logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Bjp: ಬಿಜೆಪಿಯಲ್ಲಿ ಎರಡು ಹುದ್ದೆ, ಡಜನ್ ಆಕಾಂಕ್ಷಿಗಳು; ಹಿಡಿತ ಸಾಧಿಸಲು ಯಡಿಯೂರಪ್ಪ, ಸಂತೋಷ್ ಬಣಗಳ ಹಾವು ಏಣಿ ಆಟ

Karnataka BJP: ಬಿಜೆಪಿಯಲ್ಲಿ ಎರಡು ಹುದ್ದೆ, ಡಜನ್ ಆಕಾಂಕ್ಷಿಗಳು; ಹಿಡಿತ ಸಾಧಿಸಲು ಯಡಿಯೂರಪ್ಪ, ಸಂತೋಷ್ ಬಣಗಳ ಹಾವು ಏಣಿ ಆಟ

HT Kannada Desk HT Kannada

Jun 25, 2023 08:43 PM IST

google News

ಬಿ ಎಸ್​ ಯಡಿಯೂರಪ್ಪ - ಬಿ ಎಲ್ ಸಂತೋಷ್

    • Karnataka BJP: ಹೊಸ ಸರ್ಕಾರ ರಚನೆಯಾಗಿ ತಿಂಗಳಾದರೂ ತನ್ನ ನಾಯಕನನ್ನು ಆಯ್ಕೆ ಮಾಡಲು ವರಿಷ್ಠರಿಗೆ ಸಾಧ್ಯವಾಗುತ್ತಿಲ್ಲ. ಮೂಲ, ವಲಸಿಗ, ಸಂಘ ನಿಷ್ಠ, ಒಕ್ಕಲಿಗ ಲಿಂಗಾಯತ, ಕರಾವಳಿ, ಉತ್ತರ ಕರ್ನಾಟಕ ಮತ್ತು ಹಳೇ ಮೈಸೂರು ಭಾಗ. ಹೀಗೆ ಯಾರಿಗೆ ಯಾವ ಭಾಗಕ್ಕೆ ನೀಡಬೇಕು ಎನ್ನುವುದೇ ವಿಳಂಬಕ್ಕೆ ಕಾರಣವಾಗಿದೆ. ಅಲ್ಲದೆ, ಪಕ್ಷ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ.
ಬಿ ಎಸ್​  ಯಡಿಯೂರಪ್ಪ - ಬಿ ಎಲ್ ಸಂತೋಷ್
ಬಿ ಎಸ್​ ಯಡಿಯೂರಪ್ಪ - ಬಿ ಎಲ್ ಸಂತೋಷ್

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕ (Karnataka opposition leader) ಮತ್ತು ರಾಜ್ಯಾಧ್ಯಕ್ಷ (Karnataka BJP state president) ಸ್ಥಾನಕ್ಕೆ ತೀವ್ರ ಪೈಪೋಟಿ ಆರಂಭವಾಗಿದೆ. ಈ ಎರಡು ಸ್ಥಾನಗಳಿಗೆ ಡಜನ್​​​ಗೂ ಹೆಚ್ಚು ಆಕಾಂಕ್ಷಿಗಳು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಅಶ್ವತ್ ನಾರಾಯಣ್, ಆರ್. ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದವರು ವಿಪಕ್ಷ ನಾಯಕ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸಿಟಿ ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರಮುಖ ಆಕಾಂಕ್ಷಿಗಳು. ಒಂದು ವೇಳೆ ಪ್ರತಿ ಪಕ್ಷ ನಾಯಕನ ಸ್ಥಾನ ಸಿಗದೇ ಹೋದರೆ ಅಧ್ಯಕ್ಷ ಸ್ಥಾನ ನೀಡುವಂತೆ ಅಶ್ವತ್ ನಾರಾಯಣ್ ಮತ್ತು ಆರ್. ಅಶೋಕ್ ಒತ್ತಡ ಹಾಕುತ್ತಿದ್ದಾರೆ.

ಹೊಸ ಸರ್ಕಾರ ರಚನೆಯಾಗಿ ಒಂದು ತಿಂಗಳಾದರೂ ತನ್ನ ನಾಯಕನನ್ನು ಆಯ್ಕೆ ಮಾಡಲು ವರಿಷ್ಠರಿಗೆ ಸಾಧ್ಯವಾಗುತ್ತಿಲ್ಲ. ಮೂಲ, ವಲಸಿಗ, ಸಂಘ ನಿಷ್ಠ, ಒಕ್ಕಲಿಗ ಲಿಂಗಾಯತ, ಕರಾವಳಿ, ಉತ್ತರ ಕರ್ನಾಟಕ ಮತ್ತು ಹಳೇ ಮೈಸೂರು ಭಾಗ ... ಹೀಗೆ ಯಾರಿಗೆ ಯಾವ ಭಾಗಕ್ಕೆ ನೀಡಬೇಕು ಎನ್ನುವುದೇ ವಿಳಂಬಕ್ಕೆ ಕಾರಣವಾಗಿದೆ. ಅಲ್ಲದೆ, ಪಕ್ಷ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ.

ಒಂದು ಬಾಗಿಲಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ , ಮತ್ತೊಂದರಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇವರಿಬ್ಬರ ಮಧ್ಯದ ಬಾಗಿಲಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಣುಕುತ್ತಿದ್ದಾರೆ.

ಶತ್ರುವಿನ ಶತ್ರು ಮಿತ್ರ ಎಂಬಂತೆ ಸಂತೋಷ್ ಮತ್ತು ಪ್ರಲ್ಹಾದ ಜೋಶಿ ಇಬ್ಬರೂ ಯಡಿಯೂರಪ್ಪ ವಿರುದ್ದ ಜಂಟಿಯಾಗಿ ಸಮರ ಆರಂಭಿಸಿದ್ದಾರೆ. ಈ ಎರಡೂ ಹುದ್ದೆಗಳು ಯಡಿಯೂರಪ್ಪ ಅವರ ಪಾಳಯಕ್ಕೆ ಸಿಗದ ಹಾಗೆ ಮಾಡುವುದು ಅವರ ಮೊದಲ ಆದ್ಯತೆ. ಆದರೆ ರಾಜಕೀಯದ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಬಿಎಸ್​​ವೈ ಅಷ್ಟೊಂದು ಸುಲಭವಾಗಿ ಬಿಡುವುದಿಲ್ಲ. ಪುತ್ರ ವಿಜಯೇಂದ್ರನನ್ನು ಒಮ್ಮೆ ಸಿಎಂ ಕುರ್ಚಿಯ ಮೇಲೆ ನೋಡುವವರಿಗೆ ಪಕ್ಷದ ಮೇಲಿನ ಹಿಡಿತವನ್ನು ಬಿಟ್ಟು ಕೊಡುವುದಿಲ್ಲ.

ತಮ್ಮ ವಿರುದ್ಧ ಆರಂಭಿಸಿರುವ ಜಂಟಿ ಕಾರ್ಯಾಚರಣೆ ವಿರುದ್ಧ ತಿರುಗಿ ಬಿದ್ದಿರುವ ಯಡಿಯೂರಪ್ಪ ವಿಪಕ್ಷ ನಾಯಕನ ಸ್ಥಾನಕ್ಕೆ ಬೊಮ್ಮಾಯಿ ಅವರನ್ನೇ ಪರಿಗಣಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟವನ್ನು ಎದುರಿಸಲು ಅವರೇ ಸಮರ್ಥರು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಬೊಮ್ಮಾಯಿ ಸಂಘ ಪರಿವಾರದ ಹಿನ್ನೆಲೆ ಹೊಂದಿಲ್ಲ ಮತ್ತು ಪಕ್ಷದ ಕಳಪೆ ಸಾಧನೆಗೆ ಅವರೂ ಕಾರಣ ಎಂಬ ನೆಪವೊಡ್ಡಿ ಸಂತೋಷ್ ಮತ್ತು ಪ್ರಲ್ಹಾದ ಜೋಶಿ ತಂಡ ಈ ಸ್ಥಾನಕ್ಕೆ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರ ಹೆಸರನ್ನು ಮುಂಚೂಣಿಗೆ ಬಿಟ್ಟಿದೆ. ಆ ಮೂಲಕ ಯಡಿಯೂರಪ್ಪ ಅವರಿಗೆ ಎದುರಾಗಿ ಅವರ ವಿರೋಧಿ ನಾಯಕನಾಗಿ ಮತ್ತೊಬ್ಬ ವೀರಶೈವ ನಾಯಕನನ್ನು ನೆಲೆ ನಿಲ್ಲಿಸುವ ರಾಜಕೀಯ ತಂತ್ರ ಇದಾಗಿದೆ.

ಈ ತಂತ್ರಕ್ಕೆ ಪ್ರತಿ ತಂತ್ರ ಹೂಡಿರುವ ಯಡಿಯೂರಪ್ಪ ಅವರು ಬೊಮ್ಮಾಯಿ ಬೇಡವಾದರೆ ಆರ್.ಅಶೋಕ್ ಅವರನ್ನು ಪರಿಗಣಿಸಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹಳೇ ಮೈಸೂರು ಭಾಗದಲ್ಲಿ ಕೆಲವು ಸ್ಥಾನ ಗೆಲ್ಲಲು ಒಕ್ಕಲಿಗರೊಬ್ಬರಿಗೆ ಪ್ರತಿಪಕ್ಷದ ನಾಯಕನ ಸ್ಥಾನ ನೀಡಬೇಕೆಂಬ ಹೊಸ ದಾಳ ಉರುಳಿಸಿದ್ದಾರೆ. ಯಡಿಯೂರಪ್ಪ ಬಣದ ಯಾರೊಬ್ಬರೂ ಬೇಡ ಎಂದು ತೀರ್ಮಾನಿಸಿರುವ ವಿರೋಧಿ ತಂಡ ಮಾಜಿ ಸಚಿವ ಡಾ. ಅಶ್ವತ್ಥ ನಾರಾಯಣ ಹೆಸರನ್ನು ಸೂಚಿಸಿದ್ದಾರೆ. ಈ ವಿಚಾರದಲ್ಲೂ ಸಹಮತ ಮೂಡಿಲ್ಲ.

ಅಶೋಕ್ ಪಕ್ಷದ ಹಿರಿಯ ಶಾಸಕರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸೋತಿದ್ದಾರೆ. ಪದ್ಮನಾಭನಗರದಿಂದ ಪುನರಾಯ್ಕೆ ಆಗಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಹು ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ನ್ಯಾಯ ಒದಗಿಸಬೇಕೆಂದರೆ ಪ್ರತಿಪಕ್ಷದ ನಾಯಕನ ಸ್ಥಾನ ನೀಡಬೇಕು ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಆರ್. ಅಶೋಕ್ ಯಡಿಯೂರಪ್ಪನವರಿಗೆ ಆಪ್ತರು ಎನ್ನುವುದು ನಿರ್ವಿವಾದ. ಆದರೂ ಪಕ್ಷದಲ್ಲಿ ನಿರ್ದಿಷ್ಟ ಗುಂಪುಗಳ ಜತೆ ಗುರುತಿಸಿಕೊಳ್ಳದೇ ತಟಸ್ಥ ನೀತಿ ಅನುಸರಿಸುತಾ ಬಂದಿರುವುದು ಇವರ ಗುಣ.

ಇವರಿಬ್ಬರನ್ನು ಹೊರತು ಪಡಿಸಿದರೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಕೇಳಿ ಬರುತ್ತಿರುವ ಇನ್ನಿಬ್ಬರು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹಾಗೂ ರಾಜಾಜಿನಗರದ ಎಸ್. ಸುರೇಶ್ ಕುಮಾರ್. ಸಂಘ ಪರಿವಾರದ ಹಿನ್ನಲೆಯಿಂದ ಬಂದವರು ಎಂಬ ಅರ್ಹತೆ ಇವರಿಬ್ಬರಿಗೂ ಇದೆ. ಸುನಿಲ್ ಕುಮಾರ್ ಗೆ ಸಂತೋಷ್ ಕೃಪಾಶೀರ್ವಾದ ಇದ್ದರೆ, ಸುರೇಶ್ ಕುಮಾರ್ ಬೆಂಬಲಕ್ಕೆ ಯಡಿಯೂರಪ್ಪ ನಿಂತಿದ್ದಾರೆ. ವಿಧಾನ ಪರಿಷತ್ ನಲ್ಲಿ ಮಾಜಿ ಸಚಿವ, ಹಿರಿಯ ಮುಖಂಡ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಪಕ್ಷದ ನಾಯಕರಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಸುನಿಲ್ ಕುಮಾರ್ ಹೆಸರು ಪರಿಗಣನೆಗೆ ಬರುವುದು ಕಷ್ಟ. ಇಬ್ಬರೂ ಹಿಂದುಳಿದ ವರ್ಗಕ್ಕೆ ಸೇರಿದ್ದು ಕರಾವಳಿ ಭಾಗವನ್ನೇ ಪ್ರತಿನಿಧಿಸುತ್ತಿದ್ದಾರೆ.

ಸುರೇಶ್ ಕುಮಾರ್ ಅವರಿಗೆ ಈ ಬಾರಿ ಚುನಾವಣೆಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಗಳಿದ್ದವು. ಆದರೆ ಕಡೇ ಗಳಿಗೆಯಲ್ಲಿ ಯಡಿಯೂರಪ್ಪ ಕೈ ಹಿಡಿದರು ಎಂದು ಕೇಳಿ ಬರುತ್ತಿದೆ. ಇಷ್ಟಕ್ಕೂ ಅವರ ಹೆಸರನ್ನೇ ಯಡಿಯೂರಪ್ಪ ಪ್ರಸ್ತಾಪಿಸಲು ಕಾರಣವೂ ಇದೆ. ಒಂದು ವೇಳೆ ಅಶೋಕ್ ಗೆ ವಿಪಕ್ಷ ನಾಯಕನ ಸ್ಥಾನ ತಪ್ಪಿದಲ್ಲಿ ಸುರೇಶ್ ಕುಮಾರ್ ಅವರನ್ನು ಆ ಸ್ಥಾನಕ್ಕೆ ತಂದರೆ ಸಂಘ ಮತ್ತು ಹಿರಿತನ ಇವೆರಡಕ್ಕೂ ಪ್ರಾಧಾನ್ಯತೆ ಸಿಕ್ಕಿದಂತಾಗುತ್ತದೆ. ಮೇಲಾಗಿ ಸಂತೋಷ್ ಅವರ ಪ್ರಾಬಲ್ಯವನ್ನು ಕಡಿಮೆ ಮಾಡಿದಂತಾಗುತ್ತದೆ ಎನ್ನುವುದು ಯಡಿಯೂರಪ್ಪ ತಂಡದ ವಾದ. ಜತೆಗೆ ಅಶೋಕ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೂರಿಸಿದರೆ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಿಗುತ್ತದೆ ಎನ್ನುವುದು ಯಡಿಯೂರಪ್ಪ ಅವರ ತಂತ್ರ. ಹೀಗೆ ಗೊಂದಲದ ಗೂಡಾಗಿರುವ ಸಮಸ್ಯೆಗಳು ಸದ್ಯಕ್ಕೆ ಇತ್ಯರ್ಥವಾಗುವ ಸೂಚನೆಗಳಿಲ್ಲ. ಹೀಗೆ ಹಾವು ಏಣಿ ಆಟ ಸಾಗುತ್ತಿದೆ.

ಸೋಮಣ್ಣ ಎಂಟ್ರಿ: ಬೇಸ್ತು ಬಿದ್ದ ವರಿಷ್ಠರು

ಚಾಮರಾಜನಗರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಲವಂತಕ್ಕೆ ಸ್ಪರ್ಧೆ ಮಾಡಿ ಸೋಲು ಕಂಡಿರುವ ಮಾಜಿ ಸಚಿವ ವಿ. ಸೋಮಣ್ಣ ಪಕ್ಷದ ಅಧ್ಯಕ್ಷ ಸ್ಥಾನ ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸೋಮಣ್ಣ ಅವರಿಗೆ ಪಕ್ಷದಲ್ಲಿ ಹಿತಶತ್ರುಗಳ ದೊಡ್ಡ ಪಡೆಯೇ ಇದೆ. ಬಿಜೆಪಿ ಸೇರಿ 15 ವರ್ಷಗಳಾಗಿದ್ದರೂ ಅವರನ್ನು ಇವ ನಮ್ಮವನಲ್ಲ, ಹೊರಗಿನವ ಎಂದೇ ಭಾವಿಸಲಾಗಿದೆ. ಇವರು ಸುಮ್ಮನೆ ತಮ್ಮ ಹೆಸರನ್ನು ತೇಲಿ ಬಿಟ್ಟಿದ್ದಾರೋ ಅಥವಾ ಗಂಭೀರವಾಗಿ ಪ್ರಯತ್ನ ನಡೆಸುತ್ತಿದ್ದಾರೋ ತಿಳಿಯದ ವಿಷಯ. ಇಷ್ಟಕ್ಕೂ ಸೋಮಣ್ಣ ಅಧ್ಯಕ್ಷರಾದರೆ ಇವರ ಅಡಿಯಲ್ಲಿ ಕೆಲಸ ಮಾಡುವವರು ಯಾರು ಎನ್ನುವುದು ಮುಖ್ಯವಾದ ಪ್ರಶ್ನೆ.

ವರದಿ: ಎಚ್.ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ