logo
ಕನ್ನಡ ಸುದ್ದಿ  /  ಜೀವನಶೈಲಿ  /  ರಾತ್ರಿ ವೇಳೆ ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ? ಈ ಬಗ್ಗೆ ತಜ್ಞರು ಏನಂತಾರೆ, ಇಲ್ಲಿದೆ ಮಾಹಿತಿ

ರಾತ್ರಿ ವೇಳೆ ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ? ಈ ಬಗ್ಗೆ ತಜ್ಞರು ಏನಂತಾರೆ, ಇಲ್ಲಿದೆ ಮಾಹಿತಿ

Jayaraj HT Kannada

Apr 30, 2024 07:20 PM IST

ರಾತ್ರಿ ವೇಳೆ ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ

    • ಬಹುತೇಕ ಮಂದಿ ತೂಕ ಇಳಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ಇಲ್ಲದೆ ಡಯೆಟ್ ಮಾಡುವುದು ತುಂಬಾ ಅಪಾಯಕಾರಿ. ಇದರಿಂದ ನಿಮ್ಮ ದೇಹದ ಆರೋಗ್ಯ ಹದಗೆಡಬಹುದು. ಅಷ್ಟೇ ಅಲ್ಲ ಇನ್ನೂ ಕೆಲವರು ತಡರಾತ್ರಿ ಊಟ ಮಾಡುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಇದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಬಗ್ಗೆ ಇಲ್ಲಿದೆ ವಿವರವಾದ ಮಾಹಿತಿ.
ರಾತ್ರಿ ವೇಳೆ ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ
ರಾತ್ರಿ ವೇಳೆ ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ

ಇಂದಿನ ದಿನಗಳಲ್ಲಿ ಜೀವನಶೈಲಿ ಹಾಗೂ ಆಹಾರಪದ್ಧತಿಯಿಂದ ತೂಕ ಹೆಚ್ಚಳವಾಗುತ್ತಿರುವುದು ಸಾಮಾನ್ಯ. ಹೀಗಾಗಿ ಬಹುತೇಕರು ತೂಕ ಇಳಿಸಲು ನಾನಾ ಪಡಿಪಾಟಲು ಪಡುತ್ತಾರೆ. ಇದಕ್ಕಾಗಿ ಹಲವರು ಡಯೆಟ್ ಮಾಡುತ್ತಾರೆ. ಸರಿಯಾದ ಮಾರ್ಗದರ್ಶನ ಅಥವಾ ತಿಳಿವಳಿಕೆಯಿಲ್ಲದೆ ತೂಕ ಕಳೆದುಕೊಳ್ಳಲು ಪ್ರಯೋಗಗಳನ್ನು ಮಾಡಬಾರದು. ಯಾಕೆಂದರೆ ಈ ರೀತಿ ಮಾಡುವುದರಿಂದ ಆರೋಗ್ಯ ಸಂಬಂಧಿತ ಸಮಸ್ಯೆಗೆ ಕಾರಣವಾಗಬಹುದು. ಇನ್ನೂ ಕೆಲವರು ತಡರಾತ್ರಿ, ಇನ್ನೇನು ಮಲಗಬೇಕು ಎಂದಾಗ ಊಟ ಅಥವಾ ಜಂಕ್ ಫುಡ್ ಸೇವಿಸಿ ಮಲಗುತ್ತಾರೆ. ಈ ರೀತಿಯ ದಿನಚರಿ ಕೂಡ ಸೂಕ್ತವಲ್ಲ.

ಟ್ರೆಂಡಿಂಗ್​ ಸುದ್ದಿ

Mango Pakoda: ಮಾವಿನಕಾಯಿಯಿಂದ ತಯಾರಿಸಬಹುದು ಡಿಫ್ರೆಂಟ್‌ ರುಚಿಯ ಬಿಸಿ ಬಿಸಿ ಪಕೋಡಾ; ಸೀಸನ್‌ ಮುಗಿಯವ ಮೊದಲು ಮಾಡಿ ತಿನ್ನಿ

Chia Seeds: ತೂಕ ಇಳಿಕೆ ಮಾತ್ರವಲ್ಲ, ತ್ವಚೆಯ ಅಂದ ಹೆಚ್ಚುವುದರಿಂದ ಹೃದಯದ ಆರೋಗ್ಯದವರೆಗೆ ಚಿಯಾ ಬೀಜ ಸೇವನೆಯ ಪ್ರಯೋಜನಗಳಿವು

Mango Recipe: ಬಾಯಲ್ಲಿ ನೀರೂರಿಸುತ್ತೆ ಮಾವಿನಹಣ್ಣಿನ ರಸಗುಲ್ಲ; ಈ ಮ್ಯಾಂಗೋ ಸೀಸನ್‌ನಲ್ಲಿ ತಪ್ಪದೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

Brain Teaser: ವೃತ್ತದಲ್ಲಿ ಮಿಸ್‌ ಆಗಿರುವ ನಂಬರ್‌ ಯಾವುದು? ಗಣಿತ ಪ್ರಿಯರು ಥಟ್ಟಂತ ಉತ್ತರ ಹೇಳಿ ನೋಡೋಣ

ಬಹುತೇಕ ಮಂದಿ ತೂಕ ಕಳೆದುಕೊಳ್ಳಲು ಸೂರ್ಯಾಸ್ತದ ಮುನ್ನ ಊಟ ಮಾಡಬೇಕು. ಆ ಬಳಿಕ ಊಟ ಮಾಡಬಾರದು. ಇದರಿಂದ ತೂಕ ಹೆಚ್ಚಾಗುತ್ತದೆ ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ. ಕಳಪೆ ಆಹಾರ ಪದ್ಧತಿ ಅನುಸರಿಸುವುದರಿಂದ ನೀವು ಅನಾರೋಗ್ಯಕ್ಕೆ ಗುರಿಯಾಗುವ ಅಪಾಯ ಹೆಚ್ಚಿದೆ. ಸಮಯದ ಆಧಾರದ ಮೇಲೆ ಭೋಜನದ ಸಮಯವು ನಿರ್ಧರಿತವಾಗಿರುವುದಿಲ್ಲ ಎಂಬುದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಮ್ಮ ಊಟದ ಸಮಯವನ್ನು ನಿಮ್ಮ ಹಸಿವಿನ ಆಧಾರದ ಮೇಲೆ ಮಾಡಬೇಕು. ನಿಮ್ಮ ದೇಹದ ಹಸಿವಿನ ಸೂಚನೆಗಳಿಗೆ ನೀವು ಗಮನ ಕೊಡಬೇಕು. ನೀವು ನಿಜವಾಗಿಯೂ ಹಸಿದಿದ್ದರೆ ಊಟ ಮಾಡಬೇಕು. ಹಾಗಿದ್ದರೆ, ರಾತ್ರಿ ವೇಳೆ ಊಟ ಮಾಡಲು ಸೂಕ್ತ ಸಮಯ ಯಾವುದು? ತಡರಾತ್ರಿ ಊಟ ಮಾಡುವುದರಿಂದ ಏನು ತೊಂದರೆ ಉಂಟಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕಳಪೆ ಜೀರ್ಣಕ್ರಿಯೆ

ತಡರಾತ್ರಿಯಲ್ಲಿ ಊಟ ಮಾಡುವುದು ದೇಹದ ನೈಸರ್ಗಿಕ ಸಿರ್ಕಾಡಿಯನ್ ಲಯ ಮತ್ತು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ. ದೇಹದ ಚಯಾಪಚಯವು ಸಂಜೆಯ ಸಮಯದಲ್ಲಿ ನಿಧಾನಗೊಳ್ಳುತ್ತದೆ. ಇದರಿಂದ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು.

ಇದನ್ನೂ ಓದಿ | Mango Fruit: ಮಾವಿನ ಹಣ್ಣು ಅತಿಯಾಗಿ ಸೇವಿಸಿದರೆ ಎದುರಾಗಬಹುದಾದ 5 ಆರೋಗ್ಯ ಸಮಸ್ಯೆಗಳಿವು

ಆಸಿಡ್ ರಿಫ್ಲಕ್ಸ್

ತಡರಾತ್ರಿ ಊಟ ಮಾಡುವುದರಿಂದ ಆಸಿಡ್ ರಿಫ್ಲಕ್ಸ್ ಅಥವಾ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಯ ಅಪಾಯವನ್ನು ಹೆಚ್ಚಿಸಬಹುದು. ಊಟ ಮಾಡಿದ ಕೂಡಲೇ ಮಲಗುವುದರಿಂದ ಹೊಟ್ಟೆಯ ಆಮ್ಲವು ಅನ್ನನಾಳಕ್ಕೆ ಮತ್ತೆ ಹರಿಯುವಂತೆ ಮಾಡುತ್ತದೆ. ಇದು ಎದೆಯುರಿ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ.

ನಿದ್ದೆಗೆ ಅಡ್ಡಿ

ಮಲಗುವ ಸಮಯ ಹತ್ತಿರವಾದಾಗ ಊಟ ಮಾಡುವುದರಿಂದ ಇದು ನಿದ್ದೆಯ ಮಾದರಿಗೆ ಅಡ್ಡಿಪಡಿಸುತ್ತದೆ. ಜೀರ್ಣಕ್ರಿಯೆಯು ಸಕ್ರಿಯ ಪ್ರಕ್ರಿಯೆಯಾಗಿದ್ದು, ಅದು ದೇಹದ ವಿಶ್ರಾಂತಿ ಮತ್ತು ನಿದ್ರಿಸುವ ಸಾಮರ್ಥ್ಯವನ್ನು ಅಡ್ಡಿಪಡಿಸುತ್ತದೆ.

ತೂಕ ಹೆಚ್ಚಳ

ತಡರಾತ್ರಿಯಲ್ಲಿ ಊಟ ಮಾಡುವುದರಿಂದ ತೂಕ ಹೆಚ್ಚಾಗಬಹುದು. ನಿದ್ದೆಯ ಸಮಯದಲ್ಲಿ ದೇಹವು ಕಡಿಮೆ ಸಕ್ರಿಯವಾಗಿರುತ್ತದೆ. ಹೀಗಾಗಿ ರಾತ್ರಿಯ ಊಟದಲ್ಲಿ ಸೇವಿಸುವ ಕ್ಯಾಲರಿಗಳನ್ನು ಇಳಿಕೆ ಮಾಡುವ ಸಾಧ್ಯತೆ ತೀರಾ ಕಡಿಮೆ.

ಚಯಾಪಚಯ ಕ್ರಿಯೆ ಮೇಲೆ ನಕರಾತ್ಮಕ ಪರಿಣಾಮ

ಸಂಶೋಧಕರು ನಡೆಸಿರುವ ಕೆಲವು ಅಧ್ಯಯನಗಳ ಪ್ರಕಾರ, ತಡರಾತ್ರಿಯಲ್ಲಿ ಆಹಾರ ಸೇವನೆ ಮಾಡುವುದು ಗ್ಲೂಕೋಸ್ ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದು ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್-2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಹಾರ್ಮೋನುಗಳ ಅಡೆತಡೆಗಳು

ತಡರಾತ್ರಿಯ ಆಹಾರವು ಇನ್ಸುಲಿನ್ ಮತ್ತು ಗ್ರೆಲಿನ್ (ಹಸಿವಿನ ಹಾರ್ಮೋನ್) ಸೇರಿದಂತೆ ಹಾರ್ಮೋನ್ ಮಟ್ಟದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದು ಹಸಿವಿನ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ.

ಕಳಪೆ ಆಹಾರ ಆಯ್ಕೆ

ತಡರಾತ್ರಿ ಊಟ ಮಾಡುವಾಗ ಕೆಲವರು ಕಡಿಮೆ ಆರೋಗ್ಯಕರ, ಹೆಚ್ಚಿನ ಕ್ಯಾಲರಿ ಇರುವ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವಿಸಲು ಒಲವು ತೋರುತ್ತಾರೆ. ಇದು ಅಸಮತೋಲಿತ ಆಹಾರಕ್ಕೆ ಕಾರಣವಾಗುತ್ತದೆ.

ಹೃದಯದ ಆರೋಗ್ಯ ಕಾಳಜಿ

ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡದ ಮೇಲೆ ಪರಿಣಾಮ ಬೀರುವುದರಿಂದ ತಡರಾತ್ರಿಯ ಆಹಾರ ಸೇವನೆಯು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.

ಒಟ್ಟಿನಲ್ಲಿ ಸ್ಥಿರವಾದ ಭೋಜನದ ಸಮಯವನ್ನು ಪಾಲಿಸುವುದರಿಂದ ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ. ನೀವು ತಡರಾತ್ರಿಯಲ್ಲಿ, ನಿದ್ದೆಯ ಸಮಯ ಹತ್ತಿರವಾದಾಗ ಊಟ ಮಾಡಿದರೆ, ನಿಮ್ಮ ಜೀರ್ಣಕ್ರಿಯೆಗೆ ಸಮಸ್ಯೆಯುಂಟಾಗುತ್ತದೆ. ಇದರಿಂದ ನಿದ್ದೆಗೂ ಅಡ್ಡಿಯಾಗುತ್ತದೆ. ಹೀಗಾಗಿ ಮಲಗುವ 2-3 ಗಂಟೆ ಮುಂಚಿತವಾಗಿ ಊಟ ಮಾಡುವುದು ಒಳಿತು.

    ಹಂಚಿಕೊಳ್ಳಲು ಲೇಖನಗಳು