logo
ಕನ್ನಡ ಸುದ್ದಿ  /  ಕರ್ನಾಟಕ  /  Jagadish Shettar: 'ನನಗೆ ಆಗಿರುವ ವೇದನೆ ಯಾರೂ ಅರ್ಥ ಮಾಡಿಕೊಂಡಿಲ್ಲ' ಕಾಂಗ್ರೆಸ್ ಸೇರಿದ್ದಕ್ಕೆ ಕಾರಣ ಹೇಳಿದ ಜಗದೀಶ್ ಶೆಟ್ಟರ್

Jagadish Shettar: 'ನನಗೆ ಆಗಿರುವ ವೇದನೆ ಯಾರೂ ಅರ್ಥ ಮಾಡಿಕೊಂಡಿಲ್ಲ' ಕಾಂಗ್ರೆಸ್ ಸೇರಿದ್ದಕ್ಕೆ ಕಾರಣ ಹೇಳಿದ ಜಗದೀಶ್ ಶೆಟ್ಟರ್

Raghavendra M Y HT Kannada

Apr 17, 2023 11:51 AM IST

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದದ ಬಳಿಕ ಮಾತನಾಡಿದರು.

  • ಕೇಂದ್ರದಲ್ಲಿ ಉನ್ನತ ಹುದ್ದೆ ನೀಡುವ ಭರವಸೆ ನೀಡಿದರೂ ಇದಕ್ಕೆ ಜಗ್ಗದ ಬಿಜೆಪಿಯ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ವೇಳೆ ತಮಗಾದ ವೇದನೆಯ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದದ ಬಳಿಕ ಮಾತನಾಡಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದದ ಬಳಿಕ ಮಾತನಾಡಿದರು.

ಬೆಂಗಳೂರು: ಭಾರತೀಯ ಜನತಾ ಪಾರ್ಟಿಯಲ್ಲಿ (Bharatiya Janata Party) ಟಿಕೆಟ್ ವಿಚಾರವಾಗಿ ಎರಡ್ಮೂರು ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆಗಳ ಬಳಿಕ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿಯೊಂದಿಗಿನ (BJP) ಸಂಬಂಧವನ್ನು ಕಡಿದುಕೊಂಡಿದ್ದು, ಇವತ್ತು ಕಾಂಗ್ರೆಸ್ (Congress) ಸೇರಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳ, ದಿನಾಂಕ ಮತ್ತು ಇತರೆ ವಿವರ

ಬೆಂಗಳೂರು: ಆತ್ಮಹತ್ಯೆಯ ನಾಟಕವಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಜಿಮ್ ತರಬೇತುದಾರ; ಮನೆಯಲ್ಲೇ ಬಿಬಿಎ ವಿದ್ಯಾರ್ಥಿನಿ ಶಂಕಾಸ್ಪದ ಸಾವು

ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣ; ದಾವಣಗೆರೆ ಮಾಯಕೊಂಡ ಬಳಿ ರೈಲ್ವೆ ಪೊಲೀಸರಿಗೆ ಸೆರೆ ಸಿಕ್ಕ ಆರೋಪಿ ಗಿರೀಶ್‌

ಬೆಂಗಳೂರು: ಹೆಚ್ಚು ಹಣ ವಸೂಲಿ ಮಾಡಲು ಮುಂದಾದ ಓಲಾ ಕ್ಯಾಬ್‌ ಚಾಲಕ, ಹೊಸ ವಂಚನಾ ಕ್ರಮ ಪತ್ತೆ ಹಚ್ಚಿದ ಮಹಿಳೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ರಾಜ್ಯ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಶೆಟ್ಟರ್, ಅನೇಕ ತಿಂಗಳಿಂದ ಹಿರಿಯ ನಾಯಕನಾಗಿ ನನಗೆ ಆಗಿರುವ ವೇದನೆ ಯಾರೂ ಅರ್ಥ ಮಾಡಿಕೊಂಡಿಲ್ಲ ನೋವು ತೋಡಿಕೊಂಡಿದ್ದಾರೆ.

ಇಂದು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಅನೇಕರಿಗೆ ಆಶ್ಚರ್ಯವಾಗಿರಬಹುದು. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರಾಗಿದ್ದವರು ಕಾಂಗ್ರೆಸ್ ಸೇರುತ್ತಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತಿದೆ. ಅನೇಕ ತಿಂಗಳಿಂದ ಹಿರಿಯ ನಾಯಕನಾಗಿ ನನಗೆ ಆಗಿರುವ ವೇದನೆ ಯಾರೂ ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.

ನಾನು ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೆ. ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಸಂಘಟನೆ ಮಾಡಿದ್ದೆ. ಬಿಜೆಪಿ ನನಗೆ ಕೊಟ್ಟ ಸ್ಥಾನಮಾನ, ಅಧಿಕಾರಕ್ಕೆ ಪ್ರತಿಯಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಹುಬ್ಬಳ್ಳಿಯಲ್ಲಿ 6 ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಈಗ 7ನೇ ಬಾರಿ ಸ್ಪರ್ಧೆ ಮಾಡಲಿದ್ದೇನೆ ಎಂದು ಘೋಷಿಸಿದ್ದಾರೆ.

ಟಿಕೆಟ್ ಇಲ್ಲ ಎಂದಾಗ ಆಘಾತವಾಯಿತು

ಕಳೆದ 2 ವರ್ಷಗಳಿಂದ ಕ್ಷೇತ್ರದಲ್ಲಿ ಹೋರಾಡುತ್ತಿದ್ದೇನೆ. ನನಗೆ ಟಿಕೆಟ್ ಇಲ್ಲ ಎಂದಾಗ ಆಘಾತವಾಯಿತು. ಹಿರಿಯ ನಾಯಕನಿಗೆ ನೀಡಬೇಕಾದ ಗೌರವ ನೀಡಿಲ್ಲ ಎಂಬುದು ನೋವಾಗಿದೆ. ನಾನು ಚುನಾವಣೆ ನಿಲ್ಲುವುದು ಬೇಡವಾಗಿದ್ದರೆ ಒಂದು ವಾರ ಮುಂಚಿತವಾಗಿ ಹೇಳಿ ಮಾತುಕತೆ ನಡೆಸಿದ್ದರೆ ನಾನು ಅದಕ್ಕೆ ಒಪ್ಪುತ್ತಿದ್ದೆ ಅಂತ ಹೇಳಿದ್ದಾರೆ.

ಎಂದಿಗೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿಲ್ಲ. ನಾನು ಸಂಘ ಪರಿವಾರದಿಂದ ಬಂದಿರುವ ವ್ಯಕ್ತಿ. ನನ್ನನ್ನು ಯಾಕೆ ಕಡೆಗಣಿಸಲಾಗುತ್ತಿದೆ ಎಂದು ಅರ್ಥವಾಗಿಲ್ಲ. ನನಗೆ ಜನರ ಆಶೀರ್ವಾದವಿದೆ. ನಾನು ಹಠಕ್ಕೆ ಬಿದ್ದು ಗೆಲ್ಲುವ ಅಗತ್ಯವಿಲ್ಲ. ನಾಮಪತ್ರ ಸಲ್ಲಿಸುವ ಹಿಂದಿನ ದಿನ ನನಗೆ ಟಿಕೆಟ್ ಇಲ್ಲ ಎಂದು ಹೇಳಿ, ಸಣ್ಣ ಹುಡುಗನಂತೆ ನಡೆಸಿಕೊಂಡರೆ ನನಗೆ ಹೇಗೆ ಭಾಸವಾಗಬೇಕು. ಇದರಿಂದ ಬಹಳ ಬೇಸರವಾಯಿತು ಎಂದು ಶೆಟ್ಟರ್ ವಿವರಿಸಿದ್ದಾರೆ.

ಪಕ್ಷ ಸಿದ್ಧಾಂತ ನಂಬಿ ಬಹಳ ಸಂತೋಷದಿಂದ ಕಾಂಗ್ರೆಸ್ ಸೇರ್ಪಡೆ

ನನ್ನ ಅಭಿಮಾನಿಗಳು, ಹಿತೈಶಿಗಳು ಬಂದು ನನಗೆ ಆಗಿರುವ ಅಪಮಾನಕ್ಕೆ ಬೇಸರ ಮಾಡಿಕೊಂಡರು. ನನ್ನ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ನಮ್ಮ ಹಿತೈಶಿ, ಜನರ ಅಭಿಪ್ರಾಯ ಪಡೆದು ಈ ತೀರ್ಮಾನ ಮಾಡಿದ್ದೇನೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿ ಕಾಂಗ್ರೆಸ್ ಸೇರುವಂತೆ ಕರೆದರು. ನಾವು ಕಟ್ಟಿ ಬೆಳೆಸಿದ ಮನೆಯಿಂದ ನಮ್ಮನ್ನು ಹೊರ ದಬ್ಬಿದಾಗ ನಾನು ಸಹಜವಾಗಿ ಕಾಂಗ್ರೆಸ್ ಪಕ್ಷ ಸಿದ್ಧಾಂತ ನಂಬಿ ಬಹಳ ಸಂತೋಷದಿಂದ ಕಾಂಗ್ರೆಸ್ ಸೇರುತ್ತಿದ್ದೇನೆ ಅಂತ ಹೇಳಿದ್ದಾರೆ.

ಗೌರವಯುತವಾಗಿ ಕಳುಹಿಸಿ ಅಂತ ಕೇಳಿಕೊಂಡೆ

ಬೊಮ್ಮಾಯಿ ಅವರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಬೇಡ ಎಂದು ಸ್ವಯಂಕೃತ ಹೇಳಿಕೆ ನೀಡಿದ್ದೆ. ಅಧಿಕಾರ ಬೇಕಾಗಿದ್ದರೆ ಆಗಲೇ ಹಠಮಾಡಿ ಮಂತ್ರಿಗಿರಿ ಪಡೆಯುತ್ತಿದ್ದೆ. ಕೊನೆಯದಾಗಿ ನನಗೆ ಅಪಮಾನವಾಗಿದ್ದು, ಅದನ್ನು ಸರಿಪಡಿಸಲು ವಿಧಾನಸಭೆಗೆ ಸ್ಪರ್ಧಿಸುತ್ತೇನೆ. ಆರು ತಿಂಗಳ ನಂತರ ಗೌರವಯುತವಾಗಿ ರಾಜೀನಾಮೆ ನೀಡುತ್ತೇನೆ ನಂತರ ನೀವು ಯಾರನ್ನು ಬೇಕಾದರೂ ಶಾಸಕರನ್ನಾಗಿ ಮಾಡಿಕೊಳ್ಳಿ ಎಂದು ಹೇಳಿದೆ. ಆದರೂ ಅವರು ಒಪ್ಪಲಿಲ್ಲ. ನನ್ನನ್ನು ರಾಜಕೀಯವಾಗಿ ಗೌರವಯುತವಾಗಿ ಕಳುಹಿಸಿ ಎಂದು ಕೇಳಿದರೂ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಜಗದೀಶ್ ಶೆಟ್ಟರ್ ವಿವರಿಸಿದ್ದಾರೆ.

ನನಗೆ ಯಡಿಯೂರಪ್ಪನವರ ಮೇಲೆ ಬಹಳ ಗೌರವವಿದೆ. ನಾನು ಬಿಜೆಪಿಗೆ ರಾಜೀನಾಮೆ ನೀಡುತ್ತೇನೆ ಎಂದಾಗ ರಾಜ್ಯದ ಎಲ್ಲಾ ಭಾಗದ ಲಿಂಗಾಯತ ಸಮುದಾಯದ ನಾಯಕರು ನನಗೆ ಕರೆ ಮಾಡಿ ನಿಮಗೆ ಬಿಜೆಪಿಯಲ್ಲಿ ಅನ್ಯಾಯವಾಗಿದ್ದು ಯಾಕೆ? ಎಂದು ಬೇಸರ ವ್ಯಕ್ತಪಡಿಸಿದರು. ಈ ಸಮುದಾಯ ಹಾಗೂ ಹುಬ್ಬಳ್ಳಿ ಧಾರವಾಡ ಭಾಗದ ಜನರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿರುತ್ತೇನೆ. ರಾಜ್ಯದಲ್ಲಿ ಇಂದು ಬದಲಾವಣೆಯ ದಿನವಾಗಿದ್ದು, ನಾನು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ