಲ್ಲಿ ಸರಕಾರ ಶಿಕ್ಷಣಇಲಾಖೆ ಸೇರಿಸಿತ್ತು. ಈ ಪಠ್ಯವನ್ನು ಶಿಕ್ಷಕಿ ಶಾಲೆಯಲ್ಲಿ ಸಂಪೂರ್ಣ ಇಂಗ್ಲಿಷ್ ನಲ್ಲಿ ಬೋಧಿಸಿದ್ದು, ಶಿಕ್ಷಕಿಯ ಯಾವ ಶಬ್ದಗಳನ್ನು ಹೇಳಿ ಧರ್ಮದ ಅವಹೇಳನ ಮಾಡಿದ್ದಾರೆ ಎಂದು ಹೇಳಿಶಾಲಾ ಆಡಳಿತ ಮಂಡಳಿಗೆ ದೂರು ಸಲ್ಲಿಸಿಲ್ಲ. ದೂರು ಇಲ್ಲದೇ , ವಿಚಾರಣೆ ಇಲ್ಲದೇ ಅಮಾಯಕ ಶಿಕ್ಷಕಿಯೊಬ್ಬರ ಅಮಾನತು ನಡೆದಿರುವುದು , ಯಾವುದೇ ತಪ್ಪು ಮಾಡದ ಶಿಕ್ಷಕಿಗೆ ಶಿಕ್ಷೆ ನೀಡಿರುವುದು ನಮ್ಮನಾಗರಿಕ ಸಮಾಜ ತಲೆತಾಗಿಸುವಂತಾಗಿದೆ ಎಂದಿದ್ದರು. ಒಟ್ಟಿನಲ್ಲಿ ಈ ಪ್ರಕರಣವೀಗ ರಾಜಕೀಯ ತಿರುವನ್ನೂ ಪಡೆದುಕೊಳ್ಳುತ್ತಿದ್ದು, ಮುಂದಿನ ನಡೆ ಕುತೂಹಲಕಾರಿಯಾಗಿದೆ.

(ವರದಿ ಹರೀಶ ಮಾಂಬಾಡಿ, ಮಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ