logo
ಕನ್ನಡ ಸುದ್ದಿ  /  ಕರ್ನಾಟಕ  /  R Ashoka Profile: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸಾಮ್ರಾಜ್ಯಕ್ಕೆ ʻಅಶೋಕʼ ದಂಡಯಾತ್ರೆ; ಬಿಜೆಪಿ ನೇತಾರ ಆರ್ ಅಶೋಕರ ಕಿರುಪರಿಚಯ

R Ashoka Profile: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಸಾಮ್ರಾಜ್ಯಕ್ಕೆ ʻಅಶೋಕʼ ದಂಡಯಾತ್ರೆ; ಬಿಜೆಪಿ ನೇತಾರ ಆರ್ ಅಶೋಕರ ಕಿರುಪರಿಚಯ

Umesh Kumar S HT Kannada

May 07, 2023 11:48 AM IST

ಆರ್‌ ಅಶೋಕ (ಸಂಗ್ರಹ ಚಿತ್ರ)

  • R Ashoka Profile: ಬಿಜೆಪಿಯ ಮಟ್ಟಿಗೆ ಕರ್ನಾಟಕದಲ್ಲಿ ಡಿ.ವಿ.ಸದಾನಂದ ಗೌಡರ ಬಳಿಕ ಪ್ರಭಾವಿ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಂಡಿರುವವರು ಆರ್‌ ಅಶೋಕ. ಜಗದೀಶ್‌ ಶೆಟ್ಟರ್‌ ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದರು. ಈ ಚುನಾವಣೆಯಲ್ಲಿ ಕನಕಪುರದಲ್ಲಿ ಡಿಕೆ ಶಿವಕುಮಾರ್‌ ಅವರನ್ನು ಎದುರಿಸುವ ದೊಡ್ಡ ಟಾಸ್ಕ್‌ ಅವರೆದುರು ಇದೆ. ಹೀಗಾಗಿ ಅವರನ್ನು ಪರಿಚಯಿಸುವ ಕಿರು ಪ್ರಯತ್ನ.

 ಆರ್‌ ಅಶೋಕ (ಸಂಗ್ರಹ ಚಿತ್ರ)
ಆರ್‌ ಅಶೋಕ (ಸಂಗ್ರಹ ಚಿತ್ರ) (Verified Twitter)

ಕನಕಪುರ ಭಾಗದಲ್ಲಿ ಕಳೆದ ಎರಡು ದಶಕಗಳಿಂದ ನೈಜ ಸ್ಪರ್ಧೆ ನಡೆದಿದರಲಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ (ಕೆಪಿಸಿಸಿ)ಯ ಅಧ್ಯಕ್ಷ ಡಿಕೆ ಶಿವಕುಮಾರ್‌ ಸ್ಪರ್ಧೆಗೆ ಪ್ರಬಲ ಎದುರಾಳಿ ಇರುತ್ತಿರಲಿಲ್ಲ. ಈ ಸಲ ಬಿಜೆಪಿ ತನ್ನ ತಂತ್ರಗಾರಿಕೆಯನ್ನು ಬದಲಾಯಿಸಿದ್ದು, ಸಚಿವ ಆರ್‌ ಅಶೋಕ ಅವರನ್ನೇ ಕಣಕ್ಕೆ ಇಳಿಸಿದೆ. ಅವರು ಕಳೆದ ಬಾರಿ ಪ್ರತಿನಿಧಿಸಿದ್ದ ಪದ್ಮನಾಭ ನಗರ ಕ್ಷೇತ್ರದಲ್ಲೂ ಅವರಿಗೆ ಟಿಕೆಟ್‌ ನೀಡಿದೆ. ಹೀಗಾಗಿ ಅವರಿಗೆ ಎರಡು ಟಾಸ್ಕ್‌ಗಳು. ಬಿಜೆಪಿಯ ಮಟ್ಟಿಗೆ ಈಗ ಆರ್‌ ಅಶೋಕ ಪ್ರಬಲ ಮತ್ತು ಪ್ರಭಾವಿ ಒಕ್ಕಲಿಗ ನಾಯಕ. ಹೀಗಾಗಿ ಎರಡೂ ಕಡೆ ಗೆದ್ದು ಪಕ್ಷದ ವರ್ಚಸ್ಸನ್ನು ಹೆಚ್ಚಿಸಬೇಕಾದ ಬಹುದೊಡ್ಡ ಸವಾಲನ್ನು ಅಶೋಕ ಎದುರಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 20; ದಕ್ಷಿಣ ಕನ್ನಡ, ಉಡುಪಿ ಸೇರಿ 8ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಮಳೆ ಮುನ್ಸೂಚನೆ

Hubli News: ಅಂಜಲಿ ಹತ್ಯೆ, ಹುಬ್ಬಳ್ಳಿಯಲ್ಲಿ ಇಂದು ಪರಮೇಶ್ವರ್‌ ಸಭೆ, ಸಿಬಿಐ ತನಿಖೆಗೆ ಜೋಶಿ ಆಗ್ರಹ

CET Results2024: ಕರ್ನಾಟಕ ಸಿಇಟಿ ಫಲಿತಾಂಶ ಇಂದು ಪ್ರಕಟ ಸಾಧ್ಯತೆ, ನಿಮ್ಮ ಅಂಕ ನೋಡುವುದು ಹೀಗೆ

Bangalore News: ತಮಿಳುನಾಡಿನಲ್ಲಿ ಗುಂಡು ತಗುಲಿ ಬೆಂಗಳೂರಿನ ಯೋಧ ಸಾವು

ಬೆಂಗಳೂರು ಭಾಗದಲ್ಲಿ ಆರ್‌ ಅಶೋಕ ಪ್ರಭಾವಿ ಒಕ್ಕಲಿಗ ಮುಖಂಡ. ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ (2012-2013) ಆಗಿನ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದವರಿಗೆ ಈ ಸಲ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಸಾರಥ್ಯವಹಿಸಿರುವ ಡಿಕೆ ಶಿವಕುಮಾರ್‌ ಅವರನ್ನು ಕನಕಪುರದಲ್ಲಿ ಎದುರಿಸುವ ಬೃಹತ್‌ ಸವಾಲನ್ನು ಪಕ್ಷ ಮುಂದಿಟ್ಟಿದೆ. ಅಷ್ಟೇ ಅಲ್ಲ, ಸ್ವಕ್ಷೇತ್ರ ಪದ್ಮನಾಭನಗರದಲ್ಲೂ ಟಿಕೆಟ್‌ ನೀಡಿದೆ.

ಕನಕಪುರದಿಂದ ನಾಲ್ಕನೇ ಬಾರಿಗೆ ಕಣಕ್ಕಿಳಿಯಲು ಮುಂದಾಗಿರುವ ಶಿವಕುಮಾರ್, ಕನಕಪುರಕ್ಕೆ ಸ್ಥಳಾಂತರಗೊಳ್ಳುವ ಮೊದಲು, ಶಿವಕುಮಾರ್ ಹಿಂದಿನ ಸಾತನೂರು ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದರು. ಸಾತನೂರು, ಕನಕಪುರ ಭಾಗ ಒಂದು ರೀತಿಯಲ್ಲಿ ಡಿಕೆ ಶಿವಕುಮಾರ್‌ ಸಹೋದರರ ಸಾಮ್ರಾಜ್ಯದಂತೆ ಬೆಳೆದುಬಿಟ್ಟಿದೆ. ಅಲ್ಲಿ ಅವರದ್ದೇ ಸರ್ಕಾರ. ಈ ಸಲ ಅದನ್ನು ಮುರಿಯುವ ಪ್ರಯತ್ನ ಬಿಜೆಪಿ ನಡೆಸಿದ್ದು, ಅದೇ ಸಮುದಾಯದ ಆರ್‌ ಅಶೋಕ ಅವರು ಈ ಹೊಣೆಗಾರಿಕೆ ಹೆಗಲೇರಿಸಿಕೊಂಡಿದ್ದಾರೆ.

ದಶಕಗಳ ನಂತರ ಮೊದಲ ಬಾರಿಗೆ ಬಿಜೆಪಿ ಅಸಾಧಾರಣ ಅಭ್ಯರ್ಥಿಯನ್ನು ಕನಕಪುರದಲ್ಲಿ ಕಣಕ್ಕಿಳಿಸಿದೆ. ಬಿಜೆಪಿಯ ಒಕ್ಕಲಿಗ ಮುಖದ ಕಂದಾಯ ಸಚಿವ ಆರ್ ಅಶೋಕ ಅವರು ಕನಕಪುರದಲ್ಲಿ ಬಿಜೆಪಿಯನ್ನು ಕಟ್ಟುವ ಕಾರ್ಯವನ್ನು ಹೊಂದಿದ್ದಾರೆ, ಅಲ್ಲಿ ಪಕ್ಷವು 1983 ರಿಂದ ಸರಾಸರಿ 2.6 ಶೇಕಡಾ ಮತಗಳನಷ್ಟೆ ಹೊಂದಿದೆ. ಈ ಮತನೆಲೆಗಟ್ಟಿನಲ್ಲಿ ಗೆಲ್ಲುವುದು ಕಡುಕಷ್ಟದ ಕೆಲಸ. ಆರ್ ಅಶೋಕ ಅವರು ಈಗ ಕಾರ್ಯಕರ್ತರ ನೆರವಿನೊಂದಿಗೆ ಮತನೆಲೆಗಟ್ಟನ್ನು ವಿಸ್ತರಿಸುವ ಜತೆಗೆ ಗೆದ್ದು ದಶಕಗಳ ಡಿಕೆ ಶಿವಕುಮಾರ್‌ ಸಾಮ್ರಾಜ್ಯದಲ್ಲಿ ಕಮಲ ಅರುಳುವಂತೆ ಮಾಡಬೇಕಾದ ಸವಾಲು ಎದುರಿಸುತ್ತಿದ್ದಾರೆ.

ಕನಕಪುರದಲ್ಲಿ 80 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಮತಗಳಿವೆ. ಹೀಗಾಗಿಯೇ, ಅಶೋಕ ಅವರನ್ನು ಪಕ್ಷದ ಅಭ್ಯರ್ಥಿಯಾಗಲು ಜಾತಿಯನ್ನು ಮತ್ತು ಪ್ರಭಾವಿ ನಾಯಕತ್ವವನ್ನು ಮಾನದಂಡವಾಗಿ ಪರಿಗಣಿಸಿತು. ಜೆಡಿಎಸ್ ಪಕ್ಷವು ನಾಗರಾಜು ಅವರನ್ನು ಕಣಕ್ಕಿಳಿಸಿದೆ, ಅವರ ಪ್ರಚಾರ ಅಷ್ಟು ಕಾವೇರಿಸಿಕೊಂಡಿಲ್ಲ. ಕಳೆದ ಬಾರಿ 47 ಸಾವಿರಕ್ಕೂ ಅಧಿಕ ಮತ ಪಡೆದಿದ್ದ ಜೆಡಿಎಸ್ ಮುಖಂಡ ನಾರಾಯಣಗೌಡ ಈಗ ಕಾಂಗ್ರೆಸ್‌ನಲ್ಲಿದ್ದಾರೆ.

ರಾಜಕೀಯ ರಂಗದಲ್ಲಿ ಆರ್‌ ಅಶೋಕ

ಶಿಕ್ಷಣ ಮುಗಿಸಿದ ಬಳಿಕ ಆರ್‌ ಅಶೋಕ ಅವರು ತುರ್ತು ಪರಿಸ್ಥಿತಿಯ ಸಮಯದಲ್ಲಿ (1975-77) ಅಂದಿನ ಹೋರಾಟದಲ್ಲಿ ಭಾಗಿಯಾಗಿದ್ದ ಕಾರಣ ಬಂಧನಕ್ಕೆ ಒಳಗಾಗಿದ್ದರು. ಹಿರಿಯ ನಾಯಕರಾದ ಎಲ್.ಕೆ. ಆಡ್ವಾಣಿ ಅವರ ಜತೆಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದರು. ಹೀಗೆ ರಾಜಕೀಯ ರಂಗದಲ್ಲಿ ಕೆಲಸ ಶುರುಮಾಡಿದ ಆರ್‌ ಅಶೋಕ, ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಗೆ 1997 ರ ಉಪಚುನಾವಣೆಯಲ್ಲಿ ಉತ್ತರಹಳ್ಳಿಯಿಂದ ಚುನಾಯಿತರಾದರು. ಇದು ಕೇತ್ರ ಮರುವಿಂಗಡನೆಗೆ ಮೊದಲು ಭಾರತದ ಅತಿದೊಡ್ಡ ವಿಧಾನಸಭಾ ಕ್ಷೇತ್ರವಾಗಿತ್ತು. ಅವರು ಅದೇ ಕ್ಷೇತ್ರದಿಂದ 1999 ಮತ್ತು 2004 ರ ಅಸೆಂಬ್ಲಿ ಚುನಾವಣೆಗಳಲ್ಲಿ ದೊಡ್ಡ ಅಂತರದ ಗೆಲುವು ದಾಖಲಿಸಿ ಮರು ಆಯ್ಕೆಯಾದರು. 2004 ರ ಚುನಾವಣೆಯಲ್ಲಿ, ಅವರು 84,001 ಮತಗಳ ಅಂತರದಿಂದ ಗೆದ್ದರು. ಇದು ಯಾವುದೇ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಅತ್ಯಧಿಕ ಅಂತರದ ಗೆಲುವು ಎಂಬ ದಾಖಲೆಗೆ ಅಂದು ಭಾಜನವಾಗಿತ್ತು.

ಇದಾದ ನಂತರ ಕ್ಷೇತ್ರ ಮರುವಿಂಗಡನೆ ಆಗಿದ್ದು, ಉತ್ತರಹಳ್ಳಿ ಕ್ಷೇತ್ರ ಪದ್ಮನಾಭ ನಗರ ಮತ್ತು ಯಶವಂತಪುರ ಎಂದು ಪ್ರತ್ಯೇಕವಾಯಿತು. ಪದ್ಮನಾಭನಗರದಲ್ಲಿ 2008ರಿಂದ 2018ರ ತನಕ ಗೆಲುವು ಕಂಡಿರುವ ಆರ್.‌ ಅಶೋಕ ತಮ್ಮ ಪ್ರಾಬಲ್ಯವನ್ನು ಕ್ಷೇತ್ರದಲ್ಲಿ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆರ್‌ ಅಶೋಕ ಅತ್ಯಂತ ಪ್ರಭಾವಿ. 2010 ಮತ್ತು 2015 ರ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷವನ್ನು ಐತಿಹಾಸಿಕ ವಿಜಯದತ್ತ ಮುನ್ನಡೆಸಿದ ಕೀರ್ತಿ ಅವರದ್ದು.

ಸಚಿವರಾಗಿ ಆರ್‌ ಅಶೋಕ...

ಈ ನಡುವೆ ಅವರು 2008 ರಲ್ಲಿ, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದರು. ನವೀನ ಯೋಜನೆಗಳನ್ನು ಜಾರಿಗೆ ತಂದರಲ್ಲದೆ, ಇಲಾಖೆಯ ಆಡಳಿತವನ್ನು ಚುರುಕುಗೊಳಿಸಿದರು. ಯಡಿಯೂರಪ್ಪ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಅವರು ಇಲಾಖೆಯನ್ನು ಆಧುನೀಕರಣಗೊಳಿಸಿದರಲ್ಲದೆ ವಿನೂತನ ಹೈಟೆಕ್‌ ಸ್ಪರ್ಶ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಮುಂದೆ, 2012ರ ಜೂನ್‌ನಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದಾಗ, ಅಶೋಕ ಅವರನ್ನು ಇಬ್ಬರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರನ್ನಾಗಿ ನೇಮಿಸಲಾಯಿತು. ಗೃಹ ಮತ್ತು ಸಾರಿಗೆ ಸಚಿವಾಲಯಗಳ ಹೊಣೆಗಾರಿಕೆ ನೀಡಲಾಗಿತ್ತು. 2019ರ ಆಗಸ್ಟ್‌ ಕೊನೆಯ ವಾರದಲ್ಲಿ ಅಶೋಕ ಅವರನ್ನು ಮುಜರಾಯಿ ಹೊರತುಪಡಿಸಿದ ಕಂದಾಯ ಇಲಾಖೆಯ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದರು.

ಇದಲ್ಲದೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರು ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಅವರು ಈ ಹಿಂದೆ ಕರ್ನಾಟಕದ 6ನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿ (2014-2018)ಯೂ ಕೆಲಸ ಮಾಡಿದ್ದಾರೆ.

ಆರ್‌ ಅಶೋಕ ಅವರ ವ್ಯಕ್ತಿಗತ ಪರಿಚಯ

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅಶೋಕ ಅವರು ಕಬಡ್ಡಿ ಚಾಂಪಿಯನ್ ಆಗಿದ್ದರು. ಬೆಂಗಳೂರಿನ ವಿಶ್ವೇಶ್ವರಪುರಂ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ ಪಡೆದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಡೆಗೆ ಸೆಳೆಯಲ್ಪಟ್ಟರು. ಭಾರತೀಯ ಜನತಾ ಪಕ್ಷವನ್ನು ಸೇರುವ ಮೂಲಕ ಕ್ರಮೇಣ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟರು.

ಪೂರ್ಣ ಹೆಸರು - ಜಾಲಹಳ್ಳಿ ರಾಮಯ್ಯ ಅಶೋಕ

ಜನನ - 01.07.1957

ತಂದೆ - ರಾಮಯ್ಯ

ತಾಯಿ - ಅಂಜನಮ್ಮ

ಹುಟ್ಟೂರು - ಬೆಂಗಳೂರು

ಪತ್ನಿ - ಪರಿಮಳರಾಣಿ

ಮಕ್ಕಳು - ಇಬ್ಬರು ಪುತ್ರರು

ಶಿಕ್ಷಣ - ವಿವಿ ಪುರಂ ವಿಜ್ಞಾನ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ (ಕಾಲೇಜು ದಿನಗಳಿಂದ ವಿದ್ಯಾರ್ಥಿ ನಾಯಕ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ