ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯಕ್ಕೆ ಮಹೂರ್ತ ಫಿಕ್ಸ್; ಎಲ್ಲಿ, ಯಾವಾಗ ನಡೆಯಲಿದೆ ಹೈವೋಲ್ಟೇಜ್ ಕದನ?
India vs Pakistan: 2024ರಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ಸೆಣಸಾಟಕ್ಕೆ ಮುಹೂರ್ತ ಮತ್ತು ಸ್ಥಳ ನಿಗದಿಯಾಗಿದೆ.
ಮುಂಬರುವ ವರ್ಷದಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಸೇರಿದಂತೆ ಎಲ್ಲಾ ತಂಡಗಳು ಸಿದ್ಧತೆ ನಡೆಸುತ್ತಿವೆ. ಈ ಮೆಗಾ ಟೂರ್ನಿಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ದೇಶಗಳು ಆತಿಥ್ಯ ವಹಿಸುತ್ತಿವೆ. ಇದರ ಮಧ್ಯೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ಸೆಣಸಾಟಕ್ಕೆ ಮುಹೂರ್ತ ಮತ್ತು ಸ್ಥಳ ನಿಗದಿಯಾಗಿದೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪರಸ್ಪರ ಮುಖಾಮುಖಿಯಾಗಿದ್ದ ಇಂಡೋ-ಪಾಕ್, ಈಗ ಟಿ20ಯಲ್ಲಿ ಎದುರಾಗಲು ಸಜ್ಜಾಗಿವೆ. ಉಭಯ ತಂಡಗಳು ಟಿ20 ಕ್ರಿಕೆಟ್ನಲ್ಲಿ ಕೊನೆಯದಾಗಿ ಭೇಟಿಯಾಗಿದ್ದು 2022ರ ಟಿ20 ವಿಶ್ವಕಪ್ನಲ್ಲಿ. ಅಧಿಕೃತ ವೇಳಾಪಟ್ಟಿ ಪ್ರಕಟವಾಗದಿದ್ದರೂ ಹೈವೋಲ್ಟೇಜ್ ಪಂದ್ಯದ ದಿನಾಂಕ ಬಹಿರಂಗಗೊಂಡಿದೆ.
ಜೂನ್ ಎರಡನೇ ವಾರದಲ್ಲಿ ಪಂದ್ಯ
ಸದ್ಯ ವರದಿಗಳ ಪ್ರಕಾರ 2024ರ ಜೂನ್ 8 ಅಥವಾ 9 ರಂದು ಇಂಡೋ-ಪಾಕ್ ಕದನ ನಡೆಯುವ ಸಾಧ್ಯತೆಯಿದೆ. 2021 ಮತ್ತು 2022ರ ಟ20 ವಿಶ್ವಕಪ್‌ನ ಮೊದಲ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿದ್ದ ಉಭಯ ತಂಡಗಳು ಈ ಬಾರಿಯೂ ಒಂದೇ ಗುಂಪಿನಲ್ಲಿ ಕಾಣಿಸಿಕೊಳ್ಳಲಿವೆ ಎಂಬುದು ಖಚಿತವಾಗಿದೆ.
ಮುಂದಿನ ವರ್ಷದ ಟಿ20 ವಿಶ್ವಕಪ್ ಟೂರ್ನಿ ಅಧಿಕೃತ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ RevSportz ಪ್ರಕಾರ, ಭಾರತ-ಪಾಕಿಸ್ತಾನದ T20 ವಿಶ್ವಕಪ್ ಪಂದ್ಯ ಜೂನ್ 8 ಅಥವಾ 9ರಂದು ನಡೆಯುವ ಸಾಧ್ಯತೆಯಿದೆ. ನ್ಯೂಯಾರ್ಕ್ ಆತಿಥೇಯ ಸ್ಥಳವಾಗಿದೆ ಎಂದು ವರದಿಯಾಗಿದೆ.
ಇಂಗ್ಲೆಂಡ್-ಆಸಿಸ್ಗೆ ಬಾರ್ಬಡೋಸ್ ಆತಿಥ್ಯ
ದಿ ಟೆಲಿಗ್ರಾಫ್ ಪ್ರಕಾರ, ಸಾಂಪ್ರದಾಯಿಕ ಎದುರಾಳಿ ತಂಡಗಳನ್ನು ಹೊರತುಪಡಿಸಿ ಆಶಸ್ ಎದುರಾಳಿಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕೂಡ ಅದೇ ಗುಂಪಿನಲ್ಲಿರುತ್ತವೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯಕ್ಕೆ 2010ರ ಟಿ20 ವಿಶ್ವಕಪ್ ಫೈನಲ್‌ಗೆ ಆತಿಥ್ಯ ವಹಿಸಿದ್ದ ಬಾರ್ಬಡೋಸ್ನಲ್ಲೇ ಸಾಧ್ಯತೆ ಇದೆ.
2013 ರಿಂದ ಐಸಿಸಿ ಟೂರ್ನಿಗಳಲ್ಲಿ ಮುಖಾಮುಖಿ
ನ್ಯೂಯಾರ್ಕ್ನ ಐಸೆನ್ ಹೋವರ್ ಪಾರ್ಕ್ ಭಾರತ-ಪಾಕಿಸ್ತಾನ ಪಂದ್ಯದ ಸ್ಥಳವೆಂದು ಪ್ರಮುಖ ಇಂಗ್ಲಿಷ್ ಪ್ರಕಟಣೆ ದೃಢಪಡಿಸಿದೆ. 2013 ರಿಂದ ಇಲ್ಲಿಯವರೆಗೂ ಪ್ರತಿ ಐಸಿಸಿ ಈವೆಂಟ್ನಲ್ಲೂ ಇಂಡೋ-ಪಾಕ್ ಮುಖಾಮುಖಿಯಾಗುತ್ತಿರುವುದು ವಿಷೇಷ. ಆದರೆ 2021ರ ಟಿ20 ವಿಶ್ವಕಪ್ ಮತ್ತು 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಸೋತಿದ್ದು ಬಿಟ್ಟರೆ ಭಾರತವೇ ಹೆಚ್ಚು ಮೇಲುಗೈ ಸಾಧಿಸಿದೆ.
ನ್ಯೂಯಾರ್ಕ್ನಲ್ಲಿ ಆಡಿಸಲು ಇದೆ ಕಾರಣ
ಬದ್ಧವೈರಿಗಳ ನಡುವಿನ ಪಂದ್ಯವನ್ನು ನ್ಯೂಯಾರ್ಕ್ನಲ್ಲಿ ಆಡಿಸಲು ಒಂದು ಉದ್ದೇಶ ಇದೆ. ಅಮೆರಿಕದಲ್ಲಿ ಕ್ರಿಕೆಟ್ಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮ್ಯಾನ್‌ಹ್ಯಾಟನ್‌ನ ಪೂರ್ವಕ್ಕೆ 30 ಮೈಲಿ ದೂರದಲ್ಲಿರುವ ಐಸೆನ್ ಹೋವರ್ ಪಾರ್ಕ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಎದುರಿಸಲಿದೆ.
ಭಾಗವಹಿಸಲಿವೆ 20 ತಂಡಗಳು
2024ರ ಟಿ20 ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಪಾಲ್ಗೊಳ್ಳಲಿವೆ. ಇದನ್ನು ತಲಾ 5 ತಂಡಗಳ 4 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುತ್ತವೆ. ಎರಡೂ ಸೂಪರ್-8 ಪೂಲ್‌ಗಳಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.