logo
ಕನ್ನಡ ಸುದ್ದಿ  /  ಕರ್ನಾಟಕ  /  Udupi News: ಉಡುಪಿಗೂ ಬಂತಾ ಕಚ್ಚಾ ಬನಿಯನ್ ಗ್ಯಾಂಗ್, ಡೆಲ್ಲಿ ಕ್ರೈಮ್ ವೆಬ್‌ಸೀರೀಸ್ ನೆನಪಿಸಿದ ದುಷ್ಕರ್ಮಿಗಳ ತಂಡ; ಇಲ್ಲಿದೆ ವಿಶೇಷ ವರದಿ

Udupi News: ಉಡುಪಿಗೂ ಬಂತಾ ಕಚ್ಚಾ ಬನಿಯನ್ ಗ್ಯಾಂಗ್, ಡೆಲ್ಲಿ ಕ್ರೈಮ್ ವೆಬ್‌ಸೀರೀಸ್ ನೆನಪಿಸಿದ ದುಷ್ಕರ್ಮಿಗಳ ತಂಡ; ಇಲ್ಲಿದೆ ವಿಶೇಷ ವರದಿ

HT Kannada Desk HT Kannada

Dec 21, 2023 07:50 PM IST

ಉಡುಪಿಯ ಸಂತಕಟ್ಟೆಯಲ್ಲಿನ ಬೇಕರಿ ಮಾಲೀಕರ ಮನೆಯ ಸಿಸಿ ಕ್ಯಾಮೆರಾದಲ್ಲಿ ದಾಖಲಾದ ಚಡ್ಡಿ ಬನಿಯನ್ ಗ್ಯಾಂಗ್‌ನ ದೃಶ್ಯ

  • ಕೇವಲ ಚಡ್ಡಿ, ಬನಿಯನ್ ಹಾಕಿಕೊಂಡು ಕಳವು ಮಾಡುವ ಕ್ರಿಮಿನಲ್‌ಗಳ ಪಡೆ (Kachcha Baniyan Gang) ದೆಹಲಿ ಸಹಿತ ಉತ್ತರ ಭಾರತದ ಕೆಲವೆಡೆ ಇನ್ನೂ ಸಕ್ರಿಯವಾಗಿದೆ. ಈ ಕುರಿತು ಡೆಲ್ಲಿ ಕ್ರೈಮ್ ಎಂಬ ವೆಬ್ ಸೀರೀಸ್ ಕೂಡ ಬಂದಿತ್ತು. ಅಂಥದ್ದೇ ಒಂದು ಅಪರಾಧಿ ತಂಡ ಉಡುಪಿಯಲ್ಲಿದೆಯೇ? ಇಲ್ಲಿದೆ ವಿವರ. (ವಿಶೇಷ ವರದಿ - ಹರೀಶ್ ಮಾಂಬಾಡಿ, ಮಂಗಳೂರು)

ಉಡುಪಿಯ ಸಂತಕಟ್ಟೆಯಲ್ಲಿನ ಬೇಕರಿ ಮಾಲೀಕರ ಮನೆಯ ಸಿಸಿ ಕ್ಯಾಮೆರಾದಲ್ಲಿ ದಾಖಲಾದ ಚಡ್ಡಿ ಬನಿಯನ್ ಗ್ಯಾಂಗ್‌ನ ದೃಶ್ಯ
ಉಡುಪಿಯ ಸಂತಕಟ್ಟೆಯಲ್ಲಿನ ಬೇಕರಿ ಮಾಲೀಕರ ಮನೆಯ ಸಿಸಿ ಕ್ಯಾಮೆರಾದಲ್ಲಿ ದಾಖಲಾದ ಚಡ್ಡಿ ಬನಿಯನ್ ಗ್ಯಾಂಗ್‌ನ ದೃಶ್ಯ

ಉಡುಪಿ: ಕೆಲವು ದಿನಗಳಲ್ಲಿ ಉಡುಪಿಯ ಜನರೆಲ್ಲರೂ ಸಂಭ್ರಮ ಪಡುವಂಥ ಪರ್ಯಾಯೋತ್ಸವ ನಡೆಯಲಿದೆ. ಊರಿಗೆ ಊರೇ ಸಿಂಗಾರಗೊಳ್ಳಲು ಹೊರಟಿದೆ. ಮನೆಯನ್ನೂ ಜೋಪಾನವಾಗಿ ನೋಡಿಕೊಳ್ಳುವುದು ಇದರ ನಡುವೆ ದೊಡ್ಡ ಸವಾಲು. ಕಾರಣ ಕಡಲತೀರದ ನಗರಿ ಪೊಡವಿಗೊಡೆಯನ ನಾಡು ಎಂದೇ ಹೆಸರಾದ ಉಡುಪಿಯ ವಸತಿ ಬಡಾವಣೆ ಪ್ರದೇಶಗಳಲ್ಲಿ ಪ್ರತಿ ದಿನವೆಂಬಂತೆ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಆರೋಪಿಗಳನ್ನು ಹಿಡಿದೇ ಹಿಡೀತೀವಿ ಎನ್ನುವ ಪೊಲೀಸರಿಗೂ ಕಳ್ಳರ ಜಾಡು ಸಿಗುತ್ತಿಲ್ಲ.

ಟ್ರೆಂಡಿಂಗ್​ ಸುದ್ದಿ

Hubli News: ಹುಬ್ಬಳ್ಳಿ ಅಂಜಲಿ ಅಂಬಿಗೇರ ಪ್ರಕರಣ, ಎಸಿಪಿ ಸಸ್ಪೆಂಡ್‌, ನೂತನ ಡಿಸಿಪಿ ನೇಮಕ

Mangalore News: ಪದ್ಮಶ್ರೀ ಹರೇಕಳ ಹಾಜಬ್ಬರ ಶಾಲೆಯಲ್ಲಿ ದುರಂತ, ಮಳೆಗೆ ಶಿಥಿಲಗೊಂಡ ಆವರಣಗೋಡೆ, ಗೇಟು ಕುಸಿದು ಬಾಲಕಿ ದುರ್ಮರಣ

Puc Exam-2 Results: ಕರ್ನಾಟಕ ದ್ವಿತೀಯ ಪರೀಕ್ಷೆ- 2 ಫಲಿತಾಂಶ ಇಂದು ಪ್ರಕಟ, ನೋಡೋದು ಹೇಗೆ

Hubli News: ಹುಬ್ಬಳ್ಳಿ ಅಂಜಲಿ‌ ಅಂಬಿಗೇರ ಹತ್ಯೆ ಪ್ರಕರಣ ತನಿಖೆ ಸಿಐಡಿಗೆ, ತಪ್ಪಿತಸ್ಥ ಪೊಲೀಸರ ವಿರುದ್ದ ಕಠಿಣ ಕ್ರಮ: ಗೃಹ ಸಚಿವ ಪರಮೇಶ್ವರ

ಸಾಮಾನ್ಯ ಪುಡಿಗಳ್ಳರು ಆದರೆ ಪರವಾಗಿಲ್ಲ ಎಂದು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳಬಹುದು. ಆದರೆ ಖತರ್ನಾಕ್ ಕಳ್ಳರು ಎನಿಸಿಕೊಂಡಿರುವ ಉತ್ತರ ಭಾರತದ ಕುಖ್ಯಾತ ಚಡ್ಡಿ ಬನಿಯನ್ ಗ್ಯಾಂಗ್ ಮಾದರಿಯ ಕೃತ್ಯ ಇಲ್ಲೂ ನಡೆಯುತ್ತಿದೆಯೇ ಎಂಬ ಅನುಮಾನ ಸ್ಥಳೀಯರಲ್ಲೀಗ ಮೂಡಲಾರಂಭಿಸಿದೆ. ಇದಕ್ಕೆ ಕಾರಣ ಇತ್ತೀಚೆಗೆ ಉಡುಪಿಯ ಸಂತೆಕಟ್ಟೆಯ ಬೇಕರಿ ಮಾಲೀಕರ ಮನೆಯಲ್ಲಿ ನಡೆದ ಕಳ್ಳತನದ ಸಿಸಿ ಟಿವಿಯಲ್ಲಿ ದಾಖಲಾದ ದೃಶ್ಯ.

ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಏನಿದೆ: ಉಡುಪಿಯ ಸಂತಕಟ್ಟೆಯಲ್ಲಿನ ಬೇಕರಿ ಮಾಲೀಕರ ಮನೆಯಲ್ಲಿ ಕಳವು ಪ್ರಕರಣ ನಡೆದಿತ್ತು. ಇದು ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಇಲ್ಲಿ ಕಳ್ಳರು ಕೇವಲ ಚಡ್ಡಿಯನ್ನು ಹಾಕಿಕೊಂಡು, ಮೈ ತುಂಬಾ ಎಣ್ಣೆ ಹಚ್ಚಿಕೊಳ್ಳುತ್ತಿರುವ ದೃಶ್ಯಗಳು ಲಭ್ಯವಾಗಿದೆ. ಬೇಕರಿ ಮಾಲೀಕರ ಮನೆಯಲ್ಲಿ ಮನೆಯರೆಲ್ಲಾ ನಿದ್ದೆಯಲ್ಲಿದ್ದ ಸಂದರ್ಭ ಬಾಗಿಲು ಒಡೆದು ಪ್ರವೇಶಿಸಿದ ಕಳ್ಳರು, ಸುಮಾರು 2.5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ಇದಾದ ನಂತರ ಪೊಲೀಸರು ಅಲರ್ಟ್ ಆಗಿದ್ದಾರೆ. ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆಯನ್ನು ಆರಂಭಿಸಿದ್ದೇವೆ. ಸಿಸಿಟಿವಿ ದೃಶ್ಯದ ಆಧಾರದಲ್ಲಿ ಆರೋಪಿಗಳು ಯಾರೆಂದು ಗುರುತಿಸಿ, ಶೀಘ್ರದಲ್ಲಿ ಬಂಧಿಸುತ್ತೇವೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ಯಾಕೆ ಕಚ್ಚಾ ಬನಿಯನ್ ಇರಬಹುದು ಎಂಬ ಅನುಮಾನ?: ಇವರು ಕಚ್ಚಾ ಬನಿಯನ್ ಗ್ಯಾಂಗಿನವರೋ ಅಥವಾ ಅವರನ್ನೇ ಅನುಕರಿಸಿ ಮಾಡುವ ಸ್ಥಳೀಯರೋ ಹೊರರಾಜ್ಯದವರೋ ಇದೇ ರಾಜ್ಯದವರೋ ಎಂಬುದು ಇನ್ನೂ ಗೊತ್ತಾಗಬೇಕಷ್ಟೇ. ಈ ಗ್ಯಾಂಗ್ ಮನೆಯವರು ನಿದ್ದೆಯಲ್ಲಿದ್ದಾಗ ಕಳವು ಮಾಡಿದ್ದಾರೆ. ಒಂದು ವೇಳೆ ಎದ್ದು, ಎದುರಿಗೆ ಸಿಕ್ಕಿದ್ದರೆ, ಏನು ಮಾಡುತ್ತಿದ್ದರು ಎಂಬುದು ಊಹೆಗೂ ನಿಲುಕದ್ದು. ಆದರೆ ಕಚ್ಚಾ ಬನಿಯನ್ ಗ್ಯಾಂಗ್ ದೆಹಲಿ ಅಥವಾ ಇತರೆಡೆ ನಡೆಸುತ್ತಿರುವ ಅಪರಾಧ ಚಟುವಟಿಕೆಗಳಿಗೂ ಈ ಕೃತ್ಯಕ್ಕೂ ಹೋಲಿಕೆಯೊಂದಿದೆ ಎಂಬುದಷ್ಟೇ ಇಲ್ಲಿನ ಅನುಮಾನಕ್ಕೆ ಕಾರಣ.

ಕಚ್ಚಾ ಬನಿಯನ್ ಗ್ಯಾಂಗ್ ಅಲಿಯಾಸ್ ಚಡ್ಡಿ ಗ್ಯಾಂಗ್ ವಿಲಕ್ಷಣ ಮಾದರಿಯ ಕಳ್ಳತನಕ್ಕೆ ಇಳಿಯುತ್ತದೆ. ಸೊಂಟಕ್ಕೆ ಎರಡು ಚಪ್ಪಲಿಯನ್ನು ಸಿಕ್ಕಿಸಿಕೊಂಡು ಇಳಿಯುವ ಈ ತಂಡ, ಕೃತ್ಯ ನಡೆಸಿದ ಸ್ಥಳದಲ್ಲಿ ಒಂದು ಚಪ್ಪಲಿಯನ್ನು ಬಿಟ್ಟು ಹೋಗುತ್ತದೆ ಎನ್ನಲಾಗಿದೆ. ಈ ಘಟನೆಯಲ್ಲೂ ಚಪ್ಪಲಿ ಬಿಟ್ಟು ಹೋಗಿದೆ ಈ ತಂಡ.

ಚಡ್ಡಿ ಬನಿಯನ್ ಗ್ಯಾಂಗ್ ಕುರಿತ ವೆಬ್ ಸೀರೀಸ್

‘’ಡೆಲ್ಲಿ ಕ್ರೈಮ್ – 2’’ ಹೆಸರಲ್ಲಿ ವೆಬ್ ಸಿರೀಸ್ ಒಂದು ನೆಟ್ ಫ್ಲಿಕ್ಸ್ ನಲ್ಲಿ ತೆರೆಕಂಡಿತ್ತು. ಇದರಲ್ಲಿ ಪೊಲೀಸ್ ಅಧಿಕಾರಿಗಳು ಚಡ್ಡಿ ಬನಿಯನ್ ಗ್ಯಾಂಗ್ ಸದಸ್ಯರನ್ನು ಮಟ್ಟ ಹಾಕಲು ಹೆಣಗುವ ಹಾವು ಮುಂಗುಸಿಯಾಟದ ದೃಶ್ಯಾವಳಿಗಳಿವೆ. ಇಲ್ಲಿ ಈ ಗ್ಯಾಂಗ್ ಯಾವ ರೀತಿ ಮನೆಯನ್ನು ನೋಟ್ ಮಾಡಿಕೊಳ್ಳುತ್ತದೆ, ಅವುಗಳನ್ನು ಟಾರ್ಗೆಟ್ ಮಾಡಿ ಹೇಗೆ ದರೋಡೆ ಮಾಡುತ್ತದೆ, ಎದುರು ಬಂದವರನ್ನು ಏನು ಮಾಡುತ್ತಾರೆ ಎಂಬಿತ್ಯಾದಿ ವಿವರಗಳಿವೆ. ಥೇಟ್ ಅದೇ ರೀತಿಯ ಘಟನೆಗಳು 90ರ ದಶಕದಲ್ಲಿ ಈಶಾನ್ಯ ರಾಜ್ಯ ಸೇರಿದಂತೆ ರಾಷ್ಟ್ರದ ರಾಜಧಾನಿಯಲ್ಲೂ ಆಗಿದ್ದವು. ಹೀಗಾಗಿ ಅಪರಾಧ ಜಗತ್ತಿನಲ್ಲಿ ಚಡ್ಡಿ ಬನಿಯನ್ ಗ್ಯಾಂಗ್ ಅಥವಾ ಕಚ್ಚಾ ಬನಿಯನ್ ಗ್ಯಾಂಗ್ ಗೆ ಹೆಸರಿದೆ. ಇವರನ್ನು ಅನುಸರಿಸುವವರೂ ಇಂಥ ಹೀನ ಕೃತ್ಯಗಳನ್ನು ಎಸಗುತ್ತಿರುವುದು ಇದೇ ವರ್ಷ ಮುಂಬಯಿಯಲ್ಲಿ ನಡೆದ ಮನೆ ದರೋಡೆ ಘಟನೆಯಲ್ಲಿ ಬೆಳಕಿಗೆ ಬಂದಿತ್ತು.

ಉಡುಪಿಯಲ್ಲಿ ಕಂಡ ಚಡ್ಡಿ ಬನಿಯನ್‌ ಗ್ಯಾಂಗ್‌ನವರು ಹೇಗಿದ್ದರು?: ಸಿಸಿ ಟಿವಿ ದೃಶ್ಯಾವಳಿಯ ಆಧಾರದಲ್ಲಿ ಅಲ್ಲಿರುವ ಫೊಟೋಗಳ ಆಧಾರದಲ್ಲಿ ಈ ಎಲ್ಲ ವಿಶ್ಲೇಷಣೆಗಳನ್ನು ಮಾಡಲಾಗುತ್ತಿದೆ.

ಉಡುಪಿಗೆ ಬಂದ ಗ್ಯಾಂಗಿನ ಸದಸ್ಯರು ಕೈಯಲ್ಲಿ ಚಿಟ್ ಬಿಲ್ ಹಿಡಿದುಕೊಂಡಿರುವ ದೃಶ್ಯ ಕಂಡುಬಂದಿತ್ತು. ಇದು ಹಕ್ಕಿಗಳನ್ನು ಹೊಡೆಯಲು ಬಳಸುವ ಸಾಧನ. ಇದನ್ನು ಯಾಕಾಗಿ ತಂದಿರಬಹುದು ಎಂದು ಊಹಿಸಿದರೆ, ಮೈಜುಮ್ಮೆನ್ನುತ್ತದೆ. ಇವರು ವಾಹನದಲ್ಲಿ ಬಂದಿದ್ದರೇ ಅಥವಾ ಹೇಗೆ ಬಂದಿದ್ದರು ಎಂಬುದು ತನಿಖೆಯಿಂದ ಇನ್ನಷ್ಟೇ ಗೊತ್ತಾಗಬೇಕಿದೆ.

ಒಟ್ಟಿನಲ್ಲಿ ಎಲ್ಲಾ ಅಪರಾಧ ಕೃತ್ಯಗಳಂತೆ ಇದೂ ಸಾಮಾನ್ಯ ಅಪರಾಧವೋ ಅಥವಾ ಯಾವುದಾದರೂ ಇಂಥ ಮೈಗೆ ಎಣ್ಣೆ ಪೂಸಿ, ಚಡ್ಡಿ ಮತ್ತು ಬನಿಯನ್ ನಲ್ಲಿ ಅಪರಾಧ ಕೃತ್ಯ ಎಸಗುವ ತಂಡವೇನಾದರೂ ಇಲ್ಲಿಗೆ ಬಂದಿದೆಯಾ ಎಂಬ ಹುಡುಕಾಟವನ್ನು ಪೊಲೀಸರು ಮಾಡಬೇಕಿದ್ದು, ನಾಗರಿಕರ ಅನುಮಾನವನ್ನು ದೂರಗೊಳಿಸುವ ಕೆಲಸವನ್ನೂ ಕೈಗೊಳ್ಳಬೇಕಾಗಿದೆ.

(ವಿಶೇಷ ವರದಿ- ಹರೀಶ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ