logo
ಕನ್ನಡ ಸುದ್ದಿ  /  ಜೀವನಶೈಲಿ  /  Digital Jagathu: ಆನ್‌ಲೈನ್‌ ವಂಚಕರಿಗೆ ಹಣ ಕಳುಹಿಸಿದ್ದೀರಾ, ಕಳೆದುಕೊಂಡ ಹಣ ರಿಕವರಿ ಮಾಡುವುದು ಹೇಗೆ, ಈ 5 ಕ್ರಮ ಅನುಸರಿಸಿ

Digital Jagathu: ಆನ್‌ಲೈನ್‌ ವಂಚಕರಿಗೆ ಹಣ ಕಳುಹಿಸಿದ್ದೀರಾ, ಕಳೆದುಕೊಂಡ ಹಣ ರಿಕವರಿ ಮಾಡುವುದು ಹೇಗೆ, ಈ 5 ಕ್ರಮ ಅನುಸರಿಸಿ

Praveen Chandra B HT Kannada

Oct 05, 2023 10:25 AM IST

Digital Jagathu: ಸೈಬರ್‌ ವಂಚಕರಿಗೆ ಹಣ ಕಳುಹಿಸಿದ್ದೀರಾ, ಆ ಹಣ ರಿಕವರಿ ಮಾಡುವುದು ಹೇಗೆ

    • Refund scammed money India: ಡಿಜಿಟಲ್‌ ಜಗತ್ತಿನಲ್ಲಿ ಆನ್‌ಲೈನ್‌ ವಂಚನೆಗೆ ಒಳಪಟ್ಟ ಬಳಿಕ ಹಣ ಕಳೆದುಕೊಂಡವರು ಹಣ ರಿಕವರಿ ಮಾಡಲು ಯಾವೆಲ್ಲ ಕ್ರಮ ಅನುಸರಿಸಬೇಕೆಂಬ ಮಾಹಿತಿ ಇಲ್ಲಿದೆ. ಯುಪಿಐ ಆಪ್‌ಗಳಲ್ಲಿ, ಸೈಬರ್‌  ಠಾಣೆಗಳಲ್ಲಿ, ಆರ್‌ಬಿಐ ಮತ್ತು ಎನ್‌ಪಿಸಿಐ ವೆಬ್‌ಸೈಟ್‌ಗಳಲ್ಲಿ ದೂರು ದಾಖಲಿಸುವ ಮೂಲಕ ಹಣ ರಿಕವರಿ ಮಾಡಲು ಪ್ರಯತ್ನಿಸಬಹುದು. 
Digital Jagathu: ಸೈಬರ್‌ ವಂಚಕರಿಗೆ ಹಣ ಕಳುಹಿಸಿದ್ದೀರಾ, ಆ ಹಣ ರಿಕವರಿ ಮಾಡುವುದು ಹೇಗೆ
Digital Jagathu: ಸೈಬರ್‌ ವಂಚಕರಿಗೆ ಹಣ ಕಳುಹಿಸಿದ್ದೀರಾ, ಆ ಹಣ ರಿಕವರಿ ಮಾಡುವುದು ಹೇಗೆ

ಪ್ರತಿನಿತ್ಯ ಸೈಬರ್‌ ವಂಚಕರಿಂದ ನೂರಾರು ಜನ ಸಾವಿರಾರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಕೆಲವೊಮ್ಮೆ ಇಂತಹ ವಂಚಕರ ಬಲೆಗೆ ಬೀಳುವುದುಂಟು. ನಾನು ಬುದ್ಧಿವಂತ, ನಾನು ಆನ್‌ಲೈನ್‌ ವಂಚಕರ ಬಲೆಗೆ ಬೀಳಲಾರೆ ಎಂದುಕೊಳ್ಳುವವರೂ ಇಂತಹ ಖದೀಮರ ಕಪಿಮುಷ್ಠಿಗೆ ಸಿಲುಕುತ್ತಾರೆ. ಈ ಲೇಖನದಲ್ಲಿ ಆನ್‌ಲೈನ್‌ ವಂಚನೆಯ ಕುರಿತು ಹೆಚ್ಚು ಮಾತನಾಡದೆ ಈ ರೀತಿ ವಂಚನೆಗೆ ಒಳಗಾದ ಬಳಿಕ ಏನು ಮಾಡಬಹುದು ಎಂದು ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಇತ್ತೀಚೆಗೆ ಸುಶಿಕ್ಷಿತ ಮಹಿಳೆಯೊಬ್ಬರು ವಾಟ್ಸಪ್‌ನಲ್ಲಿ ಬಂದ ಪಾರ್ಸೆಲ್‌ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದ್ದರು. ತಕ್ಷಣ ಆ ಕಡೆಯ ವ್ಯಕ್ತಿ ಈ ಮಹಿಳೆಯ ಮನೆ ವಿಳಾಸ ಕಳುಹಿಸಿ ಇದು ನಿಮಗೇ ಬಂದ ಪಾರ್ಸೆಲ್‌ ಎಂದು ಖಚಿತಪಡಿಸಿದ. ಆ ಪಾರ್ಸೆಲ್‌ ತೆರಿಗೆ ಇಲಾಖೆಯಲ್ಲಿದ್ದು ಬಿಡಿಸಿಕೊಳ್ಳಲು ಇಪ್ಪತ್ತು ಸಾವಿರ ರೂಪಾಯಿ ನೀಡಬೇಕೆಂದು ಆಗ್ರಹಿಸಿದ. ನಂತರ ಒಂದಿಷ್ಟು ಸಂವಹನ ನಡೆದಿದೆ. ಪೊಲೀಸ್‌, ಸಿಬಿಐ ಇತ್ಯಾದಿ ಹೆಸರುಗಳನ್ನು ಕೇಳಿದಾಗ ಆ ಮಹಿಳೆಗೆ ಭಯವಾಗಿದೆ. ಸ್ವಲ್ಪ ಹೊತ್ತಲ್ಲಿ ಈ ಮಹಿಳೆಯ ಫೋಟೋವನ್ನೂ ಕಳುಹಿಸಿದ. ತಕ್ಷಣ ಏನು ಮಾಡಬೇಕೆಂದು ತಿಳಿಯದೆ ಆ ಮಹಿಳೆ ಭಯಪಟ್ಟು ಆತ ನೀಡಿದ ಬ್ಯಾಂಕ್‌ ಖಾತೆಗೆ 10 ಸಾವಿರ ರೂಪಾಯಿ ಕಳುಹಿಸಿದ್ದಾರೆ.

ಈಕೆ ಭಯಪಟ್ಟಿದ್ದಾಳೆ ಎಂದು ತಿಳಿದ ಆ ವ್ಯಕ್ತಿ ತಕ್ಷಣ ನಗ್ನ ಚಿತ್ರವೊಂದಕ್ಕೆ ಈಕೆಯ ಫೋಟೋದ ತಲೆ ಅಂಟಿಸಿ ಕಳುಹಿಸಿದ. ಇನ್ನೂ ಐವತ್ತು ಸಾವಿರ ಕಳುಹಿಸಿ ಇಲ್ಲದಿದ್ದರೆ ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋ ಹಂಚಿಕೊಳ್ಳುವುದಾಗಿ ಬೆದರಿಸಿದ. ತಾನು ಮೋಸ ಹೋಗಿರುವ ವಿಚಾರ ಆಕೆಗೆ ಅರ್ಥವಾಯಿತು. ಈ ಸಂದರ್ಭದಲ್ಲಿ ಆ ಮಹಿಳೆ ತನ್ನ ಕುಟುಂಬದವರಿಗೆ ಮಾಹಿತಿ ನೀಡಿದರು. ಆ ವ್ಯಕ್ತಿಗೆ ರಿಪ್ಲೈ ನೀಡಬೇಡ ಎಂದು  ಕುಟುಂಬದವರು ಸಲಹೆ ನೀಡಿದರು. ಕಳೆದುಕೊಂಡ ಹಣವನ್ನು ರಿಕವರಿ ಮಾಡಲು ಇರುವ ಅವಕಾಶವನ್ನು ಹುಡುಕೋಣ. ನಿನ್ನ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದರೂ ಧೈರ್ಯ ಕಳೆದುಕೊಳ್ಳಬೇಡ ನಾವಿದ್ದೇವೆ ಎಂದು ಕುಟುಂಬದವರು ಧೈರ್ಯ ತುಂಬಿದರು.

ಈ ಘಟನೆಯಿಂದ ಮೊದಲಿಗೆ ಕಲಿಯಬೇಕಾದದ್ದು "ಅಪರಿಚಿತರು ಹಣ ಕೇಳಿದಾಗ ತಕ್ಷಣ ಭಯ ಪಟ್ಟು ಹಣ ನೀಡಬೇಡಿ". ಬೆದರಿಕೆಗೆ ಭಯಪಟ್ಟಾಗ ನಮ್ಮ ಮನಸ್ಸು ಹೆಚ್ಚು ಯೋಚಿಸುವುದಿಲ್ಲ. ಘಟನೆಯ ಕುರಿತು ತಕ್ಷಣ ನಿಮ್ಮ ಆಪ್ತರ ಜತೆ, ಒಂದಿಷ್ಟು ತಿಳುವಳಿಕೆ ಇರುವವರ ಜತೆ, ಅಪರಾಧಗಳ ಕುರಿತು ಕಾನೂನು ಅರಿವು ಇರುವವರ ಜತೆ ಚರ್ಚಿಸಿ. ಸಮಸ್ಯೆಯ ಕುರಿತು ಒಬ್ಬರೇ ನಿರ್ಧಾರ ಕೈಗೊಳ್ಳುವ ಬದಲು ತಂಡವಾಗಿ ಯೋಚಿಸಿ ಕ್ರಮ ಕೈಗೊಳ್ಳಲು ಮುಂದಾಗಿ. ಆನ್‌ಲೈನ್‌ ವಂಚಕರ ಜತೆ ಸಂವಹನ ಮುಂದುವರೆಸದೆ ಇರುವುದು, ಬ್ಲಾಕ್‌ ಮಾಡುವುದು, ಪ್ರತಿಕ್ರಿಯೆ ನೀಡದೆ ಇರುವುದು ಅತ್ಯಂತ ಅಗತ್ಯ.

ಹಣ ಕಳೆದುಕೊಂಡಾಯ್ತು, ರಿಕವರಿ ಮಾಡಬಹುದೇ?

ಆನ್‌ಲೈನ್‌ನಲ್ಲಿ ಮೋಸ ಹೋಗಿದ್ದೇನೆ, ಈ ಹಣ ರಿಕವರಿ ಮಾಡಬಹುದೇ ಎಂದು (How do I get my money back after being cheated online in India) ಸಾಕಷ್ಟು ಜನರು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ಲೇಖನದಲ್ಲಿ ತಿಳಿಸಿದ ಮಹಿಳೆ ನಂತರ ಏನು ಮಾಡಿದ್ರು ನೋಡೋಣ. ಅವರು ಗೂಗಲ್‌ ಪೇಯಲ್ಲಿ ಅಕೌಂಟ್‌ ಟ್ರಾನ್ಸ್‌ಫಾರ್‌ ಆಯ್ಕೆಯ ಮೂಲಕ ಹಣ ಕಳುಹಿಸಿದ್ದರು. ಈ ರೀತಿ ಹಣ ಕಳುಹಿಸಿದ ಲಿಂಕ್‌ನಲ್ಲಿಯೇ ಗ್ರಾಹಕ ದೂರು ನೀಡುವ ಆಯ್ಕೆಯಿದೆ. ಇವರು ದೂರು ನೀಡಿದರು. ತಕ್ಷಣ ಕಸ್ಟಮರ್‌ ಕೇರ್‌ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಲಾಯಿತು. ಆ ಸಂಖ್ಯೆಗೆ ಕರೆ ಮಾಡಿದ ಬಳಿಕ ಅಲ್ಲಿನವರು ಘಟನೆಯ ಕುರಿತು ಮಾಹಿತಿ ಪಡೆದು ಸೈಬರ್‌ ದೂರು ನೀಡಿ, ಆ ದೂರಿನ ಪ್ರತಿಯನ್ನು ಬ್ಯಾಂಕ್‌ ಶಾಖೆಗೆ ನೀಡಲು ಸೂಚಿಸಿದರು. ಇವರು ಯುಪಿಐ ಐಡಿ ಮೂಲಕ ಟ್ರಾನ್ಸ್‌ಫಾರ್‌ ಮಾಡಿದ್ದರೆ ರಿಕವರಿ ಇದಕ್ಕಿಂತ ಸುಲಭವಾಗುತ್ತಿತ್ತು.

ಸೈಬರ್‌ ದೂರು ನೀಡಿ

ಪ್ರಮುಖ ನಗರಗಳಲ್ಲಿ ಹಲವು ಸೈಬರ್‌ ಪೊಲೀಸ್‌ ಠಾಣೆಗಳು ಇರುತ್ತವೆ. ಅಂತಹ ವ್ಯವಸ್ಥೆ ಇಲ್ಲದೆ ಇದ್ದರೆ ಹತ್ತಿರದ ಪೊಲೀಸ್‌ ಠಾಣೆಗಳಲ್ಲಿ ದೂರು ನೀಡಿ. ಆ ದೂರಿನ ಪ್ರತಿಯನ್ನು ಸಂಬಂಧಪಟ್ಟ ಬ್ಯಾಂಕ್‌ಗೆ ನೀಡಬಹುದು. ಬೆಂಗಳೂರಿನಂತಹ ನಗರಗಳ ಸೈಬರ್‌ ಠಾಣೆಗೆ ಹೋದಾಗ ಸೈಬರ್‌ ವಂಚನೆಯ ವಿರಾಟ್‌ ರೂಪ ನಿಮಗೆ ಅರ್ಥವಾಗಬಹುದು. ನೀವು ಹತ್ತು ಸಾವಿರ ಕಳೆದುಕೊಂಡಿದ್ದೀರಿ ಎಂದು ದೂರು ನೀಡಲು ಹೋದರೆ ಅಲ್ಲಿ ಹತ್ತು ಹಲವು ಲಕ್ಷ ರೂಪಾಯಿ ಕಳೆದುಕೊಂಡವರು ಪರಿತಪಿಸುವುದನ್ನು ನೋಡಬಹುದು. ನೀವು ಅಪರಾಧಿಯ ಬ್ಯಾಂಕ್‌ ಖಾತೆಯ ವಿವರ ನೀಡಿದರೂ ಆ ಬ್ಯಾಂಕ್‌ ಖಾತೆ ಯಾರದ್ದೋ ಜನಸಾಮಾನ್ಯರದ್ದು ಆಗಿರುತ್ತದೆ, ಆ ಎಟಿಎಂ ಕಾರ್ಡ್‌ ಅನ್ನು ಬೇರೆ ಯಾರೋ ನಿರ್ವಹಿಸುವ ವಿಚಾರ ತಿಳಿದುಬರಬಹುದು. ಹಣ ರಿಕವರಿ ಕಷ್ಟ ಇತ್ಯಾದಿ ಮಾತುಗಳು ಕೇಳಿಬರಬಹುದು. ಹಣ ಬರುತ್ತೋ ಇಲ್ಲವೋ ಅದರ ಕುರಿತು ಯೋಚಿಸದೆ ದೂರು ದಾಖಲಿಸಿ. ದೂರು ದಾಖಲಿಸಿದರೂ ಪ್ರಯೋಜನವಿಲ್ಲ ಎಂದು ಪೊಲೀಸರು ತಿಳಿಸಿದರೂ "ದೂರು ದಾಖಲಿಸಬೇಕು" ಎಂಬ ಹಠದಲ್ಲಿ ದೂರು ದಾಖಲಿಸಿ. ನೀವು ದೂರು ದಾಖಲಿಸಿದರೆ ಅಪರಾಧಿಗಳನ್ನು ಹಿಡಿಯುವ ಪ್ರಯತ್ನವನ್ನು ಪೊಲೀಸರು ಮಾಡಬೇಕು.

ವಂಚಕರಿಗೆ ಯುಪಿಐ ಹಣ ವರ್ಗಾವಣೆ ಮಾಡಿದ್ದರೆ ಈ ಕ್ರಮ ಅನುಸರಿಸಿ

ಮೊದಲಿಗೆ ಗೂಗಲ್‌ಪೇ, ಫೋನ್‌ಪೇ ಇತ್ಯಾದಿ ನೀವು ಹಣ ವರ್ಗಾವಣೆ ಮಾಡಿರುವ ಆಪ್‌ನಲ್ಲಿ ಕಂಪ್ಲೇಟ್‌ ಮಾಡಿ. ಅಲ್ಲಿ ದೂರಿಗೆ ಸರಿಯಾದ ಪ್ರತಿಕ್ರಿಯೆ ದೊರಕದೆ ಇದ್ದರೆ www.npci.org.in ವೆಬ್‌ಸೈಟ್‌ಗೆ ಹೋಗಿ ಹಣ ವರ್ಗಾವಣೆ ವಿವರ ನೀಡಿ ದೂರು ದಾಖಲಿಸಿ. ಎನ್‌ಪಿಸಿಐ ವೆಬ್‌ಸೈಟ್‌ನ ಯುಪಿಐ ಕುಂದುಕೊರತೆ ವಿಭಾಗಕ್ಕೆ ನೇರ ಲಿಂಕ್‌ ಇಲ್ಲಿದೆ.

ಆರ್‌ಬಿಐಗೆ ದೂರು

ಆನ್‌ಲೈನ್‌ ವಂಚನೆ ನಡೆದರೆ ಮುಂದೆ ಏನು ಮಾಡಬೇಕು ಎಂದು ತಿಳಿಯದೆ ಇದ್ದರೆ ಆರ್‌ಬಿಐನ 114448 ಟೋಲ್‌ ಫ್ರಿ ಸಂಖ್ಯೆಗೆ ಕರೆ ಮಾಡಬಹುದು. https://cms.rbi.org.in ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು.

ಸೈಬರ್‌ ವಂಚನೆಗೆ ಒಳಗಾದಗ ತಕ್ಷಣ ಮಾಡಬೇಕಾದ 5 ಕೆಲಸಗಳು

  1. ಮೊದಲಿಗೆ ಸೇವಾದಾರರನ್ನು (ಗೂಗಲ್‌ ಪೇ, ಫೋನ್‌ ಪೇ ಇತ್ಯಾದಿ) ಸಂಪರ್ಕಿಸಿ. ನಿಮಗೆ ಯಾವುದಾದರೂ ಸಂಸ್ಥೆಯಿಂದ ಹಣ ನಷ್ಟವಾಗಿದ್ದರೆ ಆ ಸಂಸ್ಥೆಗೆ ಫೋನ್‌ ಮಾಡಿ ವಿಷಯ ತಿಳಿಸಿ. ಸಂಬಂಧಪಟ್ಟ ಎಲ್ಲಾ ದಾಖಲೆಗಳು, ಸ್ಕ್ರೀನ್‌ಶಾಟ್‌ ಕಳುಹಿಸಿ.
  2. ಬ್ಯಾಂಕ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಕಂಪನಿಯನ್ನು ಸಂಪರ್ಕಿಸಿ. ಘಟನೆ ನಡೆದ ತಕ್ಷಣ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅವರೊಂದಿಗೆ ಸಂವಹನ ನಡೆಸಿ ಹಣಕಾಸು ವರ್ಗಾವಣೆಯ ವಿವರ ನೀಡಿ.
  3. ಸೈಬರ್‌ ಕ್ರೈಮ್‌ ವಿಭಾಗದಲ್ಲಿ ಅಥವಾ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿ.
  4. ಆನ್‌ಲೈನ್‌ ವಂಚನೆಗೆ ಸಂಬಂಧಪಟ್ಟ ದೂರು ನೀಡುವ ವಿಭಾಗಗಳನ್ನು ಸಂಪರ್ಕಿಸಿ. ಈಗಾಗಲೇ ಮೇಲೆ ತಿಳಿಸಿದಂತೆ ಎನ್‌ಪಿಸಿಐ ಇತ್ಯಾದಿ ವೆಬ್‌ಸೈಟ್‌ಗಳಲ್ಲಿ ದೂರು ದಾಖಲಿಸಿ.
  5. ಈ ಮೇಲಿನ ಕ್ರಮಗಳಿಂದ ಪ್ರಯೋಜನವಾಗದೆ ಇದ್ದರೆ ವಂಚಕರ ವಿರುದ್ಧ ಕಾನೂನು ಹೋರಾಟ ಆರಂಭಿಸಿ. ಇದಕ್ಕಾಗಿ ವಕೀಲರೊಬ್ಬರನ್ನು ಸಂಪರ್ಕಿಸಿ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಿ. ವಂಚನೆಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ನಿಮ್ಮಲ್ಲಿ ಇರಲಿ. ಘಟನೆ ನಡೆದ ಬಳಿಕ ವಾಟ್ಸಪ್‌ ಇತ್ಯಾದಿಗಳ ಸಂದೇಶ ಡಿಲೀಟ್‌ ಮಾಡುವುದು ಇತ್ಯಾದಿ ಮಾಡಬೇಡಿ.

ಬ್ಲಾಕ್‌ಮೇಲ್‌ ತಂತ್ರಕ್ಕೆ ಭಯಪಡಬೇಡಿ

ಅಯ್ಯೋ ನನ್ನ ಮರ್ಯಾದೆ ಹೋಗುತ್ತೆ, ಸೋಷಿಯಲ್‌ ಮೀಡಿಯಾದಲ್ಲಿ ನನ್ನ ಫೋಟೋ ಬರುತ್ತೆ ಎಂದೆಲ್ಲ ಭಯಪಟ್ಟು ಖಿನ್ನರಾಗಬೇಡಿ. ಈ ರೀತಿ ಘಟನೆ ಆಗಬಾರದಿತ್ತು. ಆಗಿದೆ, ಮುಂದೇನು ಮಾಡಬೇಕು ಎಂದು ಯೋಚಿಸಿ. ಮೊದಲಿಗೆ ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆಯನ್ನು ಡಿಆಕ್ಟಿವೇಟ್‌ ಮಾಡುವುದು ಅಥವಾ ಪಾಸ್‌ವರ್ಡ್‌ ಬದಲಾಯಿಸುವುದು ಇತ್ಯಾದಿಗಳನ್ನು ಮಾಡಿ. ಸೋಷಿಯಲ್‌ ಮೀಡಿಯಾವನ್ನು ಸ್ವಲ್ಪ ದಿನ ಡಿಆಕ್ಟಿವೇಟ್‌ ಮಾಡಿದರೆ ಆನ್‌ಲೈನ್‌ ವಂಚಕರಿಗೆ ನಿಮ್ಮ ಮ್ಯೂಚುಯಲ್‌ ಸ್ನೇಹಿತರ ವಿವರ ದೊರಕದೆ ಇರಬಹುದು. ಇದು ಉದಾಹರಣೆಯಷ್ಟೇ, ನಿಮ್ಮ ಕಾಂಟ್ಯಾಕ್ಟ್‌ಗಳು ಆನ್‌ಲೈನ್‌ ವಂಚಕರಿಗೆ ದೊರಕದಂತೆ ಇರಲು ಏನೆಲ್ಲ ಕ್ರಮ ವಹಿಸಬಹುದೋ ಅದನ್ನು ಮಾಡಿ.

ಸೋಷಿಯಲ್‌ ಮೀಡಿಯಾದಲ್ಲಿ ಆನ್‌ಲೈನ್‌ ವಂಚನೆ ನಡೆದಿರುವ ಕುರಿತು ಮಾಹಿತಿ ನೀಡಬಹುದು. ಈ ರೀತಿಯ ಫೋಟೋಗಳು ಎಲ್ಲಾದರೂ ಹಂಚಿದರೆ (ಸಾಮಾನ್ಯವಾಗಿ ಆನ್‌ಲೈನ್‌ ವಂಚಕರು ಬೆದರಿಸುತ್ತಾರೆ, ಈ ರೀತಿ ಫೋಟೋಗಳನ್ನು ಹಂಚಲು ಸೂಕ್ತ ವ್ಯವಸ್ಥೆ ಬಹುತೇಕ ವಂಚಕರಲ್ಲಿ ಇರುವುದಿಲ್ಲ) ತಕ್ಷಣ ರಿಪೋರ್ಟ್‌ ಮಾಡುವಂತೆ ಸೋಷಿಯಲ್‌ ಮೀಡಿಯಾದಲ್ಲಿರುವ ಆಪ್ತರಿಗೆ ತಿಳಿಸಿ.

ನಗ್ನಚಿತ್ರ, ನಕಲಿ ಚಿತ್ರಗಳ ಬೆದರಿಕೆಗೆ ಭಯಪಡಬೇಡಿ. ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಅತುರದ ನಿರ್ಧಾರ ಕೈಗೊಳ್ಳಬೇಡಿ. ಈ ರೀತಿ ಆನ್‌ಲೈನ್‌ನಲ್ಲಿ ವಂಚನೆಗೆ ಒಳಗಾದಾಗ ಇನ್ನಷ್ಟು ವಂಚನೆ, ಮೋಸ, ನಷ್ಟವಾಗದಂತೆ ಮೊದಲು ಎಚ್ಚರಿಕೆ ವಹಿಸಿ. ಈ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳಬೇಡಿ. ಕುಟುಂಬದ ಸದಸ್ಯರು ಬಯ್ಯುತ್ತಾರೆ ಇತ್ಯಾದಿ ಅಂಜಿಕೆ ಬೇಡ. ನಿಮಗೆ ಧೈರ್ಯ ತುಂಬಬಹುದಾದ ಮತ್ತು ಮುಂದಿನ ಕ್ರಮಗಳ ಕುರಿತು ಸರಿಯಾದ ಮಾಹಿತಿ ನೀಡಬಹುದಾದ ವ್ಯಕ್ತಿಗಳ ಜತೆ ಚರ್ಚಿಸಿ ಮುಂದುವರೆಯಿರಿ.

ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಡಿಜಿಟಲ್‌ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in , ht.kannada@htdigital.in

 

    ಹಂಚಿಕೊಳ್ಳಲು ಲೇಖನಗಳು